ಬಿಜೆಪಿ | ಸಾಧನೆ to ಅಹಂಕಾರ to ಸರ್ವನಾಶ

0 15

ಇವತ್ತು ಕರ್ನಾಟಕ ಬಿಜೆಪಿ ಯಲ್ಲಿನ ಘಟನಾವಳಿಗಳನ್ನು ಜನರು ತುಂಬಾ ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಇದು ಯಾವೊಂದು ಕೋನದಿಂದಲೂ ಒಳ್ಳೆಯ ಬೆಳವಣಿಗೆಯಂತೂ ಅಲ್ಲವೇ ಅಲ್ಲ.

ಪ್ರಧಾನಿ ನರೇಂದ್ರ ಮೋದಿ ಮತ್ತು ಒಟ್ಟಾರೆ ಬಿಜೆಪಿ ಕಳೆದ ಸಲ ತಮ್ಮ ಇದು ವರ್ಷಗಳ ಆಡಳಿತಾವಧಿಯಲ್ಲಿ ತೆಗೆದುಕೊಂಡ ಕ್ರಾಂತಿಕಾರಕ ಮತ್ತು ಪರಿಶುದ್ಧ ಆಡಳಿತದಿಂದಾಗಿ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಹಿಂದೆಂದೂ ಕಂಡಿರದ ರೀತಿಯಲ್ಲಿ ಪ್ರಭಾವಿಗಳಾಗಿ ಬೆಳೆದು ಬಿಟ್ಟಿದ್ದಾರೆ. ನರೇಂದ್ರ ಮೋದಿ ಮಾಡಿದ demonetization (ನೋಟು ಬ್ಯಾನ್), ಕಲ್ಲಿದ್ದಲು ಮತ್ತು 3 ಜಿ ಸ್ಪೆಕ್ಟ್ರಮ್ ಮರು ಏಲಂ, ಜನಧನ್, GST- ಮುಂತಾದುವುಗಳ ಪರಿಣಾಮಗಳೇನೇ ಇರಲಿ. ಜನ ಯಾವುದನ್ನು ಕೂಡ ಲೆಕ್ಕಿಸಿಲ್ಲ.

ಮೇಲಿನ ಕೆಲ ಯೋಜನೆಗಳು ವ್ಯಾಪಕ ಯಶ ಗಳಿಸಿದರೆ ಮತ್ತೆ ಕೆಲವು ಯೋಜನೆಗಳು ಹೇಳಿಕೊಳ್ಳುವ ಸಾಧನೆ ಮಾಡಿಕೊಳ್ಳುವಲ್ಲಿ ಸೋತು ಹೋದವು.ಅಥವಾ, ಅವುಗಳೆಲ್ಲ ದೂರಗಾಮೀ ಪರಿಣಾಮ ಬೀರುವ೦ತಹುದಿರಬಹುದು. ಆದರೆ ಕಳೆದ ಬಾರಿಯ ಬಿಜೆಪಿ ಸರ್ಕಾರ ಜನರಲ್ಲಿ ಭರಪೂರ ಭರವಸೆಯನ್ನು ಹುಟ್ಟಿಸಿದ್ದಂತೂ ಸತ್ಯ. ಯಾಕೆಂದರೆ ’70’ ವರ್ಷದ ನಂತರ ಬೇರೆಯದೇ ‘ಥರ’ದ ಸರ್ಕಾರವನ್ನು ಜನ ನೋಡುತ್ತಿದ್ದಾರೆ. ಯಾರೇನೇ ಹೇಳಿದರೂ ನರೇಂದ್ರ ಮೋದಿಯ ಸ್ಪಟಿಕ ಶುದ್ಧ ಇಮೇಜು, ಅವರ ತೂಕದ ಮಾತು, ಚಂಚಲಗೊಳ್ಳದ ಗಾಂಭೀರ್ಯ ಕೆಲಸ ಮಾಡಿದೆ. ಮಾಡುತ್ತಿದೆ.

