ಡ್ರಿಂಕ್ಸ್ ಮಾಡುವುದು ಹೇಗೆ? | ಇದನ್ನು ಯಾರಾದ್ರೂ ನಮಗೆ ಹೇಳ್ಕೊಡ್ಬೇಕಾ ?

ನಿಮ್ಮದೇ ಫೇವರಿಟ್ ಸಬ್ಜೆಕ್ಟ್ ಎತ್ತಿಕೊಂಡು ಬಂದಿದ್ದೇನೆ. ಈ ಅಂಕಣವನ್ನುನೀವು ಎರಡೆರಡು ಬಾರಿ ಓದುತ್ತೀರಿ ಅಂತ ನಂಗೆ ಚೆನ್ನಾಗಿ ಗೊತ್ತು !!

ಡ್ರಿಂಕ್ಸ್, ಎಣ್ಣೆ, ದಾರು, ತನ್ನಿ, ಪಿಡ್ಕ್, ಮದ್ಯ, ಸೆರೆ – ಯಾವುದೇ ಭಾಷೆಯಲ್ಲಿ ಬೇಕಾದರೂ ಕರೆಯಿರಿ. ಎಲ್ಲ ಭಾಷೆಯಲ್ಲೂ ಅದು ಎರಡಕ್ಷರದಲ್ಲಿರುತ್ತದೆ. ಅಷ್ಟೇ ಅಲ್ಲ, ಥರಾವರಿ ಆಲ್ಕೋಹಾಲ್ ಡ್ರಿಂಕುಗಳ ಹೆಸರುಗಳೂ ಎರಡಕ್ಷರದಲ್ಲಿವೆ : ಡ್ರಿಂಕ್ಸ್, ಫೆನ್ನಿ, ಕಳ್ಳು, ನೀರಾ, ವಿಸ್ಕಿ, ರಮ್ಮು, ಜಿನ್, ಬೀರು, ವೋಡ್ಕಾ, ವೈನು, ಬ್ರಾಂಡಿ, ತೊಟ್ಟೆ, ಕಳಿ – ಎಲ್ಲ ಎರಡಕ್ಷರ. ಯಾಕೆ ಯಾರು ಕೂಡ ಉದ್ದದ ಹೆಸರು ಯಾವ ಭಾಷೆಯಲ್ಲಿಯೂ ಇಡಲಿಲ್ಲ : ಉತ್ತರ ಸರಳ. ಕುಡಿದಾಗ ಜನರಿಗೆ ಉದ್ದುದ್ದ ಹೆಸರು ಹೇಳಲು ನಾಲಿಗೆ ಹೊರಳ್ಬೇಕಲ್ಲ. ಅದಕ್ಕೆ ಸಿಂಪಲ್ಲಾಗ್, ಎರಡೇ ಅಕ್ಷರದಲ್ಲಿ ಹೆಸರಿಟ್ಟರು. ಇದು ನಮ್ಮ ಮಿ. ಕೆ ನ ವ್ಯಾಖ್ಯಾನ.

ಡ್ರಿಂಕ್ಸ್ ಗೆ ಏನನ್ನು ಬೇಕಾದರೂ ಸೇರಿಸಿ. ನೀರು, ಸೋಡಾ, ಜ್ಯೂಸು, ಪೆಪ್ಸಿ, ಸ್ಪ್ರೈಟ್, ಕೋಕ್, ತಂಪ್ಸ್ ಅಪ್, 7 ಅಪ್ ! ಅದು ಬೇಡ ಅನ್ನುವುದಿಲ್ಲ. ಎರಡಕ್ಷರ ಎರಡಕ್ಷರದದ ಜತೆಗೆ ಚೆನ್ನಾಗಿ ಮಿಕ್ಸ್ ಆಗುತ್ತದೆ. ಎಲ್ಲದರ ಜತೆ ಸೇರಿಕೊಂಡು, ಅದರದರ ಬಣ್ಣದ ಜತೆಗೆ ಅಡಗಿಕೊಂಡು, ಜಠರಕ್ಕೆ ಸೇರಿದ ಕೂಡಲೇ ತನ್ನ ಕೆಪ್ಯಾಸಿಟಿ ತೋರಿಸುವ ಮಹತ್ ಚೀಸ್ ಅದು.

ಡ್ರಿಂಕ್ಸ್ ಮಾಡುವುದು ಹೇಗೆ ಎಂದು ಯಾರನ್ನು ಕೇಳಲಿ ಎಂದು ಯೋಚಿಸುತ್ತಾ ಕುಳಿತಾಗ ಕಣ್ಣೆದುರು ಬಂದು ನಿಂತದ್ದು ಅವನು, ಮಿಸ್ಟರ್ ಕೆ . ಡ್ರಿಂಕ್ಸ್ ಮಾಡುವುದು ಹೇಗೆ ಎಂದು ಆತನನ್ನು ಕೇಳಿ ನೋಡಿ. ನಿಮಗೆ ಸಮಯವಿದ್ದರೆ, ಆತ ತುಂಬಾ ಕ್ಲೀನಾಗಿ ಡಿಟೇಲಾಗಿ ಎಕ್ಸ್ ಪ್ಲೈನ್ ಮಾಡುತ್ತಾನೆ. ನೀವು ಮತ್ತಷ್ಟು ಫ್ರೀ ಇದ್ದರೆ ನಿಮಗೆ ಪ್ರಾಕ್ಟಿಕಲ್ ಆಗಿಯೇ ಮಾಡಿ ತೋರಿಸುತ್ತಾನೆ. ಹಾಗೆ ಒಂದು ದಿನ ನಿಮಗೆ ಪ್ರಾಕ್ಟಿಕಲ್ ಆಗಿ ಡೆಮೋನ್ಸ್ಟ್ರೇಷನ್ ಟ್ರೇನಿಂಗ್ ಕೊಡಲು ನಿಮ್ಮನ್ನು ಕರೆದುಕೊಂಡು ಹೋಗುತ್ತಾನೆ.

