Mutton Biryani Recipe: ಮನೆಯಲ್ಲೇ ಮಾಡಿ ಅದ್ಭುತ ಮಟನ್ ಬಿರಿಯಾನಿ
Amazing mutton biryani recipe at home
ವಾರದ ಕೊನೆ ಬಂತೆಂದರೆ ಅಥವಾ ಪ್ರೀತಿಯ ನೆಂಟರು ಮನೆಗೆ ಬಂದರೆಂದರೆ ಸಾಕು, ನಾನ್ ವೆಜ್ ಪ್ರಿಯರಿಗೆ ಬಾಯಲ್ಲಿ ಒಂಥರಾ ಆಗಲು ಶುರುವಾಗುತ್ತದೆ. ಆಗ ನೆನಪಾಗುವುದೇ ಮಟನ್ ಬಿರಿಯಾನಿ !
ಮಟನ್ ಪ್ರಿಯರಿಗೆ, ನಾನ್ ವೆಜಿಟೇರಿಯನ್ನರಿಗೆ ಮತ್ತು ಬಿರಿಯಾನಿ ಇಷ್ಟಪಡುವವರಿಗೆ ಹೇಳಿ ಮಾಡಿಸಿದ ಅಡುಗೆ ಮಟನ್ ಬಿರಿಯಾನಿ.
ಹಿತವಾದ ಉರಿಯಲ್ಲಿ ಬೆಂದ,ಮನೆಯಿಡೀ ಘಮಘಮಿಸುವ ಬಿರಿಯಾನಿ ಪಕ್ಕದ ಮನೆಯವರ Envy. ಅವತ್ತು ನಮ್ಮ ಮನೆಯಲ್ಲಿ NV (Non Veg) ! ಹದವಾಗಿ ಬೆಂದ, ಸಕಲ ಮಸಾಲ ಮಿಶ್ರಣಗಳು ಬೆರೆತ, ಹಬೆಯಾಡುವ ತಿಳಿ ಹಳದಿ ಬಣ್ಣದ ಬಿರಿಯಾನಿ ಅನ್ನ, ಒಂದಷ್ಟು ಮೊಯಿಸ್ಟ್ ಆಗಿ, ಮೊದಲು ಕೈಗೆ ಬಂದು, ನಂತರ ಕೈಯಿಂದ ಬಾಯಿಗೆ ಬೀಳುತ್ತದೆ. ಒಂದಿಷ್ಟು ಹೆಚ್ಚೇ ಬೆಂದಂತೆನಿಸುವ ಕುರಿ ಮಾಂಸದ ಮೃದುತ್ವ ನಿಮ್ಮ ನಾಲಗೆಯಲ್ಲಿ ಹಾಗೆ ಕರಗುತ್ತ ಹೋಗುವ ಪರಿಯೇ ಅದ್ಭುತ.
ಅಂತಹ ಅದ್ಭುತ ಮಟನ್ ಬಿರಿಯಾನಿಯನ್ನು ನಿಮಗೆ ನಾನಿವತ್ತು ಹೇಳಿಕೊಡಲಿದ್ದೇನೆ. ಅದರ ಎಲ್ಲ ಸೂಕ್ಷ್ಮಗಳನ್ನೂ ಓದಿ ಮನದಟ್ಟು ಮಾಡಿಕೊಳ್ಳಿ.
ಒಟ್ಟು ಮೂರು ತರದ ತಯಾರಿ ಅಗತ್ಯ.
