ಶತಮಾನ ದಾಟಿದ ಆಲಂಕಾರು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಅಂಗ್ಲ ಮಾಧ್ಯಮ ಶಿಕ್ಷಣ
ಕಡಬ: ಕಡಬ ತಾಲೂಕು ಆಲಂಕಾರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಸಕ್ತ ಸಾಲಿನಿಂದ ಒಂದನೇ ತರಗತಿಯಿಂದ ಅಂಗ್ಲ ಮಾಧ್ಯಮ ಶಿಕ್ಷಣ ದೊರೆಯಲಿದೆ.
ರಾಜ್ಯ ಸರ್ಕಾರವು 2020-21ನೇಸಾಲಿನಲ್ಲಿ ರಾಜ್ಯದಲ್ಲಿ 959 ಸರ್ಕಾರಿ ಶಾಲೆಯಲ್ಲಿ ಒಂದನೇ ತರಗತಿಯಿಂದಲೇ ಆಂಗ್ಲ ಮಾಧ್ಯಮ ಶಿಕ್ಷಣ ನೀಡಲು ಮುಂದಾಗಿದ್ದು ಅದರಂತೆ ಈ ಶಾಲೆಗೆ ಆಂಗ್ಲ ಮಾದ್ಯಮ ಶಿಕ್ಷಣ ನೀಡಲು ಅನುಮತಿ ನೀಡಿದೆ.
ಸರ್ಕಾರಿ ಶಾಲೆಗಳಲ್ಲಿ ಅಂಗ್ಲ ಮಾಧ್ಯಮ ಶಿಕ್ಷಣ ಜಾರಿಗೊಳಿಸಲು ಸರಕಾರ ಚಿಂತನೆ ನಡೆಸುವ ಮೊದಲೇ ಈ ಶಾಲೆಯಲ್ಲಿ ಪೋಷಕರ, ಶಿಕ್ಷಣ ಪ್ರೇಮಿಗಳ ಸಹಕಾರದೊಂದಿಗೆ ಪೂರ್ವ ಪ್ರಾಥಮಿಕ (ಕೆ.ಜಿ.) ತರಗತಿಗಳನ್ನು ತೆರೆಯಲಾಗಿತ್ತು.
1919ರಲ್ಲಿ ಸ್ಥಾಪನೆಯಾಗಿ ಆಲಂಕಾರು ಸುತ್ತಮುತ್ತಲಿನ ಗ್ರಾಮಗಳ ಶಿಕ್ಷಣಾಕಾಂಕ್ಷಿಗಳಿಗೆ ಆಸರೆಯಾಗಿದ್ದ ಈ ಶಾಲೆ ಇತ್ತೀಚೆಗಷ್ಟೆ ಶತಮಾನೋತ್ಸವ ಆಚರಿಸಿಕೊಂಡಿದೆ. ಆಂಗ್ಲ ಮಾಧ್ಯಮ ಶಿಕ್ಷಣದ ಪ್ರಭಾವದಿಂದಾಗಿ ಇಲ್ಲಿನ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿರುವುದನ್ನು ಮನಗಂಡ ಇಲ್ಲಿನ ಹಳೆ ವಿದ್ಯಾರ್ಥಿಗಳು , ಶಿಕ್ಷಣ ಪ್ರೇಮಿಗಳು, ಪೋಷಕರು , ಸ್ಥಳೀಯ ಪ್ರಮುಖರು ಇಲ್ಲಿ ಆಂಗ್ಲ ಮಾಧ್ಯಮ ತರಗತಿಗಳನ್ನು ಆರಂಭಿಸುವ ಕುರಿತು ಸಭೆೆ ನಡೆಸಿ ಚರ್ಚಿಸಿದ್ದರು.
2015 ರಲ್ಲಿ ಎಲ್ ಕೆ ಜಿ , ಯು ಕೆ ಜಿ ಆರಂಭಿಸಲಾಯಿತು. ಇದರಿಂದ ಈ ಶಾಲೆಯಲ್ಲಿ ಮಕ್ಕಳ ಸೇರ್ಪಡೆಯಲ್ಲಿ ಏರುಗತಿ ಕಂಡಿದೆ. ಸರ್ಕಾರಿ ಶಾಲೆಯಲ್ಲಿ ಶಾಲಾ ದಾಖಲಾತಿಗಾಗಿ ಕ್ಯೂ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಸರ್ಕಾರವೇ ಒಂದನೇ ತರಗತಿಯಿಂದ ಆಂಗ್ಲ ಮಾಧ್ಯಮ ಶಿಕ್ಷಣವನ್ನು ಆರಂಭಿಸಲು ಮುಂದಾಗಿರುವುದು ಶಿಕ್ಷಣ ಪ್ರೇಮಿಗಳ ಸಂತಸಕ್ಕೆ ಕಾರಣವಾಗಿದೆ.
