ಕರಾಳ ರಾತ್ರಿಯ ಕತ್ತಲಲ್ಲಿ ಆತನ ಕೈಗೆ ಮಗುವನ್ನು ದಾಟಿಸಿ ಹೋದ ಮುದುಕಿ ಯಾರು?

0 12

ಕತ್ತಲು ದಟ್ಟವಾಯಿತು. ತಂಪುಗಾಳಿ ಅರೆ ಮುಚ್ಚಿದ್ದ ಕಿಟಕಿಯನ್ನೂ ದಾಟಿಕೊಂಡು ಹಾವಿನಂತೆ ಬುಸುಗುಡುತ್ತ ಬಂತು. ನಾನು ಊರಂಚಿನ ತೋಟದ ಮನೆಯಲ್ಲಿ ಒಬ್ಬನೇ ಮಲಗಿದ್ದೆ. ಒಂದೇ ಸವನೆ ಅರಚುವ ಜೀರುಂಡೆಯ ಶಬ್ದ ಬಿಟ್ಟರೆ ಬೇರೆಲ್ಲ ನೀರವ.

ದೂರದಲ್ಲಿ ಜನರು ಎಂದಿಗಿಂತ ಲವಲವಿಕೆಯಲ್ಲಿ ಇದ್ದಾರೆ. ಸುಯ್ಯುವ ಕುಳಿರ್ಗಾಳಿಯನ್ನು ಕೂಡ ಲೆಕ್ಕಿಸದೆ ಅವಳ ಬರುವಿಕೆಗಾಗಿ ಕಾಯುತ್ತಿದ್ದಾರೆ. ನಾನೂ ವರ್ಷಗಳಿಂದ ಕಾಯುತ್ತಿದ್ದೇನೆ.
ಜಗತ್ತಿಗೆ ಜಗತ್ತೆ ಉದ್ವೇಗಗೊಂಡಂತಿತ್ತು. ನಿದ್ದೆಯಿನ್ನೂ ಬಿದ್ದಿರಲಿಲ್ಲ. ಸಾವಿರ ಯೋಚನೆಗಳು ನೂರು ಯೋಜನೆಗಳು ಮನಸ್ಸನ್ನುಅಲ್ಲೋಲ ಕಲ್ಲೋಲಗೊಳಿಸಿದ್ದವು.
ಅದ್ಯಾವ ಮಾಯೆಯಲ್ಲಿ ನಿದ್ರಾದೇವಿ ಬಂದು ತಬ್ಬಿಕೊಂಡಳು ಗೊತ್ತಿಲ್ಲ. ಕುಳಿತುಕೊಂಡಲ್ಲೇ ಒಂದು ಜೊಂಪು. ಚಿಕ್ಕ ತೂಕಡಿಗೆ.

ಅಷ್ಟರಲ್ಲಿ ಯಾರೋ ದಬಾ ದಬಾ ಬಾಗಿಲು ಬಡಿದ ಸದ್ದು. ನೋಡಿದರೆ ಆಗಲೇ ಕರೆಂಟು ಕೈಕೊಟ್ಟಿತ್ತು. ಸೃಷ್ಟಿ ಕಪ್ಪು ಬಣ್ಣದಲ್ಲಿ ಅದ್ದಿ ತೆಗೆದಂತಿತ್ತು.
ಎದ್ದು ಕ್ಯಾಂಡಲ್ ಬೆಳಗಿಸಿ ಬಂದು ಬಾಗಿಲು ತೆರೆದೆ. ಭಯದಿಂದ ಪ್ರಯತ್ನವಾಗಿ ಹೆಜ್ಜೆ ಹಿಂದಿರುಗಿಸಿದೆ.

ಆ ಕಾಳ ರಾತ್ರಿಯಲ್ಲಿ, ಕತ್ತಲೇ ಮೈಬಣ್ಣವಾದ ಅಪರಿಚಿತ ಹೆಂಗಸೊಬ್ಬಳು ನಿಂತಿದ್ದಳು. ಹೆಂಗಸಾ ಅವಳು ? ಮುಪ್ಪಾನ ಮುದುಕಿ. ಸುಕ್ಕುಗಳನ್ನೇ ಅಡ್ಡಾದಿಡ್ಡಿಯಾಗಿ ನೇಯ್ದು ಅವಳ ಮುಖವನ್ನಾಗಿಸಲಾಗಿತ್ತು. ಜೋಲು ಚರ್ಮವೇ ಆಕೆಯ ಮೈಯಾಗಿದ್ದವು. ನಿಗಿ ನಿಗಿ ಕೆಂಡದಲ್ಲಿ ಸುಟ್ಟು ತೆಗೆದಂತಿತ್ತು ಅವಳ ಕೆಂಚು ಕೆಂಚು ಕೂದಲುಗಳು.

