ನ್ಯಾಚುರಲ್ ಫಾರ್ಮರ್ ನಾರಾಯಣ ರೆಡ್ಡಿ ಪ್ರೇರಿತ । ಮನುಷ್ಯ ಎಷ್ಟು ಕೃತಘ್ನ ಅಲ್ವಾ ?

0 18

ನ್ಯಾಚುರಲ್ ಫಾರ್ಮರ್, ದಿ. ನಾಡೋಜ ಎಲ್. ನಾರಾಯಣ ರೆಡ್ಡಿಯವರು ನಮ್ಮ ಮಣ್ಣಿನ ಹೆಮ್ಮೆ. ಅವರ ಸಂಪೂರ್ಣ ಸಂದೇಶವನ್ನು ನಮ್ಮ ಜನರಿಗೆ ತಲುಪಿಸುವ ಒಂದು ಸಣ್ಣ ಪ್ರಯತ್ನವಿದು.

4 ಇಂಚಿಗಿಂತ ಆಳಕ್ಕೆಉಳುವುದು ಐವತ್ತು ವರ್ಷಗಳ micro-organisms ಗಳ ಕೆಲಸವನ್ನು ಹಾಳು ಮಾಡಿದಂತೆ. ಮತ್ತೆ ಅವುಗಳು ಆ ಪ್ರಮಾಣಕ್ಕೆ ಬೆಳೆಯಲು ಐವತ್ತು ವರ್ಷಗಳು ಬೇಕಾಗುತ್ತದೆ. ನಮ್ಮಒಂದು ಬತ್ತದ ಹುಲ್ಲಿನಲ್ಲಿ ಎಷ್ಟು ಉದ್ದದ ಬೇರುಗಳಿರಬಹುದು? ನೀವೇ ಯೋಚಿಸಿ. ಒಂದು ನಿಮಿಷ. ಒಂದು ಬತ್ತದ ಹುಲ್ಲಿನಲ್ಲಿ 600 ಮೈಲು ಉದ್ದದ ಬೇರುಗಳಿವೆ. ನಂಬಲು ಕಷ್ಟ. ಆದರೆ ಇದು ನಿಜ. ಒಂದು ಹುಲ್ಲಿನಲ್ಲಿ ಅಷ್ಟು ಪ್ರಮಾಣದ ಬೇರುಗಳಿವೆ ಎಂದಾದರೆ ಒಂದು ಆಲದ ಮರದ ಬೇರಿನಲ್ಲಿ ಅದೆಷ್ಟು ಮೈಲು ಉದ್ದದ ಬೇರುಗಳ ನೆಟ್ವರ್ಕ್ ಇರಬಹುದು? ಊಹಿಸಿಕೊಳ್ಳಿ. ಇಂತಹ ಬೇರುಗಳೇ ಭೂಮಿಯನ್ನು ಸಡಿಲ ಮಾಡಿ ಬಿಟ್ಟು ಮಳೆಯ ನೀರನ್ನು ಭೂಮಿಗಿಳಿಯುವಂತೆ ಮಾಡುವುದು.