ಶಾಲಾ ವಿಶೇಷತೆಗಳು
ಸರ್ಕಾರಿ ಶಾಲೆಯೆಂದರೆ ಮೂಗು ಮುರಿಯುವ ಕಾಲಘಟ್ಟದಲ್ಲಿ ಆಲಂಕಾರು ಶಾಲೆ ಬಿನ್ನ ರೂಪ ಪಡೆದಿದೆ.
ಈ ಹಿಂದೆ ಪುತ್ತೂರು ತಾಲೂಕಿನಲ್ಲಿ ಶಿಕ್ಷಣಾಧಿಕಾರಿಯಾಗಿದ್ದ ಶಶಿಧರ್ ಅವರು ಸರ್ಕಾರಿ ಶಾಲೆಗಳ ಗುಣಮಟ್ಟದ ಶಿಕ್ಷಣದ ಬಲವರ್ದನೆಗಾಗಿ ವಿಷನ್ ಪುತ್ತೂರು ಎಂಬ ಧೈಯದೊಂದಿಗೆ ವಿವಿಧ ಯೋಜನೆಗಳನ್ನು ಹಮ್ಮಿಕೊಂಡಿದ್ದರು. ಇದರಿಂದ ಪ್ರೇರಣೆಗೊಂಡ ಇಲ್ಲಿನ ಮುಖ್ಯ ಶಿಕ್ಷಕ ಲಿಂಗರಾಜು ಶಾಲೆಯಲ್ಲಿ ಎಲ್ ಕೆ ಜಿ ಯು ಕೆ ಜಿ ಶಿಕ್ಷಣವನ್ನು ಆರಂಭಿಸಿದ್ದರು. 2016-17ನೇ ಸಾಲಿನಿಂದ ಒಂದನೇ ತರಗತಿಯಿಂದ ಏಳನೆ ತರಗತಿಯ ವರೆಗೆ ಗುಬ್ಬಚ್ಚಿ ಸ್ಪಿಂಕಿಂಗ್ ಆರಂಭವಾಗಿದೆ, 2017- 18ನೇ ಸಾಲಿನಿಂದ ಚೆನೈ ಮೂಲದ ಕರಡಿಪಾತ್ ಎಂಬ ಸಂಸ್ಥೆ ಶಾಲೆಯಲ್ಲಿ ನಲಿಕಲಿ ಶಿಕ್ಷಣವನ್ನು ಆಂಗ್ಲ ಮಾಧ್ಯಮದಲ್ಲಿ ನೀಡಲು ಸಹಕರಿಸುತ್ತಿದೆ. ಕಂಪ್ಯೂಟರ್ ಶಿಕ್ಷಣ, ಸ್ಮಾರ್ಟ್ ಕ್ಲಾಸ್ ಕೂಡ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಲಭ್ಯವಿದೆ.
ಆಲಂಕಾರು ಗ್ರಾಮದ ಸುತ್ತಮುತ್ತಲಿನ ರಾಮಕುಂಜ, ಕುಂತೂರು, ಪೆರಾಬೆ ಗ್ರಾಮಗಳ ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ. 2020-21ನೇ ಸಾಲಿನಲ್ಲಿ 269 ವಿದ್ಯಾರ್ಥಿಗಳು ಇದ್ದರು. ಪ್ರಸಕ್ತ ಸಾಲಿನಲ್ಲಿ 300 ಸಂಖ್ಯೆ ದಾಟುವ ನಿರೀಕ್ಷೆಯಿದೆ ಎನ್ನುತ್ತಾರೆ ಮುಖ್ಯ ಶಿಕ್ಷಕ ಲಿಂಗರಾಜು.
ಖಾಸಗಿ ಶಾಲೆಯಂತೆ ಸರಕಾರಿ ಶಾಲೆಯನ್ನು ಮಾರ್ಪಾಡುಗೊಳಿಸಿ ಶಿಕ್ಷಣದ ಗುಣಮಟ್ಟವನ್ನು ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಶಾಲೆಯಲ್ಲಿ ವಿವಿಧ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಇದಕ್ಕೆಲ್ಲ ವಿವಿಧ ಸಮೂದಾಯದ ಸಹಕಾರವಿದೆ. ಇದೀಗ ಸರ್ಕಾರವೇ ಆಂಗ್ಲ ಮಾಧ್ಯಮ ತರಗತಿ ಆರಂಭಿಸಲು ಮುಂದಾಗಿದೆ. ಈ ಕಾರ್ಯಕ್ಕೆ ಸಮುದಾಯದ ಸಹಕಾರವೂ ಅಗತ್ಯವಿದೆ.
- ಲಿಂಗರಾಜು , ಮುಖ್ಯ ಶಿಕ್ಷಕ , ಆಲಂಕಾರು ಸರ್ಕಾರಿ ಹಿ.ಪ್ರಾ.ಶಾಲೆ