ಮತ್ತೆ ಅಡಿಕೆಯ ಮೇಲೆ ನಿಷೇಧದ ತೂಗುಕತ್ತಿ | ಕೇಂದ್ರ ಆರೋಗ್ಯ ಸಚಿವರ ಹೇಳಿಕೆಯಿಂದ ಕೃಷಿಕನಿಗೆ ಆತಂಕ

ಅಡಿಕೆ ಸೇವನೆ ಆರೋಗ್ಯಕ್ಕೆ ಹಾನಿಕಾರಕ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವಿಯ ಹೇಳಿಕೆ ನೀಡಿದ್ದು,ಇದರಿಂದಾಗಿ ಅಡಿಕೆ ಮತ್ತೆ ನಿಷೇಧ ಭೀತಿ ಎದುರಿಸುವಂತಾಗಿದೆ.

ಆರೋಗ್ಯಕ್ಕೆ ಹಾನಿಕಾರಕವಾಗಿರುವ ಅಡಿಕೆಯನ್ನು ನಿಷೇಧಿಸುವ ಬಗ್ಗೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ 24ನೇ ವೈಜ್ಞಾನಿಕ ಸಭೆಯಲ್ಲಿ ಪರಿಶೀಲಿಸಲು ಕೇಂದ್ರ ಸರಕಾರ ಮುಂದಾಗಿರುವ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವಿಯ ಹೇಳಿಕೆ ನೀಡಿದ್ದರು.

ಪ್ರಸ್ತುತ ಅಡಿಕೆ ಬೆಳೆಗಾರ ಉತ್ತಮ ಧಾರಣೆಯಿಂದ ನೆಮ್ಮದಿಯಿರುವ ಸಮಯದಲ್ಲೇ ಆರೋಗ್ಯ ಸಚಿವರ ಹೇಳಿಕೆ ಮತ್ತೊಮ್ಮೆ ನೆಮ್ಮದಿ ಕೆಡುವಂತೆ ಮಾಡಿದೆ.

ಅಡಿಕೆ ಆರೋಗ್ಯಕ್ಕೆ ಹಾನಿಕಾರಕವಲ್ಲಎಂಬುದನ್ನು ವೈಜ್ಞಾನಿಕವಾಗಿ ನಿರೂಪಿಸಲು ರಾಮಯ್ಯ ಇನ್ಸ್‌ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿಸಂಶೋಧನೆ ನಡೆಯುತ್ತಿರುವಾಗಲೇ ಹೊರಬಿದ್ದಿರುವ ಕೇಂದ್ರ ಆರೋಗ್ಯ ಸಚಿವರ ಈ ಹೇಳಿಕೆ ಅಡಿಕೆ ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ

ಅಡಿಕೆ ಆರೋಗ್ಯಕ್ಕೆ ಹಾನಿಕಾರಕವಾಗಿದ್ದು, ಇದನ್ನು ನಿಷೇಧಿಸಬೇಕು ಎಂದು ಒಂದೊಮ್ಮೆ ಕೇಂದ್ರ ಸರಕಾರ ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್‌ ಸಲ್ಲಿಸಿದರೆ ಅಡಿಕೆ ಬೆಳೆಗಾರರ ಸ್ಥಿತಿ ಅಯೋಮಯವಾಗಲಿದೆ.

ಜಾರ್ಖಂಡ್‌ನ ಬಿಜೆಪಿ ಸಂಸದ ನಿಶಿಕಾಂತ್‌ ದುಬೆ 2021ರ ಜುಲೈ 10ರಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿರುವುದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಆರೋಗ್ಯ ಸಚಿವ ಮನ್ಸುಖ್‌ ಮಾಂಡವಿಯ ಈ ಪ್ರತಿಕ್ರಿಯೆ ನೀಡಿದ್ದಾರೆ.

