ನೀವೂ ಕೂಡ ನಿದ್ರಾಹೀನತೆಯಿಂದ ಬಳಲುತ್ತಿದ್ದೀರಾ??|ನಿದ್ದೆಯಿಲ್ಲದ ರಾತ್ರಿಗಳಿಂದ ಬಳಲಿ ಬೇಸತ್ತು ಹೋಗಿದ್ದರೆ ಫಾಲೋ ಮಾಡಿ ಈ ಸುಲಭ ಟ್ರಿಕ್ಸ್ ಗಳನ್ನು!!

ಮಾನವನ ದೇಹ ಯಂತ್ರವಿದ್ದಂತೆ, ಈ ಯಂತ್ರದಲ್ಲಿ ಚೂರು ಏರುಪೇರಾದರೂ ಕೆಲಸ ಕಾರ್ಯಗಳು ಸ್ಥಗಿತಗೊಳ್ಳುತ್ತದೆ. ಹಾಗಾಗಿ ಈ ಯಂತ್ರಕ್ಕೆ ಸ್ವಲ್ಪ ಆರಾಮದಾಯಕ ಸ್ಥಿತಿ ನೀಡುವುದು ನಿದ್ರೆ ಎಂಬ ಎಣ್ಣೆ.

ಹೌದು, ನಿದ್ರೆಯು ವ್ಯಕ್ತಿಯನ್ನು ಮಾನಸಿಕವಾಗಿ, ದೈಹಿಕವಾಗಿ ಉಲ್ಲಸಿತರನ್ನಾಗಿರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಒಬ್ಬ ವ್ಯಕ್ತಿಯು ದಿನಕ್ಕೆ 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡಲೇಬೇಕು. ನಿದ್ರೆ ಕೊರತೆಯು ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ನಿದ್ರೆ ಸರಿಯಾಗಿ ಆಗಿಲ್ಲದಿದ್ದರೆ, ಆತ ಉತ್ಸುಕತೆ ಕಳೆದುಕೊಂಡು ಇಡೀ ದಿನವನ್ನು ಆಯಾಸದಿಂದಲೇ ತಳ್ಳುತ್ತಾನೆ. ಹಾಗಾಗಿ ಆರಾಮವಾಗಿ ರಾತ್ರಿ ನಿದ್ರಿಸಿ, ಆರೋಗ್ಯವಾಗಿರಿ ಎಂದು ತಜ್ಞರು ಹೇಳುತ್ತಾರೆ.

ಆಧುನಿಕ ಜೀವನ ಶೈಲಿ, ಆಹಾರ ಕ್ರಮದಲ್ಲಿನ ಬದಲಾವಣೆ, ಕೆಲಸದ ಒತ್ತಡದಿಂದಾಗಿ ನಿದ್ರಾಹೀನತೆ ಅನುಭವಿಸುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಇದೊಂದು ನ್ಯೂನತೆಯಾಗಿ ಕಂಡು ಬರುತ್ತಿದೆ. ಅಧ್ಯಯನದ ಪ್ರಕಾರ ವಿಶ್ವದ ಜನಸಂಖ್ಯೆಯ ಸುಮಾರು 45 ಪ್ರತಿಶತದಷ್ಟು ಜನರು ನಿದ್ರಾಹೀನತೆಯಿಂದ ಬಳಲುತ್ತಿದ್ದಾರೆ. ಇಡೀ ದಿನ ಕಷ್ಟಪಟ್ಟು ಕೆಲಸ ಮಾಡಿದರೂ ಅನೇಕರಿಗೆ ಒಳ್ಳೆಯ ನಿದ್ರೆ ಮಾಡಲು ಸಾಧ್ಯವಾಗುವುದಿಲ್ಲ. ನೀವು ನಿದ್ರೆಗೆ ಸಂಬಂಧಿಸಿದ ತೊಂದರೆಗಳಿಂದ ಬಳಲುತ್ತಿದ್ದರೆ ಮತ್ತು ಮಾತ್ರೆಗಳನ್ನು ನುಂಗದೆ ರಾತ್ರಿ ಉತ್ತಮವಾಗಿ ವಿಶ್ರಾಂತಿ ಪಡೆಯಲು ಇಲ್ಲಿದೆ ಕೆಲ ಸಲಹೆಗಳು.