ಬಿಜೆಪಿಯ ಸಾಂಪ್ರದಾಯಿಕ ಶತ್ರುವೆಂದು ಬಣ್ಣಿತವಾಗಿರುವ ಮುಸ್ಲಿಂ ವರ್ಗ ಕೂಡ ಮೋದಿಯನ್ನು ನಂಬುವಂತಾಗಿದೆ. ಮುಸ್ಲಿಮ್ ಮಹಿಳೆಯರಿಗಾಗಿ ಮೋದಿ ತಂಡ ತ್ರಿವಳಿ ತಲಾಕ್ ನಿಷೇಧ ಮಹಿಳೆಯರಲ್ಲಿ ಅವರ ಮೇಲಿನ ಗೌರವ ಜಾಸ್ತಿಯಾಗುವಂತೆ ಮಾಡಿದೆ. ವಿರೋಧಿಗಳು ಎಷ್ಟೇ ಕಟುವಾಗಿ ಟೀಕೆ ಮಾಡಿದರೂ ಜನ ಅದನ್ನು ನಂಬಕ್ಕೆ ರೆಡಿ ಇಲ್ಲ. ನರೇಂದ್ರ ಮೋದಿಯವರು ತಮ್ಮ ಛರಿಸ್ಮಾವನ್ನು ಹಾಗೆಯೆ ಕಾಪಾಡಿಕೊಂಡು ಬಂದಿದ್ದಾರೆ. ಅದೇ ಕಾರಣಕ್ಕೆ ಜನರು ಅವರನ್ನು ಮತ್ತೊಂದು ಅವಧಿಗೆ ಆಯ್ಕೆ ಮಾಡಿ ಕಳಿಸಿದ್ದು, ಪ್ರಧಾನಿಯನ್ನಾಗಿ ಮಾಡಿದ್ದು. ನಮ್ಮ ಕರ್ನಾಟಕದಲ್ಲಿ ಕೂಡ ಮೋದಿ ಬ್ರಾಂಡಿನ ಅಂಬ್ರೆಲ್ಲಾ ಹಿಡಿದುಕೊಂಡೇ ರಕ್ಷಣೆ ಪಡೆದುಕೊಂಡು ಸೇಫಾಗಿ 25 ಎಂಪಿ ಸೀಟುಗಳನ್ನು ಗೆಲ್ಲಿಸಿಕೊಂಡು ಬಂದದ್ದು !

ಬಿಜೆಪಿಯ ಸೆಂಟ್ರಲ್ ನಾಯಕತ್ವಕ್ಕೆಇಷ್ಟು ಸಾಕಿತ್ತು. ಇವತ್ತಿಗೂ ಏಕಪಕ್ಷೀಯವಾಗಿ ಬಿಜೆಪಿ ಗೆಲ್ಲುತ್ತಾ, ಬೀಗುತ್ತ ದಿಗ್ವಿಜಯ ಸಾಧಿಸುತ್ತಿದೆ. ಈ ಸಾಧನೆ ಬಿಜೆಪಿಯಲ್ಲಿ ಅಹಂಕಾರವನ್ನು ತಂದು ಕೂರಿಸಿತಾ ಎಂಬುವುದು ಇವತ್ತಿನ ಪ್ರಶ್ನೆ. ಇದೆಲ್ಲ ಯಾಕೆ ಮುನ್ನೆಲೆಗೆ ಬಂತೆಂದರೆ, ಇವತ್ತು ಬಿಜೆಪಿಯ ಸೆಂಟ್ರಲ್ ನಾಯಕತ್ವ ನಡೆದುಕೊಳ್ಳುತ್ತಿರುವ ರೀತಿ. ಕರ್ನಾಟಕವನ್ನು ನೆಗ್ಲೆಕ್ಟ್ ಮಾಡಿದ ಪರಿ.