ನಮ್ಮ ಕೃಷಿ ವಿಶ್ವವಿದ್ಯಾಲಯಗಳು ಇವತ್ತು ಏನನ್ನು ಪಾಠ ಮಾಡುತ್ತವೆ? ಅವರ ಬಗ್ಗೆ ನೀವು ಒಂದು ಸಲ ಗಮನಿಸಬೇಕು. ಅವರ ಪಾಠದ ಪ್ರಾರಂಭವಾಗುವುದೇ ಇದರಿಂದ. “ಸಾಯಿಲ್ ಇಸ್ ಎ ಇನರ್ಟ್ ಮೆಟೀರಿಯಲ್ ” ಅಂತ . ” ಮಣ್ಣು ಒಂದು ಜಡ ವಸ್ತು.”
ಮಣ್ಣು ಜಡವಸ್ತು ಏಕಾಗುತ್ತದೆ? ಪ್ರತಿ ಗ್ರಾಮ್ ಮಣ್ಣಿನಲ್ಲಿ ಮೂರು ಬಿಲಿಯನ್ ಸೂಕ್ಷ್ಮಾಣು ಜೀವಿಗಳು ಇರುತ್ತದೆ. ಅದು ಹೇಗೆ ಮಣ್ಣು ಜಡ ವಸ್ತುವಾಗುತ್ತದೆ? ಮಣ್ಣಿನಲ್ಲಿ ಬ್ಯಾಕ್ಟೀರಿಯಾ, ಫಂಗೈ, ಎರೆಹುಳು, ಗೆದ್ದಲು ಮತ್ತಿತರ ಜೀವಿಗಳು ಇರುವಾಗ.
ಒಂದು ಎಕರೆ ಭೂಮಿಯಲ್ಲಿ ತೊಂಬತ್ತು ಟನ್ ಹ್ಯೂಮಸ್ ಇರುತ್ತದೆ. ಹ್ಯೂಮಸ್ ಅಂದರೆ ಮಣ್ಣಿನ ಮೇಲ್ಪದರದಲ್ಲಿರುವ ಕಪ್ಪನೆಯ ಆರ್ಗ್ಯಾನಿಕ್ ಕಾರ್ಬನ್. ಭೂಮಿಯಲ್ಲಿರುವ ಪ್ರತಿ ಕೆಜಿ ಹ್ಯೂಮಸ್ನೂ 35 ಲೀಟರಿನಷ್ಟು ನೀರನ್ನು ಹಿಡಿದಿಡಬಲ್ಲದು. ಪ್ರತಿ ಎಕರೆ ಭೂಮಿಯಲ್ಲಿ ಕನಿಷ್ಠ 25 ರಷ್ಟು ಮರಗಳು ಇರಲೇ ಬೇಕು. ಭೂಮಿಗೆ ಸೂರ್ಯನ ಬೆಳಕು ಬೀಳದಂತೆ ತಡೆಯಬೇಕು.
ಇವತ್ತು ನಾವು ಗ್ಲೋಬಲ್ ವಾರ್ಮಿಂಗ್ ಎಂದು ಬೊಬ್ಬೆ ಹೊಡೆಯುತ್ತೇವೆ. ಇದಕ್ಕೆಲ್ಲ ಕಾರಣ ನಮ್ಮ ಆಹಾರದ ಅಭ್ಯಾಸ. ಫುಡ್ ಹ್ಯಾಬಿಟ್ಸ್. ಇವತ್ತು ನಮ್ಮ ಆಹಾರಗಳು ಎಲ್ಲಿಂದ ಬರುತ್ತಿವೆ?
ನಮಗೆ ಬರುವ ಆಪಲ್ಲು ಅಮೆರಿಕದಿಂದ, ಚೈನಾದಿಂದ, ಫಿಜಿಯಿಂದ, ಕಾಶ್ಮೀರದಿಂದ ಬರುತ್ತಿದೆ. ನಮ್ಮ ಆಹಾರ ನಾವು ನಡೆದುಕೊಂಡು ಹೋಗಿ ತೆಗೆದುಕೊಂಡು ಬರುವಷ್ಟು ದೂರದಿಂದ ಬರಬೇಕು. ನಮ್ಮಿಂದ ಹದಿಮೂರು-ಹದಿನೈದು ಕಿಲೋಮೀಟರ್ ಗಳ ದೂರದಿಂದ ಬಂದರಷ್ಟೇ ಅದು ನಮ್ಮಆಹಾರ. ನಾವು ನಿಮ್ಮಲ್ಲಿ ಸೀಸನಲ್ ಹಣ್ಣುಗಳನ್ನು ಮಾತ್ರ ತಿನ್ನಬೇಕು ಆವಾಗ ಮಾತ್ರ ಹಣ್ಣಿನಲ್ಲಿರುವ ಸತ್ವ ನಮಗೆ ತಲುಪಲು ಸಾಧ್ಯ.