ಆತ ಹೋಗುವುದಾದರೂ ಎಲ್ಲಿಗೆ? ಯಾವುದೇ ಊರಿನ ಬಸ್ ಸ್ಟ್ಯಾಂಡಿನ ಪಕ್ಕದ ಇರುಕಲು ಓಣಿಯೊಂದರಲ್ಲಿ ಒಂದಷ್ಟು ದೂರ ನಡೆಸಿಕೊಂಡು ಹೋಗುತ್ತಾನೆ. ಆತನ ನಡಿಗೆಯಲ್ಲಿ ಅವಸರ. ಕೈಯಲ್ಲಿ ನಡುಕ. ಆವಾಗಲೇ, ಅಂಗಡಿಯ ಮುಂದೆ ಹತ್ತಾರು ಜನರು ಆಗಲೇ ನೆರೆದಿರುತ್ತಾರೆ. ಅಂಗಡಿಯ ಪಕ್ಕದಲ್ಲಿ ಬೇಯುವ ಅಗ್ಗದ ಕಬಾಬು, ಒಂದರ ಮೇಲೊಂದು ಕಲಾತ್ಮಕವಾಗಿ ಪೇರಿಸಿಟ್ಟ ಮೀನು ಫ್ರೈ, ಇನ್ನೊಂದು ಬದಿಯಲ್ಲಿ ಪಾನ್ ಶಾಪ್. ಆತ ಅಲ್ಲಿಗೆ ಹೋಗುತ್ತಿರುವಾಗ ಅದ್ಯಾವುದು ಆತನಿಗೆ ಗೋಚರಿಸುವುದಿಲ್ಲ. ಕುದುರೆಯ ಕಣ್ಣಿಗೆ ಕಂಕಟ್ಟು ಕಟ್ಟಿದಂತೆ, ಹುಲಿಯು ತಾನು ಗುರುತಿಸಿದ ಬೇಟೆ ಬಿಟ್ಟು ಬೇರೆ ಯಾವ ಪ್ರಾಣಿ ಹತ್ತಿರ ಸುಳಿದರೂ ತಲೆಕೆಡಿಸಿಕೊಳ್ಳದ ಫೋಕಸ್ ನಲ್ಲಿ ಸಾಗುತ್ತಾನೆ.

ವೈನ್ ಶಾಪಿನ ಮುಂದೆ ಯಾವುದೇ ಹೊತ್ತಲ್ಲಿ ಹೋಗಿ ನಿಂತರೂ ಆತನ ಪರಿಚಿತರು ಅಲ್ಲಿ ನಿಂತಿರುತ್ತಾರೆ. ಆತನನ್ನು ಹೆಸರು ಕರೆದು ಮಾತಾಡಿಸುತ್ತಾರೆ. ಆತನ ನೆಟ್ ವರ್ಕ್ ಅಷ್ಟು ದೊಡ್ಡದು. ಆತನನ್ನು ಕಂಡ ಕೂಡಲೇ ಅಂಗಡಿಯವ ಏನು ಬೇಕೆಂದು ಕೇಳದೆ, ಆರ್ಡರಿಗೆ ಕಾಯದೆ ಯಾಂತ್ರಿಕವಾಗಿ ಕಪಾಟಿನಿಂದ ಎಳೆದು ಒಂದು ಶೀಶೆಯನ್ನು ”ತಗೋ” ಎಂದು ಏಕವಚನದಲ್ಲಿ ಎಸೆಯುತ್ತಾನೆ ತನ್ನ ಮುಂದಿನ ಡೆಸ್ಕಿಗೆ.

ಈತ ಏನೂ ಬೇಜಾರು ಮಾಡಿಕೊಳ್ಳದೆ, ಇನ್ನಿಲ್ಲದ ತಾದ್ಯಾತ್ಮತೆಯಿಂದ ಅದನ್ನು ತೆಗೆದುಕೊಂಡು,ಮುಖದಲ್ಲಿ ದಿವ್ಯ ನಗು ತಂದುಕೊಂಡು, ಪಕ್ಕದಲ್ಲಿರುವ ಕರೆಗಟ್ಟಿದ ಪ್ಲಾಸ್ಟಿಕ್ ಟ್ರೇನಲ್ಲಿ ಸ್ವಲ್ಪನೀರಿನಲ್ಲಿ ಉಲ್ಟಾ ಮಾಡಿಟ್ಟಿದ್ದ ಗಾಜಿನ ಗ್ಲಾಸನ್ನು ಎಳೆದುಕೊಳ್ಳುತ್ತಾನೆ. ಎಡಗೈಯಲ್ಲಿ ಬಾಟಲ್ ಹಿಡಿದು ಬಲಗೈಯಿಂದ ಬಾಟಲಿನಿಂದ ಬುಡಕ್ಕೆ ಎರಡು ಬಿಟ್ಟು ಕಿವಿ ಹಿಂಡಿದರೆ ಬುರುಡೆ ಬಿಚ್ಚಿಕೊಂಡು ಒಂದು ವಿಚಿತ್ರ ಘಮ ಮನಸ್ಸಿಗೆ ಹರಡಿಕೊಳ್ಳುತ್ತದೆ.

ಹಾಗೆ ಗಾಜಿನ ಗ್ಲಾಸಿಗೆ ಮುಕ್ಕಾಲು ಭಾಗ ಬಗ್ಗಿಸಿ ಅದಕ್ಕೆ ಅವಸರವಸರವಾಗಿ ಒಂದಷ್ಟು ನೀರು ಹೊಯ್ದು ಸರಕ್ಕನೇ ಒಳಗೆ ಬಿಟ್ಟುಕೊಂಡರೆ ಮುಗಿಯಿತು. ಪಕ್ಕದಲ್ಲೇ ಇರುವ ಕಡ್ಲೆಪುರಿ, ಪುಟಾಣಿ ಪ್ಯಾಕೇಟಿನಲ್ಲಿ ಸಿಗುವ ಬಟಾಣಿ, ಹೀಗೆ ಏನಾದರೂ ಆಗುತ್ತದೆ ಒಟ್ಟಾರೆ ಉಪ್ಪುಪ್ಪಾಗಿರಬೇಕಷ್ಟೆ. ಬಾಯಿಯ ಒಳಗೆ ಬಿಸಾಕಿಕೊಂಡರೆ ಟಾಸ್ಕ್ ಇಸ್ ಕಂಪ್ಲೀಟೆಡ್. ಕುಡಿಯುವುದು ಅಂದರೆ ಹೀಗೆ ಎಂದು ಪಕ್ಕಾ ಪ್ರಾಕ್ಟಿಕಲ್ ಆಗಿ ಆತ ವಿವರಿಸಿಬಿಡುತ್ತಾನೆ. ಇದು ಕುಡುಕನ (ಮಿಸ್ಟರ್ ಕೆ.) ಡ್ರಿಂಕ್ಸ್ ಮಾಡುವ ರೆಸಿಪಿ. 

