

ಹಕ್ಕಿಗಳ ಹತ್ತಿರ ಹೋದರೇನೆ ಪುರ್ರ್ ಎಂದು ಕೈಗೆ ಸಿಗದ ಹಾಗೆ ಹಾರಿಕೊಂಡು ಹೋಗುತ್ತದೆ. ಇನ್ನೂ ಮನುಷ್ಯನ ಹತ್ತಿರ ಬರುವುದು ಸಾಕಿದ ಪಕ್ಷಿ ಮಾತ್ರ. ಆದರೆ ಇಲ್ಲಿ ಹಕ್ಕಿಯೊಂದು ಯುವತಿಯ ಇಯರ್ ಬೆಡ್ ಎತ್ತಿಕೊಂಡು ಹೋಗಿದೆ ಎಂದರೆ ಆಶ್ಚರ್ಯದ ಜೊತೆಗೆ ತಮಾಷೆ ಎನಿಸುತ್ತದೆ. ಈ ಮನಮೋಹಕವಾದ ದೃಶ್ಯವನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣವಾದ ರೆಡಿಟ್‌ನಲ್ಲಿ , scavillion ಎಂಬುವವರು ಪೋಸ್ಟ್ ಮಾಡಿದ್ದಾರೆ.
ಮಹಿಳೆಯೊಬ್ಬರು ತಮ್ಮೆರಡು ಕಿವಿಗಳಿಗೆ ಇಯರ್ ಬಡ್ ಸಿಕ್ಕಿಸಿಕೊಂಡು, ಕಣ್ಣುಮುಚ್ಚಿಕೊಂಡು, ಪ್ರಕೃತಿಯ ಸೌಂದರ್ಯವನ್ನು ಆನಂದಿಸುತ್ತಾ, ಹಾಡು ಕೇಳುತ್ತಾ ಮನೆಯ ಹೊರಭಾಗದ ಆವರಣದಲ್ಲಿ ಮಲಗಿದ್ದರು. ಇದನ್ನು ನೋಡಿದ ಅಲ್ಲೇ ಇದ್ದ ಹಳದಿ ಬಣ್ಣದ ಹಕ್ಕಿಯೊಂದಕ್ಕೆ ಏನನಿಸಿತೋ ಏನೋ ಸೀದಾ ಆಕೆ ಮಲಗಿದ್ದಲ್ಲಿಗೆ ಬಂದು ಆಕೆಯ ಕಿವಿಯಲ್ಲಿ ಸಿಕ್ಕಿಸಿಕೊಂಡಿದ್ದ ಇಯರ್ ಬಡ್ ಅನ್ನು ತನ್ನ ಕೊಕ್ಕಲ್ಲಿ ಎತ್ತಿಕೊಂಡು ಪರಾರಿಯಾಗಿದೆ. ಮಹಿಳೆ ಕಿವಿಯ ಬಳಿ ಏನೋ ಇದೆ ಎಂದು ಗಮನಿಸಿ ಕಣ್ಣು ಬಿಟ್ಟು ನೋಡುವಷ್ಟರಲ್ಲಿ ಹಕ್ಕಿ ಇಯರ್ ಬಡ್ ಅನ್ನು ಕೊಕ್ಕಲ್ಲಿ ಹಿಡಿದುಕೊಂಡಿತ್ತು.
ಮಹಿಳೆ ಅದನ್ನು ಪಡೆಯಲು ಎಷ್ಟೇ ಪ್ರಯತ್ನ ಪಟ್ಟರೂ ಸಾಧ್ಯವಾಗಲಿಲ್ಲ. ಹಕ್ಕಿ ಆ ಇಯರ್ ಬೆಡ್ ಅನ್ನು ಹೊತ್ತುಕೊಂಡು ಸಮೀಪದ ಮರವೇರಿತು. ನಂತರ ಆ ಜಾಗದಿಂದ ಹಾರಿ ವಯರೊಂದರ ಮೇಲೆ ಕುಳಿತಿದೆ. ಬಳಿಕ ಮಹಿಳೆ ವಾಸವಿರುವ ಮನೆಯ ಸಮೀಪ ಇಯರ್ ಬಡ್ ಹಿಡಿದುಕೊಂಡು ಬಂದಿದೆ. ಈ ವೇಳೆ ಮಹಿಳೆ ಅದಕ್ಕೆ ಬಾಳೆಹಣ್ಣು ನೀಡಿ ಅದರ ಬಾಯಲ್ಲಿದ್ದ ಇಯರ್ ಫೋನ್ ಕಸಿದುಕೊಳ್ಳಲು ಯತ್ನಿಸಿದ್ದಾರೆ. ಬಾಳೆಹಣ್ಣಿಗೆ ಪ್ರತಿಯಾಗಿ ಇಯರ್ ಬಡ್ ಕೊಡಲೊಪ್ಪದ ಹಕ್ಕಿ ಸೀದಾ ದೂರ ಹಾರಿದೆ.
ಈ ವಿಡಿಯೋ ನೋಡಿದ ಅನೇಕರು ಹಲವು ಕಾಮೆಂಟ್ ಮಾಡಿದ್ದಾರೆ. ಬಾಳೆಹಣ್ಣು ನೀಡಿದ ಮಾತ್ರಕ್ಕೆ ಅದು ಇಯರ್ ಫೋನ್ ವಾಪಸ್ ಕೊಡುವುದೇ ಎಂದು ಒಬ್ಬರು ಪ್ರಶ್ನಿಸಿದರೆ, ಮತ್ತೊಬ್ಬರು ಇಯರ್ ಫೋನ್‌ಗೆ ಒಂದು ಬಾಳೆಹಣ್ಣು ಸಾಕೇ ಎಂದು ಪ್ರಶ್ನಿಸಿದ್ದಾರೆ. ಹಕ್ಕಿಗೇಕೆ ಇಯರ್ ಬಡ್, ಹಕ್ಕಿಯೂ ಹಾಡು ಕೇಳುವುದೇ ಎಂದು ಇನ್ನೂ ಕೆಲವರು ಕೇಳಿದ್ದಾರೆ. ಈ ವಿಡಿಯೋ ಸಖತ್ ವೈರಲ್ ಆಗಿದ್ದು, ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗಂತ ಹಕ್ಕಿಗಳು ಇಲೆಕ್ಟ್ರಾನಿಕ್ ಐಟಂಗಳನ್ನು ಹೊತ್ತೊಯ್ಯುವುದು ಇದೇ ಮೊದಲೇನಲ್ಲಾ. ಕೆಲ ದಿನಗಳ ಹಿಂದೆ ಹಕ್ಕಿಯೊಂದು ಪ್ರವಾಸಿಗರ ಗೋ ಪ್ರೋ ಕ್ಯಾಮರಾ ಕಸಿದು ಪರಾರಿಯಾಗಿದೆ. ಆದರೆ ಕೊನೆಗೂ ಮಹಿಳೆ ಎಷ್ಟೆ ಹರಸಾಹಸಪಟ್ಟರು ಆಕೆಯ ಇಯರ್ ಬಡ್ ಸಿಗಲಿಲ್ಲ.













