2021 ಒಲಂಪಿಕ್ಸ್ ಕ್ರೀಡಾಕೂಟದ ನಿಮಿತ್ತ ಟೋಕಿಯೋ ಹೊರಟಿರುವ ಭಾರತದ ಅಥ್ಲೀಟ್ಸ್ ಗಳು | ವಿಡಿಯೋ ಕಾನ್ಫರೆನ್ಸ್ ಮೂಲಕ ಶುಭ ಹಾರೈಸಿದ ಪ್ರಧಾನಿ ಮೋದಿ
ಕ್ರೀಡಾಪಟುಗಳ ತಮ್ಮ ಜೀವಮಾನದ ಕನಸು ಇನ್ನೇನು ಸಾಕಾರಗೊಳ್ಳುವ ಸಮಯ. ಕ್ರೀಡಾಲೋಕದ ತೀರ್ಥಕ್ಷೇತ್ರ ಒಲಂಪಿಕ್ ನ ಮಣ್ಣನ್ನು ತಮ್ಮ ಪಾದಗಳಿಗೆ ಸ್ಪರ್ಶ ಮಾಡಿಸಿಕೊಳ್ಳುವ ತವಕದ ಕ್ಷಣ ಸನ್ನಿಹಿತ. ಬಾಲ್ಯದಿಂದ ಪ್ರಾರಂಭಿಸಿ, ಇಲ್ಲಿಯತನಕ ತಾನು ಪ್ರೀತಿಸಿದ ಕ್ರೀಡೆಗಾಗಿ ದೇಹವನ್ನು ಕಟೆದು ನಿಲ್ಲಿಸಿ ಒಲಿಂಪಿಕ್ ನಲ್ಲಿ ಪರ್ಫಾರ್ಮ್ ಮಾಡಲು ತುದಿಗಾಲಲ್ಲಿ ನಿಂತಿದ್ದ ಕ್ಷಣಕ್ಕೆ ಇನ್ನು ಕೇವಲ ಕ್ಷಣಗಣನೆ. ಇನ್ನೊಂದು ವಾರದಲ್ಲಿ, ಇದೇ, ಜುಲೈ 23ರಂದು, ಜಪಾನಿನ ಟೋಕಿಯೋ ನಗರದಲ್ಲಿ ಆಯೋಜಿಸಿರುವ ಒಲಿಂಪಿಕ್ಸ್ ನಲ್ಲಿ ಕ್ರೀಡಾಕೂಟಗಳು ಪ್ರಾರಂಭವಾಗಲಿವೆ.
ಆ 228 ಸಾಧಕರನ್ನು ಮತ್ತಷ್ಟು ಹುರಿದುಂಬಿಸಿ, ಪ್ರೋತ್ಸಾಹಿಸಿ ಕಳುಹಿಸುವ ಕೆಲಸಕ್ಕೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಕೈಹಾಕಿದ್ದಾರೆ. ಅಂತೆಯೇ ಟೋಕಿಯೋ ಪ್ರಯಾಣದ ಮುನ್ನ ಪ್ರಧಾನಿ ಮೋದಿ ಅಥ್ಲೀಟ್ ಗಳೊಂದಿಗೆ ಸಂಭಾಷಣೆ ನಡೆಸಿ ಶುಭ ಹಾರೈಸಿದರು.
ಇದೇ ಜುಲೈ 23ರಿಂದ ಜಪಾನ್ ರಾಜಧಾನಿ ಟೋಕಿಯೋದಲ್ಲಿ ಒಲಿಂಪಿಕ್ಸ್ ಕ್ರೀಡಾಕೂಟಕ್ಕೆ ಚಾಲನೆ ದೊರೆಯಲಿದ್ದು, ಹೀಗಾಗಿ ಭಾರತದ 228 ಮಂದಿ ಅಥ್ಲೀಟ್ ಗಳ ತಂಡ ಜಪಾನ್ ಗೆ ತೆರಳಲು ಸಜ್ಜಾಗಿ ನಿಂತಿವೆ.
ಈ ಹಿನ್ನಲೆಯಲ್ಲಿ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಲು ಟೋಕಿಯೊಗೆ ತೆರಳುತ್ತಿರುವ ಭಾರತೀಯ ಕ್ರೀಡಾಪಟುಗಳೊಂದಿಗೆ ಮಂಗಳವಾರ ಸಮಾಲೋಚನೆ ನಡೆಸಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಎಲ್ಲರಿಗೂ ಶುಭ ಕೋರಿದರು.
