ಡಿಸೆoಬರ್ 31 ರ ನ್ಯೂ ಇಯರ್ ಪಾರ್ಟಿ ಬೇಕಾ ಬೇಡವಾ । ಏನಂತಾರೆ ಜನ ?

ಹಬ್ಬಗಳು ಮನುಷ್ಯನಿಗೆ ಖುಷಿಯನ್ನು ತರುತ್ತವೆ. ಹಾಗೆಯೆ ಹೊಸ ವರ್ಷದ ಆಚರಣೆ ಕೂಡ.

ಹೊಸವರ್ಷ ಅಂದರೆ, ನಾವು ಹಿಂದೆ ಮಾಡಿದ ತಪ್ಪುಗಳನ್ನು ಮತ್ತೆ ಹೊಸದಾಗಿ ಮಾಡಲು ಮತ್ತೊಂದು ಅವಕಾಶ. ಯಾರಿಗೆ ಗೊತ್ತು ನಮ್ಮ ಸರಣಿ ತಪ್ಪುಗಳ (!!) ಮಧ್ಯೆಯೇ ಒಂದು ಭರ್ಜರಿ ಸಕ್ಸಸ್ ನಮಗಾಗಿ ಕಾದು ಕುಳಿತಿರಬಹುದು. ಇಂತಿಷ್ಟು ಸೋಲಿನ, ನೋವಿನ ನಂತರವೇ ನಮಗೆ ಗೆಲುವಿನ ಉಡುಗೊರೆ ಕೊಡಲು ಅದೃಷ್ಟಲಕ್ಷ್ಮಿ ಮೊದಲೇ ಲೆಕ್ಕ ಬರೆದಿಟ್ಟಿರಬಹುದು. ಹೂ ನೋಸ್ ?!

ಹೊಸವರ್ಷದಲ್ಲಿ, ನಾವು ಕಳೆದ ವರ್ಷಕ್ಕಿಂತ ಇವತ್ತು ಒಂದು ವರ್ಷ ಹಿರಿಯರಾಗಿರುತ್ತೇವೆ. ಹಿರಿತನಕ್ಕೂ ಪ್ರಬುದ್ಧತೆಗೂ ನೇರ ಅನುಪಾತವಿರುವ ಕಾರಣ, ನಿನ್ನೆಗಿಂತ ನೀವು ಇವತ್ತು ಬುದ್ದಿವಂತರು. ಹಳೆಯವರ್ಷದ ನಿಮ್ಮ ಪರ್ಫಾರ್ಮಾನ್ಸ್ ನ ಮುಂದೆ ಹೊಸವರ್ಷದಲ್ಲಿ ನೀವು ಎಕ್ಸ್ ಪರ್ಟ್ ಆಗಿರುತ್ತೀರಿ. ಮಾನಸಿಕವಾಗಿ ಮತ್ತಷ್ಟು ಗಟ್ಟಿಯಾಗಿರುತ್ತೀರಿ. ಹಳೆಯ ತಪ್ಪುಗಳು ನಿಮ್ಮಲ್ಲಿ ಹೊಸ ಸರಿಯುತ್ತರಗಳನ್ನು ಮೊಳೆತು ಮೂಡಿಸಿರುತ್ತದೆ.

ಹೊಸವರ್ಷ ಅನ್ನುವುದೊಂದು ಗಡಿ. ಅದು ಲೆಕ್ಕದ ಪುಸ್ತಕ ಬದಲಾಗುವ ಸಮಯ. ಹಳೆಯ ಬಾಕಿ ಲೆಕ್ಕವನ್ನು ಲೆಕ್ಕ ಹಾಕಿ ಕೂಡಿ ಕಳೆದು ಒಂದಷ್ಟು ಮನ್ನಾ ಮಾಡಿ, ಮತ್ತೊಂದಷ್ಟು ವಿಷಾದವನ್ನು ಹೊರಕ್ಕೆ ಕಕ್ಕಿ ಮುಂದಕ್ಕೆ ಸಾಗಬೇಕಾದ ಸಮಯ. ಕಲಿಕೆಯ ಸಮ್ಮರಿ ಮಾತ್ರ ಮುಂದಿನ ವರ್ಷಕ್ಕೆ ತೆಗೆದುಕೊಂಡು ಹೋಗುವ ಕಾಲ. ಅದು ಹೊಸದಾಗಿ ಮತ್ತೊಂದು ಬದುಕು ಶುರುವಿಡುವ ಸಂದರ್ಭ. ಇವೆಲ್ಲಾ ಕಾರಣಕ್ಕೇ ನಮಗೆ ಬೇಕಾಗಿದೆ ಹೊಸವರ್ಷದ ಆಚರಣೆ !

