30 ವರ್ಷಗಳ ರಕ್ತಸಿಕ್ತ ಜೀವನಕ್ಕೆ ಒಂದು ಬಿಡುವು । ಭೂಗತ ಪಾತಕಿ ರವಿ ಪೂಜಾರಿ ಬೆಂಗಳೂರಿಗೆ
ಕಳೆದ 30 ವರ್ಷಗಳಿಂದಲೂ ಅಧಿಕ ಸಮಯದಿಂದ ಕರ್ನಾಟಕ ರಾಜ್ಯದ ಮತ್ತು ದೇಶದ ಪೊಲೀಸರಿಗೆ 60 ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಬೇಕಾಗಿದ್ದ ವ್ಯಕ್ತಿಯನ್ನು ಕೊನೆಗೂ ಪೊಲೀಸರು ಕೈಗೆ ಕೋಳ ತೊಡಿಸಿಕೊಂಡು ಕರೆತಂದಿದ್ದಾರೆ.
ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳಾದ ಎಡಿಜಿಪಿ ಅಮರ್ಕುಮಾರ್ ಪಾಂಡೆ ಮತ್ತು ಸಿಸಿಬಿ ಜಂಟಿ ಕಮಿಷನರ್ ಸಂದೀಪ್ ಪಾಟೀಲ್ ನೇತೃತ್ವದ ತಂಡ ತಂಡ ದಕ್ಷಿಣ ಆಫ್ರಿಕಾದ ಸೆನೆಗಲ್ ನಲ್ಲಿ ಬಂಧಿತನಾಗಿದ್ದ ಭೂಗತ ಪಾತಕಿ ರವಿ ಪೂಜಾರಿಯನ್ನು ಇಂದು ಮುಂಜಾನೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಕರೆತರಲಾಯಿತು.
ಮೂಲತಹ ದಕ್ಷಿಣ ಕನ್ನಡದ ಮಲ್ಪೆಯಲ್ಲಿ ಜನಿಸಿದ ರವಿ ಪೂಜಾರಿಯ ಹೆಸರಿನಲ್ಲಿ ಮಂಗಳೂರು ನಗರ, ಉರ್ವ, ಕಾವೂರು, ಕೋಣಾಜೆ, ಬರ್ಕೆ, ಮೂಲ್ಕಿ-ಮೂಡಬಿದ್ರೆ ಮುಂತಾದ ವಿವಿಧ ಠಾಣೆಗಳಲ್ಲಿ 35 ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನಲ್ಲೂ ಹಲವು ಪ್ರಕರಣಗಳಿವೆ.
ವಿದ್ಯೆ ತಲೆಗೆ ಹತ್ತದೆ, ಚಿಕ್ಕಂದಿನಲ್ಲೇ ಸ್ಕೂಲಿನಿಂದ ಹೊರಬಂದು ಮಂಗಳೂರಿನಿಂದ ಬಾಂಬೆಗೆ ಬದುಕು ಅರಸುತ್ತ ಹೊರಟವನು ರವಿ ಪೂಜಾರಿ. ಅಲ್ಲಿ ಸಣ್ಣಪುಟ್ಟ ಕ್ರೈಂ ಚಟುವಟಿಕೆಗಳಲ್ಲಿ ಭಾಗಿಯಾದವನಿಗೆ ದೊಡ್ಡದಾಗಿ ಬ್ರೇಕ್ ಸಿಕ್ಕಿದ್ದು ಬಾಲಾ ಜಾಲ್ಟೆ ಯ ಹತ್ಯೆ. ಅಷ್ಟರಲ್ಲೇ ಭೂಗತ ದೊರೆ ಛೋಟಾ ರಾಜನ್ ಈತನ ದೈತ್ಯ ದೇಹದ ತಾಕತ್ತು ಮತ್ತು ಧೈರ್ಯ ಗಮನಿಸಿದ್ದ. ರವಿ ಪೂಜಾರಿಯನ್ನು ತನ್ನ ಆಪ್ತ ವಲಯಕ್ಕೆ ಬಿಟ್ಟುಕೊಂಡಿದ್ದ.
1990 ರ ಸುಮಾರಿಗೆ ದೇಶ ಬಿಟ್ಟಿದ್ದ ರವಿಪೂಜಾರಿ ದುಬಾಯಿ ಸೇರಿ ಅಲ್ಲಿದ್ದುಕೊಂಡೇ, ಮುಖ್ಯವಾಗಿ ಮಂಗಳೂರಿಗೆ ತನ್ನ ಕರಾಳ ಹಸ್ತವನ್ನು ಚಾಚಿದ್ದ. ಕರ್ನಾಟಕದ ರಾಜಕಾರಣಿಗಳಿಗೆ, ಮಂಗಳೂರಿನ ಉದ್ಯಮಿಗಳಿಗೆ ಮತ್ತು ಬಾಲಿವುಡ್ ನ ಸಿನಿ ತಾರೆಯರ ಆದ ಶಾರುಖ್ ಖಾನ್ ಅಕ್ಷಯ್ ಕುಮಾರ್, ರಾಕೇಶ್ ರೋಷನ್ ಕರನ್ ಜೋಹರ್ ಮುಂತಾದವರಿಗೆ ಬೆದರಿಕೆ ಹಾಕಿ ಲಂಪ್ಸಂ ಹಣಕ್ಕೆ ಬೇಡಿಕೆ ಇಟ್ಟಿದ್ದ.
ಕೊಲೆ ಸುಲಿಗೆ ಬೆದರಿಕೆ ಮುಂತಾದ ಅಪರಾಧಗಳ ಹಲವು ವಿಭಾಗಗಳಲ್ಲಿ ಆತ ಪಳಗಿದ್ದ. ಕರ್ನಾಟಕದ ಎಚ್ ಎಂ ರೇವಣ್ಣ, ತಂವೀರ್ ಸೇಠ್, ಅನಿಲ್ ಲಾಡ್ ಮತ್ತು ಡಿ ಕೆ ಸುರೇಶ ಅವರಿಗೂ ಈತ ಹಣಕ್ಕಾಗಿ ಬೆದರಿಕೆ ಹಾಕಿದ್ದ.
ಆದರೆ ಪೊಲೀಸರಾಗಲಿ ಕೇಂದ್ರ ತನಿಖಾ ಸಂಸ್ಥೆಗಳಾಗಲಿ ಸುಮಾರು 30 ವರ್ಷಗಳ ಕಾಲ ಏನೂ ಮಾಡಲಾಗದೆ ಕೈಚೆಲ್ಲಿ ಕುಳಿತಿದ್ದವು. ಈತನ ಮೇಲೆ ರೆಡ್ ಕಾರ್ನರ್ ನೋಟಿಸ್ ಕೂಡ ಜಾರಿಯಾಗಿತ್ತು.
ಆದರೆ ಈಗ ಬೆಂಗಳೂರಿನ ಪೊಲೀಸರು ಕೇಂದ್ರ ತನಿಖಾ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕ ಸಾಧಿಸಿ ದಢೂತಿ ದೇಹದ ರವಿ ಪೂಜಾರಿಯನ್ನು ಬೆಂಗಳೂರಿಗೆ ಹೊತ್ತು ತಂದಿದ್ದಾರೆ.
ಈಗ ಆತನ ಬಂಧನದೊಂದಿಗೆ ಆತನ ಹೆಸರು ಕೇಳಿ ಭಯಪಡುತ್ತಿದ್ದ ಜನರಲ್ಲಿ ಒಂದು ಸಣ್ಣ ನಿಟ್ಟುಸಿರು.