ವಿಸ್ಮಯ ವಿಶ್ವ: ಮೂರು ಬಾರಿ ಚಂದ್ರಯಾನ ಮಾಡಿ ಬರಬಲ್ಲ ಹಕ್ಕಿ ಆರ್ಕ್ ಟಿಕ್ ಟರ್ನ್

Share the Article

ಆರ್ಕ್ ಟಿಕ್ ಟರ್ನ್ ಎಂಬ ಉತ್ತರ ಧ್ರುವ ಪ್ರದೇಶದ ಪುಟಾಣಿ ಹಕ್ಕಿಗೆ ಅದೆಲ್ಲಿಂದ ಬರುತ್ತಿದೆಯೋ ಅಷ್ಟೊಂದು ಶಕ್ತಿ. ಕೇವಲ100 ರಿಂದ 125 ಗ್ರಾಂ ಅಷ್ಟೇ ತೂಗುವ ಆರ್ಕ್ ಟಿಕ್ ಟರ್ನ್ ರೆಕ್ಕೆ ಬಿಚ್ಚಿ ಪಟಪಟಿಸಿದರೆ ಆಕಾಶವೇ ದಾರಿ ಬಿಟ್ಟುಬಿಡಬೇಕು. ಹಾರಲು ಹೊರಟ ಅವಳಿಗೆ ಇನ್ನಿಲ್ಲದ ಉತ್ಸಾಹ. ಮೊದಲ ವರ್ಷ ದಕ್ಷಿಣ ಧ್ರುವದ ಸಾಗರದಲ್ಲಿ ಆಹಾರ ಹುಡುಕುತ್ತಾ ಅಲೆದಾಡುತ್ತಿದ್ದರೆ, ಉಳಿದ ಆರು ತಿಂಗಳು ಉತ್ತರ ಧ್ರುವದ ಬೇಸಿಗೆಯಲ್ಲಿ ತನ್ನ ಪುಟಾಣಿ ಮೊಟ್ಟೆಗಳಿಗೆ ಶಕ್ತಿ ತುಂಬುವ ಕೆಲಸದಲ್ಲಿ ಮಗ್ನ.

ಆರ್ಕಟಿಕ್ ಟರ್ನ್ ವರ್ಷಕ್ಕೆ ಸರಾಸರಿ 24000 ಮೈಲು ದೂರ ಕ್ರಮಿಸುತ್ತದೆ. ಪ್ರಯಾಣ ಮಧ್ಯದಲ್ಲಿ ಏನೇ ಅಡ್ಡಿ-ಆತಂಕಗಳು ಎದುರಾಗಲಿ, ಒಮ್ಮೆ ರೆಕ್ಕೆ ಬಿಚ್ಚಿ ಹಾರಲು ಶುರುಮಾಡಿದರೆ ಗುಡ್ಡ-ಬೆಟ್ಟ, ನದಿ-ಕಂದರ, ಕಾಡು-ಪಟ್ಟಣ ಎಲ್ಲವನ್ನೂ ಕಾಲ ಕೆಳಗೆ ಬಿಸಾಕಿಕೊಂಡು ಪುಟಾಣಿ ಭೂಮಿಯನ್ನು ನೋಡಿ ಗೇಲಿ ಮಾಡಿಕೊಂಡು ಒಂದೇ ಸಮನೆ ರೆಕ್ಕೆ ಬೀಸುತ್ತದೆ. ಕಾಲ ಕೆಳಗೆ ನೆಲ ಕಾಣದ ಭೋರ್ಗರೆಯುವ ಸಮುದ್ರ ಹೆದರಿಸುತ್ತಿದ್ದರೆ ನೀಲಾಕಾಶದಲ್ಲಿ ನಿರಂತರವಾಗಿ ಮುನ್ನುಗುತ್ತಿರುತ್ತದೆ ಆರ್ಕಟಿಕ್. ಆಕೆ ನಂಬಿಕೊಂಡದ್ದು ತನ್ನ ಬಲಿಷ್ಠ ರೆಕ್ಕೆಗಳ ಬಲವನ್ನು.

