ಭರದಿಂದ ಜೀರ್ಣೋದ್ಧಾರಗೊಳ್ಳುತ್ತಿದೆ ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನ

ಸವಣೂರು: ಒಂದೊಮ್ಮೆ ಒಪ್ಪೊತ್ತಿನ ಪೂಜೆಗೂ ತಾತ್ಪಾರ ಕಂಡಿದ್ದಸರ್ವೆ ಗ್ರಾಮದ ತಿಂಗಳಾಡಿ ಸಮೀಪದ ಎಲಿಯ ಶ್ರೀ ವಿಷ್ಣುಮೂರ್ತಿ ದೇವಸ್ಥಾನದಲ್ಲಿ ಹೊಸ ಕಳೆ ಮೂಡ ತೊಡಗಿದೆ. ಶ್ರೀ ವಿಷ್ಣುಮೂರ್ತಿ ದೇವರ ಕಾರಣಿಕತೆಗೆ ಭಕ್ತಸಮೂಹ ಶರಣಾಗುತ್ತಿದ್ದಾರೆ. ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯರ ನೇತೃತ್ವದಲ್ಲಿ ಇದೀಗ ಭರದಿಂದ ಜೀರ್ಣೋದ್ಧಾರ ಕೆಲಸಗಳು ನಡೆಯುತ್ತಿವೆ.

ಸುಮಾರು ಏಳು ಶತಮಾನಗಳಷ್ಟು ಪ್ರಾಚೀನವಾದ ಶ್ರೀ ದೇವಳದ ಸಂಪೂರ್ಣ ಜೀರ್ಣೋದ್ಧಾರ ಕಾರ್ಯಗಳು ಊರಪರವೂರ ಭಕ್ತಾಧಿಗಳ ಸಹಕಾರದಿಂದ ನಡೆಯುತ್ತಿದೆ. ಮೂರು ಗ್ರಾಮಕ್ಕೆ ಒಳಪಟ್ಟ ಶ್ರೀ ದೇವಳದಲ್ಲಿ ಗ್ರಾಮದ ಬಹುತೇಕ ಭಕ್ತರು ಶ್ರಮದಾನ ಮಾಡುತ್ತಿದ್ದಾರೆ. ಪ್ರತಿ ಹುಣ್ಣಿಮೆ ದಿನ ಗಣಹೋಮ, ತ್ರಿಕಾಲ ಪೂಜೆ ಹಾಗೂ ಸಾಮೂಹಿಕ ಭಜನಾ ಕಾರ್ಯಕ್ರಮವು ನಡೆಯುತ್ತಾ ಬರುತ್ತಿದೆ.

ಜ.10ರಂದು ಬೆಳಿಗ್ಗೆ ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯರವರ ನೇತೃತ್ವದಲ್ಲಿ ಸಾಮೂಹಿಕ ಸಹಸ್ರ ನಾರಿಕೇಳ (1008 ತೆಂಗಿನಕಾಯಿ) ಗಣಪತಿ ಯಾಗ ಹಾಗೂ ತ್ರಿಕಾಲ ಪೂಜಾ ಕಾರ್ಯಕ್ರಮ ಜರಗಲಿದೆ. ಮಧ್ಯಾಹ್ನ ಸಹಸ್ರನಾರಿ ಕೇಳಯಾಗವು ಪೂರ್ಣಾಹುತಿಯೊಂದಿಗೆ ಸಂಪನ್ನಗೊಳ್ಳಲಿದ್ದು ರಾತ್ರಿ ತ್ರಿಕಾಲ ಪೂಜಾ ಕಾರ್ಯಕ್ರಮ ಮಹಾಪೂಜೆಯೊಂದಿಗೆ ಪೂರ್ಣಗೊಳ್ಳಲಿದೆ.

ಸಹಸ್ರನಾರಿಕೇಳ ಗಣಪತಿ ಯಾಗವು, ಶ್ರೀ ಮಹಾಗಣಪತಿಗೆ ಸಲ್ಲಿಸುವ ಶ್ರೇಷ್ಠ ಪೂಜೆಗಳಲ್ಲಿಒಂದಾಗಿದ್ದು, ಅಪಾರ ಪ್ರಮಾಣದ ದ್ರವ್ಯಗಳನ್ನು ದೇವರಿಗೆ ಅರ್ಪಿಸಲಾಗುವುದು ಈ ಎಲ್ಲಾ ಸುವಸ್ತುಗಳನ್ನು ಊರ ಪರವೂರ ಭಕ್ತಾಧಿಗಳೇ ಸೇವಾ ರೂಪದಲ್ಲಿ ಒದಗಿಸಿರುವುದು ವಿಶೇಷವಾಗಿದೆ.

ಮಧ್ಯಾಹ್ನ ಮತ್ತು ರಾತ್ರಿ ಮಹಾಪೂಜೆಯ ಬಳಿಕ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ದೇವಳದ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಗ್ರಾಮಸ್ಥರಿಂದಲೇ ಪೂಜೆಗೆ ಬೇಕಾದ ವಸ್ತುಗಳ ಸಂಗ್ರಹ

ದೇವಳದ ಜೀರ್ಣೋದ್ಧಾರಕ್ಕೆ ಗ್ರಾಮಸ್ಥರು ಹಗಲು ರಾತ್ರಿ ಎನ್ನದೆ ಶ್ರಮದಾನದ ಮೂಲಕ ಶ್ರಮ ಪಡುತ್ತಿದ್ದಾರೆ. ಜ.10 ರಂದು ನಡೆಯುವ ತ್ರಿಕಾಲ ಪೂಜೆ ಹಾಗೂ ಸಹಸ್ರ ನಾಳೀಕೇರ ಗಣಪತಿ ಯಾಗಕ್ಕೆ ಬೇಕಾದ ಎಲ್ಲಾ ಬಗೆಯ ಸುವಸ್ತುಗಳನ್ನು ಸಂಪೂರ್ಣವಾಗಿ ಗ್ರಾಮಸ್ಥರೇ ನೀಡಿದ್ದಾರೆ.

ಪ್ರವೀಣ್, ಚೆನ್ನಾವರ

Leave A Reply

Your email address will not be published.