ಗ್ರಾಹಕನಿಗೆ ಕ್ಯಾರಿಬ್ಯಾಗ್ ಗೆ 12ರೂ. ಶುಲ್ಕ ವಿಧಿಸಿದ ಅಂಗಡಿ ಮಾಲೀಕ !! | ಆ ಬ್ಯಾಗ್ ಅಂಗಡಿ ಜಾಹೀರಾತು ಹೊಂದಿದ್ದಕ್ಕಾಗಿ ಓನರ್ ಗೆ ಭಾರಿ ದಂಡ ವಿಧಿಸಿದ ನ್ಯಾಯಾಲಯ

ಅಂಗಡಿಗಳಲ್ಲಿ ಖರೀದಿ ಮಾಡಿದಾಗ ಅವರು ನಮಗೆ ಕ್ಯಾರಿ ಬ್ಯಾಗುಗಳನ್ನು ನೀಡುತ್ತಾರೆ. ಅಂಗಡಿಗಳ ಜಾಹೀರಾತುಗಳನ್ನು ಹೊಂದಿರುವ ಈ ಕ್ಯಾರಿ ಬ್ಯಾಗುಗಳು ಉಚಿತವಾಗಿಯೇ ಸಿಗುತ್ತದೆ. ಆದರೆ ಇಲ್ಲೊಂದು ಕಡೆ ಅಂಗಡಿಯ ಮಾಲೀಕರೊಬ್ಬರು ಅಂಗಡಿ ಜಾಹೀರಾತನ್ನು ಹೊಂದಿದ್ದ ಕ್ಯಾರಿ ಬ್ಯಾಗಿಗೆ ಶುಲ್ಕ ವಿಧಿಸಲು ಹೋಗಿ ಭಾರೀ ದಂಡ ತೆತ್ತಿದ ಪ್ರಸಂಗವೊಂದು ಆಂಧ್ರ ಪ್ರದೇಶದ ಮಲ್ಟಿ ಬ್ಯಾಂಡ್ ನಲ್ಲಿ ನಡೆದಿದೆ.

ಹೌದು. ಅಂಗಡಿಯ ಲೋಗೋವನ್ನು ಹೊಂದಿದ್ದ ಕ್ಯಾರಿ ಬ್ಯಾಗಿಗೆ ಶುಲ್ಕ ವಿಧಿಸಿದ ಕಾರಣ ಗ್ರಾಹಕನಿಗೆ ಪರಿಹಾರ ನೀಡುವಂತೆ ಆಂಧ್ರ ಪ್ರದೇಶದ ಗ್ರಾಹಕ ನ್ಯಾಯಾಲಯವು ಅಂಗಡಿ ಮಾಲೀಕನಿಗೆ ಸೂಚನೆ ನೀಡಿದೆ.

ವಿಶಾಖಪಟ್ಟಣಂನ ವಕೀಲ ಸೀಪನ ರಾಮರಾವ್ ಎಂಬವರು ಮಲ್ಟಿ ಬ್ಯಾಂಡ್ ಚಿಲ್ಲರೆ ವ್ಯಾಪಾರಿಯ ಅಂಗಡಿಯೊಂದರಿಂದ 600 ರೂಪಾಯಿ ಮೌಲ್ಯದ ಬಟ್ಟೆಗಳನ್ನು ಖರೀದಿ ಮಾಡಿದ್ದರು. ಈ ವೇಳೆ ಸೀಪನ ರಾಮ ರಾವ್‌ಗೆ ಅಂಗಡಿಯ ಸಿಬ್ಬಂದಿ ಕ್ಯಾರಿ ಬ್ಯಾಗ್ ಬೇಕು ಅಂದರೆ ಹೆಚ್ಚುವರಿಯಾಗಿ 12 ರೂಪಾಯಿ ನೀಡಬೇಕು ಎಂದು ಹೇಳಿದ್ದಾರೆ. ಕ್ಯಾಶಿಯರ್ ಬಳಿ ತಾನು ಕ್ಯಾರಿ ಬ್ಯಾಗ್‌ಗೆ ಹಣ ನೀಡಲು ಸಿದ್ಧನಿಲ್ಲ ಎಂದು ಹೇಳಿದ ಸೀಪನ ರಾಮ ರಾವ್ ಈ ಬಗ್ಗೆ ಅಂಗಡಿ ವ್ಯವಸ್ಥಾಪಕರ ಜೊತೆಯಲ್ಲಿಯೂ ಚರ್ಚೆ ನಡೆಸಿದ್ದರು.