ಮತ್ತೆ ಕೆಲವರಿಗೆ ಹೊಸವರ್ಷವೆನ್ನುವುದು ಪಾರ್ಟಿ ಮಾಡಲು ಇರುವ ಮತ್ತೊಂದು ಅವಕಾಶ. ಅವರುಗಳಿಗೆ ಜೀವನದ ಪ್ರತಿ ಘಟನೆಗಳಿಗೂ ಪಾರ್ಟಿ ಮಾಡಬೇಕೆನ್ನುವ ತೀರದ ಬಯಕೆ. ಹುಟ್ಟಿದರೆ ಸಂಭ್ರಮ, ಹಬ್ಬದ ದಿನದಲ್ಲಿನ ಸಡಗರಕ್ಕೆ ಪಾರ್ಟಿ, ಯಾರಾದರೂ ಸತ್ತರೆ ನೋವು ನೀಗಿಸಿಕೊಳ್ಳಲು ಮತ್ತೊಂದಷ್ಟು ಕುಡಿತ. ಅದೊಂದು ಥರ ಹೊಸ ವ್ಯಸನ. ಬೇರೆ ಎಲ್ಲಾ ವ್ಯಸನಗಳಿಗಿಂತಲೂ ಅದು ದೊಡ್ಡದು ಮತ್ತು ಯಾವುದೇ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿಯೂ ಸುಲಭಕ್ಕೆ ಗುಣಪಡಿಸಲಾಗದು !

ಹೊಸವರ್ಷ ಯಾವತ್ತು ಪ್ರಾರಂಭ- ಜನವರಿಯಾ ಅಥವಾ ಯುಗಾದಿಯಂದಾ ?

ಎಲ್ಲ ಸರಿ, ಯಾವಾತ್ತು ಹೊಸ ವರ್ಷ ಎನ್ನುವುದೇ ಇವತ್ತಿನ ಕನ್ಫ್ಯೂಷನ್. ಹಿಂದೂಗಳ ಪ್ರಕಾರ ಯುಗಾದಿ ಹೊಸವರ್ಷಾರಂಭದ ದಿನ. ಆದರೆ ಜನವರಿ 1, ಇಂಗ್ಲಿಷ್ ಸಂಪ್ರದಾಯದ ಪ್ರಕಾರ ಹೊಸ ವರ್ಷದ ಮೊದಲ ದಿನ. ಅದು ಕ್ರಿಸ್ತ ಹುಟ್ಟುವುದಕ್ಕೆ 46 ವರ್ಷಕ್ಕೆ ಮೊದಲೇ ಜೂಲಿಯನ್ ಸೀಸರ್ ನಿಂದ ಪ್ರಾರಂಭವಾದದ್ದು. ತನ್ನ ರಾಜ್ಯದಲ್ಲಿ ಆಡಳಿತಾತ್ಮಕವಾಗಿ ಅಧಿಕಾರಿಗಳನ್ನು ನೇಮಿಸಿದ ದಿನದಿಂದ ಹೊಸವರ್ಷವು ಜನವರಿ ಒಂದರಿಂದ ಪ್ರಾರಂಭವಾಯಿತು. ಮುಂದೆ ಅದರ ಆಚರಣೆ ಪ್ರಾರಂಭವಾಯಿತು.

