ಅಮಲು ಔಷಧ ನೀಡಿ ನಿದ್ರೆ ಬರಿಸಿ ರೈಲ್ವೆ ಪ್ರಯಾಣಿಕರ ದೋಚುವ ಗ್ಯಾಂಗ್ ಅರೆಸ್ಟ್ | ಮಂಗಳೂರು ರೈಲ್ವೆ ಸ್ಟೇಷನ್
ರೈಲ್ವೆ ಪ್ರಯಾಣಿಕರ ಜೊತೆ ಮಾತು ಬೆಳೆಸಿ ಅವರ ವಿಶ್ವಾಸಗಳಿಸಿ, ಅವರಿಗೆ ಆ ನಂತರ ಮತ್ತು ಬರುವ ಔಷಧ ಬೆರೆಸಿದ ಜ್ಯೂಸ್ ನೀಡಿ ಹಣ ಚಿನ್ನಾಭರಣಗಳನ್ನು ದೋಚುತ್ತಿದ್ದ ಖದೀಮರಿಬ್ಬರನ್ನು ಮಂಗಳೂರು ರೈಲ್ವೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತರು ನೆಟ್ಟ ಮುಡ್ನೂರು ಗ್ರಾಮದ ಯಾಕುಬ್ ಮತ್ತು ಸಂಪ್ಯದ ಮಹಮ್ಮದ್ ಎಂದು ಗುರುತಿಸಲಾಗಿದೆ. ಈ ಪೈಕಿ ಯಾಕೂಬನು ಕರ್ನೂರ್ ಮೂಲದವೆಂದು ಹೇಳಲಾಗಿದೆ.
ಆರೋಪಿಗಳು ಪುತ್ತೂರಿನ ಈಶ್ವರಮಂಗಲದ ಮೆಡಿಕಲ್ ಶಾಪ್ ಒಂದರಿಂದ ಡ್ರಗ್ ಪದಾರ್ಥವನ್ನು ಕೊಂಡುಕೊಳ್ಳುತ್ತಿದ್ದರು. ಆನಂತರ, ಸಮಯ ಸಂದರ್ಭ ನೋಡಿಕೊಂಡು, ಒಂಟಿ ಪ್ರಯಾಣಿಕರನ್ನು ಟಾರ್ಗೆಟ್ ಮಾಡಿಕೊಂಡು ಅವರ ವಿಶ್ವಾಸ ಗಳಿಸಿದ ಮೇಲೆ ಅವರಿಗೆ ಮತ್ತು ಬರಿಸುವ ಜ್ಯೂಸ್ ನೀಡಿ ಚಿನ್ನ , ಹಣ ಮತ್ತಿತರ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡುತ್ತಿದ್ದರು.
ನಿರಂತರವಾಗಿ ಈ ರೀತಿ ಕಳ್ಳತನವಾಗುತ್ತಿರುವ ಬಗ್ಗೆ ಮಂಗಳೂರಿನ ರೈಲ್ವೇ ಪೊಲೀಸರಿಗೆ ಹಲವು ದೂರುಗಳು ಬಂದಿದ್ದವು. ಅಂತಹ ಕೇಸುಗಳ ಪತ್ತೆಗಾಗಿ ಪೊಲೀಸರು ಕಾರ್ಯಕರ್ತರಾಗಿದ್ದರು. ಕೆಲ ತಿಂಗಳ ಹಿಂದಷ್ಟೇ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆಯನ್ನು ಕೈಗೊಂಡಿದ್ದರೂ ಪೊಲೀಸರಿಗೆ ಯಾವುದೇ ಸುಳಿವು ಲಭ್ಯವಾಗಿರಲಿಲ್ಲ.
ಮೊನ್ನೆತಾನೆ, ರೈಲ್ವೆ ಪೊಲೀಸರು ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಇಬ್ಬರನ್ನು ಕರೆತಂದು ವಿಚಾರಿಸಲಾಗಿ ಆರೋಪಿಗಳು ಸತ್ಯಾಂಶವನ್ನು ಬಾಯ್ಬಿಟ್ಟಿದ್ದಾರೆ.
ಆರೋಪಿಗಳ ಪೈಕಿ ಒಬ್ಬನಾದ ಯಾಕುಬ್ ನನ್ನ ಸುಳ್ಯ ಪೊಲೀಸರ ಸಹಕಾರದೊಂದಿಗೆ ಈಶ್ವರಮಂಗಲ ಕರೆತಂದು ಆತ ಖರೀದಿಸುತ್ತಿದ್ದ ಅಮಲುಕಾರಕ ಡ್ರಗ್ ಮಾರುತ್ತಿದ್ದ ಮೆಡಿಕಲ್ ಶಾಪಿನ ಮಹಜರು ಮಾಡಲಾಗಿರುತ್ತದೆ.
ಸಂಪ್ಯದ ಮಹಮ್ಮದ್ ನನ್ನ ಪೊಲೀಸರು ಬಂಧಿಸಿದ ಪರಿಣಾಮ ಆತ ಮೊನ್ನೆ ಜ. 22 ರಂದು ಮನೆಗೆ ಹೋಗಲಾಗಿರಲಿಲ್ಲ. ಅಲ್ಲದೆ ಆತನ ಫೋನು ಸ್ವಿಚ್ ಆಫ್ ಆಗಿತ್ತು. ಮನೆಯವರು ಗಾಬರಿ ಬಿದ್ದು ಸಂಪ್ಯ ಪೊಲೀಸರಿಗೆ ಮಿಸ್ಸಿಂಗ್ ಕಂಪ್ಲೇಂಟ್ ಕೊಟ್ಟಿದ್ದರು. ಅಸಲಿಗೆ, ಮಹಮ್ಮದ್ ಅರೆಸ್ಟ್ ಆದ ಕಾರಣದಿಂದ ಮನೆಗೆ ಹೋಗಲಾಗಿರಲಿಲ್ಲ. ಮನೆಯವರಿಗೆ ಇವರ ಖದೀಮ ವೃತ್ತಿಯ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ.
ಕಳ್ಳರ ತನಿಖೆಯ ಜೊತೆಗೆ, ಅವರಿಗೆ ಡ್ರಗ್ ಮಾರುತ್ತಿದ್ದ ಮೆಡಿಕಲ್ ಶಾಪಿನ ವಿಚಾರಣೆ ನಡೆದಿದೆ.