ಹಲವರಿಗೆ ನೆರಳು ನೀಡಿದ ದೊಡ್ಡಾಲದ ಮರ ನೆಲಕ್ಕೆ ಬಿದ್ದಿದೆ । ವಿಶ್ವೇಶತೀರ್ಥ ಸ್ವಾಮೀಜಿ ಶ್ರೀ ಕೃಷ್ಣನಲ್ಲಿ ಲೀನ !
ಆಗಿನ್ನೂ ಎಲ್ಲ ಬಾಲಕರಂತೆ ಆಟವಾಡುತ್ತಿದ್ದ 7 ವರ್ಷದ ಪುಟಾಣಿ ಮಗುವದು. ಅಂತ ಮುದ್ದು ಮಗು ಅವತ್ತು ಸನ್ಯಾಸ ದೀಕ್ಷೆ ತೆಗೆದುಕೊಳ್ಳುತ್ತದೆ. ಅದು 1938 ರ ಸಮಯ. ಹಾಗೆ ಅವತ್ತು ಸನ್ಯಾಸ ಪಡೆದ ಹುಡುಗ ಮುಂದೆ ಬೆಳೆದು ಉಡುಪಿಯ ಅಷ್ಟಮಠದ ಪರ್ಯಾಯ ಸ್ವಾಮಿಜಿಯಾಗುತ್ತಾರೆ. ದೇಶಾದ್ಯಂತ ಪೇಜಾವರದ ವಿಶ್ವೇಶ್ವರ ತೀರ್ಥ ಸ್ವಾಮೀಜಿಯಾಗಿ ಹೆಸರು ಗಳಿಸುತ್ತಾರೆ.
ಪುತ್ತೂರು ತಾಲೂಕಿನ ರಾಮಕುಂಜದ ಮಾಧ್ವ ಬ್ರಾಹ್ಮಣ ಮಧ್ಯಮ ವರ್ಗದ ಕುಟುಂಬದಲ್ಲಿ ಜನನ. ಪೂರ್ವಾವಸ್ಥೆಯ ಹೆಸರು, ವೆಂಕಟರಮಣ.
ಚಿಕ್ಕವಯಸ್ಸಿನಿಂದಲೇ ನಾಯಕತ್ವದ ಲಕ್ಷಣವನ್ನು ಪೇಜಾವರದ ವಿಶ್ವೇಶ್ವರ ತೀರ್ಥ ಸ್ವಾಮೀಜಿಯವರು ತೋರ್ಪಡಿಸಿದ್ದರು. ವೇದ, ಉಪನಿಷದ್, ಪುರಾಣ ಗ್ರಂಥಗಳಲ್ಲಿ ಮತ್ತು ತತ್ವಶಾಸ್ತ್ರಗಳಲ್ಲಿ ಪ್ರಕಾಂಡ ಪಾಂಡಿತ್ಯವನ್ನು ಗಳಿಸಿದ್ದರು. ಅವರ ಜತೆ ವಾದಕ್ಕೆ ಬೀಳಲು ಪಂಡಿತರುಗಳೇ ಹೆದರುತ್ತಿದ್ದರು. ಅಷ್ಟರ ಮಟ್ಟಿಗಿನ ಪ್ರೌಢಿಮೆ ಅವರಲ್ಲಿತ್ತು.
ಸ್ವಾಮೀಜಿಗೆ ಸಾಹಿತ್ಯದಲ್ಲಿ ವಿಪರೀತವಾದ ಆಸಕ್ತಿಯಿತ್ತು. ಸಂಸ್ಕೃತದಲ್ಲಿ ‘ ಸಾಂಬ ವಿಜಯ ‘ ಎಂಬ ಕೃತಿಯನ್ನು ಬರೆದಿದ್ದರು.
ಕೇವಲ ಬೌದ್ಧಿಕ ವಿದ್ವತ್ ಮಾತ್ರ ಅವರಲ್ಲಿರಲಿಲ್ಲ. ಧೈಹಿಕವಾಗಿ ಕೂಡಾ ಅವರು ಗಟ್ಟಿಮುಟ್ಟಾಗಿದ್ದರು. ಯೌವನದಲ್ಲಿ ಎರಡು ಮುಡಿ ಅಕ್ಕಿಯನ್ನು ದೇಗುಲದ ಸುತ್ತ ಎತ್ತಿಕೊಂಡು ಹೋಗುವಷ್ಟರ ಮಟ್ಟಿಗೆ ಅವರು ಬಲಾಢ್ಯರಾಗಿದ್ದರು. ತೀರಾ ಇತ್ತೀಚಿನವರೆಗೆ ಈಜು ಹೊಡೆಯುತ್ತಿದ್ದರು. ಮಠದ ಯತಿಗಳೊಂದಿಗೆ ನೀರಿನಲ್ಲಿ ಆಟವಾಡುತ್ತಿದ್ದರು. ದೇಹಕ್ಕೆ ವಯಸ್ಸಾದರೂ ಮನಸ್ಸಿನಲ್ಲಿ ಅವರಿನ್ನೂ ಮಗುವೇ ಆಗಿದ್ದರು.