1995 ರ ಕಥೆ. ನಮ್ಮದು ವರ್ತೂರು. ಆಗ ನನಗೆ ಹತ್ತು ವರ್ಷ ವಯಸ್ಸು. ಪಕ್ಕದಲ್ಲಿ ಒಂದು ಹಳ್ಳಿ ರೈತರು ರಾಗಿ ಬೆಳೆಯುತ್ತಿದ್ದರು. ಆದರೆ ಕೊಂಡುಕೊಳ್ಳುವವರಿಲ್ಲ. ಹತ್ತು-ಹದಿನೈದು ಪಲ್ಲ ರಾಗಿ ಬರ್ತಿತ್ತು. ಒಬ್ಬೊಬ್ಬರಿಗೆ ಐದು-ಆರು ಹಗೇವುಗಳಿರುತ್ತಿದ್ದವು. ಅದರಲ್ಲಿ ಹದಿನೈದು ಇಪ್ಪತ್ತು ಕ್ವಿಂಟಾಲ್ ಇಡಲಾಗುತ್ತಿತ್ತು. ಅಷ್ಟು ಯಥೇಚ್ಛ ಆಹಾರ 1945 ರಲ್ಲಿತ್ತು. 1950 ರಲ್ಲಿ ಯಾರದೇ ಮನೆಯಲ್ಲಿ 5 ಚೀಲ ರಾಗಿ ಇರೋದು ಗೊತ್ತಾದ್ರೆ ತಹಶೀಲ್ದಾರ್ ಬಂದು ಮನೆಯವರಿಗೆ ಅರ್ಧ ಕ್ವಿಂಟಲ್ ಬಿಟ್ಟು , ಉಳಿದುದನ್ನೆಲ್ಲವನ್ನೂ ತಗೊಂಡು ಹೋಗ್ತಿದ್ರು. ” ಅರ್ಧ ಉಪವಾಸ ಇರಿ, ಅಲ್ಲಿ ಜನ ಸಾಯ್ತಾರೆ ಅಂದುಬಿಟ್ಟು.” 5 ವರ್ಷಗಳಲ್ಲಿ ಜನಸನ್ಹೆ ಅಷ್ಟು ಬೇಗ ಜಾಸ್ತಿಯೂಯಾಯಿತಾ? ಇಲ್ಲ, ಅದು ನಾವು ನಮ್ಮ ಭೂಮಿಯನ್ನು ಅಷ್ಟು ತೀವ್ರ ವೇಗದಲ್ಲಿ ಹಾಳು ಮಾಡಿದ ರೀತಿ.

ಮತ್ತೆ ದನಕರುಗಳು ಇಲ್ಲದೆ ವ್ಯವಸಾಯ ಉಳಿಯೋದಿಲ್ಲ. ಅದೊಂದು ಪ್ರಾಣಿಯಾ ಅದು? ಅದು ಹಸು ಅಲ್ಲ , ಅದು ಹಾಲು ಕೊಡುವ ಮೆಷಿನ್ನು! ಹಿಂದೆ ಹಾಲು ಇದ್ದದ್ದು ಮೊಸರು, ಮಜ್ಜಿಗೆ ಮಾಡೋದಿಕ್ಕೆ. ಮೊಸರು ಕಡೆದು ಬೆಣ್ಣೆ ಮಾಡಿ ತುಪ್ಪ ಮಾಡ್ತಿದ್ವಿ. ಈಗ ಅದು ಒಂದು ದರಿದ್ರ ಬಂದಿದೆ. ಪನ್ನೀರ್ ಅಂತೆ. ಇವಾಗ ಹಳ್ಳಿಗಳಲ್ಲಿ ಕೂಡ ಪನ್ನೀರಿಲ್ಲದೆ ಜನ ಅಡುಗೆ ಮಾಡಲ್ಲ. ಜನರಿಗೆ ಯಾವುದೂ ಒಳ್ಳೆಯದು ಬೇಕಾಗಿಲ್ಲ. ಆರೋಗ್ಯವಾಗಿರೋದು ನಮಗೆ ಬೇಕಾಗಿಲ್ಲ. ನಮ್ಮಕರ್ಮ.

