ಏಕಾಂಗಿ ಬಡ ಅಜ್ಜಿಯ ಗುಡಿಸಲಿಗೆ ಹೋಗಿ, ಮನೆಯಿಂದ ತಂದ ಊಟ ಅಜ್ಜಿಗೆ ಬಡಿಸಿ ತಾನೂ ಉಂಡ ಜಿಲ್ಲಾಧಿಕಾರಿ | ಹೋಗುವಾಗ ಅಜ್ಜಿಗೆ ಆತ ಕೊಟ್ಟ ಕವರ್ ನಲ್ಲಿ ಏನಿತ್ತು ಗೊತ್ತಾ ?!

ಇದು ಮತ್ತೊಂದು ಸ್ಪೂರ್ತಿ ತುಂಬುವ ಸ್ಟೋರಿ. ಅಲ್ಲಿ
ಒಬ್ಬ ಅಜ್ಜಿ ಒಂದು ಮನೆಯಲ್ಲಿ ಏಕಾಂಗಿಯಾಗಿ ಬದುಕುತ್ತಿದ್ದರು. ಆಕೆ ಕೇವಲ ಅಜ್ಜಿಯಲ್ಲ. ಮುಪ್ಪಾನ ಮುದುಕಿ. ಆ ಅಜ್ಜಿಗೆ 80 ವರ್ಷ ವಯಸ್ಸು ದಾಟುತ್ತಿದೆ. ವಯೋಸಹಜ ಬಳಲಿಕೆ ಮಾಮೂಲಿ. ರೋಗಗಳು ಕೂಡ ಆಕೆಯನ್ನು ಜರ್ಜರಿತವಾಗಿ ಮಾಡಿತ್ತು. ಆಕೆಯನ್ನು ನೋಡಿಕೊಳ್ಳಲು ಕೂಡಾ ಯಾರೂ ಇಲ್ಲ. ಈ ಇಳಿಯ ವಯಸ್ಸಿನಲ್ಲಿ ನೋಡಿಕೊಳ್ಳುವ ಮಕ್ಕಳಿಲ್ಲ ,ಮೊಮ್ಮಕ್ಕಳಿಲ್ಲ ನೆಂಟರಿಷ್ಟರಿಲ್ಲ, ಬಂಧು-ಬಳಗ ವಿಲ್ಲ. ಅದು ಸಾಯಲಿ, ಕಡೆಯ ಪಕ್ಷ ಇಳಿವಯಸ್ಸಿನ ವ್ಯಕ್ತಿಗಳಿಗಾಗಿ ಸರಕಾರ ಜಾರಿಗೆ ತಂದ ಯೋಜನೆಗಳನ್ನು ಆಕೆಗೆ ತಲುಪಿಸುವವರು ಕೂಡಾ ಒಬ್ಬರೂ ಇಲ್ಲ.
ಇಂತಹ ದುರ್ವಿಧಿಯ ಬದುಕು ಸಾಗಿಸುತ್ತಿದ್ದಳು ಆ ಅಜ್ಜಿ. ಆಕೆಯ ಈ ಫೋಟೋ ನೋಡಿದರೆ ಗೊತ್ತಾಗುತ್ತದೆ, ಆಕೆಯ ಪರಿಸ್ಥಿತಿ. ಹೆಚ್ಚು ವಿವರಣೆ ಬೇಕಿಲ್ಲ. ಈ ಅಜ್ಜಿಯ ಅಕ್ಕ ಪಕ್ಕದವರು ಕೂಡ ಇವರೊಂದಿಗೆ ಹೆಚ್ಚು ಮಾತನ್ನಾಡುತ್ತಿರಲಿಲ್ಲ, ಇನ್ನೂ ಸಹಾಯದ ಮಾತಂತೂ ದೂರದ ವಸ್ತು.

