

Belthangady: ಬೆಳ್ತಂಗಡಿ ತಾಲೂಕಿನ ಗೇರುಕಟ್ಟೆ ಸಮೀಪದ ಓಡಿಲ್ನಾಳ ಗ್ರಾಮದಲ್ಲಿ ನಡೆದ ಬಾಲಕ ಸುಮಂತ್ ನಿಗೂಢ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಸ್ಟ್ ಮಾರ್ಟ್ ವರದಿಯಲ್ಲಿ ಸ್ಪೋಟಕ ಮಾಹಿತಿ ಪೊಲೀಸರಿಗೆ ದೊರೆತಿದ್ದು, ಬಾಲಕ ಕೆರೆಯಲ್ಲಿ ಮುಳುಗುವ ಮೊದಲು ಜೀವಂತ ಇದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಜನವರಿ 12 ರಂದು ಬೆಳಗ್ಗೆ ಧನುಪೂಜೆಗೆಂದು ಸುಮಂತ್ ಬೆಳಗ್ಗೆ 5 ಗಂಟೆಗೆ ಎದ್ದು ದೇವಸ್ಥಾನಕ್ಕೆ ಹೊರಟಿದ್ದ. ವಾರದಲ್ಲೊಮ್ಮೆ ಪೂಜೆಗೆ ತೆರಳುವ ವಾಡಿಕೆ ಮಾಡಿಕೊಂಡಿದ್ದ. ಆದರೆ 12ರಂದು ಬೆಳಗ್ಗೆ ದೇವಸ್ಥಾನಕ್ಕೆ ಹೋದವನು ಮರಳಿ ಮನೆಗೆ ಬಂದಿರಲಿಲ್ಲ. ಮನೆಯವರು ಬಳಿಕ ಹುಡುಕಾಟ ನಡೆಸಿದಾಗ ಮನೆಯಿಂದ 500 ಮೀಟರ್ ದೂರದ ಬಾವಿಯಲ್ಲಿ ಶವ ಪತ್ತೆಯಾಗಿದೆ. ಶವವನ್ನು ಬಾವಿಯಿಂದ ಮೇಲೆತ್ತಿದಾಗ ತಲೆಯಲ್ಲಿ ಗಾಯದ ಗುರುತುಗಳಿದ್ದವು. ಹೀಗಾಗಿ ಏನೋ ಅಸಹಜ ಆಗಿರಬೇಕೆಂಬ ಶಂಕೆ ವ್ಯಕ್ತವಾಗಿತ್ತು.
ಇದೀಗ ಶವದ ಪೋಸ್ಟ್ ಮಾರ್ಟಮ್ ಪರೀಕ್ಷೆಯ ಪ್ರಾಥಮಿಕ ವರದಿಯ ಪ್ರಕಾರ, ಬಾಲಕ ಕೆರೆಯಲ್ಲಿ ಮುಳುಗುವ ಸಮಯದಲ್ಲಿ ಜೀವಂತನಾಗಿದ್ದ ಎಂಬ ಮಾಹಿತಿ ಇದೆ. ಅಲ್ಲದೆ, ನೀರಿನಲ್ಲಿ ಮುಳುಗಿದ್ದೇ ತಕ್ಷಣದ ಸಾವಿಗೆ ಕಾರಣವಾಗಿರುತ್ತದೆ ಎಂದು ತಿಳಿಸಿದೆ. ತಲೆಯ ಮೇಲಿರುವ ಗಾಯಗಳು ಮಂದ ಬಲದ ಗಾಯವಾಗಿದ್ದು ಮತ್ತು ಯಾವುದೇ ಚೂಪಾದ ಆಯುಧಗಳಿಂದ ಅಥವಾ ಬಾವಿ ಒಳಗಡೆ ಬಿದ್ದ ಸಂದರ್ಭದಲ್ಲಿ ಆಗಿರುವ ಗಾಯಗಳಲ್ಲ ಎಂಬ ನೆಲೆಯಲ್ಲಿ ಪ್ರಾಥಮಿಕ ಮಾಹಿತಿಗಳಿವೆ.
ಈ ಹಿನ್ನಲೆ ಅಸಹಜ ಸಾವಿನ ಪ್ರಕರಣವನ್ನು ಪೊಲೀಸರು ಕೊಲೆ ಪ್ರಕರಣವನ್ನಾಗಿ ಪರಿಗಣಿಸಿದ್ದು, ಬೆಳ್ತಂಗಡಿ ಡಿವೈಎಸ್ಪಿ ನೇತೃತ್ವದಲ್ಲಿ ತನಿಖೆಗೆ ನಾಲ್ಕು ಪೊಲೀಸ್ ತಂಡಗಳನ್ನು ರಚಿಸಲಾಗಿದೆ. ಗುರುವಾರ ಪ್ರಕರಣದ ತನಿಖೆ ಮುಂದುವರಿಸಿದ ಪೊಲೀಸರು ಮೃತದೇಹ ಪತ್ತೆಯಾದ ಕೆರೆಯ ನೀರನ್ನು ಸಂಪೂರ್ಣವಾಗಿ ಬತ್ತಿಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಕೆರೆಯಲ್ಲಿ ಬಾಲಕ ಮನೆಯಿಂದ ತಂದಿದ್ದ ಲೈಟ್ ಪತ್ತೆಯಾಗಿದೆ. ಅದೇರೀತಿ ಹಳೆಯ ಕತ್ತಿಯೊಂದು ಪತ್ತೆಯಾಗಿದೆ.
ಸೋಕೋ ತಂಡ ಹಾಗೂ ಪೊಲೀಸರು ಈ ವಸ್ತಗಳನ್ನು ಸಂಗ್ರಹಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ತನಿಖೆಗೆ ನಾಲ್ಕು ತಂಡಗಳನ್ನು ರಚಿಸಲಾಗಿದ್ದು, ಎಲ್ಲ ಆಯಾಮಗಳಲ್ಲಿ ತನಿಖೆ ಮುಂದುವರಿದಿದೆ.