ಈ ಬಗ್ಗೆ ಅಗತ್ಯ ಮಾಹಿತಿ ನೀಡುವಂತೆ ಅಡಿಕೆ ಮತ್ತು ಸಂಬಾರ ಅಭಿವೃದ್ಧಿ ನಿರ್ದೇಶನಾಲಯಕ್ಕೆ 2021 ಅಕ್ಟೋಬರ್‌ 14ರಂದು ಸೆಂಟ್ರಲ್‌ ಪ್ಲಾಂಟೇಷನ್‌ ಕ್ರಾಫ್ಸ್‌ ರಿಸರ್ಚ್ ಇನ್ಸ್‌ಟಿಟ್ಯೂಟ್‌ ಪತ್ರ ಬರೆದು ಮನವಿ ಮಾಡಿದೆ.

2017 ಡಿಸೆಂಬರ್‌ನಲ್ಲಿಕೂಡ ಸಂಸದರೊಬ್ಬರು ಕೇಳಿದ ಪ್ರಶ್ನೆಗೆ ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ಅಂದಿನ ಆರೋಗ್ಯ ಸಚಿವರಾದ ಅನುಪ್ರಿಯಾ ಪಟೇಲ್‌ ಉತ್ತರ ನೀಡಿದ್ದರು. 2011ರಲ್ಲಿ ಯುಪಿಎ ಸರಕಾರ ಅಡಿಕೆ ಆರೋಗ್ಯಕ್ಕೆ ಹಾನಿಕಾರಕ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದ ವರದಿಯನ್ನೇ ಎನ್‌ಡಿಎ ಸರಕಾರ ಕೂಡ ಪುನರುಚ್ಚರಿಸುತ್ತಿದೆ. ಅಡಿಕೆ ಆರೋಗ್ಯಕ್ಕೆ ಹಾನಿಕಾರಕವಲ್ಲ ಎಂದು 2019ರಲ್ಲಿ ಕಾಸರಗೋಡಿನ ಸಿಪಿಸಿಆರ್‌ಐ ಸಂಸ್ಥೆ ನೀಡಿದ ವರದಿಯನ್ನು ಕೂಡ ಕೇಂದ್ರ ಸರಕಾರ ಪರಿಶೀಲಿಸದಿರುವ ಕುರಿತು ಬೆಳೆಗಾರರಲ್ಲಿಆಕ್ರೋಶ ಮೂಡಿಸಿದೆ.

ಅಡಿಕೆ ಜಗಿಯುವುದರಿಂದ ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆ ಬರುತ್ತದೆ. ಅಡಿಕೆಯಿಂದ ಕ್ಯಾನ್ಸರ್‌, ಹೃದಯ ರಕ್ತನಾಳ ಸಂಬಂಧಿ ಸಮಸ್ಯೆಗಳು, ಅಂತಃಸ್ರಾವಕ ಮತ್ತು ಸಂತಾನೋತ್ಪತ್ತಿ ವ್ಯವಸ್ಥೆ ಮೇಲೆ ಅಡ್ಡ ಪರಿಣಾಮ, ರಕ್ತ, ಉಸಿರಾಟದ ಸಮಸ್ಯೆ ಉಂಟಾಗುತ್ತದೆ. ಗರ್ಭಿಣಿಯರು ಅಡಿಕೆ ಸೇವಿಸಿದರೆ ದೇಹದ ವ್ಯವಸ್ಥೆ ಮೇಲೆ ವ್ಯವಸ್ಥಿತ ದುಷ್ಪರಿಣಾಮ ಉಲ್ಬಣಗೊಳಿಸುತ್ತದೆ. ಭ್ರೂಣದಲ್ಲಿಯೇ ಜನ್ಮ ವೈಪರೀತ್ಯಗಳು ಉಂಟಾಗಬಹುದು. ಈ ಹಿನ್ನೆಲೆಯಲ್ಲಿಅಡಿಕೆಯನ್ನು ನಿಷೇಧಿಸಬೇಕು ದುಬೆ ಪ್ರಧಾನಿಗೆ ಮನವಿ ಮಾಡಿದ್ದಾರೆ.