ಅಂಗಡಿ ವ್ಯವಸ್ಥಾಪಕ ಕೂಡ ಉಚಿತವಾಗಿ ಕ್ಯಾರಿ ಬ್ಯಾಗ್ ನ್ನು ನೀಡಲು ನಿರಾಕರಿಸಿದ್ದಾರೆ. ಅಂಗಡಿಯ ಲೋಗೋವನ್ನು ಹೊಂದಿರುವ ಕ್ಯಾರಿ ಬ್ಯಾಗುಗಳಿಗೆ ಶುಲ್ಕ ವಿಧಿಸುವುದು ಕಾನೂನು ಬಾಹಿರ ಎಂದು ಸೀಪನ ರಾಮರಾವ್ ಹೇಳಿದರೂ ಸಹ ಕೇಳದ ವ್ಯವಸ್ಥಾಪಕ ಸೀಪನ ಮೇಲೆ ಕೂಗಾಡಿದ್ದಾರೆ. ಈ ಘಟನೆ ಬಳಿಕ ಗ್ರಾಹಕ ಸೀಪನ ರಾಮರಾವ್ ತನಗೆ ಎದುರಾಗಿರುವ ಮಾನಸಿಕ ಕಿರುಕುಳಕ್ಕೆ ಪರಿಹಾರ ನೀಡುವಂತೆ ನಗರದ ಗ್ರಾಹಕ ನ್ಯಾಯಾಲಯದ ಮೊರೆ ಹೋಗಿದ್ದರು.

ಈ ಸಂಬಂಧ ವಾದ ವಿವಾದಗಳನ್ನು ಆಲಿಸಿದ ವಿಶಾಖಪಟ್ಟಣಂನ ಜಿಲ್ಲಾ ಗ್ರಾಹಕರ ಆಯೋಗವು ಅಂಗಡಿ ಮಾಲೀಕರು ಗ್ರಾಹಕ ಸೀಪನ ರಾಮ್ ರಾವ್‌ಗೆ ಪರಿಹಾರದ ರೂಪದಲ್ಲಿ 21 ಸಾವಿರ ರೂಪಾಯಿಗಳನ್ನು ನೀಡಬೇಕು. ಕಾನೂನು ಶುಲ್ಕದ ರೂಪದಲ್ಲಿ 1500 ರೂಪಾಯಿಗಳು ಭರಿಸಬೇಕು. ಗ್ರಾಹಕರಿಂದ ಕ್ಯಾರಿ ಬ್ಯಾಗ್ ಶುಲ್ಕ ಎಂದು ಪಡೆದುಕೊಂಡಿದ್ದ 12 ರೂಪಾಯಿಗಳನ್ನು ವಾಪಸ್ ನೀಡಬೇಕು ಎಂದು ಆದೇಶ ಹೊರಡಿಸಿದೆ.

ಯಾವುದೇ ಅಂಗಡಿಗಳು ಲೋಗೋವನ್ನು ಹೊಂದಿರುವಂತಹ ಬ್ಯಾಗುಗಳಿಗೆ ಶುಲ್ಕವನ್ನು ವಿಧಿಸುವಂತಿಲ್ಲ. ಕಳೆದ ವರ್ಷ ಕೂಡ ಹೈದರಾಬಾದ್ ಗ್ರಾಹಕ ಆಯೋಗವು ಈ ರೀತಿ ಮಾಡುವುದು ಕಾನೂನು ಬಾಹಿರ ಎಂದು ತೀರ್ಪು ನೀಡಿತ್ತು.

Leave A Reply

Your email address will not be published.