ಕಾಸರಗೋಡು,ಮಂಜೇಶ್ವರದಲ್ಲಿ ಕನ್ನಡ ಹೆಸರು ಬದಲಿಸದಂತೆ ಕೇರಳ ಸಿ.ಎಂಗೆ ಕರ್ನಾಟಕ ಸಿ.ಎಂ.ಪತ್ರ

ಬೆಂಗಳೂರು: ‘ಕಾಸರಗೋಡು ಮತ್ತು ಮಂಜೇಶ್ವರದಲ್ಲಿ ಕನ್ನಡ ಹೆಸರು ಹೊಂದಿರುವ ಕೆಲವು ಗ್ರಾಮಗಳ ಹೆಸರುಗಳನ್ನು ಮಲಯಾಳೀಕರಣಗೊಳಿಸದಂತೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಪತ್ರ ಬರೆದಿದ್ದಾರೆ.

ಮುಖ್ಯಮಂತ್ರಿ ಅವರನ್ನು ಸೋಮವಾರ ಭೇಟಿ ಮಾಡಿದ ಕರ್ನಾಟಕ ಪ್ರದೇಶ ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸಿ. ಸೋಮಶೇಖರ, ಕಾಸರಗೋಡು ಮತ್ತು ಮಂಜೇಶ್ವರದಲ್ಲಿ ಕನ್ನಡ ಹೆಸರುಗಳನ್ನು ಹೊಂದಿರುವ ಗ್ರಾಮಗಳ ಹೆಸರನ್ನು ಮಲಯಾಳಿ ಭಾಷೆಯ ಆಧಾರದ ಹೆಸರುಗಳನ್ನಾಗಿ ಬದಲಾಯಿಸುತ್ತಿರುವ ಬಗ್ಗೆ ಗಮನಕ್ಕೆ ತಂದರು.

ಕನ್ನಡ ಮತ್ತು ಸಂಸ್ಕೃತಿ ಸಚಿವ ಅರವಿಂದ ಲಿಂಬಾವಳಿ ಕೂಡ ಈ ಬಗ್ಗೆ ಕ್ರಮವಹಿಸುವಂತೆ ಮುಖ್ಯಮಂತ್ರಿಗೆ ಪತ್ರ ಬರೆದು ಮನವಿ ಮಾಡಿದ್ದರು.

ಇದಕ್ಕೆ ಸ್ಪಂದಿಸಿದ ಯಡಿಯೂರಪ್ಪ, ‘ಈಗಾಗಲೇ ಈ ವಿಷಯ ನನ್ನ ಗಮನಕ್ಕೂ ಬಂದಿದೆ. ಕಾಸರಗೋಡು ಮತ್ತು ಮಂಜೇಶ್ವರ ಭಾಗದಲ್ಲಿ ಕನ್ನಡಿಗರು ಮತ್ತು ಮಲಯಾಳ ಭಾಷಿಗರು ಸಹಬಾಳ್ವೆಯಿಂದ ಬದುಕುತ್ತಿದ್ದು, ಕನ್ನಡ ಭಾಷೆಯ ಸಾಂಸ್ಕೃತಿಕ, ಐತಿಹಾಸಿಕ ಮಹತ್ವವಿರುವ ಗ್ರಾಮಗಳ ಹೆಸರುಗಳನ್ನು ಬದಲಾಯಿಸುವುದು ಸೂಕ್ತವಲ್ಲ ಎಂದು ಕೇರಳದ ಮುಖ್ಯಮಂತ್ರಿಯ ಗಮನಕ್ಕೆ ತರಲಾಗುವುದು. ಗ್ರಾಮಗಳ ಹೆಸರುಗಳ ಬದಲಾವಣೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸುವಂತೆ ಪತ್ರ ಬರೆದು ಮನವಿ ಮಾಡಲಾಗುವುದು’ ಎಂದಿದ್ದರು.