ಭಯದಿಂದ ನಾನು ಹಿಂದಡಿಯಿರಿಸಿದೆ. ಬಾಗಿಲು ಹಾಕುವ ಹಾಕಿಕೊಳ್ಳುವಷ್ಟರಲ್ಲಿ ಮಿಂಚಿನಂತೆ ಮುಂದೆ ಸರಿದ ಆಕೆ ನವಜಾತ ಶಿಶುವೊಂದನ್ನು ನನ್ನ ಕೈಗಿತ್ತು ಕತ್ತಲಲ್ಲಿ ಕರಗಿಹೋದಳು. ಒಂದರೆ ಕ್ಷಣ ನಾನು ಸ್ತಬ್ಧವಾದೆ. ‘ಏಯ್ ‘ ಎಂದು ನಾನು ಹೋಗಿ ಕರೆಯಬೇಕೆಂದುಕೊಂಡವನು ಸುಮ್ಮನಾದೆ. ಪ್ರಯೋಜನವಿಲ್ಲ. ಕತ್ತಲು ಎಲ್ಲವನ್ನು ನುಂಗಿ ಹಾಕಿ ಬಿಡುತ್ತದೆ.

ನನ್ನ ಕೈಗಳಲ್ಲಿ ಮಲಗಿದ್ದ ಮಗುವಿನತ್ತ ನೋಡಿದೆ. ಬುದ್ದನ ತೀವ್ರತೆಯಲ್ಲಿ ಧ್ಯಾನದಲ್ಲಿದ್ದಂತಿದೆ ಮಗು. ಶುದ್ಧತೆಯನ್ನು ಕರಗಿಸಿ ಅದರ ಕೆನ್ನೆಯನ್ನಾಗಿಸಲಾಗಿತ್ತು. ಪ್ರೀತಿ ಉಕ್ಕಿ ಬಂದು ಮಗುವನ್ನು ಎದೆಗೆ ತಬ್ಬಿಕೊಂಡೆ. ಆಗ ತಾನೆ ಕುಡಿದ ಎದೆಹಾಲಿನ ಘಮ ನನ್ನ ಮೂಗಿಗಿಳಿಯಿತು.

ವಿವರಗಳಲ್ಲಿ ನೋಡಿದರೆ, ಮಗು ಚಿನ್ನದ ಬಣ್ಣದಲ್ಲಿತ್ತು. ಕುಡಿ ಬೇವಿನ ಹುಬ್ಬು, ಆಗ ತಾನೇ ಮೊಗ್ಗೊಡೆದ ತಾವರೆ ಗಾತ್ರದ ಪಾದ, ಪಾರದರ್ಶಕ ಬೆರಳುಗಳು, ಕಾಮನ ಬಿಲ್ಲಿನಿಂದ ಕದ್ದ ಬಣ್ಣದ ತುಟಿ. ತುಟಿಯಂಚಿನಲ್ಲಿ ನಿದ್ದೆಯಲ್ಲೇ ಒಂದು ಮುಗುಳು !

ನನ್ನ ಕೈಯಲ್ಲಿ ಮಲಗಿದ್ದ ಮಗು ಗಂಡ ಹೆಣ್ಣ ಒಂದರೆ ಕ್ಷಣವೂ ಹಲ ಬಟ್ಟೆ ಮೇಲಕ್ಕೆ ಸರಿಸಿ ನೋಡಿದರೆ ಅನುಮಾನ ಪರಿಹಾರವಾಗುತ್ತದೆ.
‘ ಬೇಡ ಗಂಡಿನಲ್ಲಿ ಹೆಣ್ಣಿರಲಿ ಮುಕ್ತತೆಯಿಂದ ವ್ಯತ್ಯಾಸವಿಲ್ಲವಲ್ಲ ‘ ಅಂದುಕೊಂಡೆ.
” ಕಂದಾ ನಿನಗಾಗಿ ಇಷ್ಟು ದಿನ ಕಾಯುತ್ತಿದ್ದೆ. ನಿನ್ನ ಮುಂದೆ ನನ್ನ ಈವರೆಗಿನ ಎಲ್ಲಾ ಬಲಹೀನತೆಗಳನ್ನು ಮೀರಿ ಮತ್ತಷ್ಟು ಒಳ್ಳೆಯದಾಗುತ್ತಿದೆ. ಕನಸುಗಳ ಊಟೆಯನ್ನೇ ಹೊರುತ್ತೇನೆ. ನಿನ್ನ ಸಾಂಗತ್ಯದಲ್ಲಿ ನನ್ನ ಕನಸುಗಳನ್ನೆಲ್ಲ ನನಸಾಗಿಸುತ್ತೇನೆ ಪ್ರಾಮಿಸ್ ‘ ಹೀಗೆಂದು ಅಂದುಕೊಂಡೆ.