ನಾನೀಗ ಹೇಳ ಹೊರಟದ್ದು ಇದರ ಬಗ್ಗೆ ಅಲ್ಲ. ಬದಲಿಗೆ ಆರೋಗ್ಯವನ್ನು ಮತ್ತು ಕುಡಿತದ ಆಫ್ಟರ್ ಎಫೆಕ್ಟ್ ಅನ್ನು ನಿಯಂತ್ರಣದಲ್ಲಿಟ್ಟುಕೊಂಡು ಪಾರ್ಟಿ ಮಾಡುವ ಬಗ್ಗೆ !

ಇಷ್ಟಕ್ಕೂ ಕುಡಿಯಲೇ ಬೇಕಾ?

ಎಷ್ಟೇ ಹೇಳಿ ಅಲ್ಕೋಹಾಲ್ ಅನ್ನುವುದು ಒಂದು ವಿಷಕಾರಿ ಪದಾರ್ಥ. ಅದು ದೇಹಕ್ಕೆ ಒಗ್ಗುವುದಿಲ್ಲ. ಹೇಗೆ ಔಷಧವೂ ಕೂಡ ವಿಷಕಾರಿಯೋ, ಹಾಗೆಯೇ ಮದ್ಯವೂ. ಆದರೆ ಲಿಮಿಟೆಡ್ ಡೋಸ್ ನಲ್ಲಿ ಒಂದಷ್ಟು ಹೆಲ್ತ್ ಬೆನಿಫಿಟ್ಸ್ ಡ್ರಿಂಕ್ಸ್ ನಲ್ಲಿಯೂ ಇರಬಹುದು. ನಮ್ಮಸಮಾಜ ಇದರ ಬಳಕೆಯನ್ನು ತುಂಬಾ ಹಿಂದಿನಿಂದಲೂ ಮಾಡಿಕೊಂಡು ಬಂದಿದೆ. ಬಹುಶ: ನವ ನಾಗರಿಕತೆ ಆರಂಭವಾದ ನಂತರದಲ್ಲಿ ಕ್ರಿಸ್ತ ಪೂರ್ವ 9000 ದಲ್ಲಿ ನಶೆಯ ತಯಾರಿಕೆಯು ಪ್ರಾರಂಭವಾಗಿರಬೇಕು.

ಇವತ್ತು ಕುಡಿಯುವುದು ಒಂದು ಮನರಂಜನೆಯ ಜೊತೆಗೆ ಒಂದು ಸ್ಟೈಲ್ ಕೂಡ ಆಗಿದೆ. ಫ್ಯಾಮಿಲಿ ಫಂಕ್ಷನ್ ಗಳು ಕಳೆಗಟ್ಟುವುದು ಹಬ್ಬದ, ಎಂಗೇಜ್ಮೆಂಟ್ ನ, ಮದುವೆ-ಮುಂಜಿಗಳ ಕೊನೆಯ ದಿನದ ರಾತ್ರಿಯ ಪಾನಕ ಸೇವನೆಯ ಪಾರ್ಟಿಗಳಿಂದ. ಬಿಜಿನೆಸ್ ಪಾರ್ಟಿಗಳು ಹೆಚ್ಚು ಕಮ್ಮಿಮುಕ್ತಾಯ ಹಾಡುವುದು ಕಾಕ್ ಟೇಲ್ ಪಾರ್ಟಿಗಳಿಂದಲೇ !

ನಾವು ಈ ದಿನ ಮಾತನಾಡುತ್ತಿರುವ ಡ್ರಿಂಕ್ಸ್ ಮಾಡುವ ಬಗೆಗಿನ ವಿಷಯವೇನಿದ್ದರೂ ಅದು ಬುದ್ಧಿವಂತರ ಕುಡಿತದ ಕುರಿತಾದದ್ದು. ನಶೆಗೆ ಪೂರ್ತಿಯಾಗಿ ಬಲಿಯಾಗಿ ಬಿದ್ದವರ ಬಗ್ಗೆಯಲ್ಲ ನಾನು ಬರೆಯುತ್ತಿರುವುದು.

ನಾನು ಈ ಸಂಜೆ ಪಾರ್ಟಿ ಮಾಡುತ್ತೇನೆಂಬಂಬ ಸಂಭ್ರಮ, ಕೈಯಲ್ಲಿ ಮೊರೆಯುವ ಬೀರು ಹಿಡಿದು ಚಿಯರ್ಸ್ ಹೇಳುವಾಗಿನ ಖುಷಿ, ನಾಲ್ಕು ಗುಟುಕು ಗಂಟಲ ಬುಡದ ಡ್ರೈನೇಜ್ ಪೈಪಿನೊಳಗೆ ಇಳಿಯುತ್ತಿದ್ದಂತೆ ಮೂಡುವ ಉಲ್ಲಾಸ, ಎರಡು ಪೆಗ್ಗು ಒಳಸೇರುತ್ತಿದ್ದಂತೆ ಅದು ರಿಲೀಸ್ ಮಾಡುವ ರಿಲ್ಯಾಕ್ಸ್. ಎಲ್ಲ ಸೆಲೆಬ್ರೆಷನ್ ನ ಕೊನೆಯಲ್ಲಿ ಕುಡಿದು ಮನೆಗೆ ಬಂದಾಗ ಯಾವುದೇ ಕಾರಣಕ್ಕೂ, ಕೈಯಲ್ಲಿರುವ ಬೀರು ಉಕ್ಕಿ ಹರಿದು ನೆಲಕ್ಕೆ ಬಿದ್ದಂತೆ, ನಮ್ಮ ಜಠರ ಯಾವ ಕಾರಣಕ್ಕೂಬಂಪ್ ಆಗಬಾರದು.