ಇಂತಹ ಸಮಯದಲ್ಲಿ ಆ ಅಜ್ಜಿ ವಾಸಿಸುತ್ತಿದ್ದ ಆ ಪುಟ್ಟ ಮನೆಗೆ ಸ್ವತಃ ಆ ಜಿಲ್ಲೆಯ ಜಿಲ್ಲಾಧಿಕಾರಿಗಳೇ ವಿಶೇಷ ಭೇಟಿ ನೀಡಿದ್ದರು.
ಈ ಅಜ್ಜಿ ಇರುವುದು ತಮಿಳುನಾಡಿನ ಕರೂರ್ ಎಂಬ ಜಿಲ್ಲೆಯಲ್ಲಿ. ಆ ಅಜ್ಜಿಯ ಪರಿಸ್ಥಿತಿ ಆ ಜಿಲ್ಲೆಯ ಜಿಲ್ಲಾಧಿಕಾರಿ ಟಿ.ಅಂಬಜಗೇನ್ ಅವರಿಗೆ ಹೇಗೋ ಗೊತ್ತಾಗುತ್ತದೆ. ಅವರು ತಮ್ಮ ಧರ್ಮ ಪತ್ನಿಗೆ ಹಬ್ಬದ ಊಟ ತಯಾರಿಸಲು ಹೇಳುತ್ತಾರೆ. ಹಾಗೆ ಮನೆಯಲ್ಲಿ ತಯಾರಾದ ಊಟವನ್ನು ಕ್ಯಾರಿಯರ್ ಸಮೇತ ಆ ಅಜ್ಜಿ ಇರುವ ಕೋಳಿ ಗೂಡಿನಂತಹ ಕೋಳಿ ಗೂಡಿನಂತಹ ಕೋಣೆಗೆ ತೆರಳುತ್ತಾರೆ.

ಆದರೆ ಒಂದು ದಿನ ಆ ಜೋಪಡಿಗೆ ಇದ್ದಕ್ಕಿದ್ದ ಹಾಗೆ ಆ ಜಿಲ್ಲೆಯ ಜಿಲ್ಲಾಧಿಕಾರಿಗಳೇ ಕೈಯಲ್ಲಿ ಊಟದ ಕ್ಯಾರಿಯರ್ ಹಿಡಿದು ಆ ಅಜ್ಜಿಯ ಮನೆಯ ಮುಂದೆ ನಿಂತು ಅಜ್ಜಿಗೆ ತನ್ನ ಪರಿಚಯ ಮಾಡಿಕೊಳ್ಳುತ್ತಾರೆ ಜಿಲ್ಲಾಧಿಕಾರಿ. ನಂತರ “ಒಳಗೆ ಬರಬಹುದಾ ಅಜ್ಜಿ?” ಎಂದು ಕೇಳುತ್ತ ನಿಂತಿದ್ದರು. “ಅಜ್ಜಿ ನಾನು ಇವತ್ತು ನಿಮ್ಮೊಡನೆ ಊಟ ಮಾಡಲು ಬಂದಿದ್ದೇನೆ” ಎಂದಾಗ ಆ ಅಜ್ಜಿ ತಡವರಿಸುತ್ತ ಒಳಗೆ ಕರೆದರು. ಒಳಗೆ ಹೋಗಿ ನೆಲದ ಮೇಲೆಯೇ ಕುಳಿತುಕೊಂಡ ಜಿಲ್ಲಾಧಿಕಾರಿ ಟಿ. ಅಂಬಜಗೇನ್ ಅವರಿಗೆ ಆ ಅಜ್ಜಿ “ಸಾಹೇಬರೆ ನನ್ನ ಮನೆಯಲ್ಲಿ ಊಟ ಮಾಡಲು ತಟ್ಟೆ ಇಲ್ಲ, ಬದಲಾಗಿ ನಾನು ಬಾಳೆ ಎಲೆಯ ಮೇಲೆ ಊಟ ಮಾಡುತ್ತೇನೆ” ಎನ್ನುತ್ತಾಳೆ.  “ನಾನು ಕೂಡ ಅದರಲ್ಲಿಯೇ ಊಟ ಮಾಡುತ್ತೇನೆ” ಎಂದು ಬಾಳೆ ಎಲೆ ಹರವಿ ಜಿಲ್ಲಾಧಿಕಾರಿ ಊಟಕ್ಕೆ ಕೂರುತ್ತಾರೆ ಆ ಜಿಲ್ಲಾಧಿಕಾರಿ. ಅವರೇ ಇನ್ನೊಂದು ಎಲೆ ಹಾಕಿ ಅಜ್ಜಿಗೂ ಊಟ ಬಡಿಸಿ ಇಬ್ಬರೂ ಜತೆಯಾಗಿ ಊಟ ಮಾಡುತ್ತಾರೆ.

