Home Food ಕಾಫಿ ಕುಡಿಯಲು ಹೋದ ದಂಪತಿಗೆ ಶಾಪ್ ಕೊಡ್ತು ಶಾಕ್ ! ಎರಡು ಕಪ್ ಕಾಫಿಗೆ ಬಂತು...

ಕಾಫಿ ಕುಡಿಯಲು ಹೋದ ದಂಪತಿಗೆ ಶಾಪ್ ಕೊಡ್ತು ಶಾಕ್ ! ಎರಡು ಕಪ್ ಕಾಫಿಗೆ ಬಂತು 3.6 ಲಕ್ಷದಷ್ಟು ಬಿಲ್!

Hindu neighbor gifts plot of land

Hindu neighbour gifts land to Muslim journalist

ಕಾಫಿ ಟೀ ಅಂದ್ರೆ ಹಲವರಿಗೆ ಪಂಚ ಪ್ರಾಣ. ಒಂದು ಹೊತ್ತು ಊಟ ಬೇಕಾದರೂ ಬಿಡ್ತಾರೆ ಆದ್ರೆ ಕಾಫಿ, ಟೀ ಗಳನ್ನು ಬಿಡುವುದಿಲ್ಲ. ಮನಸ್ಸು, ದೇಹ ಎರಡೂ ಬಳಲಿರುವಾಗ ಒಂದು ಕಪ್ ಕಾಫಿ ಕುಡುದ್ರೆ ಮನಸ್ಸಿಗೆ ಏನೋ ಒಂದು ನೆಮ್ಮದಿ. ದೇಹಕ್ಕಿಡಿದ ಜಡವನ್ನೆಲ್ಲ ಕೆಲವೇ ಕ್ಷಣಗಳಲ್ಲಿ ಹೋಗಲಾಡಿಸಿ ನಿರಾಳವಾದ ಭಾವನೆ ಮೂಡುತ್ತದೆ. ಇನ್ನು ಹೊರಗಡೆ ಹೋದಾಗ, ಸ್ನೇಹಿತರು ಅಥವಾ ಯಾರಾದರೂ ಪರಿಚಯಸ್ಥರು ಸಿಕ್ಕಾಗ ‘ಬನ್ನಿ ಒಂದು ಕಪ್ ಕಾಫಿ ಕುಡಿಯುವ’ ಎಂಬ ಮಾತು ಬರುವುದು ಸಹಜ. ಹೀಗೆ ಆತ್ಮೀಯರ ಜೊತೆಗೂಡಿ ಕಾಫಿ ಶಾಪ್ ಗೆ ಹೋಗಿ, ಕಾಫಿ ಕುಡಿದು, ಬಳಿಕ ಬಿಲ್ ಕೇಳಿದಾಗ ಎರಡು ಕಾಫಿಗೆ ಲಕ್ಷಾಂತರ ರೂಪಾಯಿ ಚಾರ್ಜ್ ಮಾಡಿದ್ರೆ ಹೇಗಾಗಬೇಡ?

ಹೌದು, ಇಂಥದೊಂದು ಅನುಭವ ಅಮೆರಿಕದ ದಂಪತಿಗೆ ಆಗಿದೆ! ಜೆಸ್ಸೆ ಹಾಗೂ ಡೀಡಿ ಒ ಡೆಲ್ ಎಂಬ ದಂಪತಿ, ಜನಪ್ರಿಯ ಕಾಫಿ ಶಾಪ್ ಆದಂತಹ ಸ್ಟಾರ್ ಬಕ್ಸ್ ನಲ್ಲಿ ಎರಡು ಕಾಫಿ ಆರ್ಡರ್ ಮಾಡಿ ಕುಡಿದಿದ್ದಾರೆ. ನಂತರ ಅವರಿಗೆ ಬಂದ ಬಿಲ್ ನೋಡಿ ಇಬ್ಬರೂ ಹೌಹಾರಿದ್ದಾರೆ! ಯಾಕಂದ್ರೆ ಅವರಿಗೆ ಬಂದ ಬಿಲ್ಲಿನಲ್ಲಿ ಬರೋಬರಿ 3.6 ಲಕ್ಷ ರೂ.($4,456.27) ಚಾರ್ಜ್ ಮಾಡಲಾಗಿತ್ತು!