ಮೊದಲ ಗುಟುಕು ಗುಟುಕರಿಸುವಾಗಿನ ಉಲ್ಲಾಸವು ಕುಡಿದು ವಾಪಸ್ಸು ಬಂದು ಮನೆಯಲ್ಲಿ ಮಲಗುವವರೆಗೂ ಇರಬೇಕು. ನಾಳೆ ಮುಂಜಾನೆ ಎಂದಿನ ಲವಲವಿಕೆಯಿಂದ ಎದ್ದೇಳಬೇಕು. ಅದೇ ತಾನೇ ನಾವು ಬುದ್ದಿವಂತರಾಗಿದ್ದುಕೊಂಡು ಕುಡಿಯುವುದು. ಕುಡಿಯುವುದು ಕೆಟ್ಟದ್ದೇ ಹೌದು, ಆದರೆ ಕೆಟ್ಟದ್ದನ್ನೇ ಒಳ್ಳೆಯದಾಗಿ ಮಾಡ್ಬೇಕು. ಅದು ಜಾಣರ ಲಕ್ಷಣ ! ಹಾಗಾಗಲು ಇಲ್ಲಿದೆ ಕೆಲವು ಪಾಲಿಸಿಗಳು.

1) ಪರ್ಫೆಕ್ಟ್ ಆರೋಗ್ಯವಂತರಾಗಿದ್ದಾರೆ ಮಾತ್ರ ಪಾರ್ಟಿ ಮಾಡಿ. ಸಣ್ಣಪುಟ್ಟ ಹುಷಾರಿಲ್ಲದೆ ಹೋದರೂ ಕುಡಿತ ಬೇಡ. ಯಾಕೆಂದರೆ ನೀವು ಸೇವಿಸುವ ಡ್ರಿಂಕ್ಸ್ ನ ಪರಿಣಾಮವು ನೀವು ಹುಷಾರಿಲ್ಲದಾಗ ಒಂದು ರೀತಿ ಆರೋಗ್ಯವಾಗಿದ್ದಾಗ ಇನ್ನೊಂದು ರೀತಿ ಇರುತ್ತದೆ.

2) ಒಬ್ಬರೇ ಎಂದಿಗೂ ಕುಡಿಯಬೇಡಿ. ಯಾರೂ ಇಲ್ಲದೆ ಹೋದರೆ ನಾನು ನಿಮಗೆ ಕಂಪನಿ ಕೊಡುತ್ತೇನೆ ! ನಾಟ್ ಜೋಕಿಂಗ್. ಒಮ್ಮೆ ಒಬ್ಬಂಟಿಯಾಗಿ ಕುಡಿಯಲು ಶುರುಮಾಡಿ ಅದು ಅಭ್ಯಾಸವಾದರೆ, ಮತ್ತೆ ಅದು ನಶೆಯಾಗಿ ಬದಲಾದೀತು.

3) ಖಾಲಿ ಹೊಟ್ಟೆಯಲ್ಲಿ ಯಾವುದೇ ಕಾರಣಕ್ಕೂ ಕುಡಿಯಬೇಡಿ. ಅದರಿಂದ ಅಸಿಡಿಟಿ, ಆಸಿಡ್ ರಿಫ್ಲಕ್ಸ್ ಆಗಬಹುದು. ಜೊತೆಗೆ ಆನಂತರ ಒಮಿಟ್ ಆಗಬಹುದು. ನಾಳೆ ತಲೆ ಹಿಡಿದುಕೊಂಡು ತೀವ್ರ ಥರದ ಹ್ಯಾಂಗೋವರಿಗೆ ದಾರಿಯಾಗಬಹುದು. ಒಮ್ಮೆ ಒಮಿಟ್ ಆಗಿ ಅಥವಾ ತೀವ್ರ ಹ್ಯಾಂಗೋವರ್ ಆದ ಪಕ್ಷದಲ್ಲಿ ನಂತರದ ನಿಮ್ಮ ಒಂದು ದಿನ ಪೂರ್ತಿಯಾಗಿ ವ್ಯರ್ಥವಾಗುವುದು ಗ್ಯಾರಂಟಿ.

4) ಪಾರ್ಟಿ ಮಾಡುವ ಮುನ್ನ ಪ್ರೋಟೀನ್ ಭರಿತ ಆಹಾರವನ್ನು ಮಿತವಾಗಿ ಸೇವಿಸಿರಿ. ಪಾರ್ಟಿಗಿಂತ 3-4 ಗಿಂತ ಮುಂಚೆ ಯಥೇಚ್ಛವಾಗಿ ನೀರು ಕುಡಿಯಿರಿ. ತುಂಬಾ ಮುಂಚಿತವಾಗಿ ನೀರು ಕುಡಿದಿರುವ ಪರಿಣಾಮವಾಗಿ ದೇಹ ಸಾಕಷ್ಟು ನೀರನ್ನು ಹಿಡಿದಿಟ್ಟುಕೊಂಡು ಆನಂತರ ಪಾರ್ಟಿ ಮಾಡುವ ಸಮಯದಲ್ಲಿ ಉಂಟಾಗಬಹುದಾದ ಡಿಹೈಡ್ರೇಶನ್ ತಡೆಯುತ್ತದೆ.

