

ಮೈಸೂರು: ಕೆಮಿಕಲ್ ಫ್ಯಾಕ್ಟರಿಯಲ್ಲಿ ಎಂಡಿಎಂಎ ಮಾದಕವಸ್ತು ತಯಾರಿಸುತ್ತಿರುವ ಶಂಕೆ ಮೇರೆಗೆ ಹೆಬ್ಬಾಳ ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಯ ಮೇಲೆ ಬುಧವಾರ ದಾಳಿ ನಡೆಸಿದ್ದ ಹೊಸದಿಲ್ಲಿಯ ಎನ್ಸಿಬಿ (ನಾರ್ಕೊಟಿಕ್ ಕಂಟ್ರೋಲ್ ಬ್ಯೂರೊ) ಪೊಲೀಸರ ತಂಡವು ಕಾರ್ಖಾನೆ ಮಾಲೀಕನನ್ನು ಬಂಧಿಸಿದೆ.
ರಾಸಾಯನಿಕ ತಯಾರಿಕೆ ಘಟಕ ನಡೆಸುತ್ತಿದ್ದ ಟುಕ್ ಟುಕ್ ಹೌಸ್ ಹೋಲ್ಡ್ ಕೆಮಿಕಲ್ಸ್ ಪ್ರೊಡಕ್ಷನ್ ಮತ್ತು ಸಲ್ಯೂಷನ್ ಮ್ಯಾನುಫಾಕ್ಟರಿಂಗ್ನ ಮಾಲೀಕ ಗಣಪತ್ ಲಾಲ್ ಬಂಧಿತ ಆರೋಪಿ.
ಬಂಧಿತನನ್ನು ಮೈಸೂರಿನ ನ್ಯಾಯಾಲಯಕ್ಕೆ ಹಾಜರು ಪಡಿಸಿ ಹೊರರಾಜ್ಯಕ್ಕೆ ಕರೆದೊಯ್ಯಲು ಟ್ರಾವೆಲ್ ವಾರಂಟ್ ಪಡೆದುಕೊಂಡು ಕೊರೆದೊಯ್ಯಲಾಗಿದೆ. ಮಾದಕವಸ್ತು ಮಾರಾಟ ಪ್ರಕರಣದಲ್ಲಿ ರಾಜಸ್ಥಾನದಲ್ಲಿ ನಾಲ್ವರ ಬಂಧನವಾಗಿದ್ದು, ಅವರಲ್ಲಿ ಒಬ್ಬನಾದ ಮನೋಹರ್ ಬಿಷ್ಟೋಯಿ ಎಂಬಾತ ಗಣಪತ್ ಲಾಲ್ ಸಂಬಂಧಿ. ಆತ ನೀಡಿದ ಮಾಹಿತಿ ಆಧರಿಸಿ ದಾಳಿ ನಡೆದಿತ್ತು.












