ಸಿಲಿಕಾನ್ ಸಿಟಿಯಲ್ಲಿ ಬೆಳ್ಳಂಬೆಳಗ್ಗೆ ಎದ್ದೇಳಿ ಕಣ್ಣುಜ್ಜಿಕೊಳ್ಳುವಷ್ಟರಲ್ಲಿ ಗುಂಡಿನ ಸದ್ದು ಮಾರ್ಧನಿ | ಇಬ್ಬರು ರೌಡಿಶೀಟರ್ಗಳ ಕಾಲಿಗೆ ಗುಂಡೇಟು !
ಬೆಂಗಳೂರು: ಸಿಲಿಕಾನ್ ಸಿಟಿ ಇವತ್ತು ಬೆಳ್ಳಂಬೆಳಗ್ಗೆ ಎದ್ದೇಳಿ ಕಣ್ಣುಜ್ಜಿಕೊಳ್ಳುವಷ್ಟರಲ್ಲಿ ಗುಂಡಿನ ಸದ್ದು ಮಾರ್ಧನಿಸಿದೆ.
ಮೊನ್ನೆ ಬ್ಯಾಂಕ್ವೊಂದಕ್ಕೆ ನುಗ್ಗಿ ರೌಡಿಶೀಟರ್ ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳ ಕಾಲಿಗೆ ಗುಂಡು ನುಗ್ಗಿಸಿ ರಸ್ತೆಗೆ ಕೆಡವಿ ಮಲಗಿದ್ದಾರೆ ಕೋರಮಂಗಲ ಪೊಲೀಸರು.
ಜೆ.ಸಿ.ನಗರ ಠಾಣೆಯ ರೌಡಿಶೀಟರ್ ರವಿ ಹಾಗೂ ಅಶೋಕ ನಗರ ಪೊಲೀಸ್ ಠಾಣೆಯ ರೌಡಿಶೀಟರ್ ಪ್ರದೀಪ್ ಗುಂಡೇಟು ತಿಂದ ಆರೋಪಿಗಳು. ಘಟನೆಯಲ್ಲಿ ಪಿಎಸ್ಐ ಸಿದ್ದಪ್ಪ ಹಾಗೂ ಎಎಸ್ಐ ರವೀಂದ್ರ ಎಂಬುವರು ಗಾಯಗೊಂಡಿದ್ದು, ನಾಲ್ವರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಏನಿದು ಪ್ರಕರಣ ?
ಆಡುಗೋಡಿ ಪೊಲೀಸ್ ಠಾಣೆಯ ರೌಡಿಶೀಟರ್ ಬಬ್ಲಿ ಜು. 19ರಂದು ಪತ್ನಿಯೊಂದಿಗೆ ಕೋರಮಂಗಲ ಶಾಖೆಯ ಯುನಿಯನ್ ಬ್ಯಾಂಕ್ಗೆ ಹೋಗಿದ್ದಾಗ ಹಿಂಬಾಲಿಸಿಕೊಂಡು ಬಂದಿದ್ದ ದುಷ್ಕರ್ಮಿಗಳು, ಏಕಾಏಕಿ ಬ್ಯಾಂಕ್ಗೆ ನುಗ್ಗಿ ಮಾರಕಾಸ್ತ್ರಗಳಿದ ಬಬ್ಲಿಯನ್ನು ಹತ್ಯೆಗೈದು ತಲೆಮರೆಸಿಕೊಂಡಿದ್ದರು. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಕೋರಮಂಗಲ ಠಾಣೆ ಇನ್ಸ್ಪೆಕ್ಟರ್ ರವಿ ನೇತೃತ್ವತದ ತಂಡ ಆರೋಪಿಗಳಿಗಾಗಿ ಶೋಧ ನಡೆಸುತ್ತಿತ್ತು.ಮಂಗಳವಾರ ರಾತ್ರಿ ರವಿ ಹಾಗೂ ಪ್ರದೀಪ್ ಬೇಗೂರು ಬಳಿಯ ನಿರ್ಜನ ಪ್ರದೇಶದಲ್ಲಿ ತಲೆಮರೆಸಿಕೊಂಡಿರುವ ಮಾಹಿತಿ ಪಡೆದ ಪೊಲೀಸರು, ಸ್ಥಳಕ್ಕೆ ತೆರಳಿ ಬಂಧಿಸಲು ಹೋದಾಗ ಪಿಎಸ್ಐ ಸಿದ್ದಪ್ಪ ಹಾಗೂ ಎಎಸ್ಐ ರವೀಂದ್ರ ಎಂಬುವವರ ಮೇಲೆ ಆರೋಪಿಗಳು ಚಾಕುವಿನಿಂದ ಹಲ್ಲೆ ನಡೆಸಿ, ಎಸ್ಕೇಪ್ ಆಗಲು ಪ್ರಯತ್ನಿಸಿದ್ದಾರೆ. ಶರಣಾಗುವಂತೆ ಸೂಚಿಸಿದರೂ ಕ್ಯಾರೆ ಅನ್ನದ ಆರೋಪಿಗಳ ಕಾಲುಗಳಿಗೆ ಇನ್ಸ್ಪೆಕ್ಟರ್ ರವಿ ಗುಂಡು ಹೊಡೆದಿದ್ದಾರೆ. ಆರೋಪಿಗಳು ರಸ್ತೆಗೆ ಬಿದ್ದಿದ್ದು, ಅವರನ್ನು ಬಂಧಿಸಲಾಗಿದೆ.