ಇವತ್ತು ಹಿಂದೂ ಸಂಘಟನೆಗಳು ” ಹೊಸವರ್ಷದ ಆಚರಣೆ ಬೇಡ, ಅದು ನಮ್ಮ ಸಂಸ್ಕೃತಿಯಲ್ಲ, ಅದು ವಿದೇಶಿ ಸಂಸ್ಕೃತಿ. ನಮ್ಮ ಹೊಸ ವರ್ಷ ಪ್ರಾರಂಭವಾಗುವುದು ಚಂದ್ರಮಾನ ಯುಗಾದಿಯ ದಿನ ಅಥವಾ ಸೌರಮಾನ ಯುಗಾದಿಯಂದು” ಎಂದು ಪ್ರತಿವರ್ಷ ಕರೆ ಕೊಡುತ್ತಲೇ ಇದೆ.

ಈ ಬಗ್ಗೆ ಜನರನ್ನು ಹೊಸಕನ್ನಡ ಮಾತಾಡಿಸಿತ್ತು. ಅದನ್ನು ಅವರ ಮಾತಲ್ಲೇ ಕೇಳಿ.

” ಹೊಸವರ್ಷ ಅಂದರೆ ಅದು ಜನವರಿ ಫಸ್ಟ್ ನೇ. ಅದರ ಹಿಂದಿನ ದಿನ ಸಂಭ್ರಮ ಆಚರಣೆ ಮಾಡೋದು ಚೆನ್ನಾಗಿರುತ್ತದೆ. ಪಾರ್ಟಿ ಮಾಡಲು ಗೆಳೆಯರ ಜತೆ ಕೂಗು ಹಾಕುತ್ತ ಡಾನ್ಸ್ ಮಾಡಲು ಇದು ಪ್ರಶಸ್ತ ಸಮಯ. ನಾವಂತೂ ಪ್ರತಿ ಹೊಸವರ್ಷದ ಹಿಂದಿನ ದಿನ ಮಧ್ಯರಾತ್ರಿಯವರೆಗೆ ಎಚ್ಚರವಿದ್ದು ಹೊಸವರ್ಷವನ್ನು ಆಚರಿಸಿಕೊಳ್ಳುತ್ತೇವೆ ” ಹೀಗಂದದ್ದು ಮಂಗಳೂರಿನ ಚರಿತ್ರ.

” ಯುಗಾದಿಯ ದಿನ ಹಿಂದೂಗಳ ಪ್ರಕಾರ ಹೊಸವರ್ಷದ ಪ್ರಾರಂಭದ ದಿನ. ಆದರೆ ಆ ದಿನ ಹಿಂದೂಗಳಿಗೆ ಹಬ್ಬದ ದಿನ. ಹಬ್ಬದ ದಿನ ಮೋಜು ಮಸ್ತಿ ಮಾಡಲಿಕ್ಕಾಗುವುದಿಲ್ಲ. ಯುಗಾದಿಯಂದು ಮಾಡಬೇಕಾದ ಆಚರಣೆಗಳೇ ಬೇರೆ ಇರುತ್ತವೆ. ಯುಗಾದಿಯ ದಿನ, ಬ್ರಹ್ಮನು ಭೂಮಿಯನ್ನು ಸೃಷ್ಟಿ ಮಾಡಲು ಪ್ರಾರಂಭಿಸಿದ ಎನ್ನುವುದು ನಂಬಿಕೆ. ಯುಗಾದಿಯಂದು ನಾವು ಸೃಷ್ಟಿಕರ್ತ ಬ್ರಹ್ಮನನ್ನು ಪೂಜಿಸುತ್ತೇವೆ. ಹಾಗಾಗಿ ಯುಗಾದಿಯನ್ನು ಧಾರ್ಮಿಕ ಹೊಸವರ್ಷ ಎಂದು ಕರೆಯಬಹುದು. ಜನವರಿ ಒಂದರ ಹೊಸವರ್ಷವನ್ನು ಸೆಲೆಬ್ರೆಷನ್ ನ ಹೊಸವರ್ಷ ” ಹೀಗೆಂದು ವ್ಯಾಖ್ಯಾನಿಸಿದವರು ಪುತ್ತೂರಿನ ಕುಸುಮಾಧರರು.

