ಪಾಲ್ತಾಡಿಯ ಬಂಬಿಲಗುತ್ತಿನಲ್ಲಿ ಶತಮಾನಗಳಿಂದಲೂ ನಡೆಯುತ್ತಿದೆ ತುಳುವರ ಭೂಮಿ ಪೂಜೆ – ಗದ್ದೆಕೋರಿ
ಸವಣೂರು :ಪಾಲ್ತಾಡಿ ಗ್ರಾಮದ ಬಂಬಿಲಗುತ್ತಿನ ಕಂಬಳಗದ್ದೆ ಕೋರಿಯು ಗುತ್ತಿಮಾರ ಕಂಬಳಗದ್ದೆಯಲ್ಲಿ ಪೂಕರೆ ಹಾಕುವುದು ಮತ್ತು ಬಲ್ಲಿಗದ್ದೆಗೆ ಬಾಳೆ ಹಾಕುವುದು ಬಂಬಿಲಗುತ್ತು, ಕುಂಜಾಡಿ ಹಾಗೂ ಗ್ರಾಮದ ಹತ್ತು ಸಮಸ್ತರ ಕೂಡುವಿಕೆಯಲ್ಲಿ ನಡೆಯಿತು. ಅದೇ ದಿನ ರಾತ್ರಿ 8ಕ್ಕೆ ಗ್ರಾಮದೈವ ಹಾಗೂ ಕಲ್ಲುರ್ಟಿ ದೈವಗಳಿಗೆ ನೇಮೋತ್ಸವ ನಡೆಯಿತು.
ಅ.18ರ ರಾತ್ರಿ ಗದ್ದೆಯ ಸುತ್ತ ಕೋಳ್ತಿರಿ ದೀಪ ಉರಿಸಿ ನಾಗಣಿಸುವುದು,ಅನ್ನಸಂತರ್ಪಣೆ ,ಅ.19ರಂದು ಎರುಕೊಲ,ಕುದುರೆಕೋಲ,ಕಂಡದ ಉರವ,ಕಂಬಳ ಗದ್ದೆಗೆ ಪೂಕರೆ ಹಾಕುವುದು,ಬಳ್ಳಿಗದ್ದೆಗೆ ಬಾಳೆ ಹಾಕುವುದು,ಅನ್ನಸಂತರ್ಪಣೆ ನಡೆಯಿತು.
ರಾತ್ರಿ ಕಲ್ಲುರ್ಟಿ ದೈವದ ಮತ್ತು ಗ್ರಾಮದೈವ ಅಬ್ಬೆಜಲಾಯ ನೇಮ ನಡೆಯಿತು.
ಈ ಹಿಂದೆ ತುಳುನಾಡಿನ ವಿವಿದೆಡೆ ಈ ಸಂಪ್ರದಾಯ ನಡೆಯುತ್ತಿದ್ದರೂ ಕಾಲ ಕ್ರಮೇಣ ದೂರವಾಗುತ್ತ ಬಂದಿದೆ.ಆದರೆ ಪಾಲ್ತಾಡಿ ಗ್ರಾಮದ ಬಂಬಿಲಗುತ್ತಿನಲ್ಲಿ ಇದು ಅನಾದಿಕಾಲದಿಂದ ಈಗಿನವರೆಗೂ ನಿರಂತರವಾಗಿ ಪ್ರತೀ ವರ್ಷ ನಡೆಯುತ್ತಿದೆ.
ಏನಿದು ಗದ್ದೆಕೋರಿ
ತುಳುನಾಡು ಸಂಸ್ಕೃತಿ ಸಂಸ್ಕಾರಗಳ ತವರೂರು,ಇಲ್ಲಿ ಅನೇಕ ಆಚರಣೆಗಳು,ಪದ್ದತಿಗಳು ಚಾಲ್ತಿಯಲ್ಲಿದೆ ಹಾಗೂ ಅವುಗಳಿಗೆ ತನ್ನದೇ ಆದ ಮಹತ್ವಗಳಿವೆ.ಇಂತಹ ಆಚರಣೆಗಳಲ್ಲಿ ಗದ್ದೆ ಕೋರಿಯೂ ಒಂದು.ಇದಕ್ಕೆ ತುಳುನಾಡಿನ ಭೂಮಿ ಪೂಜೆ ಎಂದೂ ಕರೆಯುತ್ತಾರೆ.