ನಂತರ ವಾಪಸ್ ಹೋಗುವಾಗ ಅಜ್ಜಿಯ ಕೈಗೆ ಒಂದು ಕವರ್ ಇಟ್ಟರು. ಅದರಲ್ಲಿ ಒಂದಷ್ಟು ದುಡ್ಡಿರಬಹುದು ಎಂದು ಊರಿನ ಜನರೆಲ್ಲರೂ ಅಂದುಕೊಂಡಿದ್ದರು. ಆದರೆ ಅದರಲ್ಲಿ ದುಡ್ಡಿರಲಿಲ್ಲ, ಬದಲಿಗೆ ಅದರಲ್ಲಿ ಅಜ್ಜಿಗೆ ಇಂದಿರಾ ಆವಾಸ್ ಯೋಜನೆಯ ಮನೆಪತ್ರ, ವೃದ್ದಾಪ್ಯ ವೇತನದ ದಾಖಲೆ ಸೇರಿದಂತೆ, ಆ ಅಜ್ಜಿಗೆ ನ್ಯಾಯವಾಗಿ ಸಿಗಬೇಕಾದ ಎಲ್ಲ ಯೋಜನೆಗಳ ದಾಖಲಾತಿಗಳಿದ್ದವು!

“ನೀವು ಹಣಕ್ಕಾಗಿ ಬ್ಯಾಂಕ್ ಗೂ ಹೋಗಬೇಕಾಗಿಲ್ಲ ಬದಲಾಗಿ ಆ ಹಣವೇ ನಿಮ್ಮನ್ನು ಬಂದು ಸೇರುವಂತೆ ಮಾಡುತ್ತೇನೆ” ಎಂದು ಹೇಳಿ ಜಿಲ್ಲಾಧಿಕಾರಿ ಹೊರಟಾಗ ಅಜ್ಜಿ ಹಾಗೂ ಸುತ್ತ ನೆರೆದಿದ್ದ ಜನರ ಕಣ್ಣಲ್ಲಿ ಆನಂದಭಾಷ್ಪ ..! ಈ ಅಧಿಕಾರಿ ಮಾಡಿರೋದು ಒಂದು ಚಿಕ್ಕ ಕೆಲಸ. ಅದರ ಪರಿಣಾಮ ಹಲವು ಜನರನ್ನು ಪ್ರಭಾವಿಸಲಿದೆ. ಸರಕಾರದ ಕೆಲಸ ಆಂದರೆ ಇಂತದ್ದೇ ‘ಅಶಕ್ತ ದೇವರ ‘ ಕೆಲಸ ಎಂದು ಒಂದು ಹೆಜ್ಜೆ ಮುಂದೆ ನಡೆದ ಜಿಲ್ಲಾಧಿಕಾರಿ ಟಿ. ಅಂಬಜಗೇನ್ ಯ ನಡೆ ಮತ್ತಷ್ಟು ಅಧಿಕಾರಿಗಳ ಹೆಜ್ಜೆಗೆ ಶಕ್ತಿ ತುಂಬಲಿ ಎನ್ನುವುದೇ ಎಲ್ಲರ ಆಶಯ.

Leave A Reply

Your email address will not be published.