ಇಂಟೆರೆಸ್ಟಿಂಗ್ ಇತಿಹಾಸ
ಇತಿಹಾಸ ಯಾವತ್ತಿಗೂ ಕೌತುಕ. ಇತಿಹಾಸವೆಂದರೆ ಬಾರ್ಬೇರಿಯನ್,ಅಂದರೆ ಅನಾಗರಿಕ ಸಮಾಜದ ವರ್ತಮಾನದ ನಡಿಗೆ. ಕ್ಯಾರವಾನ್ ದಾರಿಯುದ್ದಕ್ಕೂ ಬಿಟ್ಟುಹೋದ ಬೀಡಿನ ಕುರುಹು. ಇಲ್ಲಿನ ಪ್ರತಿ ಮೈಲಿಗಲ್ಲಿಗೂ ಒಂದೊಂದು ಕಥೆಯಿದೆ. ರಾಜರುಗಳ ಪರಾಕ್ರಮಶಾಲಿ ಘಟನೆಗಳಿವೆ. ರಕ್ತ ಹೆಪ್ಪುಗಟ್ಟಿಸುವ ಕ್ರೌರ್ಯವಿದೆ. ಮೈ ನಡುಗಿಸುವ ಭೀಭತ್ಸಕತೆಯಿದೆ. ಮಹತ್ವಾಕಾಂಕ್ಷಿ ಮನುಷ್ಯನ ರಕ್ತದಾಹ ಆತನನ್ನು ಖಂಡಖಂಡಾಂತರ ಕ್ರಮಿಸುವಂತೆ ಮಾಡಿದೆ. ಸುಖದ ಸುಪ್ಪತಿಗೆಯಲ್ಲಿರಬೇಕಾದ ರಾಜರುಗಳು ಕಾಡುಮೇಡು ಅಲೆದಿದ್ದಾರೆ. ರಕ್ತ ರುಂಡಗಳನ್ನ ಚೆಂಡಾಡಿದ್ದಾರೆ. ಇಂತಹ ಭಯಾನಕತೆಯ ನಡುವೆಯೇ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಕಾರ್ಯ ಕಾಲದಿಂದ ಕಾಲಕ್ಕೆ ನಡೆದುಬಂದಿದೆ. ಹಿಂಸೆಗೆ ಅಹಿಂಸೆಯ ಪಾಠ ಮಾಡಿದವರಿದ್ದಾರೆ. ಸಕಲ ರಾಜಯೋಗವನ್ನು ತ್ಯಜಿಸಿ ಸನ್ಯಾಸಿಯಾಗಿ ನಡೆದವರಿದ್ದಾರೆ. ಏನೂ ಇಲ್ಲದ ಕುಟುಂಬದಲ್ಲಿ ಜನಿಸಿ ದೇಶದೇಶಗಳನ್ನೇ ಗೆದ್ದು ಕೊಂಡವರಿದ್ದಾರೆ. ದೈನಂದಿನ ಕಾರ್ಯಗಳನ್ನು ವರ್ಣಿಸುತ್ತಲೇ ಜಾನಪದ ಸಾಹಿತ್ಯ ಸೃಷ್ಟಿಯಾಗಿ ಹೋಗಿದೆ. ಮನುಷ್ಯನ ಭಾವನೆಗಳನ್ನು ಅಭಿವ್ಯಕ್ತಿಸುತ್ತಾ ಮಹಾನ್ ಸಾಹಿತ್ಯ ಕೊಡಮಾಡಿದ್ದಾರೆ. ಆಕ್ರಮಣಕಾರಿ ರಾಜರ ಜೊತೆಜೊತೆಗೆ ದೇಶಕಾಲಗಳ ಇತಿಹಾಸ, ಸಾಹಿತ್ಯ, ಸಂಗೀತ, ನೃತ್ಯ ಬೆಳೆದುನಿಂತಿದೆ.