ತನ್ನ ದಾರಿಯುದ್ದಕ್ಕೂ ಅವು ರೆಕ್ಕೆಬೀಸಲೇ ಬೇಕೆಂತಿಲ್ಲ. ತನ್ನ ವಿಶಾಲವಾದ ರೆಕ್ಕೆಯಗಲಿಸಿ ಗಾಳಿಯಲ್ಲಿ ತೇಲುತ್ತಾ ( ಗ್ಲೈಡಿಂಗ್) ಬಹುದೂರ ಸಾಗಬಲ್ಲ ಕ್ಷಮತೆ ಈ ಹಕ್ಕಿಗಳಿಗಿದೆ. ಇವುಗಳು ಎಷ್ಟು ಪರ್ಫೆಕ್ಟ್ ಗ್ಲೈಡ್ ಮಾಡುತ್ತವೆಯೆಂದರೆ, ಹಾಗೆ ಎನರ್ಜಿ ಎಫಿಷಿಯೆಂಟ್ ಆಗಿ ಸಾಗುತ್ತಿರುವಾಗ ಅವು ಸಣ್ಣದಾಗಿ ನಿದ್ದೆ ಕೂಡ ಹೊಡೆಯಬಲ್ಲವು.

ದಿನವೂ ಚಿರ್ ಪಿರ್ ಗುಟ್ಟುತ್ತಲೇ ಇರುವ ಈ ಹಕ್ಕಿಗಳು, ತಮ್ಮ ದೂರದ ಪ್ರಯಾಣದ ದಿನ ಹತ್ತಿರವಾದಂತೆಲ್ಲ ಅವು ಸಡನ್ನಾಗಿ ಸೈಲೆಂಟಾಗುತ್ತವೆ. ಬಹುಶ: ಖಂಡಾತರ ಹೋಗುವ ಮುಂಚೆ ಧ್ಯಾನಕ್ಕೆ ತೊಡಗಿ ಮಾನಸಿಕವಾಗಿ ರೆಡಿಯಾಗುತ್ತವಿರಬಹುದು.

ಹಮ್ಮಿಂಗ್ ಬರ್ಡ್ ಬಿಟ್ಟರೆ, ಆರ್ಕ್ಟಿಕ್ ಹಕ್ಕಿಗಳು ಮಾತ್ರ ಹೋವರ್ ಮಾಡಬಲ್ಲ ಹಕ್ಕಿಗಳು. (ನಿಂತಲ್ಲೇ, ಒಂದೇ ಜಾಗದಲ್ಲಿ ಗಾಳಿಯಲ್ಲಿ ನಿಲ್ಲಬಲ್ಲ ). ಅವುಗಳ ಮತ್ತೊಂದು ವಿಶೇಷವೇನೆಂದರೆ, ಅವುಗಳು ಖಂಡ ಖಂಡಗಳ ಮದ್ಯೆ ಇರುವ ನೇರ ಅಥವಾ ಹತ್ತಿರದ ದಾರಿಯನ್ನು ಆರಿಸಿಕೊಳ್ಳುವುದಿಲ್ಲ. ಸುತ್ತಮುತ್ತಲ ವಾತಾವರಣವನ್ನು ಗಮನದಲ್ಲಿಟ್ಟುಕೊಂಡು, ತಮ್ಮ ಪ್ರಯಾಣಕ್ಕೆ ಮತ್ತು ದೇಹ ಪ್ರಕೃತಿಗೆ ಅನುಕೂಲವಿರುವ ದಾರಿಯನ್ನು ಕಂಡುಕೊಂಡು ಸಾಗುತ್ತವೆ.

