ಇಂಟೆರೆಸ್ಟಿಂಗ್ ಇತಿಹಾಸ|ಕಳಿಂಗದ ಕದನ ಕಣದ ಖಣ ಖಣ !
ಆವಾಗ ಕಳಿಂಗವನ್ನು ಆಳುತ್ತಿದ್ದ ದೊರೆ ಪದ್ಮನಾಭ. ಅದು ಕ್ರಿಸ್ತಪೂರ್ವ 262 ರ ಸಮಯ. ಆವಾಗಲೇ ಬಿಂದುಸಾರ ಕಾಲವಾಗಿ ಬಹು ಕಾಲವಾಗಿ ಹೋಗಿತ್ತು. ಮೌರ್ಯವಂಶದ ಅಶೋಕನು ಬಿಂದುಸಾರನ ಮಗ. ಅದಾಗಲೇ ಅಶೋಕ ವಹಿಸಿಕೊಂಡು 12 ವರ್ಷಗಳು ಕಳೆದುಹೋಗಿದ್ದವು. ಈಗಿನ ಪೂರ್ತಿ ಮಧ್ಯ ಭಾರತ ಮತ್ತು ಬಹುಪಾಲು ಭಾರತ ಮೌರ್ಯರ ಮೌರ್ಯರ ಆಳ್ವಿಕೆಯಲ್ಲಿತ್ತು. ದಕ್ಷಿಣದ ಕೇರಳದ ಕೆಲವು ಪ್ರಾಂತಗಳನ್ನು ಬಿಟ್ಟರೆ ಉಳಿದೆಲ್ಲವೂ ಅಶೋಕನ ಅಧೀನದಲ್ಲಿತ್ತು : ಕಳಿಂಗವೊಂದನ್ನು ಬಿಟ್ಟು.
ಮೌರ್ಯರ ರಾಜಪರಂಪರೆಯಂತೆ ಸಾಮ್ರಾಜ್ಯ ವಿಸ್ತರಣೆಗೆ ಅಶೋಕನು ಮುಂದಾಗುತ್ತಾನೆ. ಕಳಿಂಗ ರಾಜ್ಯವೇ ಅವನ ಮೊದಲ ಟಾರ್ಗೆಟ್. ಒರಿಸ್ಸಾದ ಹೃದಯ ಭಾಗವನ್ನು ಆವರಿಸಿಕೊಂಡು ಇಂದಿನ ಆಂಧ್ರಪ್ರದೇಶದ ನದೀ ತಟದವರೆಗೆ ವಿಸ್ತರಿಸಿತ್ತು ಕಳಿಂಗ ಸಾಮ್ರಾಜ್ಯ.
ಕಳಿಂಗದ ಮೇಲೆ ಯುದ್ಧ ಮಾಡಲು ಅಶೋಕನಿಗೆ ಇನ್ನೊಂದು ಕಾರಣವಿತ್ತು. ಕಳಿಂಗ ಆರ್ಥಿಕವಾಗಿ ಮೌರ್ಯರಿಗೆ ಮುಖ್ಯವಾಗಿತ್ತು. ಕಳಿಂಗದ ಬಳಿ ಒಳ್ಳೆಯ ತಂತ್ರಜ್ಞರಿದ್ದರು. ಬಂಗಾಳದ ಕಡಲಲ್ಲಿ ಒಳ್ಳೆಯ ನೌಕೆಗಳನ್ನು ಕಳಿಂಗದವರು ಹೊಂದಿದ್ದರು. ಇತರ ದೇಶಗಳೊಂದಿಗೆ ಆ ನೌಕಾ ಬಂದರುಗಳ ಮೂಲಕ ಭರ್ಜರಿ ವ್ಯಾಪಾರ ನಡೆಯುತ್ತಿತ್ತು. ಕಳಿಂಗವು, ನಂದ ಸಾಮ್ರಾಜ್ಯದ ಒಂದು ಅಳಿದುಳಿದ ತುಂಡಾಗಿತ್ತು.
ಹಾಗಾಗಿ ಅಶೋಕನು ಕಳಿಂಗವನ್ನು ಶರಣಾಗಲು ಸೂಚಿಸುತ್ತಾನೆ. ಆದರೆ ಶರಣಾಗಲು ದೇಶಭಕ್ತಿಗೆ ಹೆಸರಾದ ಕಳಿಂಗ ಒಪ್ಪಿಕೊಳ್ಳುವುದಿಲ್ಲ.
