ಪಂಜ ಪಂಚಲಿಂಗೇಶ್ವರದೇವರ ಸಾನಿಧ್ಯದಲ್ಲಿ ಶ್ರೀ ಪರಿವಾರ ಪಂಚಲಿಂಗೇಶ್ವರ ಐಟಿಐ ಶಿಕ್ಷಣ ಸಂಸ್ಥೆಯ ಸ್ವಯಂ ಸೇವೆ

✍ ಭಾಸ್ಕರ ಜೋಗಿಬೆಟ್ಟು ,ಕಿರಣ್ ಕೊಂಡೆಬಾಯಿ

ಪಂಜ ಪರಿವಾರ ಪಂಚಲಿಂಗೇಶ್ವರ ದೇವಾಲಯವು ಅತ್ಯಂತ ಪುರಾತನ ದೇವಾಲಯ ಆಗಿದ್ದು , ಋಷಿಗಳ ತಪಸ್ಸಿನ ಪ್ರಭಾವದಿಂದ ಸ್ಥಾಪಿಸಲ್ಪಟ್ಟಿದೆ ಎಂಬ ಇತಿಹಾಸವಿದೆ. ಈ ಪುರಾತನ ದೇವಾಲಯದ ಪಂಚಲಿಂಗೇಶ್ವರ ದೇವರಿಗೆ ಇಂದು ಮತ್ತು ನಾಳೆ ಜಾತ್ರೆಯ ಸಂಭ್ರಮ. ಹಲವಾರು ದೇವಾಲಯಗಳ ಜಾತ್ರೋತ್ಸವಗಳಲ್ಲಿ ಅಲ್ಲಿನ ಊರ ಪರಊರ ಸಂಘ ಸಂಸ್ಥೆಗಳು, ಸ್ವಯಂ ಸೇವಕರು ಬಂದು ಸ್ವಯಂ ಸೇವೆ ಮಾಡುವುದು ಸಾಮಾನ್ಯ. ಆದರೆ ಪಂಜ ಜಾತ್ರೋತ್ಸವದಲ್ಲಿ ಸ್ವಲ್ಪ ವಿಭಿನ್ನವಾಗಿದೆ.

ಪ್ರತಿ ವರ್ಷ ಜಾತ್ರೋತ್ಸವದ ಸಮಯದಲ್ಲಿ ಕೆ.ಎಸ್ ಗೌಡ ಸಂಸ್ಥೆಯ ಅಂಗ ಸಂಸ್ಥೆಯಾದ ಶ್ರೀ ಪರಿವಾರ ಪಂಚಲಿಂಗೇಶ್ವರ ಐಟಿಐ ಸಂಸ್ಥೆಯ ಶಿಕ್ಷಕರು, ರಾಷ್ಟ್ರೀಯ ಸೇವಾದಳದ ವಿದ್ಯಾರ್ಥಿಗಳು ಮತ್ತು ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳು ಇಂದಿನ ದೇವರ ದರ್ಶನ ಬಲಿ ಕಾರ್ಯಕ್ರಮದ ಸೇವೆಯಲ್ಲಿ ಪಾಲ್ಗೊಂಡರು.

ಕಳೆದ ಹದಿನಾಲ್ಕು ವರ್ಷಗಳಿಂದ ಸ್ವಯಂ ಸೇವೆ ಮಾಡುವ ಕಾರ್ಯ ಮಾಡುತ್ತಾ ಬಂದಿದ್ದು, ಇದು ಸಮಾಜದಲ್ಲಿ ಭಾರಿ ಪ್ರಶಂಸೆಗೆ ಪಾತ್ರವಾಗಿದೆ. ಇಂದು ದೇವಾಲಯದ ದರ್ಶನ ಬಲಿಯ ಸಂದರ್ಭದಲ್ಲಿ ಭಕ್ತರಿಗೆ ಮಾರ್ಗದರ್ಶನ ನೀಡುವುದು, ಪಾರ್ಕಿಂಗ್, ಭಕ್ತರಿಗೆ ದೇವಾಲಯದಲ್ಲಿ ನೀಡಲಾಗುವ ಅನ್ನಪ್ರಾಸದ ಕೊಠಡಿಯಲ್ಲಿ ಕೆಲಸ ಅಲ್ಲದೆ ಇನ್ನು ಹಲವಾರು ಕೆಲಸಗಳಲ್ಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಪಾಲ್ಗೊಂಡರು.