ಸೋಮವಾರ ಸಂಜೆಯೇ ಪತ್ರ ಬರೆದ ಯಡಿಯೂರಪ್ಪ, ಎರಡೂ ರಾಜ್ಯಗಳ ಜನರು ಸೌಹಾರ್ದದಿಂದ ಬದುಕುತ್ತಿದ್ದಾರೆ. ಗಡಿ ಭಾಗದ ಪ್ರದೇಶದಲ್ಲಿನ ಗ್ರಾಮಗಳ ಹೆಸರು ಕನ್ನಡ ಮತ್ತು ತುಳು ಭಾಷೆಯಿಂದ ಪ್ರಭಾವಿತವಾಗಿವೆ.
ಕನ್ನಡ, ತುಳು ಮತ್ತು ಮಲೆಯಾಳಿ ಭಾಷಿಗರು ಸಹೋದರರಂತೆ ಅನ್ಯೋನ್ಯವಾಗಿದ್ದಾರೆ. ಭಾಷಾ ಬಾಂಧವ್ಯ ಇದೇ ರೀತಿ ಮುಂದುವರಿಯಬೇಕು. ಹೆಸರು ಬದಲಿಸುವ ಪ್ರಯತ್ನ ತಮ್ಮ ಸರ್ಕಾರದಿಂದ ಮುಂದುವರಿದಿದ್ದರೆ, ಅದನ್ನು ಸ್ಥಗಿತಗೊಳಿಸುವಂತೆ ಮನವಿ ಮಾಡುವುದಾಗಿ ಪಿಣರಾಯಿ ಅವರಿಗೆ ಬರೆದ ಪತ್ರದಲ್ಲಿ ಹೇಳಿದ್ದಾರೆ.

ಹೆಸರು ಬದಲಾವಣೆ ಕೈಬಿಡಲು ಆಗ್ರಹ
ಕಾಸರಗೋಡು ಜಿಲ್ಲೆಯ ಕೆಲವು ಗ್ರಾಮಗಳ ಕನ್ನಡ ಹೆಸರುಗಳನ್ನು ಬದಲಾವಣೆ ಮಾಡಿ, ಮಲಯಾಳಿ ಹೆಸರುಗಳನ್ನು ಇಡುವ ಪ್ರಯತ್ನ ಕೈಬಿಡುವಂತೆ ಆಗ್ರಹಿಸಿ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ. ಕುಮಾರಸ್ವಾಮಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ಗೆ ಪತ್ರ ಬರೆದಿದ್ದಾರೆ.

‘ಕಾಸರಗೋಡು ಜಿಲ್ಲೆ ಕೇರಳದಲ್ಲಿದ್ದರೂ ಅಲ್ಲಿನ ಜನರು ಕನ್ನಡ ಮತ್ತು ಕರ್ನಾಟಕದ ಜತೆಗೆ ದಶಕಗಳಿಂದಲೂ ಅವಿನಾಭಾವ ಸಂಬಂಧ ಹೊಂದಿದ್ದಾರೆ. ಕನ್ನಡ ಮತ್ತು ಮಲಯಾಳ ಭಾಷೆಯ ಜನರು ಭಾಷಾ ಸೌಹಾರ್ದ ಮತ್ತು ಸಾಂಸ್ಕೃತಿಕ ಸಹಬಾಳ್ವೆಗೆ ಮಾದರಿಯಾಗಿದ್ದಾರೆ’ ಎಂದು ಪತ್ರದಲ್ಲಿ ಹೇಳಿದ್ದಾರೆ.

ಗ್ರಾಮಗಳ ಹೆಸರು ಬದಲಾವಣೆಯಿಂದ ಯಾವುದೇ ಪರಿಣಾಮ ಆಗುವುದಿಲ್ಲ ಎನ್ನುವ ವಾದವೂ ಇದೆ. ಆದರೆ, ಕಾಸರಗೋಡಿನಲ್ಲಿ ಭಾಷಾ ಸೌಹಾರ್ದದ ಒಂದು ಪರಂಪರೆ ಇದೆ. ಗ್ರಾಮಗಳ ಹೆಸರುಗಳನ್ನು ಕನ್ನಡದಲ್ಲೇ ಉಳಿಸುವುದರಿಂದ ಅತ್ಯುತ್ತಮವಾದ ಪರಂಪರೆಯನ್ನು ಮುಂದುವರಿಸಿದಂತೆ ಆಗುತ್ತದೆ. ಆದ್ದರಿಂದ ಗ್ರಾಮಗಳ ಹೆಸರುಗಳ ಮಲಯಾಳೀಕರಣ ಪ್ರಯತ್ನವನ್ನು ಮುಂದುರಿಸಬಾರದು ಎಂದು ಅವರು ಒತ್ತಾಯಿಸಿದ್ದಾರೆ.

Leave A Reply

Your email address will not be published.