ಮಂಗಳೂರು : ಸಿಟಿ ಬಸ್‌ನಲ್ಲಿ ಪ್ರಯಾಣಿಕರು ಇನ್ನು ಟಿಕೇಟ್‌ಗೆ ಹಣ ನೀಡಬೇಕಿಲ್ಲ..!

ಇನ್ನು ಮುಂದೆ ಜೆ ಬಿ ನಲ್ಲಿ ನಯಾ ಪೈಸೆ ಇಟ್ಟುಕೊಳ್ಳದೆ ಮಂಗಳೂರಿನ ಸಿಟಿ ಸುತ್ತಬಹುದು. ಹೌದು ಹೇಗೆಂದು ಮೂಗಿನ ಮೇಲೆ ಬೆರಳಿಟ್ಟುಕೊಂಡಿರಾ..? ಈಗ ಮಂಗಳೂರಿನಲ್ಲಿ ಸಿಟಿ ಬಸ್ ಸೇವೆಗಳು ಡಿಜಿಟಲ್ ಸೇವೆಗೆ ತೆರೆದುಕೊಳ್ಳುತ್ತಿವೆ.

ಕಳೆದ ಕೆಲವು ವರ್ಷಗಳಿಂದ ಚಲೋ ಕಾರ್ಡ್‌ಗಳ ಮೂಲಕ ಪ್ರಯಾಣಿಕರಿಗೆ ಅನುಕೂಲವಾಗಿದ್ದ ಬಸ್ ಸೇವೆ ಇದೀಗ ಮೊಬೈಲ್ ಟಿಕೆಟಿಂಗ್ ವ್ಯವಸ್ಥೆ ಹಾಗೂ ಬಸ್ ಲೈವ್ ಟ್ರ್ಯಾಕಿಂಗ್‌ಗೂ ಅನುಕೂಲತೆ ಕಲ್ಪಿಸಿದೆ.

ಸದ್ಯ ಮಂಗಳೂರು-ಉಳ್ಳಾಲ ನಡುವೆ ಈ ಸೇವೆ ಆರಂಭವಾಗಿದೆ. ಬಸ್ ರೂಟ್ ನಂಬರ್ 42, 43 ಮತ್ತು ರೂಟ್ ನಂಬರ್ 44ರಲ್ಲಿ ಡಿಜಿಟಲ್ ಬಸ್ ಪಾಸ್ ವ್ಯವಸ್ಥೆ ಆರಂಭಿಸಲಾಗಿದ್ದು, ಸೋಮವಾರ ಚಾಲನೆ ದೊರೆತಿದೆ.

ಎಸಿಪಿ ನಟರಾಜ್ ಅವರು ನೂತನ ಸೇವೆಗೆ ಚಾಲನೆ ನೀಡಿದರು. ಮುಂದೆ ಜಿಲ್ಲೆಯಾದ್ಯಂತ ಈ ಸೇವೆ ವಿಸ್ತರಿಸಲಿದೆ ಎಂದು ದ.ಕ. ಜಿಲ್ಲಾ ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ ಜಯಶೀಲ ಅಡ್ಯಂತಾಯ ತಿಳಿಸಿದ್ದಾರೆ.

ಹೊಸ ವಿಧಾನದ ಮೂಲಕ ಮೊಬೈಲ್‌ನಿಂದಲೂ ಟಿಕೆಟ್‌ನ್ನು ಪಡೆಯಬಹುದಾಗಿದೆ. ಇದಕ್ಕಾಗಿ ಮೊದಲು ಮೊಬೈಲ್‌ನಲ್ಲಿ ರುವ ಗೂಗಲ್ ಪ್ಲೇ ಸ್ಟೋರ್‌ಗೆ ಹೋಗಿ ಚಲೋ ಅಪ್ಲಿಕೇಶನ್‌ನನ್ನು ಡೌನ್‌ಲೋಡ್ ಮಾಡಿಕೊಳ್ಳಬೇಕು.