5) ಮದ್ಯಸೇವಿಸುವ ಮುನ್ನ ಕನಿಷ್ಠ ಉಪ್ಪು ಮತ್ತು ಮಸಾಲಾ ಹಾಕಿದ ಚಿಕನ್ ಮಟನ್ ಅಥವಾ ಬೇಯಿಸಿದ ಕಡಲೆಬೀಜ, ಗೇರುಬೀಜ, ಬಾದಾಮಿ ಇತ್ಯಾದಿ ತಿನ್ನಿ. ನೀವೇ ಗಮನಿಸಿ : ಒಂದು ಸಲ ಊಟ ಆದ ಮೇಲೆ ಡ್ರಿಂಕ್ಸ್ ಮಾಡಬೇಕು ಅಂತ ನಿಮಗನಿಸುವುದಕ್ಕೂ, ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕೆನಿಸುವ ತಪನೆಗೂ ತುಂಬಾ ವ್ಯತ್ಯಾಸವಿದೆ. ಖಾಲಿ ಹೊಟ್ಟೆಯಲ್ಲಿದ್ದಾಗ, ಹೊಟ್ಟೆಗೆ ಆಹಾರ ಹೇಗೆ ಬೇಕು ಅನ್ನಿಸುತ್ತೋ, ಹಾಗೆಯೇ ಆಲ್ಕೋಹಾಲ್ ಗೆ ಡಿಮಾಂಡ್ ಕೂಡಾ ಜಾಸ್ತಿ ಇರುತ್ತದೆ. ಹೊಟ್ಟೆಯಲ್ಲಿ ಆಹಾರವಿರುವುದರಿಂದ ನಿಮಗೆ ಜಾಸ್ತಿ ಕುಡಿಯಬೇಕೆನಿಸುವುದಿಲ್ಲ. ಅಲ್ಲದೆ ಡ್ರಿಂಕ್ಸ್ ಮಾಡುವ ಮೊದಲು ಹೊಟ್ಟೆಯಲ್ಲಿ ಆಹಾರವಿದ್ದರೆ, ಆಗ ಆಲ್ಕೋಹಾಲ್ ದೇಹಕ್ಕೆ ಜಠರದ ಮೂಲಕ ಮತ್ತು ಕರುಳಿನ ಮೂಲಕ ಹೀರಿಕೊಳ್ಳುವ ವೇಗ ಕಮ್ಮಿಯಾಗುತ್ತದೆ. ಆದುದರಿಂದ ಲಿವರ್ ಗೆ ಒಮ್ಮೆಲೇ ಹೆಚ್ಚಿನ ಲೋಡ್ ಬೀಳುವುದನ್ನು ಅದು ತಪ್ಪಿಸುತ್ತದೆ.

6) ಬೇಯಿಸಿದ ಹುರುಳಿ ಒಂದು ಉತ್ತಮ ಕಂಪ್ಯಾನಿಯನ್. ಅತ್ಯಧಿಕ ಪ್ರೊಟೀನ್ ಮತ್ತು ಅಗತ್ಯ ಕಾರ್ಬೋಹೈಡ್ರೇಟ್ಗಳ ಜೊತೆಗೆ ಮೈಕ್ರೋ ನ್ಯೂಟ್ರಿಯಂಟ್ ಗಳ ಭಂಡಾರವಾಗಿದೆ. 

 7) ಮಸಾಲೆ, ಖಾರ ಪದಾರ್ಥ ಆದಷ್ಟು ಅವಾಯ್ಡ್ ಮಾಡಿ. ಹುರಿದ ಬೀಜಗಳಿಗಿಂತ ಬೇಯಿಸಿದಂತ ಬೇಯಿಸಿದ ಕಾಳುಗಳು ಉತ್ತಮವಾದುದು ಯಾಕೆಂದರೆ ಬೇಯಿಸಿದ ಬೇಳೆ ಕಾಳುಗಳಲ್ಲಿ ಹೆಚ್ಚು ಪ್ರಮಾಣದ ನೀರಿನಂಶವಿದ್ದು ಅದು ದೇಹದ ಡಿಹೈಡ್ರೇಶನ್ ಆಗುವುದನ್ನು ತಪ್ಪಿಸಬಹುದು.

8) ಚೈನೀಸ್ ಆಹಾರ ಪದಾರ್ಥಗಳಾದ, ಮಂಚೂರಿ, ಟೊಮೇಟೊ ಸಾಸ್, ಹಾಲು ಮತ್ತದರ ಉತ್ಪನ್ನಗಳು, ಎಣ್ಣೆ ತೊಟ್ಟಿಕ್ಕುವ ಪದಾರ್ಥಗಳು, ಫ್ರೈಡ್ ಕೋಟೆಡ್ ಚಿಕೆನ್, ಓನಿಯನ್ ಪಕೋಡ, ಬೋಂಡಾ, ಬಜ್ಜಿ, ಮೆಣಸಿನ ಬಜ್ಜಿ -ನೊ ನೋ ನೋ ನೆವರ್ !

9) ನಿಮ್ಮ ಮಿತಿ ನಿಮಗೆ ಗೊತ್ತಿರಲಿ. ಮೊದಲಿಗೆ ನಿಮ್ಮಮಿತಿಯನ್ನು ನೀವೇ ಗೊತ್ತು ಮಾಡಿಕೊಳ್ಳಬೇಕು. ನಿಮ್ಮಹಿಂದಿನ ಕುಡಿತದ ಅನುಭವದಿಂದ ನೀವು ಎಷ್ಟು ಬೀರು ಹೀರಬಲ್ಲಿರಿ, ನೀವು ಎಷ್ಟು ಕುಡಿದರೆ ನೀವು ಯಾವುದೇ ತೊಂದರೆ ಇಲ್ಲದೆ ನಾಳೆ ಎದ್ದೇಳ ಬಲ್ಲಿರಿ ಎಂಬುದನ್ನು ಎಂಬುದನ್ನು ನೀವೇ ಗುರುತು ಮಾಡಿಕೊಳ್ಳಿ. ಆ ಮಿತಿಯನ್ನು ನೀವು ಬಹಳ ಸ್ಟ್ರಿಕ್ಟ್ ಆಗಿ ಪಾಲಿಸಲೇಬೇಕು.