ಹೇಳಿ ಕೇಳಿ ಕರ್ನಾಟಕ ಬಿಜೆಪಿಯ ದಕ್ಷಿಣ ಭಾರತದ ಬೃಹತ್ ಹೆಬ್ಬಾಗಿಲು. ಅಂತಹ ಕರುನಾಡು ಭೀಕರ ಪ್ರವಾಹದಿಂದ ಬಸವಳಿದು ಹೋದಾಗ, ಸಹಾಯ ಪಡೆಯಲು, ಪರಿಹಾರ ಕೇಳಲು ಕೇಂದ್ರದ ಬಳಿ ಹೋದರೆ ಕರ್ನಾಟಕದ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಭೇಟಿ ಕೂಡ ಮಾಡದೆ ವಾಪಸ್ಸು ಕಳಿಸಿದರು. ಕರ್ನಾಟಕದಲ್ಲಿ ಬಿಜೆಪಿಯ ಮೇಲಿನ ಯಡಿಯೂರಪ್ಪನವರ ಏಕ ಚಕ್ರಾಧಿಪತ್ಯದ ಹಿಡಿತ ತಪ್ಪಿಸಲು ಅವರನ್ನು ಉಪೇಕ್ಷಿಸುತ್ತಿದೆ ಬಿಜೆಪಿ ಎಂದು ಜನರು ಮಾತಾಡಿಕೊಳ್ಳುತ್ತಿದ್ದಾರೆ. ಯಡಿಯೂರಪ್ಪನವರ ಮೇಲಿನ ಕೋಪ ಬೇರೆ, ಬರ ನಿರ್ವಹಣೆ -ಎರಡೂ ಬೇರೆ ಬೇರೆಯಲ್ಲವೇ? ಸರಿಯಾಗಿ ಬರ ಪರಿಹಾರ ಕೊಡಿಸುವಲ್ಲಿ, ನಿರ್ವಹಿಸುವಲ್ಲಿ ಯೆಡ್ಡಿ ಮೇಲೆ ಜನರಿಗೆ ಜಿಗುಪ್ಸೆ ಬರುವ೦ತೇ ಮಾಡಲು ಕೇಂದ್ರ ನಿರ್ಧರಿಸಿತಾ? ಗೊತ್ತಿಲ್ಲ.

ಇವತ್ತಿಗೆ ನೆರೆ ಬಂದು ಎಲ್ಲ ಖಾಲಿಮಾಡಿಕೊಂಡು ಹೋಗಿ 60-70 ದಿನಗಳೇ ಕಳೆದುಯೋದವು. ಪರಿಹಾರ ಬೇಡ; ಒಂದು ಮಾತು,ಒಂದು ಭರವಸೆ-ಅದು ಕೂಡ ಬೇಡ, ಒಂದು ಸಾಂತ್ವನದ ಮಾತು ಕೂಡ ಇಲ್ಲ.ರಾಜ್ಯದಿಂದ ಆಯ್ಕೆಯಾಗಿ ಹೋದ 25 ಸಂಸದರಲ್ಲಿ ಯಾರಿಗೂ ದೊರೆಗಳ ಎದುರು at least ಕೆಮ್ಮಲು ಕೂಡ ಧೈರ್ಯವಿಲ್ಲ. ಇಂತಹ ಸಂದರ್ಭಗಳಲ್ಲೇ ನಮಗೆ ದಿ.ಅನಂತ ಕುಮಾರ್ ರವರ ಅನುಪಸ್ಥಿತಿಯು ಎದ್ದು ಕಾಣುತ್ತಿರುವುದು!

ಯಾಕೆ ಹೀಗೆಲ್ಲ ನಡೆಯುತ್ತಿದೆ? ಯಾಕೆ ಕರ್ನಾಟಕವು ಇಷ್ಟು ನಿರ್ಲಕ್ಷಿತ, ಎಂದು ಅನಲೈಸ್ ಮಾಡುತ್ತಾ ಕೂತಾಗ ಉತ್ತರ ದೊರಕಿದ್ದು ಹ್ಯೂಮನ್ ಸೈಕೊಲಾಜಿಯಲ್ಲಿ!
ಮನುಷ್ಯ ಒಂದಷ್ಟು ಸಾಧನೆ ಮಾಡಿದ ಕೂಡಲೇ ಆತನಲ್ಲಿ ಕಾಂಫಿಡೆನ್ಸ್ ಬೆಳೆಯುತ್ತದೆ. ಇದು ಸಹಜ ಕೂಡ. ನಾಚುರಲೀ ಸಾಧನೆಯ ಜತೆಗೆ ಒಂದಷ್ಟು ಶ್ರೀಮಂತಿಕೆ, at least ಒಂದಷ್ಟು ಆರ್ಥಿಕ ಅನುಕೂಲತೆಗಳು ಬಂದೇ ಬರುತ್ತದೆ. ಆದರೆ ಒಂದು ವ್ಯಕ್ತಿ, ಒಂದು ಪಕ್ಷ, ತಾನು ಇತ್ತ ಪ್ರತಿ ಹೆಜ್ಜೆ,ಮಾಡಿದ ಪ್ರತಿ ಕೆಲಸ, ಹಾಕಿಕೊಂಡ ಪ್ರಾಜೆಕ್ಟ್, ನಿರಂತರ ಯಶ ಕಂಡು ತಾನು ಮುಟ್ಟಿದ್ದೆಲ್ಲವೂ ಚಿನ್ನವಾಗಿ ಬೆಳೆಯಲಾರಂಭಿಸಿದಾಗ, ಅದಾಗಲೇ ವ್ಯಕ್ತಿಯ ಮಸ್ತಿಕ್ಷದಲ್ಲಿ ಸಣ್ಣಗೆ ಮೊಳಕೆಯೊಡೆದಿದ್ದ ಕಾಂಫಿಡೆನ್ಸು ಎಂಬ ಅಹಂಕಾರದ ಬೀಜವು ಮೊಳೆತು ಹುಲುಸಾಗಿ ಬೆಳೆದು ಅಹಂಕಾರವಾಗಿ ಅಡರಿ ಕೂರುತ್ತದೆ. ಇವತ್ತು ಬಿಜೆಪಿಯ ಸೆಂಟ್ರಲ್ ನಾಯಕತ್ವದಲ್ಲಿ ಆದದ್ದೂ ಇದೇ!

