ಮೂಡಬಿದಿರೆ, ಆಳ್ವಾಸ್ | ಫೀಸ್ ಕಟ್ಟದೆ ಎಸ್ಎಸ್ಎಲ್ ಸಿ ಪರೀಕ್ಷೆ ಕೂರಲು ಅನುಮತಿ ನಕಾರ, ಆಳ್ವಾಸ್ ವಿದ್ಯಾರ್ಥಿನಿ ಆತ್ಮಹತ್ಯೆ ಯತ್ನ !
ಎಸ್ಎಸ್ಎಲ್ ಸಿ ಪರೀಕ್ಷೆ ಬರೆಯಲು ಅವಕಾಶ ಸಿಗದ ನಿರಾಶೆಯ ಹಿನ್ನಲೆಯಲ್ಲಿ ಆಳ್ವಾಸ್ ವಿದ್ಯಾರ್ಥಿನಿಯೊಬ್ಬಳು ಅತ್ಮಹತ್ಯೆಗೆ ಪ್ರಯತ್ನ ನಡೆಸಿರುವ ಘಟನೆ ನಡೆದಿದೆ.
ಮೂಡಬಿದರೆಯ ಪ್ರತಿಷ್ಠಿತ ವಿದ್ಯಾಸಂಸ್ಥೆಯಾದ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ 2020-21 ನೇ ಸಾಲಿನಲ್ಲಿ 10 ನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿದ್ದ ಗ್ರೀಷ್ಮಾ ನಾಯಕ್ ಆತ್ಮಹತ್ಯೆಗೆ ಯತ್ನಿಸಿದ ವಿಧ್ಯಾರ್ಥಿನಿ ಎಂದು ತಿಳಿದುಬಂದಿದೆ. ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಗ್ರೀಷ್ಮಾ, ಫೀಸ್ ಕಟ್ಟಿಲ್ಲ ಎಂಬ ಕಾರಣಕ್ಕೆ ಪರೀಕ್ಷೆ ಬರೆಯಲು ಅವಕಾಶ ನೀಡಿಲ್ಲ. ಈ ಕಾರಣದಿಂದಾಗಿ ಮನನೊಂದು ಕೊರಟಗೆರೆ ನಿವಾಸದಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಕಳೆದ ವರ್ಷದ ಶಾಲಾ ಶುಲ್ಕ ಹಾಗೂ ಮೆಸ್ ಬಿಲ್ ಪಾವತಿ ಮಾಡದಿದ್ದ ಕಾರಣ, ಶಾಲೆಗೆ ಸೇರಿಸದ ಸಂಸ್ಥೆ ಎಸ್ಎಸ್ಎಲ್ ಸಿ ಪರೀಕ್ಷೆಗೆ ನೋಂದಾಯಿಸಿಲ್ಲ ಎನ್ನಲಾಗಿದೆ. 9ನೇ ತರಗತಿಯಲ್ಲಿ 96% ಅಂಕ ಗಳಿಸಿದ್ದ ವಿದ್ಯಾರ್ಥಿನಿ ಗ್ರೀಷ್ಮಾ, 10 ನೇ ತರಗತಿ ಪರೀಕ್ಷೆ ಬರೆಯಲು ಅವಕಾಶ ಕೊಡಿಸಿ ಎಂದು ಕೇಳಿಕೊಂಡಿದ್ದಳು ಎಂದು ಹೇಳಲಾಗಿದೆ.
ಇನ್ನು ವಿದ್ಯಾರ್ಥಿನಿ ನಿವಾಸಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿದ್ದು, ಆಗಸ್ಟ್ ನಲ್ಲಿ ಪರೀಕ್ಷೆ ಬರೆಯಲು ಅವಕಾಶ ನೀಡುವುದಾಗಿ ಭರವಸೆ ನೀಡಿದ್ದಾರೆ.