

ಶಿಕ್ಷಕರ ನೇಮಕಾತಿ ಹಗರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಸಚಿವರ ಬಂಧನವಾಗಿದೆ.
ಬರೋಬ್ಬರಿ 20 ಕೋಟಿ ರೂಪಾಯಿ ನಗದು ಹಣ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಸಚಿವ ಹಾಗೂ ತೃಣಮೂಲ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಮತ್ತು ಅವರ ಆಪ್ತೆ ಅರ್ಪಿತಾ ಮುಖರ್ಜಿಯನ್ನು ಜಾರಿ ನಿರ್ದೇಶನಾಲಯ (ಇಡಿ)ದ ಅಧಿಕಾರಿಗಳು ಶನಿವಾರ ಬಂಧಿಸಿದ್ದಾರೆ.
ಜುಲೈ 22 ನಡೆದ ಇಡಿ ದಾಳಿಯಲ್ಲಿ ಪಾರ್ಥ ಚಟರ್ಜಿ ಅವರ ಆಪ್ತೆ ಅರ್ಪಿತಾ ಅವರ ನಿವಾಸದಲ್ಲಿ 20 ಕೋಟಿ ರೂಪಾಯಿ ನಗದು ಮತ್ತು 20ಕ್ಕೂ ಹೆಚ್ಚು ಮೊಬೈಲ್ ಫೋನ್‌ಗಳು ಪತ್ತೆಯಾಗಿದ್ದವು. ಇಡಿ ಅಧಿಕಾರಿಗಳು ಚಟರ್ಜಿ ಅವರನ್ನು 26 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ. ನಂತರ ಬಂಧಿಸಲಾಗಿದೆ. ಸಚಿವರ ಆಪ್ತರ ಬಂಧನ ಕೂಡಾ ಆಗಿದೆ.
ಇಡಿ ಕಚೇರಿಗೆ ಕರೆದೊಯ್ದು ಹೆಚ್ಚಿನ ವಿಚಾರಣೆ ನಡೆಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಬಂಧನಕ್ಕೂ ಮುನ್ನ ವಿಚಾರಣೆ ಸಮಯದಲ್ಲಿ ಅನಾರೋಗ್ಯದ ಹಿನ್ನೆಲೆಯಲ್ಲಿ ಕೋಲ್ಕತ್ತಾದ ನಕ್ತಾಲಾದಲ್ಲಿರುವ ಪಾಥ ಚಟರ್ಜಿ ಅವರ ನಿವಾಸಕ್ಕೆ ಶನಿವಾರ ಬೆಳಿಗ್ಗೆ ಇಬ್ಬರು ವೈದ್ಯರು ಆಗಮಿಸಿ ತಪಾಸಣೆ ನಡೆಸಿದ್ದಾರೆ
ಅಂದಹಾಗೆ ಚಟರ್ಜಿ ಅವರು ಪ್ರಸ್ತುತ ಕೈಗಾರಿಕೆ ಮತ್ತು ವಾಣಿಜ್ಯ ಸಚಿವರಾಗಿದ್ದಾರೆ. ಅವರು ಶಿಕ್ಷಣ ಸಚಿವರಾಗಿದ್ದಾಗ ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗದಿಂದ (ಡಬ್ಲ್ಯುಬಿಎಸ್‌ಎಸ್‌ಸಿ) ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅಕ್ರಮ ನೇಮಕಾತಿಗಳನ್ನು ನಡೆಸಿರುವ ಗಂಭೀರ ಆರೋಪ ಕೇಳಿಬಂದಿದ್ದರಿಂದ ಈ ದಾಳಿ ನಡೆಸಲಾಗಿದೆ













