

ಕೊಪ್ಪಳ:ಅಪ್ಪ-ಮಗಳ ಬಾಂಧವ್ಯ ಬಹಳ ಅಪರೂಪವಾದದ್ದು. ತಾಯಿ ತುತ್ತು ನೀಡಿದರೆ ತಂದೆ ತನ್ನ ಜೀವವೇ ಬದಿಗಿಟ್ಟು ತನ್ನ ಮಗುವಿಗೆ ಆಶ್ರಯದಾತ ಆಗುವನು.ಇಂತಹುದೇ ಒಂದು ತಂದೆ-ಮಗಳ ಸಂಬಂಧದ ಕರಳು ಕಿತ್ತು ಬರುವ ದೃಶ್ಯ ಕೊಪ್ಪಳದಲ್ಲಿ ನಡೆದಿದೆ.

ಹೌದು ಈ ಬಾಲಕಿಯ ತಂದೆ ಕ್ರೂರಿ ಕೊರೋನಗೆ ತನ್ನ ಜೀವ ತೆತ್ತಿದ್ದರು. ಆದರೆ ಮಗಳ ಪ್ರೀತಿ ಅವಳ ತಂದೆ ತನ್ನ ಬಳಿ ಇದ್ದಾರೆ ಎಂಬ ನಂಬಿಕೆ ಮೂಡಿಸಿದೆ.ಕುಷ್ಟಗಿ ಪಟ್ಟಣದ ಬಾಲಕಿ ಸ್ಪಂದನಾ ತನ್ನ 8ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ತಂದೆಯ ಸಮಾಧಿ ಮುಂದೆಯೇ ಕೇಕ್ ಕತ್ತರಿಸಿದ್ದಾಳೆ.
ಬಾಲಕಿ ಸ್ಪಂದನಾಳ ತಂದೆ ಮಹೇಶ ಕೊನಸಾಗರ ಅವರು ಕಳೆದ ಮೇ ತಿಂಗಳಲ್ಲಿ ಕರೊನಾ ಸೋಂಕಿಗೆ ಬಲಿಯಾಗಿದ್ದರು.ತಂದೆ ಕೋವಿಡ್‌ನಿಂದ ಮೃತಪಟ್ಟು ಮಣ್ಣಲ್ಲಿ ಮಣ್ಣಾಗಿದ್ದರೂ,ಇವರ ಮಗಳು ಮಾತ್ರ ತಂದೆ ಪಕ್ಕದಲ್ಲೇ ಇರುವ ರೀತಿ ಸಮಾಧಿಗೇ ಕೇಕ್ ಅನ್ನು ತಿನ್ನಿಸುವ ಮೂಲಕ ತನ್ನ ಪ್ರೀತಿ ಅರ್ಪಿಸಿದ್ದಾಳೆ.
ಇದೀಗ ಈ ದೃಶ್ಯ ಜಾಲತಾಣದಲ್ಲಿ ವೈರಲ್ ಆಗಿದ್ದು, ಕ್ರೂರಿ ಕೊರೋನ ಗೆ ನೆಟ್ಟಿಗರು ಹಿಡಿಶಾಪ ಹಾಕುತ್ತಿದ್ದಾರೆ. ಪುಟ್ಟ ಕಂದನನ್ನು ತಂದೆಯಿಂದ ದೂರ ಮಾಡಿದ ದುರ್ವಿಧಿಗೂ ಮನದಲ್ಲೇ ಶಪಿಸುತ್ತಿದ್ದಾರೆ.