ಅಂಕುರ್‌ ಗುಟ್ಕಾ ಮತ್ತು ಇಂಡಿಯನ್‌ ಅಸ್ತಮಾ ಸೊಸೈಟಿ ಪ್ರಕರಣದಲ್ಲಿ(ಎಸ್‌ಎಲ್‌ಪಿ (ಸಿ) ನಂ.16308/2007) 2013 ಅಕ್ಟೋಬರ್‌ 29ರಂದು ಸುಪ್ರೀಂ ಕೋರ್ಟ್‌ಗೆ ವರದಿ ಸಲ್ಲಿಸಿದ್ದ ಕೇಂದ್ರ ಆರೋಗ್ಯ ಸಚಿವಾಲಯ ಅಡಿಕೆ ತಿನ್ನುವುದರಿಂದಲೂ ಕ್ಯಾನ್ಸರ್‌ ಬರುತ್ತದೆ ಎಂದು ಹೇಳಿತ್ತು. ಅದಕ್ಕೂ ಮೊದಲು ಅಡಕೆ ಮಿಶ್ರಿತ ಹೊಗೆಸೊಪ್ಪು ತಿಂದರೆ ಕ್ಯಾನ್ಸರ್‌ ಬರುತ್ತದೆ ಎಂದು ಹೇಳಿದ್ದ ಕೇಂದ್ರ ಆರೋಗ್ಯ ಸಚಿವಾಲಯ ನಂತರ ತನ್ನ ವರದಿ ಬದಲಿಸಿ ಬರೀ ಅಡಿಕೆ ಅಗಿಯುವುದರಿಂದಲೂ ಕ್ಯಾನ್ಸರ್‌ ಬರುತ್ತದೆ ಎಂದು ಇಂದಿರಾ ಜೈಸಿಂಗ್‌ ನೇತೃತ್ವದಲ್ಲಿ ವರದಿ ಸಲ್ಲಿಸಲಾಗಿತ್ತು.

ಆದರೆ, ಹೊಸದಿಲ್ಲಿಯ ಜವಾಹರ್‌ಲಾಲ್‌ ಯೂನಿವರ್ಸಿಟಿಯ ಕ್ಯಾನ್ಸರ್‌ ಆಫ್‌ ಬಯಾಲಜಿ ಸಂಶೋಧನಾಲಯದ ಡಾ.ರಮೇಶ್‌ರಾವ್‌ ಮತ್ತು ಡಾ.ಪದ್ಮಾದಾಸ್‌ ಸತತ 12 ತಿಂಗಳು ವಿವಿಧ ರೀತಿಯ ಅಡಿಕೆಯನ್ನು 6ರಿಂದ 7 ವಾರದ ಸ್ವಿಜ್‌ ಇಲಿ ಮರಿಗಳಿಗೆ ತಿನ್ನಿಸಿ ಸಂಶೋಧನೆ ನಡೆಸಿದ್ದು, ಬರಿ ಅಡಿಕೆ ತಿನ್ನುವುದರಿಂದ ಕ್ಯಾನ್ಸರ್‌ ಬರುವುದಿಲ್ಲಎಂಬುದನ್ನು ವೈಜ್ಞಾನಿಕವಾಗಿ ಸಾಬೀತು ಮಾಡಿದ್ದರು.