” ಪಿಡ್ಕ್ ಪಾರ್ಟಿ ಮನೇಲಿ ಮಾಡಲು ಬಿಡ್ತಾರಾ. ಅದಕ್ಕೆ ಗೆಳೆಯರೇ ಸಾಥ್ ನೀಡಬೇಕು. ಎಲ್ಲಾದ್ರೂ ಒಟ್ಟಾಗಿ ನಾವಿಷ್ಟು ಕ್ಲೋಸ್ ಗೆಳೆಯರು ಕೂತು ಪಾರ್ಟಿ ಮಾಡ್ತೇವೆ. ಹಬ್ಬದ ದಿನ ರಜ ಇರುತ್ತದೆ. ಅವತ್ತು ಮನೆಯಿಂದ ಪಾರ್ಟಿಗೆ ಹೊರಹೋಗಕ್ಕೆ ಬಿಡೋಲ್ಲ. ಪಾರ್ಟಿ ಮಾಡಕ್ಕೆ ಡಿಸೆoಬರ್ 31 ಕ್ಕಿಂತ ಬೇರೆ ಒಳ್ಳೆ ದಿನ ನೀವೇ ಹೇಳಿ” ಎಂದು ನನ್ನನ್ನೇ ಪ್ರಶ್ನಿಸಿದ್ದು ಬೆಳ್ತಂಗಡಿಯ ನಿಶಾಂತ್.

” ನಾನೆಲ್ಲ ಹುಡುಗರ ಥರ ಪಾರ್ಟಿ ಮಾಡಲ್ಲ. ಮನೇಲಿ ರಾತ್ರಿ ಹೊರಗೆ ಹೋಗಲು ಬಿಡೋದೂ ಇಲ್ಲ. ಅದೆಲ್ಲ ನಮಗೆ ಇಷ್ಟಾನೂ ಇಲ್ಲ. ಆದರೆ ನಾವೇ ಹತ್ತಿರದ ಮನೆಯ ಗೆಳತಿಯರು ಪ್ರತಿವರ್ಷ ಹೊಸವರ್ಷವನ್ನು ಕೇಕ್ ಕತ್ತರಿಸಿ ಖುಷಿಪಡುತ್ತೇವೆ. ಸೆಲ್ಫಿ ತೆಗೆದು ಡಿಪಿ ಸ್ಟೇಟಸ್ ಹಾಕಿದರೇನೇ ನಮಗೆ ಸಮಾಧಾನ ” ಅಂತ ದೊಡ್ಡ ಹುಡುಗಿಯರ ಗುಂಪಿನಲ್ಲಿ ಒಬ್ಬಾಕೆ ಹೇಳಿದಳು. ಹುಡುಗಿಯರೆಲ್ಲ ಸಾಮೂಹಿಕವಾಗಿ ದೊಡ್ಡದಾಗಿ ನಕ್ಕರು.

” ಇಲ್ಲ ನಾವು ಹೊಸವರ್ಷವನ್ನು ಆಚರಿಸಲೇಬಾರದು. ಅದು ನಮ್ಮ ಸಂಸ್ಕೃತಿಯಲ್ಲ. ಬೇರೆಯವರ ಸಂಸ್ಕೃತಿಯನ್ನು ನಾವು ಫಾಲೋ ಮಾಡಬಾರದು” ಹೀಗೆಂದು ಹೇಳಿದವನು ಹಿಂದುತ್ವಪರ ಸಂಘಟನೆಯಲ್ಲಿ ಓಡಾಡುತ್ತಿರುವ ಮಹೇಶ್.

” ನಾವು ಕೂಡ ಹುಡುಗರಾಗಿದ್ದಾಗ ಹಬ್ಬಗಳು, ಬರ್ತ್ ಡೇ ಪಾರ್ಟಿಗಳು ಮತ್ತು ಹೊಸವರ್ಷದ ಆಚರಣೆ ಎಲ್ಲ ಮಾಡುತ್ತಿದ್ದೆವು. ಈಗ ಯಾವುದು ಕೂಡ ಬೇಡ ಅನ್ನಿಸುತ್ತಿದೆ. ಲೈಫ್ ಇಷ್ಟೇನೆ ಅಂತ ಅರ್ಥ ಆಗಿದೆ. ಎಂದು ಅರೆ ವೇದಾಂತಿಯಂತೆ ಮಾತಾಡಿದ್ದು ಪ್ರಕಾಶ್ ಗೌಡರು.

