ಫೆ.23-24 : ನಳೀಲು ಶ್ರೀ ಸುಬ್ರಹ್ಮಣ್ಯ ದೇವರ ಜಾತ್ರೋತ್ಸವ
ಪುತ್ತೂರು : ತಾಲೂಕಿನಲ್ಲಿ ಹುತ್ತಕ್ಕೆ ಪೂಜೆ ಸಲ್ಲುವ ಏಕೈಕ ಹಾಗೂ ಕಾರಣಿಕ ಕ್ಷೇತ್ರ ಕೊಳ್ತಿಗೆ ಗ್ರಾ ಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವವು ಹಾಗೂ 29ನೇ ವರ್ಷದ ಸತ್ಯನಾರಾಯಣ ಪೂಜೆ,ಪರಿವಾರ ದೈವಗಳ ನೇಮೋತ್ಸವ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಫೆ.23 ಮತ್ತು ಫೆ 24 ರಂದು ನಡೆಯಲಿದೆ.ಇದರ ಪೂರ್ವಭಾವಿಯಾಗಿ ಹಸಿರುವಾಣಿ ಸಮರ್ಪಣೆ ಫೆ.22ರಂದು ನಡೆಯಲಿದೆ.
ಫೆ.23ರಂದು ಬೆಳಿಗ್ಗೆ ದೇವತಾ ಪ್ರಾರ್ಥನೆ, ಮಹಾಗಣಪತಿ ಹೋಮ, ಕಲಶ ಪೂಜೆ, ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯ ಬಳಿಕ ಕಲಶಾಭಿಷೇಕ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ.ರಾತ್ರಿ ದೈವಗಳ ಭಂಡಾರ ತೆಗೆದ ಬಳಿಕ ವಲ್ಮೀಕ ರೂಪಿ ಸುಬ್ರಹ್ಮಣ್ಯ ದೇವರಿಗೆ ರಂಗಪೂಜೆ ನಡೆಯಲಿದೆ.
ಸಂಜೆ 7ರಿಂದ ಗುರುಪ್ರಿಯಾ ಶಿವಾನಂದ ನಾಯಕ್ ನಿರ್ದೆಶನದಲ್ಲಿ ಗುರುಕು ಕಲಾಕೇಂದ್ರ ಪುತ್ತೂರು ತಂಡದ ಭಕ್ತಿ ಗೀತಾ ಗಾಯನ ನಡೆಯಲಿದೆ.ವಿಶೇಷ ಅತಿಥಿಯಾಗಿ ಕಲರ್ಸ್ ಕನ್ನಡ ಕನ್ನಡ ಕೋಗಿಲೆಯ ಅಪೇಕ್ಷಾ ಪೈ ಭಕ್ತಿ ಗೀತೆಗಳನ್ನು ಹಾಡಲಿದ್ದಾರೆ.ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಫೆ.24ರಂದು ಪ್ರಾತಃ ಕಾಲ ವ್ಯಾಘ್ರ ಚಾಮುಂಡಿಯ ನೇಮೋತ್ಸವ,ಬೆಳಿಗ್ಗೆ ರುದ್ರ ಚಾಮುಂಡಿಯ ನೇಮೋತ್ಸವ ಗುಳಿಗ ದೈವಕ್ಕೆ ತಂಬಿಲ ಸೇವೆ ನಡೆಯಲಿದೆ.
ವಿಶೇಷತೆ
ನಳೀಲು ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಹುತ್ತಕ್ಕೆ ಆರಾಧನೆ ನಡೆಯುತ್ತದೆ.ಆದರಿಂದ ಇದು ಭಕ್ತರ ಪಾಲಿನ ಶ್ರದ್ದೆಯ ಹಾಗೂ ಭಕ್ತಿಯ ಕ್ಷೇತ್ರವಾಗಿದೆ.
