ಈ ವರ್ಷ ಜಿ.ಪಂ./ ತಾ.ಪಂ.ಚುನಾವಣೆ ನಡೆಯೊದಿಲ್ಲ
ಕೊರೊನಾ 3ನೇ ಅಲೆ ಭೀತಿಯ ಹಿನ್ನೆಲೆಯಲ್ಲಿ ಜಿ.ಪಂ. ಮತ್ತು ತಾ. ಪಂ. ಚುನಾವಣೆಗಳನ್ನು ಈ ವರ್ಷಾಂತ್ಯದ ವರೆಗೆ ನಡೆಸದಿರಲು ಸರಕಾರ ನಿರ್ಧರಿಸಿದೆ. ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳಿಗೆ ಸ್ಪರ್ಧಿಸಿ ಗೆದ್ದು ಬೀಗ ಬೇಕೆಂದು ಕೊಂಡ ಅಭ್ಯರ್ಥಿಗಳಿಗೆ ಅತ್ತ ನಿರಾಸೆಯಾಗಿದೆ. ಶಾಲು ಹೊದ್ದು ಮನೆಮನೆಗೆ ಕ್ಯಾಂಪೆನ್ ಗೆ ಹೊರಡಲು ತಯಾರಾಗಿದ್ದ ಕಾರ್ಯಕರ್ತರ ದಂಡು ಬೇಸರ ಪಟ್ಟುಕೊಂಡಿದೆ.
ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಈ ವರ್ಷ ತಾಲೂಕು ಪಂಚಾಯತ್ ಮತ್ತು ಜಿಲ್ಲಾ ಪಂಚಾಯತ್ ಚುನಾವಣೆಗಳು ಇರುವುದಿಲ್ಲ. ಒಟ್ಟಾರೆಯಾಗಿ ಕೋವಿಡ್ ನಿಯಂತ್ರಣಕ್ಕೆ ಬಾರದ ಹಿನ್ನೆಲೆಯಲ್ಲಿ ಮತ್ತು ಇಡೀ ದೇಶವು ಕೊರೋನಾ ಮೂರನೆಯ ಅಲೆಯ ನಿರೀಕ್ಷೆಯಲ್ಲಿರುವ ಕಾರಣ ಸಚಿವ ಸಂಪುಟ ಈ ನಿರ್ಧಾರ ತೆಗೆದುಕೊಂಡಿದೆ. ನಿನ್ನೆ ಸಭೆ ಸೇರಿದ್ದ ಸಚಿವ ಸಂಪುಟವು ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ.
ಜಿ.ಪಂ., ತಾ.ಪಂ. ಚುನಾವಣೆ ನಡೆಯದಿದ್ದರೂ ಸಹಕಾರ ಸಂಘಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಚುನಾವಣೆ ನಡೆಸಲು ಸರಕಾರ ಮುಂದಾಗಿದೆ. ಇಲ್ಲಿ ಕಡಿಮೆ ಸಂಖ್ಯೆಯಲ್ಲಿ ಜನರು ಸೇರುವುದರಿಂದ ಚುನಾವಣೆಗೆ ಅವಕಾಶ ನೀಡಲು ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.