ಒದ್ದೆ ಕಾಲಿನಲ್ಲಿ ಮಲಗಬೇಡಿ

ಒದ್ದೆಯಾದ ಪಾದಗಳೊಂದಿಗೆ ಮಲಗಲು ಹೋಗಬೇಡಿ. ವೈದ್ಯರ ಪ್ರಕಾರ, ಪಾದಗಳು ದೇಹದ ಒಂದು ಪ್ರಮುಖ ಭಾಗವಾಗಿದೆ ಮತ್ತು ದೇಹದ ಉಷ್ಣತೆಯನ್ನು ನಿಯಂತ್ರಿಸುತ್ತದೆ. ಒದ್ದೆಯಾದ ಪಾದಗಳಲ್ಲಿ ಮಲಗುವುದರಿಂದ ನಿಮ್ಮ ದೇಹದ ಉಷ್ಣತೆಯಲ್ಲಿ ಅಸಮತೋಲನ ಉಂಟಾಗುತ್ತದೆ ಮತ್ತು ಆದ್ದರಿಂದ ನಿಮ್ಮ ನಿದ್ರೆಗೆ ತೊಂದರೆಯಾಗುತ್ತದೆ. ಮಲಗುವ ಮುನ್ನ ನಿಮ್ಮ ಪಾದಗಳನ್ನು ಚೆನ್ನಾಗಿ ಒರೆಸಿಕೊಂಡು ಮಲಗಿ.

ಸಮಯ ಪಾಲನೆ ಮಾಡಿ

ನಿದ್ರೆಗೆ ಕೆಲವೊಮ್ಮೆ ಸಮಯಪಾಲನೆಯು ಮುಖ್ಯವಾಗುತ್ತದೆ. ಅಂದರೆ ಪ್ರತಿದಿನ ಮಲಗುವ ಸಮಯವನ್ನು ನಿಗದಿಪಡಿಸಿಕೊಳ್ಳಿ. ಏನೇ ಕೆಲಸವಿದ್ದರೂ ನಿಗದಿಪಡಿಸಿಕೊಂಡ ಸಮಯದಲ್ಲೇ ಮಲಗಿ. ನೀವು ಮಲಗುವ ಮುನ್ನ ಇಂಟರ್ನೆಟ್ ಮತ್ತು ಸಾಮಾಜಿಕ ಮಾಧ್ಯಮದಿಂದ ದೂರವಿರಿ ಏಕೆಂದರೆ ಇವು ಮನಸ್ಸಿನ ಶಾಂತ ಸ್ಥಿತಿಗೆ ತೊಂದರೆ ಉಂಟು ಮಾಡುತ್ತದೆ ಮತ್ತು ನಿಮ್ಮನ್ನು ನಿದ್ರೆಯಿಂದ ಎಚ್ಚರಗೊಳಿಸುವ ಸಾಧ್ಯತೆಯೂ ಇರುತ್ತದೆ.

ಮಲಗುವ ಮುನ್ನ ಸ್ನಾನಮಾಡಿ

ಮಲಗುವ ಮುನ್ನ ಬಿಸಿನೀರಿನಲ್ಲಿ ಸ್ನಾನ ಮಾಡಿ. ಇದು ನಿಮ್ಮನ್ನು ಉಲ್ಲಾಸಿತವನ್ನಾಗಿ ಮಾಡುತ್ತದೆ. ಬಿಸಿನೀರು ನಿಮ್ಮ ದೇಹದ ರಸದೂತಗಳು ಸಹಜರೀತಿಯಲ್ಲಿ ಸ್ರವಿಸಲು ನೆರವಾಗುತ್ತದೆ ಎಂದು ಅಧ್ಯಾಯನಗಳು ವರದಿ ಮಾಡಿವೆ. ಒಂದು ವೇಳೆ ಬಿಸಿನೀರಿನ ಸ್ನಾನ ಮಾಡಲು ಅವಕಾಶವಿಲ್ಲದಿದ್ದರೆ ಕೇವಲ ಪಾದಗಳನ್ನಾದರೂ ಬಿಸಿನೀರಿನ ಬಕೆಟ್ಟೊಂದರಲ್ಲಿ ಕೊಂಚ ಹೊತ್ತು ಮುಳುಗಿಸಿಟ್ಟು ಬಳಿಕ ಕೊಂಚವೇ ಮಸಾಜ್ ಮಾಡಿಕೊಂಡು ಮಲಗಿದರೂ ಆದಷ್ಟೂ ಬೇಗನೇ ನಿದ್ದೆ ಬರುತ್ತದೆ ಎಂದು ಸಂಶೋಧನೆಗಳ ಮೂಲಕ ಕಂಡುಕೊಳ್ಳಲಾಗಿದೆ.

ಪುಸ್ತಕ ಓದುವ ಅಭ್ಯಾಸ ಬೆಳೆಸಿಕೊಳ್ಳಿ

ಸಾಮಾಜಿಕ ಜಾಲತಾಣಕ್ಕಿಂತ ಪರ್ಯಾಯ ಅಭ್ಯಾಸ ರೂಢಿಸಿಕೊಳ್ಳಿ. ಅಂದರೆ ಪುಸ್ತಕ ಓದುವುದನ್ನು ರೂಢಿಸಿಕೊಳ್ಳಿ. ಇದರಿಂದ ಜ್ಞಾನ ವೃದ್ಧಿಯಾಗುವುದರ ಜೊತೆಗೆ ಮನಸ್ಸನ್ನು ನಿರಾಳಗೊಳಿಸುತ್ತದೆ. ಆದ್ದರಿಂದ ನೀವು ಮಲಗಿದ ತಕ್ಷಣ ನಿದ್ರೆಗೆ ಜಾರಬಹುದು.

