

ಕೊಲಂಬೊ : ಶ್ರೀಲಂಕಾ ಸಂಸತ್ ನಲ್ಲಿ ನಡೆದ ಚುನಾವಣೆಯಲ್ಲಿ ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ರನಿಲ್ ವಿಕ್ರಮಸಿಂಘೆ ಆಯ್ಕೆಯಾಗಿದ್ದಾರೆ.
ಶ್ರೀಲಂಕಾದ 9ನೇ ಅಧ್ಯಕ್ಷರಾಗಲು ಹಂಗಾಮಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಮತ್ತು ಸಂಸದರಾದ ಡಲ್ಲಾಸ್ ಅಲಹಪ್ಪೆರುಮಾ ಮತ್ತು ಅನುರ ಕುಮಾರ ಡಿಸಾನಾಯಕೆ ನಿನ್ನೆ ತಮ್ಮ ನಾಮನಿರ್ದೇಶನಗಳನ್ನು ಸಲ್ಲಿಸಿದ್ದರು. ಇದಕ್ಕೂ ಮುನ್ನ ವಿರೋಧ ಪಕ್ಷದ ನಾಯಕ ಸಜಿತ್ ಪ್ರೇಮದಾಸ ಅವರು ನಾಮಪತ್ರ ಹಿಂಪಡೆದಿದ್ದರು. ಇದೀಗ ಅಧ್ಯಕ್ಷೀಯ ಚುನಾವಣೆ ಫಲಿತಾಂಶ ಬಂದಿದ್ದು ಸಿಂಹಳದ ಸಿಂಹಾಸನ ರನಿಲ್ ವಿಕ್ರಮಸಿಂಘೆ ಅವರಿಗೆ ದಕ್ಕಿದೆ.
ಶ್ರೀಲಂಕಾದ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ರನಿಲ್ ವಿಕ್ರಮಸಿಂಘೆ, ದೇಶವು ತುಂಬಾ ಕಠಿಣ ಪರಿಸ್ಥಿತಿಯಲ್ಲಿದೆ, ನಮ್ಮ ಮುಂದೆ ದೊಡ್ಡ ಸವಾಲುಗಳಿವೆ ಎಂದು ಶ್ರೀಲಂಕಾದ ಹೊಸದಾಗಿ ನೇಮಕಗೊಂಡ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಹೇಳಿದ್ದಾರೆ. ಶ್ರೀಲಂಕಾದ ತೀವ್ರ ಆರ್ಥಿಕ ಬಿಕ್ಕಟ್ಟಿನ ಮಧ್ಯೆ ಗೋಟಬಯ ರಾಜಪಕ್ಸೆ ರಾಜೀನಾಮೆ ನೀಡಿದ ಬಳಿಕ ಇಂದು ಹೊಸ ಅಧ್ಯಕ್ಷರನ್ನು ಆಯ್ಕೆ ಮಾಡಲಾಗಿದೆ.
ರನಿಲ್ ವಿಕ್ರಮಸಿಂಘೆ ವಿರುದ್ಧ ಶ್ರೀಲಂಕಾದ ಜನರಿಗೆ ವಿಪರೀತ ಆಕ್ರೋಶ ವ್ಯಕ್ತವಾಗಿತ್ತು. ಇದಿಗ ಪ್ರಧಾನಿಯಾಗಿಯೂ ಅವರು ಆಯ್ಕೆಯಾಗಿದ್ದು ಶ್ರೀಲಂಕಾದಲ್ಲಿ ಮುಂದೇನಾಗಲಿದೆ ಎಂಬ ಆತಂಕಕ್ಕೆ ಕಾರಣವಾಗಿದೆ.













