ಪುತ್ತೂರಿನಲ್ಲಿ ನಡೆದ ವಿರಾಟ್ ಭಜನಾ ಸತ್ಸಂಗ ಸಮಾವೇಶ : ಭಜಕರಿಂದ ತುಂಬಿಹೋಯಿತು ಸಭಾಂಗಣ
- ಪ್ರಸಾದ್ ಬಲ್ನಾಡ್
ಪುತ್ತೂರು : ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ ಹಾಗೂ ಭಜನಾ ಸತ್ಸಂಗ ಸಮಾವೇಶ ಸಮಿತಿ2020 ಪುತ್ತೂರು ವತಿಯಿಂದ ಭಜನಾ ಸತ್ಸಂಗ ಸಮಾವೇಶ ಮತ್ತು ಸಾಮೂಹಿಕ ಕೋಟಿ ಶಿವ ಪಂಚಾಕ್ಷರಿ ಪಠಣ ಹಾಗೂ ಭಜನಾ ಸಂಕಿರ್ತನಾ ಮೆರವಣಿಗೆ ಮತ್ತು ಗ್ರಾಮಾಭಿವೃದ್ಧಿ ಯೋಜನೆಯ ಕೇಂದ್ರ ಒಕ್ಕೂಟದ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಇಂದು ಪುತ್ತೂರಿನ ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಗದ್ದೆಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ವಜ್ರದೇಹಿ ಮಠದ ಶ್ರೀ ರಾಜಶೇಖರಾನಂದ ಸ್ವಾಮೀಜಿ ಹಾಗೂ ಡಾ.ಡಿ ವೀರೇಂದ್ರ ಹೆಗಡೆಯವರು ಉದ್ಘಾಟಿಸಿದರು,ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವಿರೇಂದ್ರ ಹೆಗ್ಗಡೆ ಅವರು ಮಹಿಳಾ ಸಬಲೀಕರಣ ಆರ್ಥಿಕ ಬಲಿಷ್ಟತೆ ಮತ್ತು ಸ್ವಯಂ ಸೇವಾಕಾರ್ಯಗಳ ಮೂಲಕ ವಿಶಿಷ್ಟತೆಯನ್ನು ಹೊಂದಿರುವ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ `ಹಲವು ಮಕ್ಕಳ ತಾಯಿ’ ಯಾಗಿ ಗ್ರಾಮೀಣ ಭಾಗದ ಜನತೆಯ ಪರಿವರ್ತನೆಯ ಬದುಕನ್ನು ಅರ್ಥಪೂರ್ಣವಾಗಿ ಕಟ್ಟುತ್ತಿದೆ ಎಂದು ಹೇಳಿದರು.
ಜನತೆಯ ನಡುವೆ ಜಾತ್ಯಾತೀತ ಮನೋಭಾವನೆಯನ್ನು ಬೆಳೆಸುವ ಮೂಲಕ ಹಲವು ಕುಟುಂಬಗಳನ್ನು ಒಂದು ಕುಟುಂಬವನ್ನಾಗಿಸಿದ ಹೆಗ್ಗಳಿಕೆ ಗ್ರಾಮಾಭಿವೃದ್ಧಿ ಯೋಜನೆಯದ್ದಾಗಿದೆ. ಬೌದ್ಧಿಕ, ಸಾಂಸಾರಿಕ ಹಾಗೂ ಸಾಮಾಜಿಕವಾದ ಬದಲಾವಣೆಗಳು ಅತ್ಯಂತ ಬಡತನದ ಕಾಲಘಟ್ಟದಿಂದ ಜನತೆಯನ್ನು ಮೇಲ್ಮಟ್ಟಕೇರಿಸುವ ಚಿಂತನೆಯೊಂದಿಗೆ ವ್ಯವಹಾರಜ್ಞಾನ ಮತ್ತು ಸಾಮಾಜಿಕ ಸಂಬಂಧ ಬೆಸೆಯುವ ಮೂಲಕ ಯೋಜನೆ ಅಭೂತಪೂರ್ವ ಯಶಸ್ಸು ಕಂಡಿದೆ. ಇದು ಯೋಜನೆಯ ಕಾರ್ಯಕರ್ತರ ಶ್ರಮದ ಫಲವಾಗಿದೆ ಎಂದರು.
