

Chikkamaglur : ತಿರುಪತಿ ಮತ್ತು ಚಿಕ್ಕಮಗಳೂರು ನಡುವೆ ಇತ್ತೀಚಿಗೆ ನೂತನ ರೈಲನ್ನು ಕೇಂದ್ರ ಸಚಿವ ವಿ ಸೋಮಣ್ಣ ಅವರು ಉದ್ಘಾಟಿಸಿದ್ದಾರೆ. ಇದರ ಬೆನ್ನಲ್ಲೇ ಈ ರೈಲಿಗೆ ಯಾವ ಹೆಸರಿಡಬೇಕು ಎಂಬ ವಿಚಾರ ಚರ್ಚೆಯಾಗುತ್ತಿದೆ. ಇದೀಗ ಈ ಹೆಸರಿಡುವ ವಿಚಾರ ವಿವಾದಕ್ಕೆ ಕಾರಣವಾಗಿದೆ.
ಹೌದು, ಶುಕ್ರವಾರ ಕೇಂದ್ರ ರೈಲ್ವೇ ಖಾತೆಯ ರಾಜ್ಯ ಸಚಿವ ವಿ. ಸೋಮಣ್ಣ ನೇತೃತ್ವದಲ್ಲಿ ಚಿಕ್ಕಮಗಳೂರು ನಗರದ ರೈಲ್ವೆ ನಿಲ್ದಾಣದಲ್ಲಿ ಸಾಂಕೇತಿಕವಾಗಿ ತಿರುಪತಿ-ಚಿಕ್ಕಮಗಳೂರು ರೈಲಿಗೆ ಚಾಲನೆ ನೀಡಲಾಗಿದೆ. ಈ ಕಾರ್ಯಕ್ರಮದ ವೇದಿಕೆ ಮೇಲೆ ಈ ರೆಲ್ವೆಗೆ ‘ದತ್ತಪೀಠ ಅಥವಾ ದತ್ತಾತ್ರೇಯ’ ಹೆಸರಿಡುವಂತೆ ಉಪ ಸಭಾಪತಿ ಪ್ರಾಣೇಶ್, ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಮನವಿ ಮಾಡಿದ್ದಾರೆ. ಆದರೀಗ ಹಿಂದೂ, ಮುಸ್ಲಿಮರ ನಡುವೆ ರೈಲಿಗೆ ಹೆಸರಿಡುವ ವಿಚಾರವಾಗಿ ವಿವಾದ ಸೃಷ್ಟಿಯಾಗಿದೆ. ಇಷ್ಟು ಮಾತ್ರವಲ್ಲ ಇದು ಪ್ರಧಾನಿ ನರೇಂದ್ರ ಮೋದಿ ಅವರ ಅಂಗಳಕ್ಕೂ ತಲುಪಿದೆ.
ದತ್ತಪೀಠ ಎಕ್ಸ್‌ಪ್ರೆಸ್ ಎಂದು ಹೆಸರಿಡುವಂತೆ ಹಿಂದೂ ಸಂಘಟನೆಗಳು ಫೇಸ್ ಬುಕ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ದತ್ತಪೀಠ ಎಕ್ಸ್‌ಪ್ರೆಸ್ ಅಭಿಯಾನ ಆರಂಭಿಸಿದ್ದಾರೆ. ದತ್ತಪೀಠ ಅಥವಾ ದತ್ತಾತ್ರೇಯ ಹೆಸರಿಗೆ ಸೋಮಣ್ಣ ಸಮ್ಮತಿ ನೀಡಿದ್ದು, ಎರಡರಲ್ಲಿ ಒಂದು ಹೆಸರು ಸೂಚಿಸುವಂತೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿಗೆ ಸೂಚಿಸಿದ್ದಾರೆ.
ಚಿಕ್ಕಮಗಳೂರು ಟು ತಿರುಪತಿಗೆ ಆರಂಭವಾಗುವ ರೈಲಿಗೆ ದತ್ತಪೀಠ ಎಕ್ಸ್‌ಪ್ರೆಸ್ ಅಥವಾ ದತ್ತಾತ್ರೇಯ ಎಕ್ಸ್‌ಪ್ರೆಸ್ ಹೆಸರು ನಿಗದಿ ಆಗುವುದು ಖಚಿತವಾಗುತ್ತಿದ್ದಂತೆ, ಇತ್ತ ಮುಸ್ಲಿಂ ಸಂಘಟನೆಗಳು, ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದ ಶಾಖಾದ್ರಿ ಕುಟುಂಬಸ್ಥರು ವಿರೋಧ ವ್ಯಕ್ತಪಡಿಸಿದ್ದಾರೆ. ರೈಲಿಗೆ ‘ಬಾಬಾ ಬುಡನ್ ಎಕ್ಸ್‌ಪ್ರೆಸ್’ ಹೆಸರಿಡುವಂತೆ ಪಟ್ಟು ಹಿಡಿದಿದ್ದಾರೆ.
17ನೇ ಶತಮಾನದಲ್ಲಿ ಯೆಮೆನ್‌ನಿಂದ ಏಳು ಕಾಫಿ ಬೀಜಗಳನ್ನು ತಂದು ಚಿಕ್ಕಮಗಳೂರಿನ ಬಾಬಾಬುಡನ್‌ಗಿರಿಯಲ್ಲಿ ಬೆಳೆಸಿ ಭಾರತದಲ್ಲಿ ಕಾಫಿ ಕೃಷಿ ಆರಂಭಕ್ಕೆ ಕಾರಣವಾದವರು ಬಾಬಾಬುಡನ್. ಇದರಿಂದ ಚಿಕ್ಕಮಗಳೂರು ಇಂದು ಭಾರತದ ಕಾಫಿ ತವರೆಂಬ ಹೆಸರು ಪಡೆದಿದೆ’ ಎಂದು ಬಾಬಾಬುಡನ್ ವಂಶಸ್ಥ ಸಯ್ಯದ್ ಫಕ್ರುದ್ದೀನ್ ಶಾ- ಖಾದ್ರಿ ಪತ್ರದಲ್ಲಿ ತಿಳಿಸಿದ್ದಾರೆ. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರಿಗೂ ಈ ಪತ್ರ ರವಾನಿಸಿದ್ದಾರೆ.