ಪರಶುರಾಮಸೃಷ್ಟಿಯ ತುಳುನಾಡಿನಲ್ಲಿ ಬಳ್ಳಾಕುಲು ಅವರ ಆಡಳಿತಕ್ಕೊಳಪಟ್ಟ ರಾಜಮನೆತನಗಳಿದ್ದು ,ಗ್ರಾಮೀಣ ಪ್ರದೇಶದಲ್ಲಿ ಅರಸು ಮನೆತನಗಳಿಗೆ ಸಂಬಂಧಪಟ್ಟ ಉಪಮನೆತನಗಳಿದ್ದು ಅವುಗಳಲ್ಲಿ ಬೀಡು,ರಾಜ್ಯ ಗುತ್ತು,ಗುತ್ತು,ಬಾರಿಕೆ,ತಲೆ ಮನೆ ಎಂಬ ಮನೆತನಗಳು ಅಂದಿನ ಕಾಲದ ರಾಜಕೀಯ ಪದ್ದತಿಯ ವ್ಯವಸ್ಥೆಗಳಾಗಿದ್ದು ,ಆ ಕಾಲದಲ್ಲಿ ಕಂಬಳಗದ್ದೆಗಳಿದ್ದು.ಇಂತಹ ಕಂಬಳ ಗದ್ದೆಗಳು ಆ ಗ್ರಾಮದ ದೈವಗಳ ಆರಾಧನೆಗೂ ನಿಕಟ ಸಂಬಂಧವಿತ್ತು.
ಕಂಬಳ ಗದ್ದೆಕೋರಿ
ಭೂಮಿಯನ್ನು ಪೂಜಿಸಿ ಆರಾಧಿಸುವಂತಹ ತುಳುವರ ಸಂಪ್ರದಾಯ ಅನಾದಿಕಾಲದಿಂದಲೂ ನಡೆದುಕೊಂಡ ಬಂದಿರುವ ಪದ್ದತಿಯಾಗಿದೆ.ಇದನ್ನು ಆರಾಧಿಸುವಲ್ಲಿ ಪ್ರಾದೇಶಿಕನುಸಾರವಾಗಿ ಹಲವು ಕಟ್ಟುಪಾಡುಗಳಿವೆ.
ಹೆಚ್ಚಾಗಿ ಅಜಿಲರ ಸೀಮೆ,ಪಂಜ ಸಾರ ಸೀಮೆಗಳಲ್ಲಿ ಗದ್ದೆಕೋರುವ ಹಿಂದಿನ ದಿವಸ ನಾಗನನ್ನು ಆರಾಧಿಸುವ ಒಂದು ಅಂಶ ಕಟ್ಟುಪಾಡಿನಂತೆ ನಡೆಯುತ್ತದೆ.ಇದನ್ನು ನಾಗಣಿಸುವುದು ಎನ್ನುತ್ತಾರೆ.
ಗುತ್ತು ಹಾಗೂ ಗ್ರಾಮಸ್ಥರು ಸೇರಿ ದೈವದ ಚಾವಡಿಯಲ್ಲಿ ದೀಪವನ್ನು ಉರಿಸಿ ವಾಳಗದೊಂದಿಗೆ ದೈವಪಾತ್ರಿ ಶುದ್ದೀಕರಿಸಿದ ಬಟ್ಟೆಯನ್ನು ಹರಿದು ಕೋಲುತಿರಿ (ಬಿದಿರಿನ ಕಡ್ಡಿ)ಗೆ ಬಟ್ಟೆಯನ್ನು ಸುತ್ತಿ,ಎಣ್ಣೆಯಲ್ಲಿ ಅದ್ದಿ ದೈವದ ಪಾತ್ರಿಯಲ್ಲಿ ಕೊಟ್ಟು ಸಂಭಂಧಪಟ್ಟ ದೈವದ ಮಂಚಮದಲ್ಲಿ ಇಟ್ಟ ಪ್ರತ್ಯೇಕ ಪಾತ್ರೆಯಲ್ಲಿ ಹಾಲು,ತುಪ್ಪ ಹಾಗೂ ಸ್ವಸ್ತಿಕವನ್ನು ಇಟ್ಟು ಗುತ್ತು ,ಗ್ರಾಮದವರು ದೈವದಲ್ಲಿ ಪ್ರಾರ್ಥನೆ ಮಾಡಿಕೊಂಡು ವಿಜ್ರಂಬಣೆಯಿಂದ ಗದ್ದೆಯ ನಿಗದಿಪಡಿಸಿದ ಸ್ಥಳಕ್ಕೆ ವಾಳಗದೊಂದಿಗೆ ಆಗಮಿಸುತ್ತಾರೆ.
ಕಂಬಳ ಗದ್ದೆಗೆ ಹಾಲು,ತುಪ್ಪವನ್ನು ಹಾಕಿ ಕೋಲುತಿರಿಯನ್ನು ಉರಿಸಿ ಗ್ರಾಮಸ್ಥರು ಗದ್ದೆಯ ಸುತ್ತ ಹಚ್ಚುವ ಕ್ರಮವಿದೆ.ನಂತರ ಗದ್ದೆ ಕೋರಿಗೆ ಆರಂಭದ ಕ್ರಮವಿದೆ.