ನಮ್ಮಭೂಮಿಯನ್ನು ನಾಲ್ಕು ಇಂಚಿಗಿಂತ ಜಾಸ್ತಿ ಉಳುಮೆ ಮಾಡೋದೇ ಅಪರಾಧ. ಭೂಮಿಯಲ್ಲಿರುವ ಸೂಕ್ಷ್ಮಣು ಜೀವಿಗಳು ಹಾಳಾಗಿ ಹೋಗುತ್ತವೆ. 400 ಕಿಲೋ ಗ್ರಾಂ ಗಿಂತ ಜಾಸ್ತಿ ತೂಕದ ಉಳುಮೆ ಮಾಡುವ ಮಷಿನ್ನು ಬಳಸಬಾರದು. ಅದಕ್ಕಿಂತ ಜಾಸ್ತಿ ಭಾರ ಇದ್ರೆ ಭೂಮಿ ಕಾಂಪ್ಯಾಕ್ಟ್ ಆಗುತ್ತದೆ. ಭೂಮಿ ಕಾಂಕ್ರೀಟ್ ರೋಡ್ ಥರ ಆಗುತ್ತದೆ. ಮೇಲ್ಗಡೆ ಉಳುಮೆ ಮಾಡಿದ್ದರಿಂದ ಸರಿ ಇರುತ್ತದೆ. ಒಳಗಡೆ ಸ್ಟಾಂಪ್ ಆಗಿ ನೀರು ಒಳಗೆ ಇಂಗಿಸಿಕೊಳ್ಳಲ್ಲ.

ಯಾವುದೇ ಕೃಷಿಗೆ ಗಿಡಕ್ಕೆ ಗೊಬ್ಬರ ಬೇಕಾಗಿಲ್ಲ. ಯಾಕೆಂದರೆ ಒಂದು ಗ್ರಾಮ ಆರೋಗ್ಯವಾದ ಮಣ್ಣಲ್ಲಿ ಹತ್ತು ನೂರು ಕೋಟಿ ಜೀವಿಗಳಿವೆ. ನನ್ನ ಭೂಮಿಯಲ್ಲಿ ಒಂದು ಚದುರ ಗಜದಲ್ಲಿ 500 ಎರೆಹುಳಗಳಿವೆ.
ನನ್ನದು ನಾಲ್ಕುಎಕರೆ ಜಮೀನು ದೊಡ್ಡಬಳ್ಳಾಪುರದಲ್ಲಿದೆ. ಅದು ಒಂದು ವರ್ಷಕ್ಕೆ 15 ಟನ್ ವರ್ಮಿಕಾಂಪೋಸ್ಟ್ ಮಾಡಿಕೊಡುತ್ತದೆ. ಒಂದು ನಯಾ ಪೈಸೆ ಖರ್ಚು ಇಲ್ಲ. ಕೂಲಿ ಕೊಡಬೇಕಾಗಿಲ್ಲ. ಅದಕ್ಕೆ ರಜ ನೀಡಬೇಕಾಗಿಲ್ಲ. ಅದು ಸ್ಟ್ರೈಕು ಮುಷ್ಕರ ಮಾಡಲ್ಲ. ತನ್ನ ಪಾಡಿಗೆ ಧ್ಯಾನಕ್ಕೆ ಕೂತಂತೆ ಕೆಲಸ ಮಾಡ್ತಾನೆ ಇರುತ್ತದೆ. ರಾತ್ರಿ-ಹಗಲು ದುಡೀತಾ ಇರ್ತದೆ ನಮ್ಮಕಾಲ ಕೆಳಗೆ. ನಮ್ಮ ತೋಟಕ್ಕೆ ಬನ್ನಿ ತೋರಿಸ್ತೇನೆ. ಒಂದು ಬೆಟ್ಟು ಇಡಲು ಕೂಡಾ ಜಾಗವಿಲ್ಲ. ಈ ಎರೆಹುಳು ಕಾಸ್ಟಿಂಗ್ ಪೂರ್ತಿ ಹರಡಿಕೊಂಡಿದೆ.