ಅತುಲ ವೈಭವದ ಮೌರ್ಯ ಸಾಮ್ರಾಜ್ಯದ ಮುಂದೆ ಕಳಿಂಗ ರಾಜ್ಯ ತುಂಬಾ ಚಿಕ್ಕದು. ಆದರೂ ಕಳಿಂಗ ರಾಜ್ಯ ಅಶೋಕನ ಸಾಮ್ರಾಜ್ಯ ವಿಸ್ತರಣೆಯನ್ನು ಪ್ರತಿಭಟಿಸುತ್ತದೆ. ಯುದ್ಧ ಮೊದಲಾಗುತ್ತದೆ. ಒಂದೂವರೆ ಲಕ್ಷ ಪದಾತಿ ದಳ, 10000 ಅಶ್ವದಳ ಮತ್ತು 700 ರಷ್ಟು ಗಜ ಪಡೆ ಕಳಿಂಗರ ಬಳಿ ಇತ್ತು. ಇಷ್ಟು ಸೈನ್ಯವಿದ್ದರೂ ಮೌರ್ಯಸಾಮ್ರಾಜ್ಯದ ಮುಂದೆ ಇದೊಂದು ಚಿಕ್ಕ ಸಾಮಂತ ರಾಜ್ಯದಂತೆ !
ಮೌರ್ಯರದು ಆಗಿನ ಚಾಣಾಕ್ಷ ಚಾಣಕ್ಯ ಕಟ್ಟಿದ ಸಾಮ್ರಾಜ್ಯ. ಕೇವಲ ಯೋಚನೆ ಮಾತ್ರದಿಂದಲೇ ಎಂಥದ್ದೇ ಸಾಮ್ರಾಜ್ಯವನ್ನು ಕೂಡ ಕೆಡವಿ ತಿಂದು ಹಾಕಬಲ್ಲಂತಹ ಮಹಾನ್ ಮೇಧಾವಿ ಚಾಣಕ್ಯನ ಸಹಾಯದಿಂದ ಚಂದ್ರಗುಪ್ತ ಮೌರ್ಯ ಸ್ಥಾಪಿಸಿದ ಸಾಮ್ರಾಜ್ಯವದು. ಮೌರ್ಯ ಸಾಮ್ರಾಜ್ಯದ ಅಗಾಧತೆ ಇಡೀ ಪ್ರಪಂಚಕ್ಕೆ ವ್ಯಾಪಿಸಿತ್ತು. ಅಲೆಕ್ಸಾಂಡರ ಸೈನ್ಯ ಕೂಡಾ ಮೌರ್ಯರ ಜತೆ ಕಾದಾಡುವುದು ಬೇಡ ಎಂದು ನಿರ್ಧರಿಸಿ ಹಿಂದೆ ಹೋಗಿತ್ತು. ಮೌರ್ಯರಲ್ಲಿ ಅಗಾಧವಾದ ಸೈನ್ಯದ ಬಲವಿತ್ತು. ಆ ಸೈನ್ಯಕ್ಕೆ ಒಂದು ವಿಶೇಷ ತರಬೇತಿ ಕೊಳ್ಳಲಾಗಿತ್ತು. ಅದೊಂದು ಸ್ಟ್ರಕ್ಚರ್ಡ್ ಮಿಲಿಟರಿ ಶಕ್ತಿ. ಎಂತೆಂತಹ ಸೈನ್ಯಗಳನ್ನು ಹೊಸಕಿ ಹಾಕಿ ಚಕ್ರಾಧಿಪತ್ಯವು ಮಾಡಿದ ಅಂತಹ ಮೌರ್ಯರ ಮುಂದೆ ಕಳಿಂಗ ಏನೇನೂ ಪ್ರತಿರೋಧ ಒಡ್ಡಲಾರದ ರಾಜ್ಯವಾಗಿತ್ತು.
