ಔತಣ ಕೂಟದಲ್ಲಿ ಮಟನ್ ಊಟ ಇರಲಿಲ್ಲವೆಂದು ವಧು ಬದಲು ಬೇರೊಬ್ಬಳಿಗೆ ತಾಳಿ ಕಟ್ಟಿದ!
ಭುವನೇಶ್ವರ: ಮದುವೆ ಮನೆಯಲ್ಲಿ ಜಗಳಗಳು ಅತಿ ಸಾಮಾನ್ಯ ವಿಷಯ. ಇತೀಚಿನ ದಿನಗಳಲ್ಲಿ ಸಣ್ಣ ಸಣ್ಣ ವಿಚಾರಗಳಿಗಾದರೂ ಕಲಹಗಳು ಆಗದೆ ಮದುವೆ ನಡೆಯುವುದೇ ಅಪರೂಪ ಎಂಬಂತಾಗಿದೆ.
ಇಂತದ್ದೇ ಕ್ಷುಲ್ಲಕ ಎಂದು ಅನ್ನಿಸುವ ವಿಚಾರಕ್ಕೆ ಜಗಳ ನಡೆದು ಕೊನೆಗೆ ಮದುವೆ ಮುರಿದು ಬಿದ್ದ ಘಟನೆ ನಡೆದಿದೆ.
ಒಡಿಶಾದಲ್ಲಿ ಕೂಡ ಇಂದು ವಿಚಿತ್ರ ಘಟನೆ ನಡೆದಿದ್ದು,
ಔತಣ ಕೂಟದಲ್ಲಿ ಮಟನ್ ಊಟ ಹಾಕಿಸಿಲ್ಲವೆಂದು ಸಿಟ್ಟಿಗೆದ್ದ ವರ, ವಧುವಿನ ಬದಲು ಬೇರೊಬ್ಬಳಿಗೆ ತಾಳಿ ಕಟ್ಟುವ ಮೂಲಕ ಸೇಡು ತೀರಿಸಿಕೊಂಡಿದ್ದಾನೆ.
ಮದುವೆಯ ಮುಂಚಿನ ಮೆಹಂದಿ, ರಿಸೆಪ್ಷನ್ ಮತ್ತು ಆ ನಂತರದ ಸಮಾರಂಭಗಳಿಗೆ ಮದುವೆಯಷ್ಟೇ ಪ್ರಾಮುಖ್ಯತೆಯಿದೆ. ಮದುವೆಗೆ ಬರುವ ನೆಂಟರು ಉಂಡು ತಿಂದು ಮಜಾ ಮಾಡಲು ಮದುವೆಗಿಂತಲೂ ಇಂತಹಾ ಸಮಾರಂಭಗಳೇ ಸೂಕ್ತ. ಇಂತಹ ಮದುವೆ ಸಂಬಂಧಿತ ಸಮಾರಂಭಗಳ ಔತಣ ಕೂಟಕ್ಕೂ, ಮದ್ಯ-ಮಾಂಸದ ಊಟಕ್ಕೂ ಜನ್ಮ ಜನ್ಮಾಂತರದ ಸಂಬಂಧ.
ಅಂತಹಾ ಪಾರ್ಟಿ ಪ್ರಿಯ ಕುಟುಂಬವೊಂದು ಒಡಿಶಾದ ಮನತಿರಾ ಎಂಬ ಗ್ರಾಮದಲ್ಲಿ ಮದುವೆಯಾಗುವ ತಯಾರಿಯಲ್ಲಿತ್ತು. ಮದುವೆ ಶಾಸ್ತ್ರಕ್ಕೂ ಮುನ್ನ ಔತಣ ಕೂಡ ಏರ್ಪಡಿಸಲಾಗಿತ್ತು. ವರನ ಕಡೆಯವರು ಈ ಔತಣ ಕೂಟದಲ್ಲಿ ಮಟನ್ ಊಟ ತಯಾರು ಮಾಡುವಂತೆ ವಧುವಿನ ಕಡೆಯವರಿಗೆ ತಿಳಿಸಿದ್ದರು. ಆದರೆ ಕಾರಣಾಂತರಗಳಿಂದ ಅವರು ಮಟನ್ ಊಟ ರೆಡಿ ಮಾಡಿರಲಿಲ್ಲ. ಇದರಿಂದ ವರನ ಬಂಧುಗಳು ಕೆರಳಿದ್ದರು. ಖುದ್ದು ಮದುವೆಯ ಗಂಡು ರಮಾಕಾಂತ್ ಪತ್ರಾ ಸಿಟ್ಟಿನಿಂದ ಮದುವೆ ಮನೆಯಿಂದ ಎದ್ದು ಹೋಗಿದ್ದಾನೆ. ಅಲ್ಲಿ ಆತ ಬೇರೊಬ್ಬಳಿಗೆ ತಾಳಿ ಕಟ್ಟುವ ಮೂಲಕ ಅಚ್ಚರಿ ಮೂಡಿಸಿದ್ದಾನೆ.
ಇತ್ತ ವರನ ವರ್ತನೆ ನೋಡಿದ ವಧುವಿನ ಕಡೆಯವರು ಪರಿ ಪರಿಯಾಗಿ ಮನವಿ ಮಾಡಿಕೊಂಡಿದ್ದಾರೆ. ಆದರೆ ವರ ಮಾತ್ರ ಮಟನ್ ಅಡುಗೆ ಮಾಡದ ವಧುವಿನ ಕಡೆಯವರನ್ನು ಸುತಾರಾಂ ಕ್ಷಮಿಸಿಲ್ಲ. ಆತ ಯಾವುದೇ ಕಾರಣಕ್ಕೂ ಮದುವೆಗೆ ಒಪ್ಪದೆ ಅಲ್ಲಿಂದ ಹೊರಟಿದ್ದಾನೆ. ಅಲ್ಲದೆ, ಅದೇ ಗ್ರಾಮದ ಇನ್ನೊಬ್ಬ ಯುವತಿಯೊಬ್ಬಳ ಜೊತೆ ಆತ ಮದುವೆಯಾಗಿದ್ದಾನೆ.