ಪುತ್ತೂರು ತಾಲೂಕಿನಲ್ಲಿ ಹುತ್ತಕ್ಕೆ ಸೇವೆ ಪಡೆಯುವ ಏಕೈಕ ಕ್ಷೇತ್ರವಾಗಿರುವ ಇಲ್ಲಿ ಕಂಕಣ ಭಾಗ್ಯಕ್ಕಾಗಿ, ಸಂತಾನ ಭಾಗ್ಯಕ್ಕೆ,ಉದ್ಯೋಗ,ಇಷ್ಟಾರ್ಥ ಸಿದ್ದಿಗೆ,ವಿದ್ಯೆಗಾಗಿ ಪೂಜೆ ಸಲ್ಲಿಸಿದರೆ ಫಲ ಪ್ರಾಪ್ತಿ ಆಗುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ಇಲ್ಲಿ ನಿತ್ಯ ಅರ್ಚಕರು ನಾಗನಿಗೆ ಪೂಜೆ ಸಲ್ಲಿಸುತ್ತಾರೆ.
ಪೂಜೆಯ ಬಳಿಕ ಬಟ್ಟಲಲ್ಲಿ ಹಾಲು-ನೀರು ಇಟ್ಟು ಬರುತ್ತಾರೆ.ಈ ಹಾಲನ್ನು ನಾಗ ಕುಡಿಯುತ್ತಾನೆ ಎಂಬ ನಂಬಿಕೆ ಇದೆ.ಇದಕ್ಕೆ ಪುಷ್ಟಿ ನೀಡುವಂತೆ ಈ ಕ್ಷೇತ್ರದ ಸುತ್ತ ನಾಗ ಪ್ರತ್ಯಕ್ಷನಾಗಿ ಕಾಣಿಸಿಕೊಳ್ಳುತ್ತಾನೆ.ದೇವಳದಲ್ಲಿ ಪಕ್ಕದ ಸಣ್ಣ ಕುಂಡಿಕೆಯೊಂದರಲ್ಲಿ ನೀರು ಮೇಲೇಳುತ್ತಿರುವುದು ಇಲ್ಲಿನ ಇನ್ನೊಂದು ವೈಶಿಷ್ಟ್ಯ. ಇಲ್ಲಿಗೆ ಬರುವ ಭಕ್ತಾದಿಗಳು ಪುತ್ತೂರು-ಕುಂಬ್ರ-ಮಾಡಾವು-ಬೆಳ್ಳಾರೆ ರಸ್ತೆಯ ಮೂಲಕ ಅಂಕತ್ತಡ್ಕದಿಂದ ಸ್ವಲ್ಪ ಮುಂದೆ ಸಾಗಿದಾಗ ಸಿಗುವ ತಿರುವ ರಸ್ತೆಯಲ್ಲಿ ತೆರಳ ಬಹುದು. ಸವಣೂರು-ಬೆಳ್ಳಾರೆ ರಸ್ತೆಯಲ್ಲಿ ಬಂಬಿಲ-ಮಂಜುನಾಥನಗರ ರಸ್ತೆಯ ಮೂಲಕ ಅಂಕತಡ್ಕಕ್ಕೆ ಬಂದು ಕ್ಷೇತ್ರಕ್ಕೆ ಬರವಹುದಾಗಿದೆ.
ಇಲ್ಲಿ ಹುತ್ತದ ರೂಪದಲ್ಲಿರುವ ಸುಬ್ರಹ್ಮಣ್ಯನಿಗೆ ರಂಗಪೂಜೆ,ಹೂವಿನ ಪೂಜೆ ಹಾಗೂ ಕ್ಷೇತ್ರದಲ್ಲಿ ರಾಹು ಜಪ,ಆಶ್ಲೇಷ ಬಲಿ,ಕುಂಕುಮಾರ್ಚಣೆ,ಕಾರ್ತಿಕ ಪೂಜೆ ,ನಾಗನ ಕಟ್ಟೆಯಲ್ಲಿ ನಾಗತಂಬಿಲ ಹಾಗೂ ಇತರ ಸೇವೆಗಳಾದ ಆಶ್ಲೇಷ ಬಲಿ,ಸರ್ಪ ಸಂಸ್ಕಾರ,ನವಗ್ರಹ ಶಾಂತಿ ಹೋಮ ನಡೆಯುತ್ತದೆ. ಭಕ್ತಾ„ಗಳು ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳೀಲು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.