*ಧಾರ್ಮಿಕ ಕಾರ್ಯಕ್ರಮದಲ್ಲಿ ಮೆರೆದ ಸೌಹಾರ್ದತೆ*

ಜಾತಿ , ಧರ್ಮ ಭೇದವಿಲ್ಲದೆ ಶ್ರೀ ಪಂಚಲಿಂಗೇಶ್ವರ ಐಟಿಐ ಸಂಸ್ಥೆಯ ಎಲ್ಲಾ ವಿದ್ಯಾರ್ಥಿಗಳು ಪಾಲ್ಗೊಂಡಿರುವುದು ಅಭಿನಂದನಾರ್ಹ. ಒಂದು ಜಾತಿ ಧರ್ಮ ಅಂತ ಕಾಳಗ ನಡೆಸುತ್ತಿರುವ ಕಾಲದಲ್ಲಿ , ಇಂತಹ ಮೌಲ್ಯಯುತ ಶಿಕ್ಷಣ ನೀಡುತ್ತಿರುವ ಸಂಸ್ಥೆಯು ಸಮಾಜಕ್ಕೆ ಪಾಠವಾಗುದು ಅಂತು ನಿಜ. ಭಾರತೀಯ ಪರಂಪರೆಯ ಶಿಕ್ಷಣ ಪದ್ಧತಿಯಿಂದ ಮಾತ್ರ ಸಮಾಜ ಏಳಿಗೆ ಸಾಧ್ಯ ಎಂಬುದು ಅಷ್ಟೇ ಸ್ಪಷ್ಟ. ಅದರಲ್ಲೂ ಅನೇಕ ಜಾತಿ ಧರ್ಮದ ಜನ ವಾಸಿಸುವ ತುಳುನಾಡಿನಲ್ಲಿ ವೈಶಿಷ್ಟ್ಯವಾದ ಸಂಸ್ಕೃತಿ- ಸಂಸ್ಕಾರ , ಆಚರಣೆ , ಆರಾಧನೆಗಳಿವೆ. ವಿಶೇಷವೆಂದರೆ ಈ ಎಲ್ಲಾ ಪದ್ಧತಿಯನ್ನು ಎಲ್ಲಾ ಧರ್ಮದವರು ಪಾಲಿಸುತ್ತಲೆ ಬಂದಿದ್ದಾರೆ.

ಶ್ರೀ ಪರಿವಾರ ಪಂಚಲಿಂಗೇಶ್ವರ ಐಟಿಐ ಸಂಸ್ಥೆ ನೀಡುತ್ತಿರುವ ಸಂಸ್ಕೃತಿ- ಸಂಸ್ಕಾರ , ಸೌಹಾರ್ದಯುತ ಶಿಕ್ಷಣವು ಮುಂದಿನ ಜನಾಂಗಕ್ಕೆ ದಾರಿ ದೀಪ ಆಗುವುದರಲ್ಲಿ ಸಂಶವೆ ಇಲ್ಲ. ಇಂದು ಸ್ವಯಂ ಸೇವೆ ನೀಡಿರುವ ಎಲ್ಲಾ ಶಿಕ್ಷಕ ವೃಂದ ಮತ್ತು ವಿದ್ಯಾರ್ಥಿವೃಂದದವರಿಗೂ ಪಂಚಲಿಂಗೇಶ್ವರ ದೇವರ ಅನುಗ್ರಹ ಇರಲಿ.

Leave A Reply

Your email address will not be published.