ಅದು ಡಿಸೆಂಬರ್ 31ರ ಮಧ್ಯರಾತ್ರಿ. ಹಾಗೆ ಹಳೆಯ ವರ್ಷವೆಂಬ ಮುದುಕಿ ನಿರೀಕ್ಷೆಗಳ ಕೂಸನ್ನು ನನಗೆ ದಯಪಾಲಿಸಿ ಹೋಗಿದ್ದಳು. ಹೊಸ ವರ್ಷದ ಮಗು ನಿದ್ದೆಯಲ್ಲೇ ಕೆನ್ನೆಯರಲಿಸಿ ನಕ್ಕಿತ್ತು.
ಈ ಪುಟ್ಟ ಮಗುವನ್ನು ಒಳ್ಳೆಯ ಪೋಷಣೆ ಮಾಡಬೇಕು. ಅದರ ಆರೈಕೆಯೊಂದೇ ನನ್ನ ಕೆಲಸ. ಅದರ ಉನ್ನತಿ ಆಗಬೇಕೆಂದರೆ ನಾನು ದುಡಿಯಬೇಕು. ಒಂದು ದೃಢ ನಿಶ್ಚಯ ನನ್ನದಾಗಬೇಕು. ಮಾಡಿಕೊಂಡ ಪ್ಲಾನನ್ನು ತಕ್ಷಣಕ್ಕೆ ಇಂಪ್ಲಿಮೆಂಟ್ ಮಾಡಬೇಕು. ಫಲ ಪಡೆಯಲು ರಕ್ತ ರಾತ್ರಿಗಳನ್ನು ಹರಿಸಬೇಕು. ಅಗಾಧವಾದ ತಾಳ್ಮೆ ನನ್ನದಾಗಬೇಕು. ಇವೇ ತಾನೇ ಪ್ರತಿ ವರ್ಷದಾರಂಭದಲ್ಲಿನ ನಮ್ಮೆಲ್ಲರ ರೆಸೊಲ್ಯೂಷನ್ ?

ನಾವು ಪ್ರತಿ ವರ್ಷದ ಪ್ರಾರಂಭದಲ್ಲಿ, ಹೊಸ ಡೈರಿ ತಗೋಳ್ಳೋದೇನು, ಟಾರ್ಗೆಟ್ ಹಾಕ್ಕೊಳ್ಳೋದೇನು, ಪ್ಲಾನ್ – ಸ್ಕೆಚ್ಚು ಮಾಡೋದೇನು ? ಆದರೆ ನಮ್ಮ ಪ್ಲಾನು ಪ್ರತಿ ಬಾರಿಯೂ ಹಳಿ ಜಾರಿದೆ. ಆರಂಭ ಶೂರತೆಯಿಂದ ಪ್ರಾರಂಭವಾದ ನಡಿಗೆ ಅಡಿಗಡಿಗೆ ನಿಂತು ಬಿಟ್ಟಿದೆ. ತಿಂಗಳೆರಡು ಕಳೆಯುವಷ್ಟರಲ್ಲೇ, ವರ್ಷ ಹಳೆಯದಾದ ಅನುಭವ. ಕಷ್ಟ ಸಹಿಸಿಕೊಳ್ಳಲಾಗದೆಯೋ ಅಥವಾ ಆಸಕ್ತಿ ಮತ್ತು ತಾಳ್ಮೆಕಳೆದುಕೊಂಡೋ ಅಥವಾ ಸಾಕಷ್ಟು ಡಿಟರ್ಮಿನೇಷನ್ ನ ಕೊರತೆಯೋ ಬಂಡಿ ಅರ್ಧ ದಾರಿಯಲ್ಲೇ ಜಖಂ.

ಆದರೆ, ಈ ವರ್ಷ ಹಾಗಲ್ಲ. ಯಾಕೆಂದರೆ ಇದು 2020 !

ಈ ವರ್ಷ, ಮಿಲ್ಲೇನಿಯಂ ನ ನಂತರ ಭರ್ತಿ 20 ರ ನಿಗಿನಿಗಿ ಯವ್ವನ ತುಂಬಿಕೊಂಡ ಆರೋಗ್ಯವಂತ ವರ್ಷ. ಈ ಸಲ ನಮ್ಮ ಟಾರ್ಗೆಟ್ ಯಾವುದೇ ಇರಲಿ, ನಮ್ಮ ಗುರಿ ಎಂದೂ ಮಿಸ್ಸಾಗಲ್ಲ. ಸಕ್ಸೆಸ್ ಅನ್ನುವುದು ನಮ್ಮ ಕಣ್ಣಳತೆಯಲ್ಲೇ ಇನ್ನು ಕೇವಲ 366 ದಿನದ ದೂರದಲ್ಲಿದೆ.

ಜಸ್ಟ್ ಸ್ಟಾರ್ಟ್. ವಿಶ್ ಯೂ ಎ ಸಕ್ಸಸ್ ಫುಲ್ ನ್ಯೂ ಇಯರ್ 2020.

ಸುದರ್ಶನ್ ಬಿ. ಪ್ರವೀಣ್, ಬೆಳಾಲು

Leave A Reply