ಈಗವರಿಗೆ 88 ವರ್ಷ ವಯಸ್ಸು. ಇಷ್ಟು ವಯಸ್ಸಿನಲ್ಲಿಯೂ ಬತ್ತದ ಉತ್ಸಾಹ ಅವರಲ್ಲಿತ್ತು. ಸಳ ಸಳ ನಡೆದಾಡುತ್ತಿದ್ದರು.
ಹಿಂದುತ್ವದ ಹೋರಾಟದಲ್ಲಿ ಅವರು ಸಕ್ರಿಯವಾಗಿದ್ದರು. ವಿಶ್ವ ಹಿಂದೂ ಪರಿಷತ್ ನ ಜತೆ ಅವರು ನಿಕಟ ಸಂಪರ್ಕದಲ್ಲಿದ್ದರು. ಹೇಗಾದರೂ ಮಾಡಿ ರಾಮಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣ ಮಾಡುವುದು ಅವರ ಜೀವಮಾನದ ಕನಸಾಗಿತ್ತು. ಮೊನ್ನೆ ಸುಪ್ರೀಂ ಕೋರ್ಟು ಅಯೋಧ್ಯೆ ಪರ ತೀರ್ಪು ನೀಡಿದಾಗ ಚಿಕ್ಕ ಹುಡುಗನಂತೆ ಸಂಭ್ರಮಿಸಿದ್ದರು.
ತನ್ನ ಸನ್ಯಾಸಿ ಜೀವನದಲ್ಲಿ, ಉಡುಪಿಯ ಮಠವನ್ನು ಅವರು ಬೆಳೆಸುತ್ತ ಬಂದರು. ಬೇರೆ ಬೇರೆ ಊರುಗಳಲ್ಲಿ ಛತ್ರಗಳನ್ನು ತೆರೆದು ಧಾರ್ಮಿಕ ಪ್ರವಾಸಿಗಳಿಗೆ ಅನುಕೂಲ ಮಾಡಿಕೊಟ್ಟರು. ಬೆಂಗಳೂರಿನಲ್ಲಿ ಪೂರ್ಣಪ್ರಜ್ಞ ಶಿಕ್ಷಣ ಸಂಸ್ಥೆಯನ್ನು ಅವರು ಸ್ಥಾಪಿಸಿಯೇ ಇವತ್ತಿಗೆ 64 ವರ್ಷಗಳಾಗಿವೆ !
ಸ್ವಾಮೀಜಿಯವರ ಬಳಿ ಹಲವು ಯತಿಗಳು ಸನ್ಯಾಸ ಸ್ವೀಕರಿಸಿದ್ದರು. ಕೇಂದ್ರದ ಮಂತ್ರಿ ಉಮಾ ಭಾರತಿಯವರು ಪೇಜಾವರ ಶ್ರೀಗಳ ಕೈಯಲ್ಲಿ ಸನ್ಯಾಸತ್ವ ಸ್ವೀಕರಿಸಿದ್ದರು. ಗೋಹತ್ಯೆ ರಾಮ ಮಂದಿರ ಮುಂತಾದ ವಿಷಯಗಳು ಭಾರತೀಯ ಜನತಾ ಪಾರ್ಟಿಯಾ ಅಜೆಂಡಾದಲ್ಲಿರುವ ಕಾರಣಕ್ಕೆ, ಶ್ರೀಗಳಿಗೂ ಬಿಜೆಪಿಗೂ ನಂಟು ಹಿಂದಿನಿಂದಲೇ ಬೆಳೆದು ಬಂದಿತ್ತು.
ಧಾರ್ಮಿಕವಾಗಿ ಜಾಸ್ತಿ ತೊಡಗಿಕೊಂಡಿದ್ದ ಪೇಜಾವರದ ಸ್ವಾಮೀಜಿಗಳು ಬರಬರುತ್ತ ಮತ್ತಷ್ಟು ಪ್ರಬುದ್ಧತೆ ತೋರ್ಪಡಿಸುತ್ತಾ ಸಾಗಿದರು.
ಇತ್ತೀಚಿಗೆ ಅವರು ದಲಿತರೊಂದಿಗೆ ಸಹ ಭೋಜನ ಮಾಡಿದ್ದರು. ಹಿಂದೂ ಧರ್ಮೀಯರ ಮಧ್ಯೆ ಇರುವ ಜಾತಿಯ ಪರದೆಯನ್ನು ಸರಿಸುವ ಕೆಲಸಕ್ಕೆ ಕೈಹಾಕಿದ್ದರು. ತೀರಾ ಇತ್ತೀಚಿಗೆ, ಮುಸ್ಲಿಮರ ರಂಜಾನ್ ಹಬ್ಬದ ಸಂದರ್ಭ ಉಡುಪಿ ಮಠದ ಭೋಜನಶಾಲೆಯಲ್ಲಿ ಇಫ್ತಾರ್ ಕೂಟವನ್ನು ಏರ್ಪಡಿಸಿ ಕಟ್ಟರ್ ಹಿಂದುತ್ವವಾದಿಗಳ ಕಣ್ಣು ಕೆಂಪಾಗಿಸಿದ್ದರು.