1) ಮ್ಯಾರಿನೇಷನ್
2) ಮಟನ್ ಬೇಯಿಸುವಿಕೆ
3) ಬಿರಿಯಾನಿ ಮಸಾಲ ತಯಾರಿ
1) ಮ್ಯಾರಿನೇಷನ್ :
ಮೊಸರು : 1 ಟೀ ಸ್ಪೂನ್
ಶುಂಠಿ ಬೆಳ್ಳುಳ್ಳಿ ಪೇಸ್ಟು : 1 ಟೀ ಸ್ಪೂನ್
ಕೆಂಪು ಮೆಣಸಿನ ಹುಡಿ : 1 ಟೀ ಸ್ಪೂನ್
ಲಿಂಬೆ ರಸ : 1 ಟೀ ಸ್ಪೂನ್
ಅರಿಶಿನ : ಅರ್ಧ ಟೀ ಸ್ಪೂನ್
ಉಪ್ಪು : 1 ಟೀ ಸ್ಪೂನ್
ಎಳೆಯ ಕುರಿಯ ಮಾಂಸವನ್ನು(ಆಡು ಕೂಡ ಆಗುತ್ತದೆ) ಅನ್ನು ಚೆನ್ನಾಗಿ ತೊಳೆದು ಅದಕ್ಕೆ ಮ್ಯಾರಿನೇಷನ್ ಗೆ ಹೇಳಿದ ಎಲ್ಲ ಪದಾರ್ಥಗಳನ್ನು ಚೆನ್ನಾಗಿ ಮಿಕ್ಸ್ ಕನಿಷ್ಠ 1 ಗಂಟೆ ಇಡಿ. ಈ ಒಂದು ಗಂಟೆಯಲ್ಲಿ ನೀವು ಉಳಿದ ಮಸಾಲಾ ಎಲ್ಲ ರೆಡಿ ಮಾಡಿಟ್ಟುಕೊಳ್ಳಬಹುದು.
2) ಮಟನ್ ಬೇಯಿಸುವಿಕೆ
ಎಣ್ಣೆ : 1 ಟೀ ಸ್ಪೂನ್
ಈರುಳ್ಳಿ : 1 ದೊಡ್ಡದು
ಟೊಮ್ಯಾಟೋ :1 ದೊಡ್ಡದು
ಶುಂಠಿ ಬೆಳ್ಳುಳ್ಳಿ ಪೇಸ್ಟು : 1 ಟೀ ಸ್ಪೂನ್
ಚಕ್ಕೆ-2 ತುಂಡು, ಚಕ್ಕೆ ಎಲೆ-2, ಏಲಕ್ಕಿ-2 ,ಸ್ಟಾರ್ ಅನಿಸ್ -2, ಮರಾಠಿ ಮೊಗ್ಗು-1 ಮತ್ತು ಲವಂಗ- 6 ರಿಂದ 8
ಉಪ್ಪು : 1 ಟೀ ಸ್ಪೂನ್
ವಿಧಾನ:
ದಪ್ಪ ತಳದ ಪಾತ್ರೆಯನ್ನು ( ಕುಕ್ಕರ್ ಕೂಡಾ ಆಗುತ್ತದೆ) ತೆಗೆದುಕೊಂಡು ಅದನ್ನು ಮೀಡಿಯಂ ಉರಿಯಲ್ಲಿ ಇತು ಎಣ್ಣೆ ಹಾಕಿ.ಎಣ್ಣೆ ಬಿಸಿಯಾಗುತ್ತಲಿದ್ದಂತೆ ಅದಕ್ಕೆ ಚಕ್ಕೆ, ಲವಂಗ, ಚಕ್ಕೆ ಎಲೆ, ಏಲಕ್ಕಿ,ಸ್ಟಾರ್ ಅನಿಸ್,ಮರಾಠಿ ಮೊಗ್ಗು ಹಾಕಿ ಸ್ವಲ್ಪ ಬಾಡಿಸಿ-1 ರಿಂದ 2 ಮಿನಿಟ್ಸ್ ಬಿಡಿ. ಸೀದು ಹೋಗದಂತೆ ಜಾಗ್ರತೆ ವಹಿಸಿ. ಇದಕ್ಕೆ ಶುಂಠಿ ಬೆಳ್ಳುಳ್ಳಿ ಪೇಸ್ಟು ಹಾಕಿ, ಒಂದು ನಿಮಿಷ ಬಿಡಿ. ಆಗಾಗ ಕಲಕುತ್ತಾ ಇರಿ. ತಳಹಿಡಿಯದಂತೆ ಎಚ್ಚರವಹಿಸಿ. ಒಂದು ಘಮ ಹೊರಬರುವಾಗ ಅದಕ್ಕೆ ಚಿಕ್ಕದಾಗಿ ಹೆಚ್ಚಿದ ಟೊಮೇಟೊ ಹಾಕಿ 2 ನಿಮಿಷ ಟೊಮೇಟೊ ಬೇಯಲು ಬಿಡಿ. ಹಾಕಿ. ನಂತರ ಮ್ಯಾರಿನೇಟ್ ಮಾಡಿದ ಮಟನ್ ಹಾಕಿ, ಒಂದೂವರೆ ಗ್ಲಾಸ್ ನೀರು ಹಾಕಿ. 6 ವಿಷಲ್ ಹಾಕಿಸಿ. ಮಟನ್ ಬೆಳೆತಿದ್ದರೆ, 8 ವಿಶಲ್ ಬೇಕಾಗುತ್ತದೆ.
