Health tips: ಅಂದೊಂದಿತ್ತು ಕಾಲ : ಜೀವನ – ಅಂದು ಮತ್ತು ಇಂದು! : ಸುಮಾರು 40-50 ವರ್ಷಗಳ ಹಿಂದಕ್ಕೆ ಇಣುಕಿ ನೋಡಿದಾಗ

Health tips: ಅಡುಗೆ ಮನೆಯಲ್ಲಿ ಯಾವುದೇ ಉಪಕರಣಗಳು/ಯಂತ್ರಗಳು ಇರಲಿಲ್ಲ. ಮಜ್ಜಿಗೆ ಮಾಡಲು ಕಡಗೋಲನ್ನು ಬಳಸುತ್ತಿದ್ದರು, ಅರೆಯುವ ಕಲ್ಲು ದಿನನಿತ್ಯದ ಬಳಕೆಯಲ್ಲಿತ್ತು, ಧಾನ್ಯಗಳನ್ನು ಬೀಸುವ ಕಲ್ಲಿನಲ್ಲಿ ಗಿರಣಿ ಮಾಡುತ್ತಿದ್ದರು, ಕಡಲೆಬೀಜ/ಶೇಂಗಾ, ಗುರೆಳ್ಳು ಅಥವ ಬೆಳ್ಳುಳ್ಳಿ ಚಟ್ನಿ ಕುಟ್ಟಾಣಿಗಳಲ್ಲೇ ತಯಾರಿಸಲಾಗುತ್ತಿತ್ತು.

ಬೇಸಿಗೆಯಲ್ಲಿ ಮನೆ ಮನೆಯಲ್ಲಿ ಉಪ್ಪಿನಕಾಯಿ, ಹಪ್ಪಳ, ಮಸಾಲೆ, ಸಂಡಿಗೆ, ಇತ್ಯಾದಿ ವರ್ಷವಿಡೀ ಸಾಕಾಗುವಷ್ಟು ತಯಾರಿಸುತ್ತಿದ್ದರು. ಈ ಕೆಲಸಗಳನ್ನು ಮನೆಯ ಹೆಂಗಸರು ಸ್ವಯಂಪ್ರೇರಣೆಯಿಂದ ನೋಡಿಕೊಳ್ಳುತ್ತಿದ್ದರು. ದೈಹಿಕ ಪರಿಶ್ರಮವಿತ್ತು. ಆಹಾರದ ಗುಣಮಟ್ಟ ಉತ್ತಮವಾಗಿತ್ತು.
ಬಡವರಿರಲಿ ಅಥವಾ ಶ್ರೀಮಂತರಾಗಿರಲಿ, ಎಲ್ಲ ಮನಗಳಲ್ಲಿ ತಾಮ್ರ-ಹಿತ್ತಾಳೆ, ಮಣ್ಣಿನ ಪಾತ್ರೆಗಳು ಇರುತ್ತಿದ್ದವು. ಚಕ್ಕಮಕ್ಕಳೆ ಹಾಕಿ ಸಗಣಿಯಿಂದ ಸಾರಿಸಿದ ನೆಲದ ಮೇಲೆ ಕುಳಿತು ಊಟ ಮಾಡುತ್ತಿದ್ದರು. ಆಹಾರದಲ್ಲಿ ಶುದ್ಧ ದೇಸಿ ಹಾಲು, ಮೊಸರು, ಮಜ್ಜಿಗೆ, ಬೆಣ್ಣೆ, ಮನೆಯಲ್ಲಿ ತಯಾರಿಸಿದ ಶುದ್ಧ ತುಪ್ಪ ಹೇರಳವಾಗಿತ್ತು. A1 ಮತ್ತು A2 ಪ್ರಕಾರಗಳೇ ಇರಲಿಲ್ಲ. ಗಾಣದ ಎಣ್ಣೆಯನ್ನು ಅಡುಗೆಗೆ ಬಳಸಲಾಗುತ್ತಿತ್ತು, ರಿಫೈನ್ಡ ಎಣ್ಣೆ ಇರಲೇ ಇಲ್ಲ! ಆದರೂ ಯಾರಿಗೂ ಕೋಲೆಸ್ಟೆರಾಲ್, ಬಿಪಿ, ಹೃದಯಾಘಾತ ಆಗುತ್ತಿರಲಿಲ್ಲ.