10) ಅಮೆರಿಕನ್ನರ ಡಯಟರಿ ಗೈಡ್ ಲೈನ್ ನ ಪ್ರಕಾರ ಒಬ್ಬ ಆರೋಗ್ಯವಂತ ವ್ಯಕ್ತಿ -ಗಂಡಸು – ದಿನಕ್ಕೆ ಒಂದು ಶಾಟ್ ಕುಡಿಯಬಹದು. ಅದನ್ನು ನಾರ್ಮಲ್ ಅಥವಾ ಸ್ಟ್ಯಾಂಡರ್ಡ್ ಡ್ರಿಂಕ್ ಅಂತ ಕರೆಯುತ್ತಾರೆ. ಸ್ಟ್ಯಾಂಡರ್ಡ್ ಡ್ರಿಂಕು : 17.75 ಮಿಲಿ ಲೀಟರ್ ನಷ್ಟು ಶುದ್ಧ 100 % ಆಲ್ಕೋಹಾಲ್ ( ಎಂಎಲ್ )

* ಅಮೆರಿಕನ್ನರ ಡಯಟರಿ ಗೈಡ್ ಲೈನ್

ಸ್ಟ್ಯಾಂಡರ್ಡ್ ಡ್ರಿಂಕ್ಸ್ ಪ್ರಮಾಣವು, ಯಾವುದೇ ಅಡ್ಡಪರಿಣಾಮಗಳಿಲ್ಲದೆ ವ್ಯಕ್ತಿ ಕುಡಿಯಬಹುದಾದ ಡ್ರಿಂಕ್ಸ್ ನ ಕ್ವಾಂಟಿಟಿ. ಮೇಲಿನ ಚಾರ್ಟಿನ ಪ್ರಕಾರ, ಒಂದು ಸ್ಮಾಲ್ ಪಿಂಟ್ ಅಥವಾ ಒಂದು ಬೀರು ಗ್ಲಾಸಿನಲ್ಲಿ ಬಿಯರ್, 150 ಎಂ ಎಲ್ ದ್ರಾಕ್ಷಾರಸ ಅಥವಾ ಇತರೆ ವೈನು ಮತ್ತು 36 ಎಂ ಎಲ್ ( ಒಂದು ಸ್ಮಾಲ್ ಪೆಗ್ ಗಿಂತ ಸ್ವಲ್ಪ ಜಾಸ್ತಿ) ಹಾಟ್ ಡ್ರಿಂಕ್ಸ್-ಇವೆಲ್ಲವೂ ಸಮಾನ ಪ್ರಮಾಣದ ಆಲ್ಕೋಹಾಲ್ ಅನ್ನು ಹೊಂದಿದೆ. ಆದರೆ, ವ್ಯಕ್ತಿ ಅನುಭವಿಸುವ ಕಿಕ್ ಬೇರೆ ಬೇರೆಯಾಗಿರಬಹುದು. ಅದು ಆತ ಮಿಕ್ಸ್ ಮಾಡುವ ಪಾನೀಯ ಅಥವಾ ನೀರು ( ಡೈಲ್ಯೂಷನ್ ಫ್ಯಾಕ್ಟರ್) ಮತ್ತು ಇತರ ಇಲ್ಲಿ ವಿವರಿಸ ಅಂಶಗಳ ಮೇಲೆ ನಿರ್ಧರಿತವಾಗಿದೆ.

ಯಥೇಚ್ಛ ಡೈಲ್ಯೂಟ್ ಮಾಡಿ ಮದ್ಯವನ್ನು ಕುಡಿಯುವುದು ಒಳ್ಳೆಯದು. ಮದ್ಯವು 15% ಗಿಂತ ಜಾಸ್ತಿ ಕಾನ್ಸನ್ಟ್ರೇಶನ್ ಇರುವುದು ಒಳ್ಳೆಯದಲ್ಲ. ಅಂದರೆ, ಒಂದು ಪೆಗ್ ಮದ್ಯಕ್ಕೆ ಕನಿಷ್ಠ ಮತ್ತೆರಡು ಪೆಗ್ ನಷ್ಟು ನೀರು ಹಾಕಿ. ಸೋಡಾ ಕೂಡಆ ಆಗುತ್ತದೆ. ಅತಿಯಾದ ತಂಪು ನೀರು, ಐಸ್ ಒಳ್ಳೆಯದಲ್ಲ.

ನಮ್ಮಜನಕ್ಕೆ ಇಷ್ಟು ಡ್ರಿಂಕ್ಸ್ – ಆನೆಯ ಹೊಟ್ಟಿಗೆ ಒಂದು ಪ್ಯಾಕೆಟ್ ಮಜ್ಜಿಗೆ ! ಅರೆ, ನೀವು ಹೇಳಿದಷ್ಟು ಕಡಿಮೆ ಕುಡಿಯೋದು ಏನಕ್ಕೆ? ಅದರಿಂದ ನಮಗೇನೂ ಗಿಟ್ಟುವುದಿಲ್ಲ, ಬಾಯಲ್ಲಿ ಕುಡಿದಿದ್ದೀನಿ ಅಂತ ವಾಸನೆ ಬಂದು ಮನೆಯಲ್ಲಿ ಬೈಸ್ಕೊಳ್ಳಕ್ಕೆ ಮಾತ್ರ ಕುಡಿಯೋದ? ಅಂತ ನೀವು ಕೇಳಬಹುದು. ಅಂತಹ ಜನರನ್ನು, ಕುಡಿತದ ಎರಡನೆಯ ಸ್ಟೇಜ್ ಗೆ ಸೇರಿಸಲಾಗುತ್ತದೆ. ಅವರನ್ನು ಮಾಡರೇಟ್ ಡ್ರಿಂಕರ್ಸ್ ಅನ್ನುತ್ತಾರೆ.