ಕುಕ್ಕರ್ ನ ಆವಿ ಇಳಿದ ಮೇಲೆ ಮಟನ್ ಅನ್ನು ಅದರ ನೀರಿನಿಂದ ಪ್ರತ್ಯೇಕಿಸಿ. ಉಳಿದ ನೀರು ಮುಂದೆ ಬಿರಿಯಾನಿ ಅನ್ನ ಬೇಯಿಸುವಾಗ ಬಳಸಬೇಕು (ಉಳಿದ ನೀರನ್ನು ಸೂಪ್ ತರ ಕೂಡಾ ಬಳಸಬಹುದು. ಅದು ತುಂಬಾ ರುಚಿಕರವಾಗಿರುತ್ತದೆ.)
ನೆನಪಿಡಿ: ಕುಕ್ಕರ್ ಆಫ್ ಮಾಡುವಾಗ 3 ಗ್ಲಾಸ್ ಅಕ್ಕಿಯನ್ನು ನೆನೆಯಲು ಹಾಕಿ
3) ಬಿರಿಯಾನಿ ಮಸಾಲ ತಯಾರಿ
ಈರುಳ್ಳಿ : 1 ದೊಡ್ಡದು
ಟೊಮ್ಯಾಟೋ :1 ದೊಡ್ಡದು
ಶುಂಠಿ ಬೆಳ್ಳುಳ್ಳಿ ಪೇಸ್ಟು : 1 ಟೀ ಸ್ಪೂನ್
ಚಕ್ಕೆ-2 ತುಂಡು, ಚಕ್ಕೆ ಎಲೆ-2, ಏಲಕ್ಕಿ-2 ,ಸ್ಟಾರ್ ಅನಿಸ್ -2, ಮರಾಠಿ ಮೊಗ್ಗು-1 ಮತ್ತು ಲವಂಗ- 6 ರಿಂದ 8
ಕೆಂಪು ಮೆಣಸಿನ ಹುಡಿ : 1 ಟೀ ಸ್ಪೂನ್
ಗರಂ ಮಸಾಲಾ ಹುಡಿ : 1.5 ಟೀ ಸ್ಪೂನ್
ಹಸಿ ಮೆಣಸು : ಉದ್ದಕ್ಕೆ ಕತ್ತರಿಸಿದ್ದು
ಲಿಂಬೆ ರಸ : 1 ಟೀ ಸ್ಪೂನ್
ತುಪ್ಪ : 3 ರಿಂದ 4, ಬೇಕಿದ್ದರೆ ೨ ಸ್ಪೂನ್ ಎಣ್ಣೆ
ಅರಿಶಿನ : ಅರ್ಧ ಟೀ ಸ್ಪೂನ್ (ನಿಮ್ಮ ಆಯ್ಕೆ)
ಉಪ್ಪು : 1 ಟೀ ಸ್ಪೂನ್
ಕೊತ್ತಂಬರಿ ಸೊಪ್ಪು : ಒಂದು ಕಪ್ಪು
ಪುದಿನ ಸೊಪ್ಪು : ಕಾಲು ಕಪ್ಪು
ವಿಧಾನ:
ದಪ್ಪ ತಳದ ದೊಡ್ಡ ಸೈಜಿನ ಕುಕ್ಕರಿಗೆ ತುಪ್ಪ ಹಾಕಿ ಮಂದ ಉರಿಯಲ್ಲಿ ಬಿಸಿ ಮಾಡಿ. ನಂತರ ಚಕ್ಕೆ, ಲವಂಗ, ಏಲಕ್ಕಿ, ಸ್ಟಾರ್ ಮೊಗ್ಗು ಮತ್ತಿತರ ಸೀಸನ್ನಿಂಗ್ ಸಂಬಾರ ಪದಾರ್ಥಗಳನ್ನು ಸಣ್ಣಗೆ ಕೆಂಪಾಗುವವರೆಗೆ ಆಗಾಗ ಕಾದಾಡುತ್ತ ಹುರಿಯಿರಿ.ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ ಹಾಕಿ ಕೆಂಪಾಗುವವರೆಗೆ ಹುರಿಯಿರಿ. ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಮತ್ತು ಹಸಿ ಮೆಣಸು ಉದ್ದಕ್ಕೆ ಕತ್ತರಿಸದ್ದು ಸೇರಿಸಿ ಘಮ ಹೊರಸೂಸುವವರೆಗೆ ಹುರಿಯಿರಿ.( ಸುಮಾರು ೧ ನಿಮಿಷ) ನಂತರ ಟೊಮಾಟೊ,ಪುದಿನಾ ಸೊಪ್ಪು ಮತ್ತು ಹೆಚ್ಚಿದ ಕೊತ್ತಂಬರಿ ಸೊಪ್ಪು ಹಾಕಿ, ಚೆನ್ನಾಗಿ ಮಸಾಲಾ ಥರ ಆಗುವವರೆಗೆ ಸಣ್ಣ ಉರಿಯಲ್ಲಿ ಬೇಯಿಸಿ. ಯಾವಾಗ ಟೊಮೇಟೊ ಬೆಂದು ಒಳ್ಳೆಯ ಗಸಿ ತಯಾರಾದಾಗ ಅದಕ್ಕೆ, ಈಗಾಗಲೇ ಬೇಯಿಸಿಟ್ಟ ಮಟನ್ ಹಾಕಿ ಚೆನ್ನಾಗಿ ಮಗುಚಿ. ಎಲ್ಲ ಮಸಾಲಾ ಮತ್ತು ಮಟನ್ ಒಂದೇ ಮಿಶ್ರಣವಾಗಲಿ. ಈಗ ಇದಕ್ಕೆ ಮೆಣಸಿನ ಪುಡಿ ಮತ್ತು ಗರಂ ಮಸಾಲೆಪುಡಿ ಸೇರಿಸಿ ೫ ನಿಮಿಷ ಬೇಯಿಸಿ. ತಳಹಿಡಿಯದಂತೆ ಎಚ್ಚರವಿರಲಿ. ಮಸಾಲ-ಮಟನ್ ಆದಷ್ಟು ದಪ್ಪ ಮಿಶ್ರಣವಾಗಿರಬೇಕು.