ವರ್ಷಾನುಗಟ್ಟಲೆ ಮೈಪಳಗಿಸಿ ಪಳಗಿದ್ದ ಬೃಹತ್ ಸೈನ್ಯದ ಎದುರು ಯುದ್ಧ ಕೆಲವೇ ಗಂಟೆಗಳಲ್ಲಿ ಮುಗಿದು ಹೋಗುವಂತಿತ್ತು. ಆದರೂ ಕಳೆದೆರಡು ಬಾರಿಯ ಸೋಲು ಅಶೋಕನನ್ನು ಬಹುವಾಗಿ ಕಾಡಿತ್ತು. ಅಶೋಕನ ಅಜ್ಜ ಚಂದ್ರಗುಪ್ತ ಮೌರ್ಯ ಕಳಿಂಗವನ್ನು ಕಬಳಿಸಲು ಹೊಂಚು ಹಾಕಿದ್ದ. ಆದರೆ ಕಾಳಿಂಗ ರಾಜ್ಯವನ್ನು ಗೆದ್ದುಕೊಳ್ಳಲು ಆತನಿಂದ ಆಗಿರಲಿಲ್ಲ. ಆನಂತರ ಚಂದ್ರಗುಪ್ತನ ಮಗ ಬಿಂದುಸಾರನು ಕೂಡ ಕಳಿಂಗದ ಮೇಲೆ ಕದನ ಹೂಡಿದ್ದ. ಆಗ ಕೂಡಾ ಕದಲದೆ ನಿಂತಿತ್ತು ಕಳಿಂಗ. ಅದಕ್ಕೆ ಕಾರಣವೇನೆಂಬುದು ನಿಗೂಢವಾಗಿಯೇ ಉಳಿದಿದೆ.
ಆ ದಿನ ಯುದ್ಧ ಪ್ರಾರಂಭವಾದ ದಿನ ಯುದ್ಧದ ಸಾರಥ್ಯವನ್ನು ಭರತ ಖ೦ಡ ಕಂಡ ಮಹಾನ್ ಚಕ್ರಾಧಿಪತಿಯಾದ ಖುದ್ದು ಅಶೋಕನೇ ವಹಿಸಿದ್ದ. ಎಲ್ಲ ಯುದ್ಧತಂತ್ರಗಳೂ ಅಶೋಕನಿಂದಲೇ ಹೆಣೆಯಲ್ಪಟ್ಟಿದ್ದವು. ಆತನ ನಿರ್ದೇಶನದಂತೆ ರಣತಂತ್ರ ರೂಪಿತವಾಗಿತ್ತು. ರೂಪುರೇಶೆ ಸಿದ್ಧಗೊಂಡಿತ್ತು. ನೀಲಿ ನಕ್ಷೆಯ ಮೇಲೆ ಯುದ್ಧ ಕೆಲವೇ ಗಂಟೆಗಳಲ್ಲಿ ಯುದ್ಧ ಮುಗಿದು ಹೋಗುತ್ತಿತ್ತು. ಈ ಸಲ ಯಾವುದೇ ಕಾರಣಕ್ಕೂ ಬರಿಗೈನಲ್ಲಿ ವಾಪಸ್ಸು ಹೋಗಬಾರದೆಂದು ಅಶೋಕ ನಿರ್ಧರಿಸಿದ್ದ. ಅದಕ್ಕಾಗೇ ಎಲ್ಲ ಮುನ್ನೆಚ್ಚರಿಕೆಗಳನ್ನೂ ಆತ ತೆಗೆದುಕೊಂಡಿದ್ದ. ಬೇಗ ಯುದ್ಧ ಮುಗಿಸಿ ತನ್ನ ಅರಮನೆಗೆ ಹೊರಡಲು ಅನುವಾಗಿದ್ದ ಅಶೋಕ.
ಆವಾಗಲೇ ಯುದ್ಧ ಗೆದ್ದ ಹಮ್ಮುಅಶೋಕ ಮಾತ್ರವಲ್ಲ ಆತನ ಸೈನ್ಯದ ಪ್ರತಿಯೊಬ್ಬರಲ್ಲೂ ನೆಲೆಸಿತ್ತು. ಸಂಪ್ರದಾಯದಂತೆ ಯುದ್ಧಾನಂತರ ಸಂಭ್ರಮಾಚರಣೆಗೆ ಅಶೋಕನ ಆಸ್ಥಾನ ಸಿದ್ಧಗೊಂಡಿತ್ತು. ಭೇರಿಗಟ್ಟಲೆ ಸಿಹಿತಿಂಡಿಗಳು ತಯಾರಾಗಲಾರಂಭಿಸಿದವು. ಸೈನಿಕರಿಗಾಗಿ ಕೊಪ್ಪರಿಗೆಯಂತಹಾ ಬಾಣಲೆಗಳಲ್ಲಿ ಬಾಣಸಿಗರು ಭೋಜನ ಶುರುವಿಟ್ಟಿದ್ದರು. ಪಕ್ಕದಲ್ಲಿ ಮಾಂಸ ಕೊತ ಕೊತ ಕುದಿಯುತ್ತಿತ್ತು. ಬೇಗ ಮುಗಿಸಿ ಹೋಗುವ ಆತುರ ಅಶೋಕನಲ್ಲಿ ಮನೆ ಮಾಡಿತ್ತು.