ಪುಟಾಣಿ ಕಾಳು, ಕಡಲೆಕಾಳು ಮತ್ತು ಕಡಲೆಬೀಜಗಳನ್ನು ತಿನ್ನುವುದು ಸಾಮಾನ್ಯವಾಗಿತ್ತು. ಎಲ್ಲವೂ ಸಾವಯವಾಗಿತ್ತು, ರಾಸಾಯನಿಕ ಬೆಳೆಯೇ ಇರಲಿಲ್ಲ. ಕ್ಯಾರೆಟ್, ಸೌತೆಕಾಯಿ, ಟೊಮ್ಯಾಟೊ ತಿನ್ನುವುದು ಸಾಮಾನ್ಯವಾಗಿತ್ತು. ಮಕ್ಕಳು ವೃತ್ತಾಕಾರವಾಗಿ ಕುಳಿತು ಕಬ್ಬು, ಮಾವಿನಹಣ್ಣು, ಬೋರೆ ಹಣ್ಣು, ಇತ್ಯಾದಿಗಳನ್ನು ತಿನ್ನುತ್ತ ಸಿಪ್ಪೆಗಳ ಗುಡ್ಡೆ ಹಾಕುತ್ತಿದ್ದರು. ಆಯಾ ಪದಾರ್ಥವನ್ನು ಅದರ ಸ್ವಾಭಾವಿಕ ಋತುವಿನಲ್ಲೆ ಸೇವಿಸಲಾಗುತ್ತಿತ್ತು. ಅದರ ಋತುವಿನಲ್ಲಿ ಮಾತ್ರ ಆ ಆಹಾರ ಲಭ್ಯವಿತ್ತು. ಮೊದಲ ಮುಂಗಾರು ಮಳೆ ಆಗುತ್ತದ್ದಂತೆಯೆ ಮಾವಿನ ಹಣ್ಣು ತಿನ್ನುವುದು ನಿಂತು ಹೋಗುತ್ತಿತ್ತು. ಮತ್ತೆ ಗ್ರೀಷ್ಮ ಋತುವಿನವರೆಗೆ ಮಾವಿನ ಹೆಸರೆತ್ತುತ್ತಿರಲಿಲ್ಲ. ಈಗ ಚಳಿಗಾಲದಲ್ಲೂ ಮಾರುಕಟ್ಟೆಯಲ್ಲಿ ಮಾವು ಇದೆ!!
ಹುಳಿಮಾವು, ಬೋರೆ, ನೆಲ್ಲಕಾಯಿ, ಕವಳಿಹಣ್ಣು, ನೇರಳೆ, ಹುಣಸೆ ಹಣ್ಣುಗಳನ್ನು ಯಥೇಚ್ಛವಾಗಿ ತಿನ್ನುತ್ತಿದ್ದರು. ಇಂದು ಎಷ್ಟು ಮಕ್ಕಳು ಈ ಹಣ್ಣುಗಳನ್ನು ಸಹಜವಾಗಿ ತಿನ್ನುತ್ತಾರೆ? ಈಗಿನ ಮಕ್ಕಳು ಚಾಕಲೇಟ್, ಕೇಕ್, ಭೇಲ್, ಪಾನಿಪುರಿ, ಚಿಪ್ಸ್, ಪಿಜ್ಜಾ, ಬರ್ಗರ್ ಇತ್ಯಾದಿಗಳನ್ನು ತಿನ್ನುತ್ತಾ ಬೆಳೆಯುತ್ತಿದ್ದಾರೆ. ಹುಡುಗರು ಕಬಡ್ಡಿ, ಖೋ-ಖೋ, ಉಯ್ಯಾಲೆ, ಲಗೋರಿ, ಚಿನ್ನಿ-ಕೋಲು ಮುಂತಾದ ಅನೇಕ ಸ್ಥಳೀಯ ಹೊರಾಂಗಣ ಆಟಗಳನ್ನು ಆಡುತ್ತಿದ್ದರು.
ಮರಗಳನ್ನು ಹತ್ತುವುದು, ಈಜುವುದು ಇತ್ಯಾದಿ ನೈಸರ್ಗಿಕ ಚಟುವಟಿಕೆಗಳಾಗಿದ್ದವು. ಹೆಚ್ಚೆಂದರೆ ಗರಡಿ ಅಭ್ಯಾಸ ಇತ್ತು, ಜಿಮ್ ಗೆ ಹೋಗೋದಿರಲಿ ಜಿಮ್ ಗಳೇ ಇರಲಿಲ್ಲ. ಆಗ ಅವರಿಗೆ ಪೌಡರ್ ತಿಂದು ಸ್ಟೆರಾಯಿಡ್ ತೆಗೆದುಕೊಳ್ಳುವುದು ಗೊತ್ತಿರಲಿಲ್ಲ. ಈಗ ಹದಿಹರೆಯದಲ್ಲೇ ಜಿಮ್‌ನಲ್ಲಿ ಹೃದಯಾಘಾತವಾಗಿ ಸಾವುಗಳು ಸಾಮಾನ್ಯವಾಗುತ್ತಿದೆ.