ಪುತ್ತೂರು ತಾಲೂಕಿನಲ್ಲಿ ಕಳೆದ 18 ವರ್ಷಗಳ ಹಿಂದೆ ಯೋಜನೆ ಪ್ರಾರಂಭವಾಗಿದ್ದು, ಪ್ರಸ್ತುತ 28 ಸಾವಿರ ಸದಸ್ಯರ ಕುಟುಂಬಗಳು ಈ ಯೋಜನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿವೆ. 18 ವರ್ಷದಲ್ಲಿ ರೂ.19 ಕೋಟಿ ಉಳಿತಾಯ ಮಾಡುವ ಮೂಲಕ ತಮ್ಮ ಪ್ರಗತಿ ಸಾಧಿಸಿವೆ. ಪ್ರಸ್ತುತ ಸ್ವಸಹಾಯ ಮತ್ತು ಪ್ರಗತಿ ಬಂಧುಯೋಜನೆಯ ಜನತೆಗಾಗಿ `ಪ್ರಗತಿ ರಕ್ಷಾ ಕವಚ’ ಎಂಬ ಹೊಸ ವಿಮಾ ಯೋಜನೆಯನ್ನು ಅನುಷ್ಟಾನ ಮಾಡಲಾಗಿದೆ. ಈ ಹಿಂದಿನ ವಿಮಾಯೋಜನೆಯಡಿಯಲ್ಲಿ ಪುತ್ತೂರು ತಾಲೂಕಿಗೆ ರೂ.87 ಲಕ್ಷ ಹಾಗೂ ಜಿಲ್ಲೆಯಲ್ಲಿ ರೂ.50 ಕೋಟಿ ಪರಿಹಾರ ದೊರೆತಿದೆ. ಯೋಜನೆಯಡಿಯಲ್ಲಿ ಹಲವಾರು ಇಂತಹ ಕಾರ್ಯಕ್ರಮಗಳಿವೆ. ಕೇಂದ್ರ ಸರ್ಕಾರದ ಹಲವು ಯೋಜನೆಗಳಿಗೆ ಇವೆಲ್ಲದರ ಲಾಭ ಪಡೆಯುವಲ್ಲಿ ಯೋಜನೆಯ ಕಾರ್ಯಕರ್ತರು ಮುಂದಾಗಬೇಕು ಎಂದು ಅವರು ಹೇಳಿದರು.
ಕೇಂದ್ರ ಒಕ್ಕೂಟದ ನೂತನ ಪದಾಧಿಕಾರಿಗಳಿಗೆ ಜವಾಬ್ದಾರಿ ಹಸ್ತಾಂತರಿಸಿದ ಪುತ್ತೂರು ಶಾಸಕ ಸಂಜೀವ ಮಠಂದೂರು ಮಾತನಾಡಿ, ವ್ಯಸನಮುಕ್ತ ಸಮಾಜ, ಮೌಲ್ಯಾಧಾರಿತ ಸ್ವಾವಲಂಬಿ ಬದುಕು ಕಟ್ಟಕೊಡುವ ಸಮಾಜದಲ್ಲಿ ಪ್ರೀತಿ ಭಾವೈಕ್ಯತೆ ಬೆಳೆಸುವ ಮಹಾತ್ಕಾರ್ಯ ಡಾ.ಡಿ.ವಿರೇಂದ್ರ ಹೆಗ್ಗಡೆ ಅವರ ಯೋಜನೆಯ ಮೂಲಕ ನಡೆದಿದೆ. ಧರ್ಮಾಧಾರಿತ ಬದುಕನ್ನು ಅರ್ಥಪೂರ್ಣಗೊಳಿಸುವ ಜತೆಗೆ ಋಷಿ -ಕೃಷಿ ಪರಂಪರೆಯನ್ನು ಬೆಳೆಸುವ ಕಾರ್ಯ ಯೋಜನೆಯ ಮೂಲಕ ನಡೆಯುತ್ತಿದೆ,ವ್ಯಸನ ಮುಕ್ತ ಸಮಾಜದ ಜೋತೆಗೆ ಹಲವು ಕುಟುಂಬಗಳನ್ನು ಅರ್ಥಿಕವಾಗಿ ಸಬಲಿಕರಣನ್ನಾಗಿ ಮಾಡಿದ್ದಾರೆ. ಅದ್ಯಾತ್ಮಿಕ ಬದುಕಿಗಾಗಿ ಮಂಜುನಾಥೇಶ್ವರ ಭಜನಾ ಪರಿಷತ್ ಆರಂಭ ಮಾಡಿದ್ದಾರೆ, ಇಂದು ಅದ್ಯಾತ್ಮದ ಬದುಕು ಪ್ರೆರಣೆ ಕೊಡುವ ಸಂಗತಿಯಾಗಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಲ್.ಎಚ್. ಮಂಜುನಾಥ ,ಕೇಂದ್ರ ಒಕ್ಕೂಟದ ನಿರ್ಗಮನ ಅಧ್ಯಕ್ಷ, ರಾಮಣ್ಣ ಗೌಡ ಗುಂಡೋಳೆ, ನೂತನ ಅಧ್ಯಕ್ಷ ಬಾಲಕೃಷ್ಣ ಗೌಡ ನೆಲ್ಯಾಡಿ, ಮಾಜಿ ಶಾಸಕರಾದ ಶಕುಂತಳಾ ಶೆಟ್ಟಿ, ಮಲ್ಲಿಕಾ ಪ್ರಸಾದ್, ಭಜನಾ ಸತ್ಸಂಗ ಸಮಿತಿ ಅಧ್ಯಕ್ಷ ಧನ್ಯಕುಮಾರ್ ರೈ ಬಿಳಿಯೂರುಗುತ್ತು, ಕಾರ್ಯಾಧ್ಯಕ್ಷ ಅರುಣ್ ಕುಮಾರ್ ಪುತ್ತಿಲ, ಸಂಚಾಲಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು, ಸಾಜ ರಾಧಾಕೃಷ್ಣ ಆಳ್ವ, ಪದ್ಮನಾಭ ಶೆಟ್ಟಿ, ಜನಜಾಗೃತಿ ವೇದಿಕೆಯ ತಾಲೂಕು ಅಧ್ಯಕ್ಷ ಮಹಾಬಲ ರೈ ಒಳತ್ತಡ್ಕ, ಮತ್ತಿತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.