ನನ್ನ ಸುತ್ತಲೂ ಐದು ಕಿಲೋಮೀಟರ್ ರೇಡಿಯಸ್ಸಲ್ಲಿ 15 ಹಳ್ಳಿಗಳಲ್ಲಿ 1200 ಅಡಿ ಜಾಗದಲ್ಲಿ ಯಾವ ಬೋರ್ವೆಲ್ ನಲ್ಲೂ ನೀರಿಲ್ಲ. ಆದ್ರೆ ನನ್ನ ತೋಟದಲ್ಲಿ ಯಥೇಚ್ಛ ನೀರಿದೆ. ನನ್ನ ತೋಟದಲ್ಲಿ ಒಂದು ಒಂದು ಚದರ ಅಡಿ ಜಾಗದಲ್ಲಿ ಐದು ಸಾವಿರ ತೂತುಗಳಿವೆ. ಅದೇ ನಾಲ್ಕುಎಕರೆ ಅಂದರೆ 16000 ಚದರ ಮೀಟರ್ ನಲ್ಲಿ ಎಷ್ಟು ತೂತುಗಳು ಇರಬಹುದು ? ಒಂದು ಎರೆಹುಳು ದಿನ ಬೆಳಗಾದರೆ ಟಾರ್ಗೆಟ್ ಹಾಕ್ಕೊಂಡು ಕೆಲಸ ಮಾಡುವಂತೆ ದಿನಕ್ಕೆ 12 ತೂತು ವರ್ಟಿಕಲ್ಲಾಗಿ ಮಾಡಲೇಬೇಕು. ಮಾಡಿಯೇ ಮಾಡುತ್ತದೆ. ಅದಲ್ಲದೆ ಶತ್ರುಗಳಿಂದ ರಕ್ಷಿಸಿಕೊಳ್ಳಲು ಹೋರಿಜೋ೦ಟಲ್ ಆಗಿ ತೂತು ಮಾಡ್ಕೋಬೇಕು. ತೂತು ಮಾಡುವುದಷ್ಟೇ ಅಲ್ಲ ತೂತುಗಳನ್ನು ಮುಚ್ಚಿ ಹೋಗದಂತೆ ಎಂಜಲು ಹಾಕಿ ಮುಚ್ಚಬೇಕು. ಎಂತಹ ನಿಸ್ವಾರ್ಥ ಜೀವಿಗಳವು !

ನಾನು ಹೇಳ್ತಾ ಇದ್ದೆ ಅಲ್ವಾ ನಿಮಗೆ. ಗೊಬ್ಬರ ಬೇಡ ಕೃಷಿಗೆ ಅಂತ. ಒಂದು ಬ್ಯಾಕ್ಟೀರಿಯಾ ಇದೆಯಲ್ಲ, ಅದರ life-cycle 12 ಗಂಟೆಗಳು. ಇವತ್ತು ಒಂದು ಬ್ಯಾಕ್ಟೀರಿಯಾ ಇದ್ದದ್ದು ಒಂದು ದಿನದಲ್ಲಿ ಅಂದರೆ 24 ಗಂಟೆಯಲ್ಲಿ 8 ಬಿಲಿಯನ್ ಆಗುತ್ತದೆ. 8 ಬಿಲಿಯನ್ ಮತ್ತೊಂದಷ್ಟಾಗುತ್ತದೆ, ಹೀಗೆ ಆಗ್ತಾನೆ ಇರ್ತದೆ. ಅದೇ ಬ್ಯಾಕ್ಟೀರಿಯಾ ಸತ್ತು ಶವ ಆಗಿ ಕೊಳೆತು ಗೊಬ್ಬರ ಆಗೋದು.

ಭೂಮಿಯಲ್ಲಿ ಒಂದು ಚದರ ಮಿಲಿ ಮೀಟರ್ ಜಾಗದಲ್ಲಿ ನಾಲ್ಕು ಚದರ ಮೀಟರಿನಷ್ಟು ಬೇರುಗಳಿವೆ. ಅಂದರೆ ಕೇವಲ ಒಂದು ಬಾಲ್ ಪೆನ್ನಿನ ಮೊನೆಯಷ್ಟು ಜಾಗದಲ್ಲಿ. ನೀವು ನಂಬುವುದಿಲ್ಲ. ನೀವು ಗಾಬರಿಪಡ್ತೀರಾ. ಈ ಮುದುಕನಿಗೆ ವಯಸ್ಸಾಗಿದೆ, ಅರಳುಮರಳು. ಏನೇನೋ ಒದರುತ್ತಾನೆ ಅಂದುಕೋಬಹುದು. ಆದರೆ ಅದು ನಿಜ. ನಾನು ಹೇಳುತ್ತಿಲ್ಲ. ವಿಜ್ಞಾನಿಗಳು ರೀಸರ್ಚ್ ಮಾಡಿ ಹೇಳಿದ್ದು. ಒಂದು ಬಾಲ್ ಪೆನ್ನಿನ ಮೊನೆಯಷ್ಟು ಜಾಗದಲ್ಲಿ ನಾಲ್ಕು ಚದರ ಬೇರುಗಳು ಹೇಗೆ ತಾನೇ ಇರಲು ಸಾಧ್ಯ. ನಿಮಗೆ ಯಕ್ಷಪ್ರಶ್ನೆಯಾಗಿ ಕಾಣಬಹುದು.
ಒಂದು ಗ್ರಾಂ ಬೇರು 1 ಬಿಲಿಯನ್ ಮೈಕ್ರೋ ಆರ್ಗಾನಿಸಂಗಳಿಗೆ ಆಶ್ರಯ ತಾಣ. ಆ ಸೂಕ್ಶ್ಮಾಣುಜೀವಿಗಳು ಮತ್ತು ಬೇರುಗಳು ಪರಸ್ಪರ co existing. ಪರಸ್ಪರ ಪೂರಕ. ಅವು ಜೊತೆ ಜೊತೆಗೆ ಬದುಕುತ್ತವೆ. ಅವೆಲ್ಲ ಸೇರಿಕೊಂಡೇ ಭೂಮಿ ಫಲವತ್ತತೆಯಾಗುವುದು.

