ಮಂಗಳೂರು: ಎಡಪದವು ಬಳಿಯ ಪೂಪಾಡಿಕಲ್ಲು ಎಂಬಲ್ಲಿ ಅಯ್ಯಪ್ಪ ಮಲಾಧಾರಿಗಳ ಪೂಜಾ ಕಾರ್ಯಕ್ರಮಕ್ಕೆ ಮುಸ್ಲಿಂ ವ್ಯಕ್ತಿಯೊಬ್ಬರು ಚುರುಮುರಿ ಸ್ಟಾಲ್ ಹಾಕಿದ್ದು, ಆಗ ಅಲ್ಲಿಗೆ ದನವೊಂದು ಬಂದಿದ್ದು, ಟೊಮೊಟೋ ತಿನ್ನಲು ಮುಂದಾಗಿತ್ತು. ಆಗ ವ್ಯಕ್ತಿ ಕೋಪಗೊಂಡು ಟೊಮೆಟೋ ಕೊಯ್ಯುವ ಹರಿತ ಚೂರಿಯಲ್ಲಿ ದನದ ಮುಖಕ್ಕೆ ಬೀಸಿದ್ದು, ದನದ ಮುಖದಲ್ಲಿ ಎರಡು ಇಂಚು ಆಳದ ಗಾಯವಾಗಿ ರಕ್ತ ಬಂದಿದೆ ಎಂದು ವರದಿಯಾಗಿದೆ.
ಉಮರಬ್ಬ ಎಂಬ ವ್ಯಕ್ತಿ ಚುರುಮುರಿ ಸ್ಟಾಲ್ ಹಾಕಿದ ವ್ಯಕ್ತಿ, ಹಾಗೂ ಚೂರಿ ಇರಿದಾತ ಎಂದು ವರದಿಯಾಗಿದೆ. ದನಕ್ಕೆ ಚಾಕುವಿನಿಂದ ಇರಿದ ಕೃತ್ಯಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ನಂತರ ದನವನ್ನು ಹಿಡಿದು ಸ್ಥಳೀಯರು ಪ್ರಥಮ ಚಿಕಿತ್ಸೆ ನೀಡಿದ್ದಾರೆ.
ಘಟನೆ ಕುರಿತು ಪೊಲೀಸರಿಗೆ ದೂರು ನೀಡಿಲ್ಲ ಎನ್ನಲಾಗಿದೆ. ಬಜರಂಗದಳ ಜಿಲ್ಲಾ ಮುಖಂಡರು ಆರೋಪಿ ವಿರುದ್ಧ ಕ್ರಮಕ್ಕೆ ಆಗ್ರಹ ಮಾಡಿದ್ದಾರೆ. ಈ ಘಟನೆಗೆ ಪೊಲೀಸ್ ಕಮಿಷನರ್ ಪ್ರತಿಕ್ರಿಯೆ ನೀಡಿದ್ದು, ಆಕಸ್ಮಿಕವಾಗಿ ಈ ಘಟನೆ ನಡೆದಿದೆ. ದನವನ್ನು ಸಾರ್ವಜನಿಕ ಪ್ರದೇಶದಲ್ಲಿ ಬಿಟ್ಟಿರುವುದು ತಪ್ಪು. ಹಾಗಾಗಿ ಅದರ ಮಾಲೀಕರ ವಿರುದ್ಧ ಕೇಸು ದಾಖಲು ಮಾಡಲಾಗಿದೆ. ದನದ ಮೇಲೆ ಕ್ರೌರ್ಯ ತೋರಿಸಿದ್ದಕ್ಕಾಗಿ ಚೂರಿ ಬೀಸಿದ ವ್ಯಕ್ತಿ ವಿರುದ್ಧ ಸುಮೊಟೋ ಕೇಸು ದಾಖಲಿಸಲಾಗಿದೆ ಎಂದು ತಿಳಿಸಿರುವುದಾಗಿ ವರದಿಯಾಗಿದೆ.