ಅಮೆರಿಕನ್ನರ ಡಯಟರಿ ಗೈಡ್ ಲೈನ್ ನ ಪ್ರಕಾರ ಮೇಲೆ ಹೇಳಿದ ಡಬಲ್ ಪ್ರಮಾಣದಲ್ಲಿ ಗಂಡಸರು ಕುಡಿದರೆ ಆಗ ಅವರು ಮಾಡರೇಟ್ ಡ್ರಿಂಕರ್ಸ್. ಆದರೆ ಇದು ದಿನದ ಗರಿಷ್ಟ ಪ್ರಮಾಣ. ನಾನು ನಾಲ್ಕು ದಿನ ಕುಡಿದಿಲ್ಲ, ಅದೆಲ್ಲವನ್ನು ಸೇರಿಸಿ ವೀಕೆಂಡ್ ಪಾರ್ಟಿ ದಿನ ಬಡಿದುಹಾಕುತ್ತೇನೆ ಎಂದು ಮಾಡಲಾಗುವುದಿಲ್ಲ. ಸರಾಸರಿಯು ಆಲ್ಕೋಹಾಲಿನ ಸರಿಯಾಗಿ ಮಿಕ್ಸ್ ಆಗಲ್ಲ. ದಿನಕ್ಕೆ ಇಂತಿಷ್ಟು ಕುಡಿ, ಇಲ್ಲಾ ಬಿಡಿ. ನಾಳೆ ಮತ್ತೆ ಅಷ್ಟು ಕುಡಿಯಿರಿ. ಆದರೆ, ಆ ಪ್ರಮಾಣವನ್ನು ದಿನವೊಂದಕ್ಕೆ ದಾಟಲೇ ಬಾರದು.

11) ಇಲ್ಲಿ ಕುಡಿಯುವ ಮುನ್ನ ದ್ರವ್ಯವನ್ನು ಅಳತೆ ಮಾಡುವುದು ತುಂಬಾ ಮುಖ್ಯವಾಗುತ್ತದೆ. ಮದ್ಯವನ್ನು ಹಾಕುವಾಗ ‘ಸ್ಮಾಲ್ ‘ ಆಯ್ಕೆಮಾಡಿ. ಬೇಕಾದರೆ ಇನ್ನೊಂದು ಸಲ ಹಾಕಿಕೊಳ್ಳಬಹುದು. ಇದರಿಂದ ಹೆಚ್ಚು ಸಮಯವೂ ವ್ಯಯವಾಗಿ, ಕಡಿಮೆ ದ್ರವ ಹೊಟ್ಟೆ ಸೇರುತ್ತದೆ.

12) ಬೇರೆಯವರ ಮೇಲೆ ಭರವಸೆಯಲ್ಲಿ, ಅಂದರೆ ಯಾರೋ ಅಳೆದು ಕೊಟ್ಟ ಅಳತೆಯಲ್ಲಿ ನೀವು ಯಾವತ್ತಿಗೂ ನಂಬಿಕೆ ಇಡಬೇಡಿ. ನೆನಪಿಡಿ : ಮದ್ಯ ಅಂದರೆ ವಿಷ. ಆದ್ದರಿಂದ ವಿಷದ ಸಂಪೂರ್ಣ ಕಂಟ್ರೋಲ್ ನಿಮ್ಮ ಕೈಗಳಲ್ಲಿರಲಿ. ( let you poison yourself, not others !!!!) 

13) ನಿಮಗೆ ತಿಳಿದಿಲ್ಲದ ಬ್ರ್ಯಾಂಡಿನ ಡ್ರಿಂಕ್ಸ್ ತೆಗೆದುಕೊಳ್ಳುವ ಮುನ್ನ ಎಚ್ಚರವಿರಲಿ.

14) ಯಾವುದೇ ಕಾರಣಕ್ಕೂ ಅಪರಿಚಿತರಿಂದ ಮದ್ಯ ಸ್ವೀಕರಿಸಬೇಡಿ.

15) ದಾರಿ ಬದಿಯ ಅನಾಥ ಬ್ರ್ಯಾಂಡಿನ, ಮುಚ್ಚಳ ತೆಗೆಯಲ್ಪಟ್ಟ ಬಾಟಲಿನ ದ್ರವ್ಯವನ್ನು ಯಾವುದೇ ಸಮಯದಲ್ಲೂ ಬಗ್ಗಿಸಿ ಕೊಳ್ಳಬೇಡಿ.

16) ಮೊದಲೇ ಹೇಳಿದಂತೆ ಇಷ್ಟಕ್ಕೂ ನೀವು ತೆಗೆದುಕೊಳ್ಳುವುದು ದೇಹಕ್ಕೆ ಆರೋಗ್ಯಕ್ಕೆ ಒಗ್ಗದ ವಸ್ತುವನ್ನು. ಅಂತದ್ದರಲ್ಲಿ ಕ್ವಾಲಿಟಿ ಇಲ್ಲದ ಬ್ರ್ಯಾಂಡ್ ಅಂತ ಕಂಟ್ರೋಲ್ ಇಲ್ಲದ   ದ್ರವ್ಯವನ್ನು ಸ್ವೀಕರಿಸುವುದು ನಥಿಂಗ್ ಬಟ್ ಸೂಯಿಸೈಡಲ್.

17) ನೀವು ನಿರ್ಧರಿಸಿದ ಮಟ್ಟದ ಕುಡಿತವನ್ನು ಮಾಡಿದ ಮೇಲೆ ಯಾರದೋ ಬಲವಂತಕ್ಕೆ ಮತ್ತೊಂದಷ್ಟು ಕುಡಿಯಲು ಹೋಗಬೇಡಿ. ಅಂದುಕೊಂಡ ಕ್ವಾಂಟಿಟಿ ಕುಡಿದ ತಕ್ಷಣ ಕುಡಿಯುವ ಜಾಗ ಬಿಟ್ಟು ಎದ್ದೇಳಿ.

18) ಡ್ರಿಂಕ್ಸ್ , ಊಟ ಆದ ಮೇಲೆ ತಕ್ಷಣಕ್ಕೆ ಮಲಗಬೇಡಿ. ಸ್ವಲ್ಪ ಅಮಲು ಇಳಿದು ಆನಂತರ ನಿದ್ದೆ ಮಾಡಿ.( ಊಟದ ನಂತರ ಕನಿಷ್ಠ 1 ಗಂಟೆಗಳು)

19) ಮರುದಿನ ಹೊಟ್ಟೆ ಕರುಳು ಮತ್ತು ಇಡೀ ದೇಹ ಭಾಗ ಭಾಗ ಉರಿಯುತ್ತಿರುತ್ತದೆ. ಅಂತ ಸಮಯದಲ್ಲಿ ಮುಂಜಾನೆ ಮಜ್ಜಿಗೆ, ಮೊಸರನ್ನ, ಮೊಸರು ಹಾಕಿದ ತಂಗಳನ್ನ, ರಾಗಿಯ ಗಂಜಿ ಮುಂತಾದ ತಣ್ಣಗಿನ ಆಹಾರವನ್ನು ಮೊತ್ತ ಮೊದಲು ಸೇವಿಸಿ ಹೊಟ್ಟೆ ತಂಪು ಮಾಡಿಕೊಳ್ಳಿ. ಈ ದಿನ ಕಡಿಮೆ ಉಷ್ಣತೆಯ, ಕಮ್ಮಿಉಪ್ಪು-ಖಾರದ ಲಘು ಆಹಾರ ಶ್ರೇಷ್ಠ !