ಅಂದು ಬಟ್ಟೆಗಳನ್ನು ಕೈಯಿಂದ ಉಜ್ಜಿ ತೊಳೆಯುತ್ತಿದ್ದರು. ಪ್ರತಿಯೊಬ್ಬರೂ ತಮ್ಮ ತಮ್ಮ ಬಟ್ಟೆಗಳನ್ನು ತೊಳೆಯುತ್ತಿದ್ದರು. ಆ ಅಭ್ಯಾಸ ಮನೆಯಲ್ಲಿತ್ತು. ಮೇಲಾಗಿ, ನಡಿಗೆ, ಸೈಕಲ್ ಬಳಕೆಯೇ ಸಾನಾನ್ಯವಾಗಿತ್ತು. ಕಾಲ್ನಡಿಗೆಯಲ್ಲೇ ಶಾಲೆಗೆ ಪ್ರಯಾಣ. ಬೆಳಿಗ್ಗೆ ಮತ್ತು ಸಂಜೆ ಒಂದು ಲೋಟ ಹಾಲು ಕುಡಿಯದೆ ಇರಲಿಲ್ಲ. ಎಷ್ಟೇ ಬೇಸರವಿದ್ದರೂ ಬೆಳಿಗ್ಗೆ ಮತ್ತು ಸಂಜೆ ರಾಮರಕ್ಷೆ-ಪ್ರಾರ್ಥನೆ, ಸಂಧ್ಯಾವಂದನೆ ಆಗಲೇಬೇಕು.
ರಾತ್ರಿ ಎಂಟು ಗಂಟೆ ಸುಮಾರಿಗೆ ಊಟವೂ ಆಗುತ್ತಿತ್ತು. ಆದರೆ ಇತ್ತೀಚೆಗೆ, ಮಧ್ಯರಾತ್ರಿಯಲ್ಲಿ ಕಲಬೆರಕೆ ಮಸಾಲೆಯುಕ್ತ ಮಾಂಸಾಹಾರ ಹೋಟೆಲ್‌ಗಳಲ್ಲಿ ತಿನ್ನುವುದು ಫ್ಯಾಶನ್ ಆಗಿದೆ! ಕೆಲವೊಮ್ಮೆ ರಾತ್ರಿ ಊಟವನ್ನು ಮಾಡಿದರೂ ಸಹ ಟಿವಿಯಲ್ಲಿ ಮನೆಹಾಳು, ಸಂಚುಕೋರ ಮಹಿಳಾ ಧಾರಾವಾಹಿಗಳನ್ನು ನೋಡುತ್ತ ಊಟ ಮಾಡುವುದು! ರಾತ್ರಿಯಲ್ಲಿ, ಮಕ್ಕಳು ಅಂಗಳದಲ್ಲಿ ಅಥವಾ ತಾರಸಿಯಲ್ಲಿ ಒಟ್ಟಿಗೆ ಮಲಗುತ್ತಿದ್ದರು. ಈಗ ಎಂಟು ಅಂಗುಲ ದಪ್ಪದ ಸ್ಪ್ರಿಂಗ್ ಮ್ಯಾಟ್ರೆಸ್‌ಗಳ ಮೇಲೆ ಮಲಗುತ್ತಾರೆ.
ಅಂದು ಜೀವನವ ಸುಖಕರವಾಗಿರಲಿಕ್ಕಿಲ್ಲ, ಆದರೆ ಬಹಳ ನೆಮ್ಮದಿ ಇತ್ತು. ಜನರ ಬಳಿ ಒಬ್ಬರಿಗೊಬ್ಬರು ಕೊಡಲು ಹಣವಿರಲಿಲ್ಲ, ಆದರೆ ಅವರಿಗೆ ಸಾಕಷ್ಟು ಸಮಯವಿತ್ತು. ಈಗ ನಮಗೆ ಸಮಯವಿಲ್ಲ, ನಮಗಾಗಿ ಮತ್ತು ಇತರರಿಗಾಗಿ! ಜೀವನವು ತುಂಬಾ ವೇಗವಾಗಿರಲಿಲ್ಲ, ನಿಧಾನವಾಗಿತ್ತು. ಆದರೆ, ಅದರಿಂದಾಗಿ ಆಯಾಸ, ಒತ್ತಡ ಇರಲಿಲ್ಲ. “ಬೇಗ ಹೊರಡು, ನಿಧಾನವಾಗಿ ಹೋಗು, ಸುರಕ್ಷಿತವಾಗಿ ತಲುಪು” ತತ್ವದ ಅನುಸಾರ ಜನರು ದೈನಂದಿನ ಜೀವನ ಬದುಕುತ್ತಿದ್ದರು. ಈ ಕಾರಣದಿಂದಾಗಿ, ಅವರು ಆರೋಗ್ಯವಾಗಿ ಬದುಕತ್ತಿದ್ದರು. ಆಯಾಸ ಮತ್ತು ಉದ್ವೇಗದಿಂದ ದೂರವಿರಲು ಜೀವನ ಪರಿಸ್ಥಿತಿಗಳಲ್ಲಿನ ಸರಳತೆಯೂ ಪ್ರಮುಖ ಕಾರಣವಾಗಿರಬೇಕು. ಇಂದು ನಮ್ಮ ಬದುಕು ಓಡುತ್ತಿದೆ..! ಆಗ ಜನರ ಜೀವನದಲ್ಲಿ ಒಂಟಿತನ ಇರಲಿಲ್ಲ. ಹೆಚ್ಚಾಗಿ ಇತರರೊಂದಿಗೆ ಹೋಗುತ್ತಿದ್ದರು. ಎಲ್ಲರೂ ಜನರಿಂದ ಸುತ್ತುವರೆದಿದ್ದರು.