ಅವರೇ ಮತ್ತೆ ಮುಂದುವರಿದು, ” ನಾನು ಎಷ್ಟು ಉತ್ಸಾಹದಿಂದ ಆಚರಣೆ ಮಾಡುತ್ತಿದ್ದೆನೋ ಅಷ್ಟೇ ಉತ್ಸಾಹದಿಂದ ನಮ್ಮನೇಲಿ ಹುಡುಗ್ರು ಮಾಡ್ತಿದ್ದಾರೆ. ನಾನ್ ಅವರಿಗೆ ಬೇಡ ಅನ್ನೋದಿಲ್ಲ. ಅದು ಅವರಿಗೆ ಖುಷಿ ಕೊಡುತ್ತದೆ. ಈಗಿನ ಹುಡುಗರು ಎಲ್ಲವನ್ನು ಕೂಡ ಅಚ್ಚುಕಟ್ಟಾಗಿ ಮಾಡುತ್ತಾರೆ. ಹಬ್ಬಕ್ಕೆ ಹೊಸ ಬಟ್ಟೆ ತಗೊಂಡು ಮನೆಯವರ ಜತೆ ಖುಷಿಪಟ್ಟರೆ, ಇಂತಹ ಹೊಸ ವರ್ಷದ ದಿನ ಹೊರಗಡೆಗೆ ಗೆಳೆಯರ ಜತೆ ಪಾರ್ಟಿ ಮಾಡ್ತಾರೆ. ಯುವಜನತೆಯನ್ನು ಅನಾವಶ್ಯಕವಾಗಿ ಕಟ್ಟಿ ಹಾಕೋದು ತಪ್ಪು. ಎಂಜಾಯ್ ಮಾಡ್ಲಿ. ನನ್ನಷ್ಟು ವಯಸ್ಸಾದಾಗ ಅದನ್ನೆಲ್ಲ ಮಾಡಲಿಕ್ಕಾಗುವುದಿಲ್ಲ. “

” ಅದು ಹೇಗೆ ವಿದೇಶಿ ಆಚರಣೆ ಆಗುತ್ತದೆ. ಈ ನ್ಯೂಇಯರ್ ಸೆಲೆಬ್ರೆಷನ್ ಕಮ್ಮಿ ಅಂದರೂ ಒಂದೂವರೆ ಸಾವಿರ ವರ್ಷಗಳ ಹಳೆಯ ಆಚರಣೆ. ಅವತ್ತಿನಿಂದ ಇವತ್ತಿನವರೆಗೆ ಆಚರಿಸಿಕೊಂಡು ಬಂದಿದ್ದೇವೆ. ನಾವು ಯಾವುದನ್ನು ಸ್ವದೇಶಿಯಾಗಿ ಮಾಡುತ್ತಿದ್ದೇವೆ? ನಮ್ಮ ವಿಮಾನ ವಿದೇಶದಲ್ಲಿ ತಯಾರಾದದ್ದು. ನಮ್ಮ ರಾಕೆಟ್ ಇಂಜೀನು ವಿದೇಶದ್ದು. ಈಗ ಸಿಗುವ ಜೀವರಕ್ಷಕ ಔಷಧಗಳು, ಕ್ಯಾನ್ಸರ್ ಔಷಧಗಳು ಎಲ್ಲವನ್ನು ತಯಾರಿಸುವವರು ವಿದೇಶಿಗಳು. ಜೀವ ಉಳಿಸುವ ಇವುಗಳೆಲ್ಲ ನಮಗೆ ಬೇಕು. ಜನವರಿಯ ಹೊಸವರ್ಷದ ಆಚರಣೆ ಮಾತ್ರ ಬೇಡವಾ?” ಹೀಗೆಂದು ತರ್ಕಬದ್ಧವಾಗಿ ಮಾತಾಡಿದವನು ಈಗಿನ್ನೂ ಸೆಕೆಂಡ್ ಪಿಯುಸಿಯ ಚಿಗುರು ಮೀಸೆಯ ಹುಡುಗ ದಿಗಂತ್.