ಆದರೆ ಗಮ್ಮತ್ತೆಂದರೆ, ಈ ದಂಪತಿಗೆ ಸ್ಟಾರ್ ಬಕ್ಸ್ ಶಾಪ್, ಕಾಫಿ ಬೆಲೆಗಿಂತ ಹೆಚ್ಚು ಟಿಪ್ಸ್ ಚಾರ್ಜ್ ಮಾಡಿತ್ತು. ಹೀಗಾಗಿ ಈ ದಂಪತಿಗೆ ಕಾಫಿ ಕುಡಿದು ಟೆನ್ಷನ್ ಕಡಿಮೆಯಾಗುವ ಬದಲಿಗೆ ಹೆಚ್ಚಾಗಿದೆ. ಇಲ್ಲ ಅಂದ್ರೆ ನೀವೇ ಯೋಚಿಸಿ ಅಮೆರಿಕದಲ್ಲಿ ಒಂದು ಕಪ್ ಕಾಫಿ ಬೆಲೆ ಹೆಚ್ಚೆಂದ್ರೆ 10 ಡಾಲರ್ ಇರಬಹುದು. ಹೀಗಿರುವಾಗ ಎರಡು ಕಪ್ ಕಾಫಿಗೆ 4 ಸಾವಿರ ಡಾಲರ್ ಗಿಂತ ಹೆಚ್ಚು ಬಿಲ್ ಮಾಡಿದ್ರೆ ಹೇಗಾಗಬೇಡ? ಒಕ್ಲಹೋಮ ನಿವಾಸಿಗಳಾಗಿರುವ ಡೀಡಿ ಖಾತೆಯಿಂದ ದೊಡ್ಡ ಮೊತ್ತದ ಹಣ ಖಾಲಿಯಾದಾಗಲೇ ಅವರಿಗಿದು ಅರಿವಾಗಿದೆ.

ಕಾಫಿ ಶಾಪ್ ನಲ್ಲಿ ಡೀಡಿ ದಂಪತಿ ಐಸ್ಡ್ ಅಮೆರಿಕನೋ (iced americano) ಹಾಗೂ ಕ್ಯಾರಮೆಲ್ ಫ್ರಪ್ಪುಸ್ಸಿನೋ (caramel frappuccino) ಕಾಫಿ ಆರ್ಡರ್ ಮಾಡಿದ್ದು, ಇದಕ್ಕೆ ಕೇವಲ 10 ಡಾಲರ್ ಅಂದ್ರೆ 820ರೂ. ಬೆಲೆ ಆಗಿದೆ. ಆನಂತರ ಎಚ್ಚೆತ್ತುಕೊಂಡ ದಂಪತಿ ಈ ದುಬಾರಿ ಶುಲ್ಕದ ಬಗ್ಗೆ ಜೆಸ್ಸೆ ಸ್ಟಾರ್ ಬಕ್ಸ್ ಫ್ರಾಂಚೈಸಿ ಜಿಲ್ಲಾ ವ್ಯವಸ್ಥಾಪಕರನ್ನು ಸಂಪರ್ಕಿಸಿದ್ದಾರೆ. ಆನಂತರ ಸ್ಥಳೀಯ ಟುಸ್ಲ ಸ್ಟಾರ್ ಬಕ್ಸ್ ಶಾಪ್ ನಲ್ಲಿ ಎರಡು ಕಪ್ ಕಾಫಿಗೆ ತಪ್ಪಾಗಿ 4,444.44 ಡಾಲರ್ ಚಾರ್ಜ್ ಮಾಡಿರುವುದು ಅವರ ಗಮನಕ್ಕೆ ಬಂದಿದೆ. ಕಾಫಿ ಶಾಪ್ ನಲ್ಲಿ ನೆಟ್ ವರ್ಕ್ ಸಮಸ್ಯೆಯಿಂದ ಹೀಗಾಗಿದೆ ಎಂಬ ತಿಳಿದಿದೆ. ಅಲ್ಲದೆ, ತಪ್ಪನ್ನು ಸರಿಪಡಿಸಲು ಅವರಿಗೆ 4,444.44 ಡಾಲರ್ ಮೊತ್ತದ ಎರಡು ಚೆಕ್ ಗಳನ್ನು ನೀಡಲಾಗಿತ್ತು. ಆದರೆ, ಚೆಕ್ ನಲ್ಲಿ ಬರೆಯುವಾಗ ತಪ್ಪಾದ ಹಿನ್ನೆಲೆಯಲ್ಲಿ ಎರಡೂ ಚೆಕ್ ಗಳು ಕೂಡ ಬೌನ್ಸ್ ಆಗಿದ್ದಾವೆ.