ಯುದ್ಧ ಪ್ರಾರಂಭವಾದ ಕೂಡಲೇ ಮೌರ್ಯರ ಸೈನ್ಯ ಬಹುಬೇಗ ಸುತ್ತಮುತ್ತಲ ಪ್ರದೇಶಗಳನ್ನು ಆಕ್ರಮಿಸಿಕೊಂಡು ಮುಂದೆ ಸಾಗುತ್ತಿರುತ್ತದೆ. ಗೆಲುವು ಕೇವಲ ಕೆಲವೇ ಗಂಟೆಗಳ ದೂರದಲ್ಲಿರುತ್ತದೆ.
ಆದರೆ ಇಂತಹ ದೈತ್ಯ ಸೈನ್ಯದ ಎದುರು ನಿಂತು ಹೋರಾಡಲು ಕಳಿಂಗದ ಬಳಿ ಬೇರೆ ಎಲ್ಲಿಯೂ ಇರದಂತಹ ಅದ್ಭುತ ಅಸ್ತ್ರವೊಂದಿತ್ತು. ಅಂತಹಾ ಅದ್ಭುತ ಶಕ್ತಿಯ ಎದುರು ಎಂತೆಂತಹ ಸೈನ್ಯಗಳೂ ಕಂಗಾಲಾಗಿ ಹೋದ ಉದಾಹರಣೆ ಇತಿಹಾಸದುದ್ದಕ್ಕೂಸಿಗುತ್ತವೆ. ಅದುವೇ ಕಳಿಂಗದ ಜನರ ಪರಮ ದೇಶಭಕ್ತಿ !
ಯುದ್ಧದಲ್ಲಿ ಮೌರ್ಯರ ಕೈ ಮೇಲಾಗುತ್ತಿರುವಂತೆ ನಡೆಯಿತು ಏನೋ ಸಂಚಲನ. ಹತ್ತಿಕೊಂಡಿತು ದೇಶಭಕ್ತಿಯ ಮೊದಲ ಕಿಡಿ. ಕ್ಷಣದಲ್ಲೇ ಆ ಕಿಡಿ ಬೆಂಕಿಯಾಗಿ, ಜ್ವಾಲೆಯಾಗಿ, ಧಗಧಗ ದಾವಾನಲವಾಗಿ ಉರಿಯುತ್ತದೆ. ಮನೆಯಲ್ಲಿ ಕೈಗೆ ಸಿಕ್ಕ ಬಡಿಗೆ ತೆಗೆದುಕೊಂಡು ನಾಗರಿಕರು ಯುದ್ಧರಂಗಕ್ಕೆ ಧುಮುಕುತ್ತಾರೆ. ಯುದ್ಧ ಗೆಲ್ಲುವ ಆತುರದಲ್ಲಿದ್ದ ಅಶೋಕನಿಗೆ ಯುದ್ಧದ ಬಗ್ಗೆ ಮಾಹಿತಿ ಬರುತ್ತದೆ. ಸುದ್ದಿ ಕೇಳಿ ಅಶೋಕನಂತಹ ಅಶೋಕನೇ ಅದುರಿ ಹೋಗುತ್ತಾನೆ. ಅಶೋಕನ ಸೈನ್ಯವನ್ನು ಕಳಿಂಗದ ಸೈನ್ಯ ಮತ್ತು ನಾಗರಿಕರು ಸೇರಿಕೊಂಡು ಹಿಮ್ಮೆಟ್ಟಿಸಿರುತ್ತಾರೆ. ಮೊದಲ ದಿನದ ಯುದ್ಧದಲ್ಲಿ ಅಶೋಕನಿಗೆ ಹಿನ್ನಡೆಯಾಗಿರುತ್ತದೆ.
