ಕೊಕ್ಕಡ | ಸೌತಡ್ಕ ದರೋಡೆ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳ ಬಂಧನ
ಕೊಕ್ಕಡ ಸೌತಡ್ಕ ಸಮೀಪದ ಕೌಕ್ರಾಡಿ ಗ್ರಾಮದ ನೂಜೆ ತುಕ್ರಪ್ಪ ಶೆಟ್ಟಿ ಎಂಬವರ ಮನೆ ದರೋಡೆ ಪ್ರಕರಣದ ಇಬ್ಬರು ಪ್ರಮುಖ ಆರೋಪಿಗಳನ್ನು ಉಪ್ಪಿನಂಗಡಿ ಠಾಣಾ ಪೊಲೀಸರು ಬಂಧಿಸಿದ್ದಾರೆ.
ನೆಲ್ಯಾಡಿ ಹೊಸಮಜಲು ನಿವಾಸಿ ಚಂದ್ರಶೇಖರ ಶೆಟ್ಟಿ (50) ಹಾಗೂ ಸುರತ್ಕಲ್ ಸೂರಿಂಜೆಯ ದಾವೂದ್ ಹಕೀಂ (36) ಬಂಧಿತ ಆರೋಪಿಗಳು ಎಂದು ತಿಳಿದುಬಂದಿದೆ.
ಕಳೆದ ಡಿಸೆಂಬರ್ ನಲ್ಲಿ ತುಕ್ರಪ್ಪ ಶೆಟ್ಟಿ ಅವರ ಮನೆಗೆ ನುಗ್ಗಿದ ದರೋಡೆಕೋರರು ತುಕ್ರಪ್ಪ ಶೆಟ್ಟಿ ಹಾಗೂ ಅವರ ಪತ್ನಿ ಮೇಲೆ ಹಲ್ಲೆ ನಡೆಸಿ, ಲಕ್ಷಾಂತರ ರೂಪಾಯಿಯ ಚಿನ್ನಾಭರಣ ದೋಚಿದ್ದರು. ಪ್ರಕರಣದ ಬೆನ್ನು ಹತ್ತಿದ ಪೊಲೀಸರು ಇದೀಗ ಇಬ್ಬರನ್ನು ಬಂಧಿಸಿದ್ದಾರೆ.
ಬಂಧಿತ ಚಂದ್ರಶೇಖರ ಶೆಟ್ಟಿ ನೆಲ್ಯಾಡಿಯ ಹೊಸಮಜಲಿನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದು, ಈ ಮೊದಲು ನೆಲ್ಯಾಡಿಯಲ್ಲಿ ರಿಕ್ಷಾ ಚಾಲಕನಾಗಿ ದುಡಿಯುತ್ತಿದ್ದ. ಆದರೆ ಈಗ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದ. ಈತ ತುಕ್ರಪ್ಪ ಶೆಟ್ಟಿ ಅವರ ಪತ್ನಿಗೆ ದೂರದ ಸಂಬಂಧಿಯೂ ಕೂಡ ಆಗಿದ್ದಾನೆ. ತುಕ್ರಪ್ಪ ಶೆಟ್ಟಿಯವರ ಮನೆಯ ಬಗ್ಗೆ ಈತನೇ ದರೋಡೆಕೋರರ ತಂಡಕ್ಕೆ ಮಾಹಿತಿ ನೀಡಿ, ದರೋಡೆಗೆ ದಾವೂದ್ ಹಕೀಂನ ತಂಡವನ್ನು ಸಿದ್ಧಗೊಳಿಸಿದ್ದ ಎಂಬ ಶಂಕೆ ಮೂಡಿದೆ.
ಹಾಗೆಯೇ ಈ ಮನೆಯ ಕೋಣೆಯೊಂದರಲ್ಲಿ ನಿಧಿ ಇದೆ ಎಂಬ ಮಾಹಿತಿಯನ್ನು ಈ ದರೋಡೆ ಪ್ರಕರಣದಲ್ಲಿ ಈಗಾಗಲೇ ಬಂಧಿತನಾಗಿ ಜಾಮೀನಿನ ಮೂಲಕ ಹೊರಬಂದಿರುವ ಬಶೀರ್ ಎಂಬಾತನಿಗೆ ಚಂದ್ರಶೇಖರ ಶೆಟ್ಟಿ ತಿಳಿಸಿದ್ದ ಎನ್ನಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದ ಪ್ರಮುಖ ಆರೋಪಿಗಳಾದ ಚಂದ್ರಶೇಖರ ಶೆಟ್ಟಿ ಅವರನ್ನು ನೆಲ್ಯಾಡಿಯಲ್ಲಿ ಹಾಗೂ ದಾವೂದ್ ಹಕೀಂರನ್ನು 34 ನೆಕ್ಕಿಲಾಡಿಯಲ್ಲಿ ಬಂಧಿಸಿದ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ನ್ಯಾಯಾಲಯ ಇವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.