ಕೇಬಲ್ ಕಾರುಗಳು ಪರಸ್ಪರ ಡಿಕ್ಕಿಯಾಗಿ ಸ್ಥಳದಲ್ಲೇ ಇಬ್ಬರು ಸಾವು !! | ಅಪಾಯದಲ್ಲಿ ಸಿಲುಕಿರುವ 48 ಜನರ ರಕ್ಷಣೆಗಿಳಿದ ಸೇನೆ

ರೋಪ್ ವೇಯಲ್ಲಿ ಕೇಬಲ್ ಕಾರುಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಾವನ್ನಪ್ಪಿ ಹಲವರಿಗೆ ಗಾಯಗಳಾದ ಘಟನೆ ಜಾರ್ಖಂಡ್‌ನ ದಿಯೋಘರ್ ಜಿಲ್ಲೆಯ ಬಾಬಾ ಬೈದ್ಯನಾಥ ದೇವಾಲಯದ ಸಮೀಪವಿರುವ ತ್ರಿಕುಟ್ ಬೆಟ್ಟಗಳಲ್ಲಿ ರೋಪ್‍ವೇಯಲ್ಲಿ ನಡೆದಿದೆ.

ರೋಪ್ ವೇಯಲ್ಲಿದ್ದ 12 ಕ್ಯಾಬಿನ್‍ಗಳಲ್ಲಿ 48 ಜನರು ಇನ್ನೂ ಅಪಾಯದಲ್ಲಿ ಸಿಲುಕಿಕೊಂಡಿದ್ದಾರೆ. ಇವರನ್ನು ರಕ್ಷಿಸಲು ಭಾರತೀಯ ವಾಯುಪಡೆಯ ಎರಡು ಹೆಲಿಕಾಫ್ಟರ್ ಗಳ ಸಹಾಯದಿಂದ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ.

ಘಟನೆಯ ನಂತರ ರೋಪ್‍ವೇ ಮ್ಯಾನೇಜರ್ ಮತ್ತು ಇತರ ಉದ್ಯೋಗಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ. ತಾಂತ್ರಿಕ ಅಡಚಣೆಯಿಂದ ಕೇಬಲ್ ಕಾರುಗಳು ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ದಿಯೋಘರ್ ಉಪ ಆಯುಕ್ತರು ಮಾತನಾಡಿ, ರಕ್ಷಣಾ ಕಾರ್ಯಾಚರಣೆಗಾಗಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‍ಡಿಆರ್‍ಎಫ್) ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿದೆ. ಸ್ಥಳೀಯ ಗ್ರಾಮಸ್ಥರು ಸಹ ರಕ್ಷಣಾ ಕಾರ್ಯಾಚರಣೆಯಲ್ಲಿ ಎನ್‍ಡಿಆರ್‍ಎಫ್‍ಗೆ ಸಹಾಯ ಮಾಡುತ್ತಿದ್ದಾರೆ. ಡಿಸಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಇಬ್ಬರೂ ಸ್ಥಳದಿಂದ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ತಿಳಿಸಿದರು.ಪರಿಸ್ಥಿತಿ ಸಂಪೂರ್ಣ ನಿಯಂತ್ರಣದಲ್ಲಿದೆ. ಇನ್ನೂ ಕೆಲವರು ರೋಪ್‍ವೇಯಲ್ಲಿ ಕೇಬಲ್ ಕಾರ್‌ಗಳಲ್ಲಿ ಸಿಲುಕಿಕೊಂಡಿದ್ದು, ಅವರನ್ನು ರಕ್ಷಿಸಲಾಗುತ್ತಿದೆ. ಎಲ್ಲಾ ಪ್ರವಾಸಿಗರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗುತ್ತಿದೆ ಎಂದು ಡಿಸಿ ಹೇಳಿದರು.

ಗೊಡ್ಡಾ ಸಂಸದ ನಿಶಿಕಾಂತ್ ದುಬೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಜಾರ್ಖಂಡ್ ಮುಖ್ಯ ಕಾರ್ಯದರ್ಶಿ ಸುಖದೇವ್ ಸಿಂಗ್ ಅವರಿಗೆ ತಿಳಿಸಿದ್ದು, ಎನ್‍ಡಿಆರ್‌ಎಫ್ ತಂಡಗಳನ್ನು ನಿಯೋಜಿಸಲು ವಿನಂತಿಸಿದ್ದಾರೆ. ಈ ವಿಷಯದ ಬಗ್ಗೆ ತಕ್ಷಣ ಗಮನ ಹರಿಸಿದ್ದಕ್ಕಾಗಿ ಕೇಂದ್ರ ಗೃಹ ಸಚಿವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಜಾರ್ಖಂಡ್ ಪ್ರವಾಸೋದ್ಯಮವು ತ್ರಿಕುಟ್ ರೋಪ್‍ವೇ ಭಾರತದ ಅತಿ ಎತ್ತರದ ಲಂಬ ರೋಪ್‍ವೇ ಆಗಿದೆ. ಬಾಬಾ ಬೈದ್ಯನಾಥ ದೇವಸ್ಥಾನದಿಂದ ಸುಮಾರು 20 ಕಿಮೀ ದೂರದಲ್ಲಿರುವ ರೋಪ್‍ವೇ ಸುಮಾರು 766 ಮೀಟರ್ ಉದ್ದವಿದ್ದರೆ, ಬೆಟ್ಟವು 392 ಮೀಟರ್ ಎತ್ತರದಲ್ಲಿದೆ. ರೋಪ್‍ವೇಯಲ್ಲಿ 25 ಕ್ಯಾಬಿನ್‍ಗಳಿವೆ. ಪ್ರತಿ ಕ್ಯಾಬಿನ್‍ನಲ್ಲಿ ನಾಲ್ಕು ಜನರು ಕುಳಿತುಕೊಳ್ಳಬಹುದು.

Leave A Reply

Your email address will not be published.