ಕಳಿಂಗದ ಜನರ ಬಗ್ಗೆ ಒಂದಿಷ್ಟು:
ಕಳಿಂಗದ ನಾಗರಿಕರದು ಒಣಗಿದ ಕಟ್ಟಿಗೆಯಂತಹಾ ಮೈಕಟ್ಟು. ಮೂಲತಃ ಬಹುಪಾಲು ಬುಡಕಟ್ಟು ಜನರಾಗಿರುವ ಇವರು ದಿನನಿತ್ಯ ಕಾಡುಮೇಡುಗಳಲ್ಲಿ ಅಲೆದು ಬದುಕುವವರು. ಮರದ ದಿಮ್ಮಿಗಳಂತಹಾ ಕೈಕಾಲುಗಳು. ತೊಲೆಯಂತಹಾ ತೋಳು. ಎದುರು ಹಲ್ಲು ಕಚ್ಚಿ ನಿಂತರೆ ಬಂಡೆಗೆ ಬಂಡೆಯನ್ನೇ ಬಗೆದುಬಿಡುವ ಹಠಮಾರಿ ವ್ಯತಿತ್ವ. ಮಹಾನ್ ಶ್ರಮ ಜೀವಿಗಳು. ಉಸಿರು ಬಿಗಿ ಹಿಡಿದು ಅಂದುಕೊಂಡ ಕೆಲಸ ಮಾಡುವ ಕೆಲಸಗಾರರು. ಇಂದಿಗೂ ಯಾವುದಾದರೂ ತುಂಬಾ ಕಷ್ಟದ ಕೆಲಸಕ್ಕೆ ಒರಿಸ್ಸಾದ ಜನರನ್ನು ನಾವು ನಿಯೋಜಿಸುವುದಿದೆ. ಇವತ್ತು ಬೆಂಗಳೂರಿನ ಮತ್ತು ವಿವಿದೆಡೆಯಲ್ಲಿನ ಫ್ಯಾಕ್ಟರಿಗಳಲ್ಲಿ ಕಷ್ಟಕರ ಮಾನ್ಯುಯಲ್ ಕೆಲಸಕ್ಕೆ ಒರಿಸ್ಸಾದವರೇ ಬೇಕು. ಅಲ್ಲದೆ ಅವರೆಲ್ಲ ಆರ್ಥಿಕವಾಗಿ ಹಿಂದುಳಿದವಾದ್ದರಿಂದ ತುಂಬಾ ಸಸ್ತಾ ಆಗಿ ದೊರೆಯುತ್ತಾರೆಂಬುದು ಕೂಡ ಕಾರಣ.
ತಕ್ಷಣವೇ ಮತ್ತಷ್ಟು ಸೇನೆಯನ್ನು ಕಳಿಂಗದತ್ತ ನಿಯೋಜಿಸುತ್ತಾನೆ ಅಶೋಕ. ಅತ್ತ ಪೂರ್ತಿ ಕಳಿಂಗ ದೇಶವೇ ಯುದ್ಧಕ್ಕೆ ಸ್ಪಂದಿಸುತ್ತದೆ. ನಾಗರಿಕರು ಸ್ವತಃ ಸೈನಿಕರಾಗಿ ಎದ್ದು ನಿಲ್ಲುತ್ತಾರೆ. ದಶದಿಕ್ಕುಗಳಿಂದ ಮೌರ್ಯರ ಸೈನ್ಯ ಮೇಲೆ ಪ್ರಾಣವೆಂಬುದು ಕಿಂಚಿತ್ತೂ ಬೆಲೆ ಇಲ್ಲದ ವಸ್ತುವೇನೋ ಎಂಬಂತೆ ಮುಗಿ ಬೀಳುತ್ತಾರೆ. ಈ ದಿಢೀರ್ ಬದಲಾದ ಗೆರಿಲ್ಲಾ ಯುದ್ಧತಂತ್ರದ ಹಠಾತ್ ಆಕ್ರಮಣಕ್ಕೆ ಯುದ್ಧದ ಗತಿಯೇ ಬದಲಾಗಿಹೋಗುತ್ತದೆ. ಎರಡೂ ಕಡೆ ಅಪಾರ ಪ್ರಮಾಣದ ಸಾವು-ನೋವುಗಳಾಗುತ್ತದೆ. ಒಂದು ಹಂತದಲ್ಲಿ ಯಾರೂ ಗೆಲ್ಲುವುದಿಲ್ಲ, ಯಾರೂ ಸೋಲೊಪ್ಪಿಕೊಳ್ಳುವುದಿಲ್ಲ. ಹೆಣದ ಮೇಲೆ ಹೆಣ ಬಿದ್ದರೂ ಕದನ ನಿಲ್ಲುವುದಿಲ್ಲ
ದೇಹದ ಕೊನೆಯ ರಕ್ತದ ಹನಿಯಲ್ಲಿ ಜೀವ ಕದಲುತ್ತಿರುವವರೆಗೂ ಕಳಿಂಗದವರು ಹೋರಾಡುತ್ತಾರೆ. ಕಟ್ಟಕಡೆಗೆ ಹೋರಾಡಲು ಯಾವುದೇ ಯುವಕ ಬದುಕಿಲ್ಲದ ಕಾರಣ ಯುದ್ಧದಲ್ಲಿ ಅಶೋಕನಿಗೆ ಗೆಲುವಾಗುತ್ತದೆ. ಕಳಿಂಗವರು ಸೋತು ಗೆಲ್ಲುತ್ತಾರೆ.