ಇನ್ನು ವಿಚಿತ್ರವೆಂದರೆ ಈ ಕಾರಣದಿಂದ ಥೈಲ್ಯಾಂಡ್ ನಲ್ಲಿರುವ ತಮ್ಮ ಹುಟ್ಟೂರಿಗೆ ಹೋಗುವ ಪ್ರವಾಸವನ್ನು ಡೀಡಿ ರದ್ದುಗೊಳಿಸಿದ್ಧಾರೆ!. ಆರು ಸದಸ್ಯರ ಇವರ ಕುಟುಂಬಕ್ಕೆ ಸ್ಟಾರ್ ಬಕ್ಸ್ ವಿಧಿಸಿದ ಬಿಲ್ ದೊಡ್ಡ ಹೊರೆಯಾಗಿ ಪರಿಣಮಿಸಿದೆ. ನ್ಯೂ ಯಾರ್ಕ್ ಪೋಸ್ಟ್ ನೀಡಿರುವ ಮಾಹಿತಿ ಪ್ರಕಾರ ಸಮಸ್ಯೆ ಬಗೆಹರಿಸಿಕೊಳ್ಳಲು ದಂಪತಿ 30-40 ಬಾರಿ ಕಸ್ಟಮರ್ ಸರ್ವೀಸ್ ಸಂಪರ್ಕಿಸಬೇಕಾಗಿ ಬಂದಿತ್ತು. ಆದರೆ, ಸ್ಟಾರ್ ಬಕ್ಸ್ ಉದ್ಯೋಗಿ ಜೆಸ್ಸೆ ದೊಡ್ಡ ಮೊತ್ತದ ಟಿಪ್ ನೀಡಿದ್ದರು ಎಂದು ಆರೋಪಿಸಿದ್ದಾರೆ. ಅಲ್ಲದೆ, ಇದರಲ್ಲಿ ದಂಪತಿಯದ್ದೇ ತಪ್ಪು ಎಂದಿದ್ದಾರೆ. ಆದರೆ, ಈ ಬಗ್ಗೆ ಸ್ಪಷ್ಟನೆ ನೀಡಿರುವ ಜೆಸ್ಸೆ ಈ ಆರೋಪ ತಳ್ಳಿ ಹಾಕಿದ್ದು, ನಾನು’ನೋ ಟಿಪ್’ ಆಯ್ಕೆ ಮಾಡಿಕೊಂಡಿದ್ದೆ. ನೆಟ್ ವರ್ಕ್ ಸಮಸ್ಯೆಯೇ ಇದಕ್ಕೆಲ್ಲ ಕಾರಣ ಎಂದು ಹೇಳಿದ್ದಾರೆ.

ಇನ್ನು ನೀವೇನಾದರೂ ಹೀಗೆ ಕಾಫಿ ಶಾಪ್ ಗೆ ಹೋಗಿ ಕಾಫಿ ಕುಡಿಯುವ ಮುನ್ನ ಒಮ್ಮೆ ಕಾಫಿಯ ಬಿಲ್ ನೋಡಿ. ಇಲ್ಲ ಕಾಫಿ ಕುಡಿದ ಬಳಿಕ ಟಿಪ್ಸ್ ಕೊಡುವ ಆಲೋಚನೆ ಇದ್ದರೆ ಯಾವುದನ್ನು ಆಯ್ಕೆ ಮಾಡಿಕೊಂಡಿದ್ದೀರಿ ಎಂದು ನೋಡಿ. ಇಲ್ಲದಿದ್ದರೆ ಈ ರೀತಿ ಕಾಫಿ ಶಾಪ್ ಗಳು ಗ್ರಾಹಕರಿಗೆ ಬಿಲ್ ಮೂಲಕ ಶಾಕ್ ನೀಡಿದ್ರೆ ಕಾಫಿ ನಾಲಿಗೆಯ ರುಚಿಯನ್ನೇ ಕೆಡಿಸಿ ಮುಂದೆಂದೂ ಕಾಫಿ ಹೀರದಂತೆ ಮಾಡುವುದಂತೂ ಗ್ಯಾರಂಟಿ.