ಆ ಕ್ರಮಗಳು ಮುಕ್ತಾಯಗೊಂಡ ಬಳಿಕ ಕಂಬಳ ಗದ್ದೆಗೆ ಇಳಿಯುವ ಕೋಣಗಳು ಮತ್ತು ಎತ್ತುಗಳನ್ನು ವಾದ್ಯಗೋಷ್ಟಿಯೊಂದಿಗೆ ಬಹಳ ಸಂಭ್ರಮದಿಂದ ಇಳಿಸುತ್ತಾರೆ.
ಪೂಕರೆ
ಗದ್ದೆಯನ್ನು ಉತ್ತು ನಂತರ ಅಡಿಕೆಮರದಿಂದ ತಯಾರಿಸಿದ ಪೂಕರೆಯನ್ನು ಹೂವಿನಿಂದ ಅಲಂಕರಿಸಿ ಗುತ್ತು ಗ್ರಾಮದವರ ಪ್ರಾರ್ಥನೆಯನ್ನು ಮಾಡಿ ಕಂಬಳಗದ್ದೆಗೆ ಪೂಕರೆಯನ್ನೂ ಬಲ್ಲಿ ಗದ್ದೆಗೆ (ಬಾಳೆ ಹಾಕುವ ಗದ್ದೆ) ಒಂದು ಬಾಳೆ ಗಿಡವನ್ನೂ ಹಾಕುತ್ತಾರೆ.ಅದೇ ದಿನ ರಾತ್ರಿ ಗ್ರಾಮದೈವಗಳಿಗೆ ನೇಮೋತ್ಸವ ನಡೆಯುತ್ತದೆ.
ಈ ಗದ್ದೆ ಕೋರಿಯನ್ನು ತುಳುವಿನಲ್ಲಿ ಭೂಮಿದ ಮದಿಮೆ ,ಕಂಬುಳದ ವಿಳಯ ಚಾವಡಿದ ಮೆಚ್ಚಿಗೆ ಕಂಬಳದ ಗದ್ದೆ ಕೋರಿ ಎಂಬ ಹೆಸರಿನಿಂದ ನಾಡಿನ ಹಬ್ಬದಂತೆ ವಿಜ್ರಂಬಣೆಯಿಂದ ಆಚರಿಸುವಂತಹ ಪದ್ದತಿ ತುಳುನಾಡಿನಾದ್ಯಂತ ನಡೆಯುತ್ತದೆ.
ಅನಾದಿ ಕಾಲದ ಪದ್ದತಿ ಉಳಿಯಬೇಕಿದೆ :ಸರಕಾರದ ಪ್ರೋತ್ಸಾಹ ಬೇಕಿದೆ
ಭೂಮಿಯನ್ನು ಪೂಜಿಸಿ ಆರಾಽಸುವಂತಹ ತುಳುವರ ಸಂಪ್ರದಾಯ ಅನಾದಿಕಾಲದಿಂದಲೂ ನಡೆದುಕೊಂಡ ಬಂದ ಪದ್ದತಿ ಇದರಲ್ಲಿ ಗದ್ದೆ ಕೋರಿ ಪ್ರಮುಖವಾದ್ದು.ಇಂದಿನ ಕಾಲದಲ್ಲಿ ಆಡಳಿತ ವ್ಯವಸ್ಥೆಯ ಬದಲಾವಣೆಯ ಜತೆಗೆ ಅಂದಿನ ಪದ್ದತಿಗಳು ನಶಿಸಿ ಹೋಗುವಂತಹ ಸ್ಥಿತಿ ನಿರ್ಮಾಣವಾಗಿದೆ.ಇದನ್ನು ಉಳಿಸಿ ಬೆಳೆಸಿಕೊಂಡು ಹೋಗುವಲ್ಲಿ ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯೂ ಆಗಿದೆ.ಇವುಗಳು ಮುಂದಿನ ತಲೆಮಾರಿಗೂ ಮುಂದುವರಿಯಲು ಸರಕಾರ ಅಥವಾ ತುಳು ಸಾಹಿತ್ಯ ಅಕಾಡೆಮಿ,ಕನ್ನಡ ಮತ್ತ ಸಂಸ್ಕೃತಿ ಇಲಾಖೆಗಳ ಪ್ರೋತ್ಸಾಹವೂ ದೊರಕುವಂತಾಗಬೇಕು.
–ಪ್ರವೀಣ್ ಚೆನ್ನಾವರ
ಅವ್ ಕಂಡ ಕೋರಿ
ದಾಯೆ ತುಲುನಾಡ್ದ ಪ್ರತಿ ಒಂಜಿ ಪುದರ್ನ್ ಕನ್ನಡೀಕರಣ ಮಲ್ಪುವರ್?