ಬೇಯಿಸಿ, ಒಣಗಿಸಿ ಪರಿಷ್ಕರಿಸಿದ ಅಡಿಕೆ ಸೇವನೆಯಿಂದ ಇಲಿ ಮರಿಗಳಲ್ಲಿಕ್ಯಾನ್ಸರ್‌ ಅಂಶ (ಕಾರ್ಸೊಜಿನಿಕ್‌ ಎಫೆಕ್ಟ್) ಅಥವಾ ಓರಲ್‌ ಟ್ಯೂಮರ್ಸ್ ಕಂಡುಬರುವುದಿಲ್ಲ. ಬೇಯಿಸದಿರುವ ಹಸಿ ಅಡಿಕೆಯನ್ನು ಸ್ವಿಜ್‌ ಇಲಿಗಳ ಮೇಲೆ ಪ್ರಯೋಗಿಸಿದಾಗ ಬಹಳ ಸಣ್ಣ ಪ್ರಮಾಣದ ಕಾರ್ಸೊಜಿನಿಕ್‌ ಎಫೆಕ್ಟ್ ಕಂಡುಬಂದಿತ್ತು. ಅಂದರೆ, ಬೇಯಿಸಿ, ಪರಿಷ್ಕರಿಸಿದ ಅಡಕೆ ತಿನ್ನುವುದರಿಂದ ಕ್ಯಾನ್ಸರ್‌ ಬರುವುದಿಲ್ಲಎಂಬುದು ಸಾಬೀತಾಗಿತ್ತು.

ಅಡಿಕೆಯ ಸಾಂಪ್ರದಾಯಿಕತೆ, ಮೌಲ್ಯ, ಪ್ರಾಚೀನತೆ ಬಗ್ಗೆ ಕೇಂದ್ರ ಸರಕಾರ ಮತ್ತು ಕೋರ್ಟ್‌ಗೆ ಮನವರಿಕೆ ಮಾಡುವಲ್ಲಿ ವಿಫಲತೆ ಎದ್ದು ಕಾಣುತ್ತಿದೆ. ತಂಬಾಕಿನಿಂದ ಕ್ಯಾನ್ಸರ್‌ ಹರಡುತ್ತದೆ ಎಂಬುದು ಸಾಬೀತಾಗಿದ್ದರೂ ತಂಬಾಕು ನಿಷೇಧಿಸದೆ ಔಷಧೀಯ ಗುಣವುಳ್ಳ ಅಡಿಕೆ ನಿಷೇಧಿಸಲು ಹೊರಟಿರುವುದು ಖಂಡನೀಯ. ಸಿಗರೇಟ್‌ ಲಾಬಿಗೆ ಕೇಂದ್ರ ಸರಕಾರ ಮಣಿದಿರುವ ಶಂಕೆಯನ್ನು ಕೃಷಿಕರು ಹೊರಹಾಕಿದ್ದಾರೆ

ಭಾರತದಲ್ಲಿಅಂದಾಜು 3.87 ಲಕ್ಷ ಹೆಕ್ಟೇರ್‌ನಲ್ಲಿಅಡಿಕೆ ಬೆಳೆಯುತ್ತಿದ್ದು, ವಾರ್ಷಿಕ 4.81 ಲಕ್ಷ ಟನ್‌ ಅಡಿಕೆ ಉತ್ಪಾದನೆಯಾಗುತ್ತದೆ. ದೇಶದಲ್ಲೇ ಅತಿಹೆಚ್ಚು ಅಡಿಕೆ ಉತ್ಪಾದಿಸುವ ರಾಜ್ಯ ಕರ್ನಾಟಕ. ಅಸ್ಸಾಂ, ಕೇರಳ, ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ತಮಿಳುನಾಡಿನಲ್ಲೂಅಡಿಕೆ ಬೆಳೆಯಲಾಗುತ್ತದೆ.

ಕರ್ನಾಟಕದಲ್ಲಿ ಶಿವಮೊಗ್ಗ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಉತ್ತರ ಕನ್ನಡ, ತುಮಕೂರು, ದಾವಣಗೆರೆ, ಚಿತ್ರದುರ್ಗ, ಉಡುಪಿ ಸೇರಿದಂತೆ 1,74,400 ಹೆಕ್ಟೇರ್‌ನಲ್ಲಿಅಡಿಕೆ ಬೆಳೆಯುತ್ತಿದ್ದು, ರಾಜ್ಯದ ವಾರ್ಷಿಕ ಉತ್ಪನ್ನ 2,31,700 ಟನ್‌ಗಳು ಉತ್ಪಾದನೆಯಾಗುತ್ತದೆ.

Leave A Reply

Your email address will not be published.