ಕೊನೆಯದಾಗಿ ಹೇಳುತ್ತಿದ್ದೇನೆ : ಬೇಜಾರ ಮಾಡಿಕೊಳ್ಳಬೇಡಿ. ಹೇಳಿದ ಮಾತನ್ನು ಕುಡಿಯುವವರು ಯಾರು ಕೇಳುತ್ತಾರೆ. ಮಾತು ಕೇಳುವವರೂ, ಒಂದಿಷ್ಟು ಲಿಕ್ವಿಡ್ ಒಳಗೆ ಹೋದ ತಕ್ಷಣ ಯಾರ ಮಾತೂ ಕೇಳದವರಂತೆ ಆಡುತ್ತಾರೆ. ನಾವು ಪಾರ್ಟಿಮಾಡುವುದು ಖುಷಿಯನ್ನು ಪಡೆಯಲು, ಮನಸ್ಸನ್ನು ಮುದಗೊಳಿಸಿಕೊಳ್ಳಲು. ಅದಕ್ಕಾಗೇ, ಸ್ವಲ್ಪವೇ ಕುಡಿದು, ಚೆನ್ನಾಗಿ ಹಿತವಾದದ್ದನ್ನ ತಿಂದು ಪಾರ್ಟಿನ ಎಂಜಾಯ್ ಮಾಡಬೇಕು ಅಂತ ಪ್ರತಿಯೊಬ್ಬರಿಗೂ ಮನಸ್ಸಿರುತ್ತದೆ. ಗೆಳೆಯರ ಜತೆ ಕುಡಿಯಲು ಕೂತಾಗ ಇದ್ದ ಕಠಿಣ ರಿಸೊಲ್ಯೂಷನ್ ಒಂದೇ ಪೆಗ್ಗು ಒಳಗೆ ಬಿಟ್ಟುಕೊಳ್ಳುವುದರೊಳಗಾಗಿ ಎಲ್ಲೋ ಕಳೆದು ಹೋಗುತ್ತದೆ. ಮರುದಿನ ಮತ್ತೆ ತಲೆನೋವು, ಹೊಟ್ಟೆ ಕಿವಿಚಿಕೊಳ್ಳುವುದು, ಸುಸ್ತು, ಲೂಸ್ ಹೊಟ್ಟೆ ಮುಂತಾದುವು ಬಂದಾಗ ಮತ್ತೆ ಇನ್ನೊಂದು ಸಲ ಅದು ನೆನಪಾಗುವುದು.

ಕೆಲವರು ಹೇಳ್ತಾರೆ: ” ನಾವು ಜಾಸ್ತಿ ಕುಡಿಬಾರದು ಅಂತನೇ ಇರ್ತೀವಿ. ಆದರೆ, ಪಾರ್ಟಿಗ್ ಕೂತಾಗ ಎಲ್ಲಾ ಮರೆತು ಹೋಗ್ತೇವೆ. ಏನು ಮಾಡ್ಲಿ ಅನ್ನುವುದು ” ಇದು ಬಹುಪಾಲು ಗ್ಲಾಸ್ ಮೇಟ್ ಗಳ ಪ್ರಶ್ನೆ.

ಕಡ್ಡಾಯವಾಗಿ ನೀವು ಎರಡು ಪೆಗ್ ಹಾಕಿ ಎದ್ದೇಳಬೇಕೆಂದರೆ ಇರುವುದು ಎರಡೇ ಮಾರ್ಗ. ಒಂದು, ನಿಮ್ಮಲ್ಲಿ ಸಾಕಷ್ಟು ದೃಢ ಮನಸ್ಸಿರಬೇಕು ; ನೀವಾಗೇ ಎದ್ದು ಬರಬೇಕು. ಅದಿಲ್ಲದಿದ್ದರೆ, ಇನ್ನೊಂದು ಮಾರ್ಗ ಇದೆ. ನೀವು ಬೌನ್ಸರ್ ಗಳನ್ನು ನೇಮಿಸಿಕೊಳ್ಳಿ. ನಿಮ್ಮಎರಡು ಪೆಗ್ ಆದ ಕೂಡಲೇ ಅವರು ನಿಮ್ಮನ್ನು ಎತ್ತಿಕೊಂಡು ಬಂದು ಮನೆಯಲ್ಲಿ ಬಿಸಾಕಿ ಹೋಗುತ್ತಾರೆ. ಆಯ್ಕೆನಿಮ್ಮದು !

ಖುಷಿಗಾಗಿಯೇ ಕುಡಿಯಿರಿ ಇಲ್ಲ ನೋವನ್ನು ಮರೆಯಲೇ ಕುಡಿಯಿರಿ, ಪರವಾಗಿಲ್ಲ. ಆದರೆ ಕುಡಿದು ದೇಹಕ್ಕೆ, ಮನಸ್ಸಿಗೆ, ಕುಟುಂಬಕ್ಕೆ ಮತ್ತು ಸಮಾಜಕ್ಕೆ ನೋವು ತರಿಸಬೇಡಿ.     

……ಇತಿ ನಿಮ್ಮಪ್ರೀತಿಯ ಕುಡುಕ ಮಿತ್ರ ಸುದ  

1 Comment
  1. […] ಡ್ರಿಂಕ್ಸ್ ಮಾಡುವುದು ಹೇಗೆ? | ಇದನ್ನು ಯಾರಾ… […]

Leave A Reply

Your email address will not be published.