ರಾಜ್ಯದಲ್ಲಿ, ರೈತರು, ವಿರೋಧ ಪಕ್ಷದವರು ಹಾಹಾಕಾರ ಹಾಕಿಕೊಂಡು ಕೂತರೂ ಕರ್ನಾಟಕದ ಪಾಲಿಗೆ ಮೌನವಾಗಿದೆ. ಮೋದಿಗೆ ಬಿಹಾರ್ ಗೆ ಪರಿಹಾರ ಘೋಷಿಸಲು ಸಾಧ್ಯವಾಗುತ್ತದೆ, ಕರ್ನಾಟಕ ಕ್ಕೆ ಯಾಕಿಲ್ಲ? ಬಿಎಸ್ ವೈ ರನ್ನು ಅತಂತ್ರವಾಗಿಸಲಿಕ್ಕಾ ಅಥವಾ ಬೇರೆ ಕಾರಣ ಇದೆಯಾ ?

ಕಾರಣ ಏನೇ ಇರಲಿ, ಜನ ಸಾಮಾನ್ಯರಿಗೆ ಒಂದು ಮೆಸೇಜು ಈಗಾಗಲೇ ತಲುಪಿ ಆಗಿದೆ. ಕೇಂದ್ರದ ವಿರುದ್ಧ ಕಟ್ಟರ್ ಬಿಜೆಪಿ ಯವರಲ್ಲೆನೇ ಅಸಹನೆ ಮೂಡಿದೆ. ಕೇಸರಿ ಪಾಳಯದ, ಮೋಡಿ ಬ್ರಿಗೇಡ್ ನ ಚಕ್ರವರ್ತಿ ಸೂಲಿಬೆಲೆಯವರು ಮೋದಿ ಮತ್ತು ಕೇಂದ್ರವನ್ನು ನೇರವಾಗಿಯೇ ತರಾಟೆಗೆ ತೆಗೆದುಕೊಂಡಿದ್ದಾರೆ. ಮೋದಿ ಯಾಕೆ ಸ್ಪಂದಿಸುತ್ತಿಲ್ಲ,ನಮ್ಮ ಸಂಸದರು ತಮ್ಮ ಕಾರ್ಯ ನಿರ್ವಹಿಸುವಲ್ಲಿ ಸೋತಿದ್ದಾರೆ ಎಂದು ಸೂಲಿಬೆಲೆ ಯವರು ಹೇಳಿದ ಕೂಡಲೇ, ನಿದ್ದೆಯಿಂದ ಎದ್ದು ಕೂತರು ನೋಡಿ ನಮ್ಮಗ್ರೇಟ್ ಡಿವಿಎಸ್ ಮತ್ತು ಪೇಪರ್ ಟೈಗರ್ ಪ್ರತಾಪಸಿಂಹ !

ಆಮೇಲಿನ ಟ್ವೀಟ್ ವಾರ್ ನ ಬಗ್ಗೆ ಕೇಳಿಯೇ ಇದ್ದೀರಿ. ಸರಿಯಾದ ವಿಷಯಕ್ಕೆ ದನಿ ಎತ್ತಿದ ಚಕ್ರವರ್ತಿಯವರನ್ನು ‘ದೇಶದ್ರೋಹಿ’ಎಂದು ಹೇಳಿದ ಡಿವಿಎಸ್ ಮತ್ತು ‘ ಮೋದಿ ಮಾತು ಎತ್ತದೆ ಹೋದರೆ ಇವರ ಭಾಷಣ ಕೇಳಲು ಯಾರು ಬರುತ್ತಾರೆ?’ ಎಂದು ಪ್ರತಾಪ ಸಿಂಹ ಹಂಗಿಸಿದರು. ಆ ಮೂಲಕ ಇಂಟರ್ನ್ಯಾಷನಲ್ ಲೆವೆಲ್ ನಲ್ಲಿ ತಮ್ಮನ್ನು ತಾವು ಗೇಲಿ ಮಾಡಿಕೊಂಡರು. ಜನರ ದೃಷ್ಟಿಯಲ್ಲಿ ಮತ್ತಷ್ಟು ಕುಬ್ಜರಾದರು !