ಆಕೆಯದು ಜೀವನಪರ್ಯಂತ ಟೂರು ಮಾಡಿಯೇ ಸಿದ್ದ ಎಂದು ಸಂಕಲ್ಪ ಮಾಡಿಕೊಂಡು ಹೊರಟ undeterred determination. ಈ ಹಕ್ಕಿ ಜಗತ್ತಿನ ಯಾವುದೇ ಪ್ರಾಣಿ ಪಕ್ಷಿಗಿಂತ ಜಾಸ್ತಿ ಬೇಸಗೆಯನ್ನು ಇಷ್ಟಪಡುವ ಪಕ್ಷಿ. ವರ್ಷಪೂರ್ತಿ ಬೇಸಗೆಯನ್ನು ಅನುಭವಿಸಲು ಆರು ತಿಂಗಳು ದಕ್ಷಿಣ ದ್ರುವದಲ್ಲಿ ಬೇಸಗೆಯನ್ನು ಅನುಭವಿಸಿ ಉಳಿದ ಆರು ತಿಂಗಳು ಉತ್ತರ ದ್ರುವಕ್ಕೆ ನಿರಂತರ ಬಿಸಿಲು ಕಾಯಿಸಿಕೊಳ್ಳಲು ಹೊರಡುತ್ತದೆ.

25 ವರ್ಷಗಳಷ್ಟು ಜೀವಿಸುವ ಟರ್ನ್, ತನ್ನ ಜೀವಿತಾವಧಿಯಲ್ಲಿ ಅದೆಷ್ಟು ದೂರ ಪ್ರಯಾಣಿಸುತ್ತದೆಯೆಂದೆರೆ, ಅದು 3 ಬಾರಿ ಭೂಮಿಯಿಂದ ಚಂದ್ರನನ್ನು ಮುಟ್ಟಿ ಬರುವಷ್ಟು ದೂರ ಕ್ರಮಿಸುತ್ತದೆ. ಅಂದರೆ, ಅದರ ಜೀವಿತಾವಧಿಯ ಒಟ್ಟು ಕ್ರಮಣ 6,40,000 ಮೈಲುಗಳು !
ಇಂತಹಾ ಆರ್ಕ್ ಟಿಕ್ ಟರ್ನ್ ಹಕ್ಕಿಯೊಂದು, 2015 ನಲ್ಲಿ ಬರೋಬ್ಬರಿ 1,00,000 ಕಿಲೋಮೀಟರುಗಳಷ್ಟು ಒಂದೇ ವರ್ಷದಲ್ಲಿ ರೆಕ್ಕೆ ಬೀಸಿದೆ. ಇದು ಭೂಮಿಯನ್ನು ಒಂದು ಸುತ್ತು ಹಾಕಿ ಬಂದುದಕ್ಕಿಂತಲೂ ಹೆಚ್ಚು !

ಹಕ್ಕಿಗಳಿಗೂ, ಅವುಗಳ ಪ್ರಯಾಣಕ್ಕೂ ಮತ್ತು ಮನುಷ್ಯನ ಪ್ರಯಾಣಕ್ಕೂ ಸಂಬಂಧವಿದೆ. ಹಕ್ಕಿಗಳ ಸ್ವಚ್ಛಂದ ಹಾರಾಟ, ಅವುಗಳ ದೇಹ ಪ್ರಕೃತಿ, ಹಕ್ಕಿ ಹೇಗೆ ತನ್ನ ತೂಕವನ್ನು ಕಳಕೊಂಡು ಗಾಳಿಯಲ್ಲಿ ತೇಲುತ್ತದೆ ಮುಂತಾದವುಗಳನ್ನು ನೋಡಿಕೊಂಡೇ ನಮ್ಮ ರೈಟ್ ಬ್ರದರ್ಸ್ ವಿಮಾನದ ಸ್ಕೆಚ್ ಹಾಕಿದ್ದು. ವಿಮಾನ ಬಂದ ನಂತರವೇ ಮನುಷ್ಯನ ಖಂಡಾಂತರಗಳ ಪ್ರಯಾಣ ಸುಲಭವಾದದ್ದು.

ಅದರ ಮೂಲಕವೇ, ನಮಗಿಂದು ಭೂಮಿ ಚಿಕ್ಕದಾಗಿದ್ದು ! ಥ್ಯಾಂಕ್ಸ್ ಟು ಲಿವಿಂಗ್ ಫ್ಲೈಟ್ಸ್ !

ಸುದರ್ಶನ್ ಬಿ.ಪ್ರವೀಣ್, ಬೆಳಾಲು

Leave A Reply

Your email address will not be published.