ಇಲ್ಲಿ ಯಾರದ್ದೂ ತಪ್ಪು ಅಲ್ಲ. ಯಾವುದೂ ಫೈನಲ್ ಅಲ್ಲ. ಪ್ರಾರ್ಥಿಸಲು ಪ್ರತಿಯೊಬ್ಬರಿಗೆ ಹೇಗೆ ಹಕ್ಕು ಇದೆಯೋ, ಹಾಗೆಯೇ ಆಚರಿಸಲು ಕೂಡ ಅವರವರಿಗೆ ಆಯ್ಕೆಗಳು ಇರುತ್ತವೆ.

ಯಾರು ಏನೇ ಹೇಳಿದರೂ ಹೊಸವರ್ಷದ ಆಚರಣೆ ಸಾಂಗವಾಗಿ ನಡೆಯುತ್ತಲೇ ಇದೆ. ಹೊಸವರ್ಷದಲ್ಲಿ ಇರುವುದೆಲ್ಲವೂ ಹಳೆಯವು : ಅದೇ, ಪದೇ ಪದೇ ತಪ್ಪು ಹುಡುಕಿ ಸಿಡುಕುವ ಬಾಸು, ತಿಂಗಳ ಕೊನೆಗೆ ಸಾಲಮಾಡುವಂತೆ ಮಾಡುವ ಅದೇ ಸಂಬಳ, ಅದೇ ಚುಚ್ಚುವ ಹೆಂಡತಿ, ಅದೇ ಗುರುಗುಡುವ ಗಂಡ, ಅದೇ ತಲೆಹರಟೆಯ ಸದಾ ಕಂಟ್ರೋಲ್ ಮಾಡಲಿಚ್ಛಿಸುವ ಬಾಯ್ ಫ್ರೆಂಡು, ಮುನಿಸಿಕೊಂಡು ಮೊಬೈಲ್ ಬ್ಲಾಕ್ ಮಾಡಿ ಕೂರುವ ಗರ್ಲ್ ಫ್ರೆಂಡ್ ! ಆದ್ರೆ ಹೊಸವರ್ಷದಲ್ಲಿ ಹೆಚ್ಚಿದೆ ಕೆಲಸದ ಟಾರ್ಗೆಟ್ಟು ಮತ್ತು ನಿಮ್ಮವಯಸ್ಸು!! ಎಲ್ಲ ನೆಗಟಿವ್ ಗಳ ನಡುವೆಯೂ ಇರುವ ಬಹುದೊಡ್ಡ ಪಾಸಿಟಿವ್ ನೇ ‘ ಹೊಸದಾಗಿ ‘ ಕೆಲಸ ಶುರುವಿಡುವ ನೀವು !

ಒಟ್ಟಾರೆ ಜನ ಸಮುದಾಯ ಜನವರಿ 1 ನ್ನು ಹೊಸವರ್ಷದ ಮೊದಲ ದಿನವಾಗಿ ಸ್ವೀಕರಿಸಿ ಆಗಿದೆ. ಪ್ರಪಂಚದಾದ್ಯಂತ ಜನ ಅದನ್ನು ಒಪ್ಪಿ ನಡೆಯುತ್ತಿದ್ದಾರೆ. ಪ್ರತಿಯೊಂದನ್ನೂ ವಿರೋಧಿಸುವುದರಲ್ಲಿ ಅರ್ಥವಿಲ್ಲ. ಲೆಟ್ ಅಸ್ ಮೂವ್ ಫಾರ್ವಾರ್ಡ್. ಆಚರಣೆ ಮಾಡುವ ದಿನ ನಿಮ್ಮ ಆಯ್ಕೆ. ಆದರೆ ಆ ದಿನ ನಿಮ್ಮ ಬೆನ್ನಿಗೆ ಒಂದು ಹೊಚ್ಚ ಹೊಸ ಉತ್ಸಾಹದ ರಾಕೆಟ್ ಕಟ್ಟಿಕೊಂಡು ಓಟ ಶುರುವಿಟ್ಟರೆ ಅಷ್ಟಕ್ಕೇ ‘ ಹ್ಯಾಪಿ ನ್ಯೂ ಇಯರ್ ‘ ಅಂದದಕ್ಕೆ ಒಂದು ಅರ್ಥ !

ಸುದರ್ಶನ್ ಬಿ. ಪ್ರವೀಣ್, ಬೆಳಾಲು

Leave A Reply

Your email address will not be published.