

ಮಂಗಳೂರು: ಶಿವಮೊಗ್ಗದಲ್ಲಿ ಬಂಧಿತನಾದ ಶಂಕಿತ ಉಗ್ರ ಮಾಝ್ ಮುನೀರ್ ಅಹ್ಮದ್ ನನ್ನು ಡಿವೈಎಸ್ಪಿ ನೇತೃತ್ವದ ಪೊಲೀಸರ ತಂಡ ದಕ್ಷಿಣ ಕನ್ನಡ ಜಿಲ್ಲೆಗೆ ಕರೆತಂದಿದ್ದು, ಜಿಲ್ಲೆಯ ಕೆಲವೆಡೆ ಸ್ಪೋಟಕ ಇರಿಸಿದ್ದಾರೆ ಎನ್ನುವ ಮಾಹಿತಿಯ ಆಧಾರದಲ್ಲಿ ಪೊಲೀಸರು ಆರೋಪಿಯೊಂದಿಗೆ ಬಂಟ್ವಾಳದ ಕೆಲವು ಕಡೆಗಳಲ್ಲಿ ಮಹಜರು ನಡೆಸಿದ್ದಾರೆ.
ಬಂಟ್ವಾಳ ತಾಲೂಕಿನ ನಾವುರ ಗ್ರಾಮದ ಸುಲ್ತಾನ್ ಕಟ್ಟೆ,ಅಗ್ರಹಾರ ಎಂಬಲ್ಲಿಗೆ ಕರೆದೊಯ್ದು ಸ್ಪೋಟಕ ಇರಿಸಲಾಗಿದೆ ಎನ್ನುವ ಬಗ್ಗೆ ಪರಿಶೀಲನೆ ನಡೆಸಿದ್ದು, ಶ್ವಾನ ದಳ ಸಹಿತ ಪೊಲೀಸರ ತಂಡ ಸ್ಥಳದಲ್ಲಿ ಹಾಜರಿದ್ದು ಎಲ್ಲಾ ರೀತಿಯ ತನಿಖೆ-ಮಹಜರು ಮುಗಿದ ಬಳಿಕ ಮಂಗಳೂರಿನ ಹಲವೆಡೆಗಳಲ್ಲಿ ಪರಿಶೀಲನೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಇನ್ನೋರ್ವ ಆರೋಪಿ ಸಯ್ಯದ್ ಯಾಸಿನ್ ಶಿವಮೊಗ್ಗದಲ್ಲಿದ್ದುಕೊಂಡೇ ಪ್ಲಾನ್ ನಡೆಸಿದ್ದು,ಆರೋಪಿ ಮಾಝ್ ಮುನೀರ್ ಮಂಗಳೂರಿನಲ್ಲಿದ್ದು ತಯಾರಿ ನಡೆಸುತ್ತಿದ್ದ ಎನ್ನಲಾಗಿದೆ. ಆಧುನಿಕ ರೀತಿಯಲ್ಲಿ ಬಾಂಬ್ ತಯಾರಿಸಿ ಸ್ಪೋಟಿಸುವ ಪ್ಲಾನ್ ಇವರದಾಗಿದ್ದು, ಅದಕ್ಕಾಗಿಯೇ ನಿರ್ಜನ ಕಾಡು ಪ್ರದೇಶದಲ್ಲಿ ಬಾಂಬ್ ಸ್ಫೋಟ ನಡೆಸುವ ಮಾದರಿಗಳನ್ನು ಪ್ರಯೋಗ ನಡೆಸಸುವುದಲ್ಲದೇ, ಆ ಬಗ್ಗೆ ಬೇರೆ ಬೇರೆ ರೀತಿಯ ತಯಾರಿ ನಡೆಸುತ್ತಿದ್ದರು ಎಂದು ತಿಳಿದುಬಂದಿದೆ.
ಸದ್ಯ ಇಬ್ಬರೂ ಆರೋಪಿಗಳನ್ನು ತೀರ್ಥಹಳ್ಳಿ ಡಿವೈಎಸ್ಪಿ ಶಾಂತವೀರಯ್ಯ, ಆಗುಂಬೆ ಪಿಎಸ್ಐ ಶಿವಕುಮಾರ್ ನೇತೃತ್ವದ ಪೊಲೀಸರ ತಂಡ ಹಲವು ಆಯಾಮಗಳಲ್ಲಿ ತೀವ್ರ ತನಿಖೆಗೆ ಒಳಪಡಿಸಿದ್ದು, ಆರೋಪಿಗಳ ಮಾಹಿತಿಯ ಆಧಾರದಲ್ಲಿ ಹಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಜಿಲ್ಲೆಗೆ ಆಗಮಿಸುವ ಘಟಾನುಘಟಿ ನಾಯಕರಿಗೆ ನಡೆದಿತ್ತಾ ಸಂಚು
ಜಿಲ್ಲೆಯಲ್ಲಿ ನಡೆದ ಸರಣಿ ಹತ್ಯೆಗಳ ಬಳಿಕ ದ.ಕ ಜಿಲ್ಲೆಯಲ್ಲಿ ಅಶಾಂತಿ ನೆಲೆಸಿ,ಉದ್ವಿಗ್ನ ಪರಿಸ್ಥಿತಿಗೆ ತಲುಪಿ ಸದ್ಯ ಕೊಂಚ ನಿವಾರಿಸುತ್ತಿದೆ. ಜಿಲ್ಲೆಗೆ ರಾಜ್ಯ ರಾಜಕಾರಣದ ಹಲವು ಘಟಾನುಘಟಿ ನಾಯಕರು ಆಗಮಿಸುತ್ತಿದ್ದು, ಕಳೆದ ಕೆಲ ದಿನಗಳ ಹಿಂದೆ ಪ್ರಧಾನಿ ನರೇಂದ್ರ ಮೋದಿಯೂ ಆಗಮಿಸಿದ್ದರು.
ಆರೋಪಿಗಳು ಇದೇ ಸಮಯವನ್ನು ಉಪಯೋಗಿಸಿ ಬಾಂಬ್ ಉಡಿಸಲು ಪ್ಲಾನ್ ನಡೆಸಿದ್ದರೇ ಅಥವಾ ಮುಂಬರುವ ದಸರಾ ಅಥವಾ ಇನ್ನಿತರ ಹಬ್ಬ ಹರಿದಿನಗಳ ಸಮಯದಲ್ಲಿ ರಕ್ತ ಹರಿಸಲು ಹೊಂಚು ಹಾಕಿದ್ದರೇ ಎನ್ನುವ ಬಗ್ಗೆಯೂ ಗಂಭೀರ ಪ್ರಶ್ನೆಗಳು ಮೂಡಿದ್ದು, ತನಿಖೆ ಚುರುಕಾಗಿದೆ.