ಮೊಬೈಲ್ ಪಾಸ್ ಅಥವಾ ಎಂ ಪಾಸ್ ಎಂದು ಕರೆಯಲ್ಪಡುವ ಈ ಸೇವೆ ಪ್ರಯಾಣಿಕರಿಗೆ ಅನುಕೂಲತೆ ಕಲ್ಪಿಸಲಿದೆ. ಅಲ್ಲದೆ ಬರುವ ಬಸ್ ಸದ್ಯ ಎಲ್ಲಿದೆ? ಬಸ್‌ನಲ್ಲಿ ಎಷ್ಟು ಸೀಟ್ ಭರ್ತಿಯಾಗಿದೆ. ನಾವಿರುವ ಬಸ್ ನಿಲ್ದಾಣಕ್ಕೆ ಎಷ್ಟು ಸಮಯಕ್ಕೆ ತಲುಪಲಿದೆ ಎಂಬ ಮಾಹಿತಿಯನ್ನು ಕೂಡ ಲೈವ್ ಟ್ರ್ಯಾಕಿಂಗ್ ಮೂಲಕ ಪಡೆಯಬಹುದಾಗಿದೆ.

ಚಲೋ ಅಪ್ಲಿಕೇಶನ್‌ನಲ್ಲಿ ಕೆಲವು ಹಂತಗಳನ್ನು ಬಳಸಿಕೊಂಡು ನಿಗದಿತ ಮೊತ್ತ ಪಾವತಿಸಿ ಮೊಬೈಲ್ ಪಾಸ್ ಪಡೆಯಬಹುದು. ಬಳಿಕ ಪ್ರಯಾಣದ ವೇಳೆ ಬಸ್ ನಿರ್ವಾಹಕಕರ ಬಳಿ ಇರುವ ಟಿಕೆಟಿಂಗ್ ಯಂತ್ರದ ಮೂಲಕ ಫೋನ್‌ನಲ್ಲಿ ಒದಗಿಸಲಾದ ಕ್ಯೂಆರ್ ಕೋಡ್‌ನ್ನು ಒದಗಿಸಿ ಟಿಕೆಟ್ ಕೋಡ್‌ನ್ನು ಪಡೆದು ಪ್ರಯಾಣಿಸಬಹುದಾಗಿದೆ. ಟಿಕೆಟ್ ಹಣ ಕಡಿತವಾದ ತಕ್ಷಣ ಟಿಕೆಟ್ ಕೋಡ್ ಮೊಬೈಲ್‌ನಲ್ಲಿ ಪ್ರದರ್ಶಿತವಾಗಲಿದೆ ಎಂದು ದಕ್ಷಿಣ ಚಲೋ ಕಾರ್ಡ್ ಸೇಲ್ಸ್ ಹೆಡ್ ಸುದೇಶ್ ತಿಳಿಸಿದ್ದಾರೆ.

ಬಸ್ ರೂಟ್ ನಂಬರ್ 42 ಮತ್ತು 44ರಲ್ಲಿ ಬಸ್ ನಿರ್ವಾಹಕರ ಬೆಂಬಲದೊಂದಿಗೆ ಇಡೀ ನಗರದಲ್ಲಿ ಬಸ್ ಪ್ರಯಾಣವನ್ನು ಡಿಜಿಟಲೀಕರಣಗೊಳಿಸುವತ್ತ ಇದು ಸಕಾರಾತ್ಮಕ ಹೆಜ್ಜೆಯಾಗಿದೆ. ಕೋವಿಡ್ ಕಾರಣದಿಂದಾಗಿ ಹೆಚ್ಚು ಜನರು ದೈನಂದಿನ ಪಾವತಿಗಾಗಿ ಯುಪಿಐನಂತಹ ಸಂಪರ್ಕರಹಿತ ಪಾವತಿ ವಿಧಾನಗಳಿಗೆ ಆದ್ಯತೆ ನೀಡುತ್ತಾರೆ. ಈ ಯೋಜನೆಯಲ್ಲದೆ ಈಗಾಗಲೇ ಇರುವ ಚಲೋ ಕಾರ್ಡ್‌ಗಳನ್ನು ಕೂಡ ಪಡೆಯಬಹುದು. ಕಾರ್ಡ್‌ನಲ್ಲಿನ ಹಣ ಮುಗಿದ ತಕ್ಷಣ ಮತ್ತೆ ರಿಚಾರ್ಜ್ ಮಾಡಿಕೊಳ್ಳಲು ಕೂಡ ಅವಕಾಶವಿದೆ ಎಂದರು.
ಈ ಸಂದರ್ಭ ಅಶ್ವತ್ಥಾಮ ಹೆಗ್ಡೆ, ಸುದೇಶ್, ಅಶೋಕ್, ವಿ.ಕೆ.ಪುತ್ರನ್, ಪ್ರದೀಪ್ ಉಪಸ್ಥಿತರಿದ್ದರು.

Leave A Reply

Your email address will not be published.