ಇತಿಹಾಸದ ಪುಟಗಳಲ್ಲಿ ನಾವು ಎಂತೆಂತಹ ಕ್ರೂರಿ ಸಮಾಜವನ್ನು ಕಂಡಿದ್ದೇವೆ. ಚೆಂಗೀಸ್ ಖಾನ್ ನ ಕೌರ್ಯದ ಪರಾಕಾಷ್ಠೆಯನ್ನು ಕಂಡು ಕಣ್ಣೀರಿಟ್ಟಿದ್ದೇವೆ. ಹಿಟ್ಲರನ ಕಾನ್ಸಂಟ್ರೇಷನ್ ಕ್ಯಾಂಪ್ ನ ಭೀಕರತೆಯಿಂದ ಮೈ ನಡುಗಿದ್ದೇವೆ. ನರಮಾಂಸ ಭಕ್ಷಕ ಇದಿ ಅಮೀನ್ ನ ಅಹಿಂಸೆಯ ನಿಕೃಷ್ಟ ಮಟ್ಟವನ್ನೂ ಕಂಡಿದ್ದೇವೆ. ಜೀವಂತ ಮನುಷ್ಯರನ್ನು ಕಟ್ಟಡದೋಪಾದಿಯಲ್ಲಿ ನಿಲ್ಲಿಸಿ ಸಮಾಧಿ ಮಾಡುವ ತೈಮೂರನ ಕೌರ್ಯದ ಪರಮಾವಧಿಯನ್ನು ನೆನೆದು ನಾವು ನಿಟ್ಟುಸಿರಿಟ್ಟಿದ್ದೇವೆ. ಹೀಗೆ ಹಗಲು-ರಾತ್ರಿ ಏಕ ಮಾಡಿ ಓಡಿದ ಚೆಂಗೀಸ್ ಖಾನನ ಕುದುರೆಯ ಖುರಪುಟದ ಸದ್ದು ನಿಮ್ಮ ಕಿವಿಯಲ್ಲಿ ಮತ್ತೆ ಮೊರೆಯಲಿದೆ. ತೈಮೂರನ ಹಿಂಸೆಯ ಆಕ್ರಂದನದ ಸದ್ದು ನಿಮ್ಮ ಆದ್ರ ಮನಸ್ಸನ್ನು ಕಲಕಲಿದೆ. ಹಿಂಸೆ ಕ್ರೌರ್ಯ,ಭೀಭತ್ಸಕತೆಗಳ ಬಗ್ಗೆ ಓದುತ್ತ ಓದುತ್ತಲೇ ನೀವು ಮತ್ತಷ್ಟು ಮಾನವೀಯತೆಯತ್ತ ಚಿತ್ತ ಹೊರಳಿಸಲಿದ್ದೀರಿ.ಇವತ್ತು ಇತಿಹಾಸವನ್ನೊಮ್ಮೆಇಣುಕಿ ನೋಡುವುದೆಂದರೆ ಒಟ್ಟಾರೆ ಎಲ್ಲಾ ಸಮ್ಮಿಶ್ರಣಗಳನ್ನು ಒಗ್ಗೂಡಿಸಿ ಒಟ್ಟಾರೆ ಮತ್ತೆ ಬದುಕಿ ಬಂದಂತೆ. ಅದು ನಮ್ಮಇತಿಹಾಸ. ಇದು ಒಂದಲ್ಲ ಒಂದು ರೀತಿಯಲ್ಲಿ ಮತ್ತೆ ಮರುಕಳಿಸುತ್ತಲೇ ಇರುತ್ತದೆ : ದುಂಡಗಿನ ಭೂಮಿ ಒಂದು ಸುತ್ತು ತಿರುಗಿ ವಾಪಸ್ಸು ಅದೇ ಪೋಷಿಷನ್ ಗೆ ಬಂದಂತೆ!
ಬಿಸಿ ಬಿಸಿ ಲೇಖನ ಮಾಲಿಕೆ ಓದಲು ನೀವಿನ್ನು ಕಾಯಬೇಕಾಗಿರುವು ಜಸ್ಟ್ 10 ದಿನಗಳಷ್ಟೇ!
ಹ್ಯಾಪಿ ವೈಟಿಂಗ್!
ಸುದರ್ಶನ್ ಬಿ ಪ್ರವೀಣ್, ಬೆಳಾಲು