ವಿಡಿಯೋ ಕಾನ್ಫರೆನ್ಸ್ ಮೂಲಕ ಅಥ್ಲೀಟ್ ಗಳೊಂದಿಗೆ ಮಾತನಾಡಿದ ಪ್ರಧಾನಿ ಮೋದಿ, ‘ಜಗತ್ತಿನ ಅತ್ಯಂತ ಶ್ರೇಷ್ಠ ಕ್ರೀಡಾ ವೇದಿಕೆಯಲ್ಲಿ ಮಿಂಚಲು ಇಡೀ ಭಾರತವೇ ನಿಮ್ಮ ಬೆನ್ನಿಗೆ ನಿಂತಿದೆ’ ಎಂದು ಅವರು ಎಲ್ಲರಲ್ಲೂ ವಿಶ್ವಾಸ ತುಂಬಿದರು.
ಅಪ್ರತಿಮ ಮಹಿಳಾ ಬಾಕ್ಸರ್ ಎಂ. ಸಿ. ಮೇರಿ ಕೋಮ್, ಬ್ಯಾಡ್ಮಿಂಟನ್ ತಾರೆ ಪಿ.ವಿ. ಸಿಂಧು, ಪ್ರತಿಭಾವಂತ ಶೂಟರ್ ಸೌರಭ್ ಚೌಧರಿ, ಶೂಟರ್ ಎಲವೆನಿಲ್ ವಲರಿವನ್ ಮತ್ತು ಅನುಭವಿ ಟೇಬಲ್ ಟೆನಿಸ್ ಆಟಗಾರ ಎ. ಶರತ್ ಕಮಲ್ ಸೇರಿದಂತೆ ಹಲವು ಅಥ್ಲೀಟ್ ಗಳೊಂದಿಗೆ ಪ್ರಧಾನಿ ವರ್ಚುವಲ್ ಸಮಾಲೋಚನೆಯಲ್ಲಿ ಮಾತನಾಡಿದರು.
ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಅವರ ಕ್ರೀಡಾ ಯಾನವನ್ನು ಪ್ರೋತ್ಸಾಹಿಸಿದ ಅವರ ಪೋಷಕರನ್ನು ಇದೇ ವೇಳೆ ಪ್ರಶಂಸಿಸಿದರು. ‘2016ರ ರಿಯೊ ಒಲಿಂಪಿಕ್ಸ್ ಸಂದರ್ಭದಲ್ಲಿ ನೀವು ಐಸ್‌ಕ್ರೀಂ ತಿನ್ನದಂತೆ ಕೋಚ್ ಗೋಪಿಚಂದ್ ನಿಷೇಧಿಸಿದ್ದರು. ಈ ಬಾರಿಯೂ ಪರಿಸ್ಥಿತಿ ಹಾಗೆಯೇ ಇದೆಯೇ? ಈ ಸಲವೂ ನೀವು ಒಲಿಂಪಿಕ್ಸ್ ಮುಗಿಯುವವರೆಗೂ ಫೋನ್ ಬಳಕೆ ಮಾಡುವುದಿಲ್ಲವೇ?’ ಎಂದು ತಿಳಿ ಹಾಸ್ಯ ಮಿಶ್ರಿತ ಧಾಟಿಯಲ್ಲಿ ಸಂವಾದ ನಡೆಸಿದರು.
ಮೋದಿಯವರ ಪ್ರಶ್ನೆಗೆ ಉತ್ತರಿಸಿದ ಸಿಂಧು, ‘ಸರ್, ನನ್ನ ಆಹಾರ ಸೇವನೆಯ ಕುರಿತು ಬಹಳ ಎಚ್ಚರಿಕೆಯಿಂದ ಇರಬೇಕು’ ಎಂದರು. “ನೀವು ಒಲಂಪಿಕ್ಸ್‌ನಿಂದ ಹಿಂತಿರುಗಿದ ನಂತರ ನಾನು ನಿಮ್ಮೊಂದಿಗೆ ಐಸ್‌ಕ್ರೀಮ್ ಸವಿಯುತ್ತೇನೆ” ಎಂದು ಪಿ.ವಿ ಸಿಂಧು ಅವರಿಗೆ ನರೇಂದ್ರ ಮೋದಿ ಭರವಸೆ ನೀಡಿದರು.