ನಮ್ಮ ಭೂಮಿಯಲ್ಲಿ ಇನ್ನು ಇಪ್ಪತ್ತು ವರ್ಷಕ್ಕಾಗುವಷ್ಟು ರಂಜಕ ಇದೆ. ಸೂಕ್ಷ್ಮಜೀವಿಗಳು ನೈಟ್ರಿಕ್ ಆಸಿಡ್ ಉತ್ಪತ್ತಿಮಾಡುತ್ತವೆ. ಅದೇ, ಮೇಲೆ ಹೇಳಿದ ಬೇರು ಮತ್ತು ಮೈಕ್ರೋಆರ್ಗಾನಿಸ೦ನ ರಿಲೇಷನ್ ಶಿಪ್ ನಿಂದಾಗಿ. ಈ ರಂಜಕವು, ಸಸ್ಯಗಳು ಹೀರಿಕೊಳ್ಳುವ ರೂಪದಲ್ಲಿಲ್ಲ. ಅದನ್ನು ಸಸ್ಯ ಹೀರಿಕೊಳ್ಳಬಹುದಾದ ರೂಪಕ್ಕೆ ತರಲು ಒಂದು ಬ್ಯಾಕ್ಟೀರಿಯಾ ಬೇಕಾಗುತ್ತದೆ. ಇದು ರಂಜಕವನ್ನು ಕರಗಿಸಿ ರಂಜಕದ ಅಂಶವನ್ನು ಭೂಮಿಗೆ ಬಿಡುತ್ತದೆ. ಆಗ ತಾನೇ ಸಸ್ಯ ಅದನ್ನು ಹೀರಿಕೊಳ್ಳಬಹುದು. ಆದರೆ ಅದೆಲ್ಲಿದೆ ಈಗ ಬ್ಯಾಕ್ಟೀರಿಯಾ ? ಅದಕ್ಕೆ ಮತ್ತು ಭೂಮಿನ ನಾವು ಒಟ್ಟಿಗೆ ಬೆಂಕಿಯಿಟ್ಟು, ವಿಷ ಹಾಕಿ, ಟ್ರಾಕ್ಟರ್ ಹಾಕಿ ಕೊಂದಿದ್ದೇವೆ.

ಒಂದು ಸತ್ತ ಹಸುವಿನಲ್ಲಿ 30 ಕೆಜಿ ಮೂಳೆ ಇರುತ್ತದೆ. ಅದನ್ನು ಲಿಮಿಟೆಡ್ ಆಕ್ಸಿಜನ್ ಪೂರೈಕೆಯಲ್ಲಿ ಸುಟ್ಟರೆ ಅದು ಇದ್ದಿಲು ಆಗುತ್ತದೆ. ಅಂತಹಾ 20 ಕೆಜಿ ಇದ್ದಿಲಿನ ಇವತ್ತಿನ ಮೌಲ್ಯ ಸುಮಾರು 80 ಸಾವಿರ ರೂಪಾಯಿಗಳು. ಅದು ಒಂದು ಎಕರೆ ಭೂಮಿಗೆ ಬೇಕಾದ ರಂಜಕದ ಅವಶ್ಯಕತೆಗಳನ್ನು ಪೂರೈಸುತ್ತದೆ. ನಾವು ಮುದಿ ಹಸುವನ್ನು ಕಸಾಯಿಖಾನೆಗೆ ಮಾರುತ್ತೇವೆ. ಹಸು ಬದುಕಿದ್ದಾಗ ಎಷ್ಟು ಮೌಲ್ಯ ಇರತ್ತೋ ಸತ್ತ ಮೇಲೆ ಅದಕ್ಕಿಂತ ಜಾಸ್ತಿ ಮೌಲ್ಯವುಳ್ಳದ್ದು.