ಅವರಲ್ಲಿ ಸಾಮಾಜಿಕ ಪ್ರಜ್ಞೆ ಮೊದಲಿನಿಂದಲೂ ಇರಲಿಲ್ಲವೆಂದಲ್ಲ. ಆವಾಗ 1975 ರಲ್ಲಿ, ಇಂದಿರಾಗಾಂಧಿ ತುರ್ತು ಪರಿಸ್ಥಿತಿ ಹೇರಿದುದನ್ನು ಅವರು ವಿರೋಧಿಸಿ ಇಂದಿರಾಗಾಂಧಿಗೆ ಪ್ರತಿಭಟನಾ ಪತ್ರವನ್ನು ಬರೆದಿದ್ದರು. ಕಟ್ಟರ್ ಸಂಪ್ರದಾಯಗಳು ಗಾಢವಾಗಿ ಬೇರೂರಿದ್ದ ಆ ಕಾಲದಲ್ಲೇ ಜೈಲಿಗೆ ಹೋಗಲು ಅವರು ರೆಡಿಯಾಗಿದ್ದರು.
ಹಿಂದೂ ಧರ್ಮದ ಏಳಿಗೆಯ ಬಗ್ಗೆ ತೊಡಗಿಕೊಂಡಿದ್ದ ಅವರು ನಿಧಾನವಾಗಿ, ಮತ್ತು ಅಷ್ಟೇ ಸ್ಪಷ್ಟವಾಗಿ ಮನುಷ್ಯಧರ್ಮದ ಒಟ್ಟಾರೆ ಚಿಂತನೆಯತ್ತ ಮಗ್ಗುಲು ಬದಲಿಸಿದ್ದು ಎದ್ದು ಕಾಣುತ್ತಿತ್ತು.
ಈಗ ಪ್ರಕೃತಿ ತನ್ನ ಕೆಲಸ ನಿರ್ವಹಿಸಿದೆ. ಒಳ್ಳೆಯದಕ್ಕೆ ಸದಾ ತುಡಿಯುತ್ತಿದ್ದ, ಹಲವರಿಗೆ ಆಶ್ರಯ ಮತ್ತು ಸಲಹೆ ನೀಡುತ್ತಾ ಪರೋಪಚಾರಕ್ಕಾಗಿ ಬದುಕಿದ ದೊಡ್ಡಾಲದ ಮರವೊಂದು ತಣ್ಣಗೆ ಮಲಗಿದೆ. ಒಳಗಿದ್ದ ಅಂತರ್ಶಕ್ತಿ ಶ್ರೀ ಕೃಷ್ಣನಲ್ಲಿ ಲೀನವಾಗಿದೆ.
ಪರ್ಯಾಯ ಅಂದರೇನು?
ಹದಿಮೂರನೆಯ ಶತಮಾನದ ಮಧ್ಯಭಾಗದಲ್ಲಿ ಮಧ್ವಾಚಾಚಾರ್ಯರು ಕೃಷ್ಣಮಠವನ್ನು ಸ್ಥಾಪಿಸುತ್ತಾರೆ. ಮತ್ತು ಅವರು ಎಂಟು ಜನ ಬಾಲ ಯತಿಗಳಿಗೆ ಸನ್ಯಾಸ ದೀಕ್ಷೆಯನ್ನು ನೀಡುತ್ತಾರೆ. ಆ ಎಂಟು ಜನ ಬಾಲಯತಿಗಳು, ಬೆಳೆದು ದೊಡ್ಡವರಾಗಿ ಉಡುಪಿಯ ಸುತ್ತಮುತ್ತಲಿನ, ದಕ್ಷಿಣಕನ್ನಡ ಪ್ರಾಂತ್ಯದಲ್ಲಿ ಅಷ್ಟಮಠಗಳನ್ನು ಸ್ಥಾಪಿಸುತ್ತಾರೆ. ಮುಂದೆ ಇದೇ ಪರಂಪರೆಯ ಸ್ವಾಮೀಜಿಯಾದ ವಾದಿರಾಜ ತೀರ್ಥರು 1522 ರಲ್ಲಿ ಪರ್ಯಾಯ ಪರಂಪರೆಯನ್ನು ಪ್ರಾರಂಭಿಸಿದರು. ಅದರ ಪ್ರಕಾರ, ಉಡುಪಿಯ ಶ್ರೀಕೃಷ್ಣನ ಪೂಜೆ ಮಾಡುವ ಅವಕಾಶ ಪ್ರತಿ ಎರಡು ವರ್ಷಕ್ಕೊಮ್ಮೆಬದಲಾಗುತ್ತದೆ. ಅಷ್ಟಮಠಗಳ ಸ್ವಾಮೀಜಿಗಳು ಒಬ್ಬರ ನಂತರ ಒಬ್ಬರು ಆ ಹಕ್ಕನ್ನು ಸರದಿಯಲ್ಲಿ ಪಡೆಯುತ್ತಾರೆ.
ಸುದರ್ಶನ್ ಬಿ. ಪ್ರವೀಣ್, ಬೆಳಾಲು