ಸಿಟ್ಟು-ಸೆಡವು, ಅಹಂಕಾರ-ಸೇಡು ತೀವ್ರವಾಗಿರಲಿಲ್ಲ, ಆದರೆ ಸ್ಪಷ್ಟತೆಯೂ ಇತ್ತು. ಏಕೆಂದರೆ ಮುಚ್ಚಿಡಲು ಏನೂ ಇರಲಿಲ್ಲ. ಮುಚ್ಚಿದ ಬಾಗಿಲುಗಳಿರಲಿಲ್ಲ. ಬಾಗಿಲುಗಳಿಗೆ ಬೀಗಗಳಿರಲಿಲ್ಲ. ಅಕ್ಕಪಕ್ಕದಲ್ಲಿ ಏನಾದರೂ ವಿಷೇಶ ಅಡುಗೆ ಮಾಡಿದಾಗ ಅದರಲ್ಲಿ ತುಂಬಿದ ಬಟ್ಟಲು ಪಕ್ಕದ ಮನೆಗೂ ಸರಬರಾಜಾಗುತ್ತಿತ್ತು. ಅದರಲ್ಲಿ ಪ್ರೀತಿ, ಭರವಸೆ, ಸಂಸ್ಕಾರವಿತ್ತು. ಜನರ ಬಗ್ಗೆ ಕಾಳಜಿ ವಹಿಸುವ ಒಟ್ಟಾರೆ ಪ್ರವೃತ್ತಿ ಇತ್ತು. ಯಾವುದೇ ಮಾನಸಿಕ ಸಮಸ್ಯೆಗಳ ಕೊರತೆ ಇತ್ತು! ಯಾವುದೇ ಚಿಂತೆ ಇರಲಿಲ್ಲ.
ಇದನ್ನೂ ಓದಿ:Belthangady: ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ತಡೆ ಅರ್ಜಿ ಆದೇಶ ಕಾಯ್ದಿರಿಸಿದ ಹೈಕೋರ್ಟ್
ರಾತ್ರಿ ಶಾಂತವಾಗಿ ಮಲಗಬಹುದು. *ಬಹಳಷ್ಟು ಸ್ನೇಹಿತರು, ಪರಿಚಿತರು, ನೆರೆಹೊರೆಯವರ ಒಡನಾಟದಲ್ಲಿ ಕಷ್ಟದ ಸಂದರ್ಭಗಳನ್ನು ಅರಗಿಸಿಕೊಳ್ಳುವ ಶಕ್ತಿ ಬರುತ್ತಿತ್ತು. ತಾಳ್ಮೆ ಇತ್ತು. ಇಂದು ಆಧುನಿಕತೆ, ಅನುಕೂಲತೆ ಮತ್ತು ಖಾಸಗಿತನ ಹೆಸರಿನಲ್ಲಿ ಇದನ್ನೆಲ್ಲ ತಳ್ಳಿ ಒಂಟಿಯಾಗಿ ನಡೆಯಲು ನಿರ್ಧರಿಸಿದ್ದೇವೆ. ಚಿನ್ನವನ್ನು ಬಿಟ್ಟು ಹಿತ್ತಾಳೆಯ ಹಿಂದೆ ಓಡಲು ಪ್ರಾರಂಭಿಸಿದ್ದೇವೆ. ನಾವು ಜೀವನದ ಎಲ್ಲಾ ಹಂತಗಳಲ್ಲಿ ಏಕಾಂಗಿಯಾಗಿ ಹೋರಾಡಲು ಪ್ರಾರಂಭಿಸಿದರೆ, ಆಗ ನಾವು ಸುಸ್ತಾಗುತ್ತೇವೆ! ಆರೋಗ್ಯ ಹಾಳಾಗುತ್ತದೆ!!
Comments are closed.