ಪಾಪ ಹಸು. ಹಾಲು ಕೊಡ್ತು, ನಾವು ಮೊಸರು ಮಾಡಿದ್ವಿ. ಬೆಣ್ಣೆ ಕೊಡ್ತು, ನಾವು ತುಪ್ಪ ಮಾಡಿದ್ವಿ. ಪನ್ನೀರ್ ಮಾಡಿದೆವು. ಖೋವಾ ಮಾಡಿದೆವು. ನಮ್ಮ ಮಕ್ಕಳಿಗೆ ಹಾಲು ಕೊಟ್ಟು ಪೌಷ್ಟಿಕವಾಗಿ ಬೆಳೆಸಿದೆವು. ಕೊನೆಗೆ ನಾವು ಮಾಡೋದೇನು? ಅಮ್ಮನಂತಹಾ ಗೋವನ್ನು ಸಾಯಿಸೋದು. ಎಂತ ಹೀನ ಬಾಳು ನಮ್ಮದು. ಇವತ್ತು ನಾವು ಕನ್ಸ್ಯುಮರ್ ಬದಲಾಗಬೇಕು. ಆಗ ದೇಶ ಬದಲಾಗುತ್ತದೆ. ನಮಗೆ ಕೆಮಿಕಲ್ ಹಾಕಿದ ಆಹಾರ ಬೇಡ. ಕೆಮಿಕಲ್ ಹಾಕದೆ, ಭೂಮಿಗೆ ವಿಷ ಉಣಿಸದೆ ಬೆಳೆ ಬೆಳೆಯೋಣ.

ಇವತ್ತು ಆರ್ಗಾನಿಕ್ ಫಾರ್ಮಿನ್ಗ್ ಅನ್ನುವ ಹೆಸರಿನಲ್ಲಿ ದಂಧೆ ಆನ್ ಲೈನ್ ನಲ್ಲಿ ಆರಂಭವಾಗಿದೆ. ಆನ್ ಲೈನ್ ನಲ್ಲಿ ಧಾನ್ಯ, ತರಕಾರಿ ಮಾರುತ್ತಾ ಇದಾರೆ. ಅವರಲ್ಲೆಷ್ಟು ಜನ ಸಾಚಾಗಳು, ಎಷ್ಟು ಜನ ಕಳ್ಳರು ನಮಗೆ ನಿಮಗೆ ಗೊತ್ತಾಗೋದಿಲ್ಲ. ಅದಕ್ಕೆ ಹೇಳೋದು : ನಿಮ್ಮ ಬೆಳೆ ನೀವು ಬೆಳೆದುಕೊಳ್ಳಿ. ನೀವೇ ಹತ್ತಿಪ್ಪತ್ತು ಜನ ಒಂದಾಗಿ, ಒಬ್ಬನನ್ನು ನೇಮಿಸಿ, ನಿಮಗೆ ಬೇಕಾದ ವಸ್ತುಗಳನ್ನು ಏನೇನೂ ರಸಗೊಬ್ಬರ ಹಾಕದೆ, ಪೆಸ್ಟಿಸೈಡ್ ಬಳಸದೆ ಬೆಳೆಸಿಕೊಳ್ಳಿ. ನಿಮ್ಮ ಮತ್ತು ನಿಮ್ಮವರ ಆರೋಗ್ಯವಾದರೂ ಚೆನ್ನಾಗಿರುತ್ತದೆ.

ದಿ. ಎಲ್. ವರ್ತೂರು ನಾರಾಯಣ ರೆಡ್ಡಿ ನೆನಪಿನಲ್ಲಿ, ಅವರ ಯು ಟ್ಯೂಬ್ ಗಳಿಂದ ಪ್ರೇರಿತ

Leave A Reply