ಕಾಳಿಂಗ ಯುದ್ಧದ ಸಾವುನೋವು
ಕಳಿಂಗ ಯುದ್ಧದಲ್ಲಿ, ಕಳಿಂಗದ ಪರ ಒಂದು ಲಕ್ಷ ಜನರು ಮತ್ತು ಸೈನಿಕರು ಸತ್ತು ಹೋಗುತ್ತಾರೆ. ಸುಮಾರು ಒಂದೂವರೆ ಲಕ್ಷ ಜನ ಬಂಧಿಗಳಾಗುತ್ತಾರೆ. ಅತ್ತ ಮೌರ್ಯರ ಕಡೆಯಲ್ಲೂ ಹೆಚ್ಚು ಕಡಿಮೆ ಅಷ್ಟೇ ಪ್ರಮಾಣದ ಸಾವು ಸಂಭವಿಸುತ್ತದೆ. ಕಳಿಂಗದ ದಯಾ ನದಿಯಲ್ಲಿ ನೆತ್ತರ ಹರಿವು. ಯುದ್ಧದ ಭೀಕರತೆ ಅಶೋಕನ ಮನ ಕಲಕುತ್ತದೆ. ಯುದ್ಧರಂಗದಲ್ಲಿ ಸೈನಿಕರ ಮಾಂಸಕ್ಕೆ ಹಾಹಾ ಕಾರ ಹಾಕುವ ರಣಹದ್ದುಗಳು, ಎಲ್ಲೆಂದರಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಹೆಣಗಳು, ಕೈಕಾಲು ವಿಹೀನರಾಗಿ ನರಳುತ್ತಾ ಬಿದ್ದ ಜನರು, ಗಂಡನನ್ನು ಕಳೆದುಕೊಂಡ ವಿಧವೆಯರ ಶೂನ್ಯ ತುಂಬಿದ ನೋಟ, ಅನಾಥ ಮಕ್ಕಳ ಕರುಳು ಹಿಚುಕುವ ಕೂಗು ಅಶೋಕನ ಮನಪರಿವರ್ತನೆ ಮಾಡಿ, ಮುಂದೆಂದೂ ಯುದ್ಧಮಾಡುವುದಿಲ್ಲವೆಂದು ಆತ ಶಪಥ ಮಾಡುತ್ತಾನೆ. ಬೌದ್ಧ ಧರ್ಮಕ್ಕೆ ಬದಲಾಗಿ ಧರ್ಮಾಚರಣೆಯಲ್ಲಿ ತೊಡಗುತ್ತಾನೆ.
ಹಾಗೆ ಯುದ್ಧವನ್ನು ತ್ಯಜಿಸಿ ಕೂಡ ಅಶೋಕನು ಕಳಿಂಗ ಯುದ್ಧದ ನಂತ 30 ವರ್ಷಗಳಷ್ಟು ಕಾಲ ರಾಜ್ಯಭಾರಮಾಡಿದನು. ಆ ಮೂಲಕ ಹಿಂಸಾತ್ಮಕವಲ್ಲದ ಆಡಳಿತವೂ ಸಾಧ್ಯ ಎಂದು ಜಗತ್ತಿಗೆ ಶಾಂತಿಯ ಪಾಠವಾದನು.
ಸುದರ್ಶನ್ ಬಿ. ಪ್ರವೀಣ್, ಬೆಳಾಲು
how to take priligy 125 nM DIG 11 dUTP, 2
purchase cytotec A randomized controlled trial using single photon emission computed tomography