ನಂತರ ನೆನೆಸಿಟ್ಟ ಅಕ್ಕಿ ಬಸಿದು ಮಟನ್ ಮಿಶ್ರಣಕ್ಕೆ ಹಾಕಿ. ಒಟ್ಟು ಮೂರು ಪ್ಲಾಸ್ಕ್ ಅಕ್ಕಿಗೆ 6 ಗ್ಲಾಸ್ ನೀರು ಬೇಕಾಗುತ್ತದೆ. ನೀವು ಅಕ್ಕಿ ಹಾಕುವ ಮೊದಲು, ಇರುವ ಮಿಶ್ರಣ ದಪ್ಪಗೆ ಇದ್ದರೆ ಒಟ್ಟು 5.5 ಗ್ಲಾಸ್ ನೀರು ಸಾಕಾಗುತ್ತದೆ. ಅದೇ ಮಿಶ್ರಣ ಸಾಧಾರಣ ಇದ್ದಾರೆ 5 ಕಪ್ ನೀರು ಸಾಕು. ನೆನಪಿಡಿ, ಮಟನ್ ಬಸಿದಾಗ ಉಳಿದ ನೀರು ಸೇರಿ ಒಟ್ಟು 5.5 ಕಪ್ ನೀರು ಸಾಕು. ನೀರು ಹಾಕಿದ ನಂತರ ಮಿಕ್ಸ್ ಮಾಡಿ ಒಟ್ಟು ಮಿಶ್ರಣದ ಉಪ್ಪು ನೋಡಿ. ಸಾಧಾರಣಕ್ಕಿಂತ ಸ್ವಲ್ಪ ಹೆಚ್ಚು ಉಪ್ಪು ಉಪ್ಪಾಗಿರಬೇಕು ನೀರಿನ ರುಚಿ. ಇಲ್ಲದೆ ಹೋದರೆ ಅನ್ನ ಬೆಂದಾಗ ಉಪ್ಪು ಅನ್ನಕ್ಕೆ ಎಳೆದುಕೊಂಡು ಅನ್ನ ಸಪ್ಪೆ ಆಗುತ್ತದೆ. ಕುಕ್ಕರ್ ಮುಚ್ಚಳ ಮುಚ್ಚುವ ಮೊದಲು ಒಮ್ಮೆ ಚೆನ್ನಾಗಿ ಕದಡಿ, ಆಮೇಲೆ ಮೇಲ್ಗಡೆಗೆ ಒಂದು ಚಮಚ ತುಪ್ಪ, ಸ್ವಲ್ಪ ಕೊತ್ತಂಬರಿ ಮತ್ತು ಪುದಿನಾ ಸೊಪ್ಪು ಉದುರಿಸಿ ವಿಷಲ್ ಮೊಳಗಲು ಬಿಡಿ. ಗಮನಿಸಿ, ಒಂದೇ ಒಂದು ವಿಷಲ್ ಗೆ ಕುಕ್ಕರ್ ಆಫ್ ಮಾಡಿ. (ದೊಡ್ಡ ಕುಕ್ಕರ್ ಆದರಿಂದ ಒಂದು ವಿಷಲ್ ಸಾಕು) ಅದರ ಪಾಡಿಗೆ ಕುಕ್ಕರ್ ತಣಿಯಲು ಬಿಡಿ.
ಇನ್ನು 15 ನಿಮಿಷಗಳಲ್ಲಿ ಘಮಭರಿತ ಮಟನ್ ರೆಡಿ ಆಗಿರುತ್ತದೆ. ಪೂರ್ತಿ ಆವಿ ಇಳಿದ ಮೇಲೆ ಕುಕ್ಕರ್ ಮುಚ್ಚಳ ತೆಗೆದು, ಮರದ ಸಪಾಟಾಗಿರುವ ಚಮಚದಿಂದ ಒಂದು ಅರ್ಧವೇ ಅರ್ಧ ಮಿಕ್ಸ್ ಕೊಡಿ. ನಂತರ ಅರ್ಧ ಚಮಚ ಬಿರಿಯಾನಿ ಅನ್ನ ಮತ್ತು ಒಂದೆರಡು ತುಂಡು ಮಟನ್ ತುಂಡನ್ನು ಬಾಳೆ ಎಳೆಯ ಎಲೆಯಲ್ಲಿ ಬಡಿಸಿ ಅದನ್ನು’ಹಿರಿಯ’ರಿಗೆ ಅರ್ಪಿಸಿ ಇಡಿ.
ನಂತರ ಮನೆಮಂದಿಯೆಲ್ಲ ರೌಂಡಾಗಿ ಕೂತು ಬೇಯಿಸಿದ ಮೊಟ್ಟೆ ಮತ್ತು ರಾಯಿತ ಜತೆ ಮನಸೋ ಇಚ್ಛೆ ಆಸ್ವಾದಿಸಿ. ವಾರವಿಡೀ ದುಡಿದು ದಣಿದ ನಿಮ್ಮ ದೇಹ ಚೆನ್ನಾಗಿ ಸುಖಪಡಲಿ. Let it enjoy!!