ತಿರುಪತಿ ತಿಮ್ಮಪ್ಪನಿಗೆ 6.5 ಕೆಜಿ ಯ ಮಿರುಗುವ ಚಿನ್ನದ ಖಡ್ಗ ಅರ್ಪಿಸಿದ ಭಕ್ತ ದಂಪತಿ
ತಿರುಪತಿ: ತಿರುಪತಿ ತಿಮ್ಮಪ್ಪ ಧನ್ಯ. ಜಗತ್ತಿನ ಅತ್ಯಂತ ಶ್ರೀಮಂತ ದೇವರಾಗಿರುವ ತಿರುಪತಿ ವಾಸಿ ವೆಂಕಟೇಶ್ವರ ಇಂದು ಚಿನ್ನದ ಖಡ್ಗ ಪಡೆದುಕೊಂಡು ಖುಷಿಯಲ್ಲಿದ್ದಾರೆ.
ಧಾರ್ಮಿಕ ದೇಣಿಗೆ ವಿಷಯಕ್ಕೆ ಬಂದರೆ, ಭಾರತೀಯರದು ಎತ್ತೆತ್ತಿ ಕೊಡುವ ಕೈ. ಒಂದು ಸಿಂಗಲ್ ಚಾ ಕುಡಿಯಲೂ ಹಿಂದೆ ಮುಂದೆ ನೋಡುವ ವ್ಯಕ್ತಿ ಕೂಡ, ದೇವರ ವಿಷಯಕ್ಕೆ ಬಂದರೆ ಉದಾರಿ. ಅದು ಮಾಡುವ ಪೂಜೆ ಇರಬಹುದು, ದೊಡ್ಡದಾಗಿ ಆಚರಿಸುವ ಹಬ್ಬ ಇರಬಹುದು, ಅಥವಾ ಇದೀಗ ತಿರುಪತಿ ತಿಮ್ಮಪ್ಪನಿಗೆ ಕೊಟ್ಟ ಉಡುಗೊರೆಯ ವಿಷಯದಲ್ಲಿ ಇರಬಹುದು, ನಾವು ಬಿಂದಾಸ್ ಖರ್ಚುದಾರರೆ ಮತ್ತು ಕೊಡುಗೈ ದಾನಿಗಳೆ ಸೈ.
ನಮ್ಮ ಹೃದಯ ಅಷ್ಟು ವಿಶಾಲವಾಗಿ ಇರುವ ಕಾರಣಕ್ಕೇ ಭಾರತೀಯ ದೇವಾಲಯಗಳಲ್ಲಿ ಪ್ರತಿದಿನ ಬೃಹತ್ ಪ್ರಮಾಣದಲ್ಲಿ ಕಾಣಿಕೆ ಸಂಗ್ರಹವಾಗುತ್ತಿದ್ದು, ಆಂಧ್ರಪ್ರದೇಶದ ತಿರುಮಲ ತಿರುಪತಿ ಬಾಲಾಜಿ ದೇವಸ್ಥಾನವೂ ಅವುಗಳಲ್ಲಿ ಒಂದು.
ಮೊನ್ನೆ ವೆಂಕಟೇಶ್ವರ ಸ್ವಾಮಿಯ ಭಕ್ತ ದಂಪತಿಯೊಬ್ಬರು 4 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಖಡ್ಗವನ್ನು ದೇವರಿಗೆ ಅರ್ಪಿಸಿದ್ದಾರೆ.
ಹೈದರಾಬಾದ್ನ ಭಕ್ತ ಎಂ.ಶ್ರೀನಿವಾಸ ಪ್ರಸಾದ್ ಮತ್ತು ಅವರ ಪತ್ನಿ 6.5 ಕೆ.ಜಿ ತೂಕದ ಸ್ವರ್ಣ ನಂದಕ (ಚಿನ್ನದ ಖಡ್ಗ)ವನ್ನು ದೇವಾಲಯದ ಮಂಡಳಿಗೆ ಅರ್ಪಿಸಿದ್ದಾರೆ. ಸೋಮವಾರ ಬೆಳಿಗ್ಗೆ ದಂಪತಿ ಚಿನ್ನದ ಖಡ್ಗವನ್ನು ತಿರುವ ತಿರುಪತಿ ದೇವಸ್ಥಾನಂ (ಟಿಟಿಡಿ) ಅಧಿಕಾರಿಗಳಿಗೆ ಹಸ್ತಾಂತರಿಸಿದರು. ಅದಕ್ಕೂ ಮೊದಲು ಖಡ್ಗವನ್ನು ತಿರುಮಲದ ಕಲೆಕ್ಟಿವ್ ಅತಿಥಿ ಗೃಹದಲ್ಲಿ ಭಾನುವಾರ ಮಾಧ್ಯಮಗಳ ಮುಂದೆ ಪ್ರದರ್ಶಿಸಲಾಗಿದೆ. ಈ ದಂಪತಿ ಕಳೆದ ವರ್ಷವೇ ದೇವಸ್ಥಾನಕ್ಕೆ ಖಡ್ಗ ಕಾಣಿಕೆಯಾಗಿ ಕೊಡಬೇಕೆಂದು ನಿರ್ಧರಿಸಿದ್ದರಂತೆ. ಆದರೆ ಕೋರೊನಾ ಕಾರಣದಿಂದಾಗಿ ಕೊಡಲಾಗಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.
ಈ ಖಡ್ಗವನ್ನು ತಮಿಳುನಾಡಿನ ಕೊಯಮತ್ತೂರಿನಲ್ಲಿರುವ ವಿಶೇಷ ಆಭರಣ ಕುಸುರಿ ಕೆಲಸಗಾರರು ನಿರಂತರ ಶ್ರಮ ವಹಿಸಿ ಆರು ತಿಂಗಳಿನಲ್ಲಿ ತಯಾರಿಸಿದ್ದಾರೆ. ಸುಮಾರು ಆರೂವರೆ ಕೆಜಿ ತೂಕವಿರುವ ಖಡ್ಗ ತಯಾರಿಸುವ ವೇಳೆ ಅದರ ಬೆಲೆ ಕೇವಲ 1.8 ಕೋಟಿ ರೂಪಾಯಿಯಷ್ಟಿತ್ತಂತೆ. ಆದರೆ ತಿರುಪತಿ ತಿಮ್ಮಪ್ಪ ಇದರ ಮದ್ಯೆ ಚಿನ್ನದ ಬೆಲೆ ಏರುವಂತೆ ಮಾಡಿದ್ದು ಈಗ ಸ್ವರ್ಣ ಖಡ್ಗದ ಬೆಲೆ 4 ಕೋಟಿ ರೂಪಾಯಿಯಾಗಿದೆ.
ಈ ಹಿಂದೆ ತಮಿಳುನಾಡಿನ ತೆನಿ ಮೂಲದ ಜವ ವ್ಯಾಪಾರಿ ತಂಗಾ ದೋರೈ ಅವರು 2018 ರಲ್ಲಿ 1.75 ಕೊ ರೂಪಾಯಿ ಮೌಲ್ಯದ ಚಿನ್ನದ ಕತ್ತಿಯನ್ನು ವೆಂಕಟೇಶ್ವರನ ಕೈಗೆ ಅರ್ಪಿಸಿದ್ದರು.