ಇತ್ತ ಬಿಜೆಪಿ ಯಲ್ಲಿ ಬಸವನಗೌಡ ಪಾಟೀಲ್ ಯತ್ನಾಳ್ ಎಷ್ಟೋ ವಾಸಿ! ಅವರು ಲೂಸ್ ಟಾಕ್ ಮಾಡುತ್ತಾರೆ ಎನ್ನುವುದು ಸತ್ಯವಾದರೂ, ಒಂದಷ್ಟು ನೇರ ನಿಷ್ಠುರ ಮಾತಿನ ವ್ಯಕ್ತಿ. ಎಷ್ಟೋ ಸಲ ಇದ್ದುದನ್ನು ಇದ್ದ ಹಾಗೆ ಹೇಳಲು ಹೋಗಿ ತನಗೆ ತಾನೇ ಪ್ರಾಬ್ಲಮ್ ಮಾಡಿಕೊಂಡದ್ದಿದೆ. ಈ ಸಲವೂ ಹಾಗೆಯೆ ಆಗಿದೆ. ಬಿಜೆಪಿ ಪ್ರಭೃತಿಗಳು ಯತ್ನಾಳ್ ಗೆ ಶೋಕಾಸ್ ನೋಟಿಸು ಕರುಣಿಸಿದ್ದಾರೆ. ಆದರೆ ಅವರು ಸತ್ಯ ಮಾತಾಡಿದ ಕಾರಣದಿಂದ ಇಂತಹಾ ನೋಟೀಸು. ಈ ಸಲ ಅವರ ಕೂದಲು ಕೂಡಾ ಕೊಂಕಿಸದು ಈ ನೋಟೀಸು,ಅದು ಬೇರೆ ವಿಷ್ಯ!

ಒಂದಂತೂ ಸತ್ಯ; ಅಹಂಕಾರ ತಲೆಗಡರಿಕೊಂಡು ತಾನು ಹೇಳಿದ್ದೆಲ್ಲ ನಡೆಯುತ್ತದೆ ಎಂದು ಯಾವತ್ತು ಒಂದು ಪಕ್ಷ, ಒಂದು ವ್ಯಕ್ತಿಯು ಬೀಗುತ್ತಾನೋ, ಅಂತಹಾ ಸನ್ನಿವೇಶಗಳಲ್ಲಿ ಮತದಾರ ಸುಮ್ಮನೆ ತಣ್ಣಗೆ ಕೂತ ಉದಾಹರಣೆಯಂತೂ ಇಲ್ಲವೇ ಇಲ್ಲ. ಮೌನವಾಗಿದ್ದುಕೊಂಡೇ ಮನೆಯಲ್ಲೇ ಕೂತು, ನಾಟಿ ಮದ್ದು ಅರೆಯುವುದನ್ನು ಆತನಿಗೆ ಯಾರು ಕಲಿಸಿಕೊಡಬೇಕಾಗಿಲ್ಲ!

ಸದ್ಯದ ಅಪ್ಡೇಟ್ : ಸದ್ಯ ಕೇಂದ್ರ ರಿಲೀಸ್ ಮಾಡಿದ 1200 ಕೋಟಿ ಹಣವು ಕಡಲೆ ಬೀಜದ ಥರ ಆಗಿದೆ. ಮೊದಲ ಕಂತಿನ ನೆರೆಯಲ್ಲೇ, 38000 ಕೋಟಿ ನಷ್ಟ ಅಂದಾಜಿಸಲಾಗಿತ್ತು. ಈಗ ಮತ್ತೆ ಕರ್ನಾಟಕ ನೆರೆಯಿಂದ ತತ್ತರಿಸಿ ಹೋಗಿದೆ.

ಸುದರ್ಶನ್ ಬಿ. ಪ್ರವೀಣ್, ಬೆಳಾಲು

Leave A Reply