ಸ್ನಾನ ಮಾಡುತ್ತಿದ್ದ ವೇಳೆ, ಗ್ಯಾಸ್ ಗೀಸರ್ ಸೋರಿಕೆಯಾದ ಕಾರಣ ಉಸಿರುಗಟ್ಟಿ ಯುವಕ ಸಾವು
ಸ್ನಾನ ಮಾಡುತ್ತಿದ್ದ ವೇಳೆ ಗ್ಯಾಸ್ ಗೀಝರ್ ನಿಂದ ಸೋರಿಕೆಯಾದ ಕಾರ್ಬನ್ ಮೊನೋಕ್ಸೈಡ್ ಸೇವಿಸಿ ಯುವಕನೋರ್ವ ಉಸಿರುಗಟ್ಟಿ ಮೃತಪಟ್ಟ ಘಟನೆ ಬಂಟ್ವಾಳ ತಾಲೂಕಿನ ಫರಂಗಿಪೇಟೆ ಸಮೀಪದ ಮಾರಿಪಳ್ಳ ಎಂಬಲ್ಲಿ ನಡೆದಿದೆ.
ಮೃತ ಯುವಕನನ್ನು ಮಾರಿಪಳ್ಳ ನಿವಾಸಿ ಇಸ್ಮಾಯಿಲ್ ಎಂಬವರ ಪುತ್ರ ಇಜಾಝ್ ಅಹ್ಮದ್ (23) ಎಂದು ಗುರುತಿಸಲಾಗಿದೆ.
ಈತ ಸ್ನಾನದ ಕೊಠಡಿಯಲ್ಲಿದ್ದ ಗ್ಯಾಸ್ ಗೀಝರ್ ಅನ್ನು ಆನ್ ಮಾಡಿ ಸ್ನಾನ ಮಾಡುತ್ತಿದ್ದ ವೇಳೆ ಗೀಝರ್ ನಿಂದ ಹೊರ ಬಂದ ಕಾರ್ಬನ್ ಮೊನೋಕ್ಸೈಡ್ ಸೇವಿಸಿ ಈ ದುರ್ಘಟನೆ ಸಂಭವಿಸಿದೆ.
ಸ್ನಾನಕ್ಕೆ ತೆರಳಿದ್ದ ಇಜಾಝ್ ಅಹ್ಮದ್ ಒಂದು ಗಂಟೆಯಾದರೂ ಹೊರ ಬಾರದ ಕಾರಣ, ಮನೆಯವರು ಬಾಗಿಲು ಒಡೆದು ನೋಡಿದಾಗ ಆತ ಕೊಠಡಿಯಲ್ಲಿ ಬಿದ್ದಿದ್ದ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಆ ವೇಳೆಗಾಗಲೇ ಆತ ಮೃತಪಟ್ಟಿದ್ದ.