ರಿಯೊ ಒಲಿಂಪಿಕ್ಸ್‌ನಲ್ಲಿ ಸಿಂಧು ಬೆಳ್ಳಿ ಪದಕ ಜಯಿಸಿದ್ದರು. ಅವರ ಸಾಧನೆ ಮತ್ತು ಕೋಚ್ ಪಿ. ಗೋಪಿಚಂದ್ ಮಾರ್ಗದರ್ಶನ ಕುರಿತು ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಕುಸ್ತಿಪಟು ವಿನೇಶ ಪೋಗಟ್ ಕುಟುಂಬದ ಸದಸ್ಯರೊಂದಿಗೂ ಮಾತನಾಡಿದರು. ‘ನಿಮ್ಮ ಹೆಣ್ಣುಮಕ್ಕಳಿಗೆ ಯಾವ ಬೀಸುಕಲ್ಲಿನಲ್ಲಿ ಸಿದ್ಧವಾದ ಹಿಟ್ಟಿನ ಆಹಾರ ನೀಡುತ್ತೀರಿ’ ಎಂದು ಕೇಳಿದರು. ಕುಸ್ತಿಕ್ರೀಡೆಗೆ ತಮ್ಮ ಕುಟುಂಬದ ಹುಡುಗಿಯರ ಕೊಡುಗೆ ಅಪಾರ ಎಂದು ಶ್ಲಾಘಿಸಿದರು.
‘ನೀವು ಕೋವಿಡ್ ಸೋಂಕಿಗೊಳಗಾಗಿದ್ದಿರಿ. ಇದೇ ಹಂತದಲ್ಲಿ ನಿಮ್ಮ ತಂದೆಯ ನಿಧನದ ದುಃಖವನ್ನೂ ಅನುಭವಿಸಿದಿರಿ. ಅಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿಯೂ ಹೇಗೆ ಸ್ಥಿಮಿತ ಕಾಯ್ದುಕೊಂಡು ಒಲಿಂಪಿಕ್ಸ್ ಅರ್ಹತೆ ಪಡೆದಿರಿ’ ಎಂದು ಬಾಕ್ಸರ್ ಆಶಿಶ್ ಕುಮಾರ್ ಅವರನ್ನು ಮೋದಿ ಪ್ರಶ್ನಿಸಿದರು.
ಅದಕ್ಕುತ್ತರಿಸಿದ ಆಶಿಶ್, ‘ನಾನು ಸ್ಪೇನ್‌ನಲ್ಲಿದ್ದಾಗ ಕೋವಿಡ್ ಸೋಂಕು ತಗುಲಿತ್ತು. ಅಲ್ಲಿ ನನಗೆ ವಿಶೇಷ ಚಿಕಿತ್ಸಾ ಸೌಲಭ್ಯಗಳನ್ನು ನೀಡಲಾಗಿತ್ತು. ಆದರೂ ಚೇತರಿಸಿಕೊಳ್ಳಲು ಬಹಳ ಸಮಯ ಬೇಕಾಯಿತು. ಭಾರತಕ್ಕೆ ಮರಳಿದ ನಂತರ ನಮ್ಮ ತಂಡದ ನೆರವು ಸಿಬ್ಬಂದಿಯ ಉತ್ತಮ ಸಹಕಾರ ಮತ್ತು ಮಾರ್ಗದರ್ಶನದಿಂದ ಈ ಸಾಧನೆ ಸಾಧ್ಯವಾಯಿತು’ ಎಂದರು.
ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಪಿತೃವಿಯೋಗದ ದುಃಖದಲ್ಲಿಯೂ ಅಂತರರಾಷ್ಟ್ರೀಯ ಪಂದ್ಯದಲ್ಲಿ ಅಮೋಘವಾಗಿ ಆಡಿ ಭಾರತ ತಂಡಕ್ಕೆ ಆಸರೆಯಾಗಿದ್ದನ್ನು ಮೋದಿ ಈ ಸಂದರ್ಭದಲ್ಲಿ ನೆನಪಿಸಿಕೊಂಡರು. ಗಾಯಗೊಂಡರೂ ನೂತನ ದಾಖಲೆ ನಿರ್ಮಿಸಿದ ಜಾವೆಲಿನ್ ಥೋ ಅಥೇಟ್ ನೀರಜ್ ಚೋಪ್ರಾ ಅವರನ್ನು ಇದೇ ಸಮಯದಲ್ಲಿ ಅಭಿನಂದಿಸಿದರು.
ಪ್ರಧಾನಿ ಮೋದಿ ಅವರ ಈ ಸಮಾಲೋಚನೆ ಅಥ್ಲೀಟ್ಸ್ ಗಳ ವಿಶ್ವಾಸವನ್ನು ಹೆಚ್ಚಿಸಿದೆ. ಅಥ್ಲೀಟ್ಸ್ ಗಳು ಎಲ್ಲಾ ವಿಭಾಗಗಳಲ್ಲಿ ಗೆದ್ದು ಬರಲಿ ಎಂಬುದೇ ನಮ್ಮೆಲ್ಲರ ಆಶಯ. All the best team India??!!