ಎರಡು ಗಂಟೆಗಳ ಮೊದಲೇ ಊಟ ಮುಗಿಸಿ

ಮಲಗುವ ಎರಡು ಗಂಟೆ ಮುನ್ನ ನಿಮ್ಮ ರಾತ್ರಿ ಊಟವನ್ನು ಮುಗಿಸಿಬಿಡಿ ಮತ್ತು ರಾತ್ರಿ ಮಲಗುವ ಮುನ್ನ ಟೀ ಅಥವಾ ಕಾಫಿ ಕುಡಿಯುವ ಅಭ್ಯಾಸವಿದ್ದರೆ ನಾಲ್ಕು ಗಂಟೆಗಳ ಮೊದಲೇ ಟೀ ಅಥವಾ ಕಾಫಿ ಕುಡಿಯಿರಿ. ಈ ಎರಡು ನಿಯಮಗಳನ್ನು ಪಾಲಿಸುವುದು ಉತ್ತಮ ನಿದ್ರೆಗೆ ಬಹಳ ಅನುಕೂಲ.

ಕಳಪೆ ಗುಣಮಟ್ಟದ ಹಾಸಿಗೆಗಳು

ಇವು ಸಹ ನಿಮ್ಮ ನಿದ್ರಾ ಭಂಗಕ್ಕೆ ಕಾರಣವಾಗಬಹುದು. ನಿಮ್ಮ ಸ್ನಾಯುಗಳು ಮತ್ತು ನರಗಳು ವಿಶ್ರಾಂತಿ ಪಡೆಯಲು ಸಹಾಯ ಮಾಡುವ ಆರಾಮದಾಯಕವಾದ ಹಾಸಿಗೆಯಲ್ಲಿ ಮಲಗಿದ್ದರೆ ಒಳ್ಳೆಯದು.

ಧೂಮಪಾನ ಬೇಡ

ಒಂದು ವೇಳೆ ನೀವು ಧೂಮಪಾನದ ವ್ಯಸನಿಯಾಗಿದ್ದರೆ ಇತರರಿಗಿಂತ ನಿದ್ರಾರಾಹಿತ್ಯಕ್ಕೆ ಒಳಗಾಗುವ ಸಾಧ್ಯತೆ ನಿಮಗೆ ನಾಲ್ಕು ಪಟ್ಟು ಹೆಚ್ಚು. ಅಧ್ಯಾಯನದ ಪ್ರಕಾರ ಧೂಮಪಾನದ ಮೂಲಕ ದೇಹ ಸೇರುವ ನಿಕೋಟಿನ್ ಮೆದುಳನ್ನು ಎಚ್ಚರವಾಗಿಯೇ ಇರುವಂತೆ ಪ್ರಚೋದಿಸುತ್ತದೆ.

ವ್ಯಾಯಾಮ ಮಾಡಿ

ಆರೋಗ್ಯಕರ ಆಹಾರದೊಂದಿಗೆ ವ್ಯಾಯಾಮ ಮಾಡಿ. ಪ್ರತೀದಿನ ಒಂದರ್ಧ ಗಂಟೆ ವ್ಯಾಯಾಮ ಮಾಡುವುದರಿಂದ ಅದು ನಿಮ್ಮ ದೇಹವನ್ನು ಬಲಪಡಿಸುವುದಲ್ಲದೆ ನಿದ್ರೆಯ ಚಕ್ರವನ್ನು ನಿರ್ವಹಿಸಲು ಸಹಾಯ ಮಾಡುತ್ತದೆ. ನಿಮ್ಮ ದೇಹವನ್ನು ಆಕ್ಟೀವ್ ಆಗಿರಿಸುತ್ತದೆ, ನೀವು ಸದಾ ಉಲ್ಲಾಸದಿಂದ ಇರುತ್ತೀರಿ.

ಮಲಗುವಾಗ ಸಕಾರಾತ್ಮಕ ಆಲೋಚನೆಗಳನ್ನು ಮಾಡುತ್ತಾ ಮಲಗಿ ನಿದ್ದೆ ಚೆನ್ನಾಗಿ ಬರುತ್ತದೆ. ಮಲಗುವ ಮೊದಲು ಬಿಸಿ ನೀರಿನ ಸೇವನೆ ಕೂಡ ಒಳ್ಳೆಯದು. ಈ ಎಲ್ಲಾ ಸಲಹೆಗಳನ್ನು ಪಾಲಿಸಿ ನಿದ್ರಾಹೀನತೆಯಿಂದ ಪಾರಾಗಿ.

Leave A Reply

Your email address will not be published.