ಮತ್ತೆ ಕೇಂದ್ರ ಸರಕಾರದ ಜೊತೆ ಫೈಟಿಂಗ್ ಗೆ ಹೊರಟ ಟ್ವಿಟರ್ | ಕಾನೂನು ಸಚಿವ ರವಿಶಂಕರ್ ಪ್ರಸಾದ್ ಟ್ವಿಟರ್ ಅಕೌಂಟ್ ಬ್ಲಾಕ್
ನವದೆಹಲಿ: ಭಾರತ ಸರ್ಕಾರ ಹಾಗೂ ಟ್ವಿಟರ್ ಸಂಸ್ಥೆ ನಡುವಿನ ಸಂಘರ್ಷ ಮತ್ತೆ ಮುಂದುವರಿದಿದ್ದು, ಅದು ಇಂದು ಮತ್ತೊಂದು ಹಂತಕ್ಕೆ ಹೋಗಿರುವ, ಮತ್ತಷ್ಟು ಉಲ್ಬಣ ಆಗುವ ಲಕ್ಷಣಗಳು ಗೋಚರಿಸಿವೆ.
ಏಕೆಂದರೆ ಕಮ್ಯುನಿಕೇಷನ್ಸ್, ಎಲೆಕ್ಟ್ರಾನಿಕ್ಸ್ ಆ್ಯಂಡ್ ಇನ್ಫಾರ್ಮೇಷನ್ ಟೆಕ್ನಾಲಜಿ ಖಾತೆ ಹೊಂದಿರುವ ಉತ್ಸಾಹಿ ಸಚಿವ ರವಿಶಂಕರ್ ಪ್ರಸಾದ್ ಅವರ ಖಾತೆಯನ್ನೇ ಇಂದು ಟ್ವಿಟರ್ ಬ್ಲಾಕ್ ಮಾಡಿದೆ. ಈ ಬಗ್ಗೆ ಸಚಿವರೇ ಹೇಳಿಕೊಂಡಿದ್ದು, ಕೇಂದ್ರ ಸರ್ಕಾರ ಹಾಗೂ ಟ್ವಿಟರ್ ನಡುವಿನ ಸಂಘರ್ಷ ಸಂಗತಿ ಮತ್ತಷ್ಟು ಕುತೂಹಲವನ್ನು ಕೆರಳಿಸಿದೆ.
“ಗೆಳೆಯರೇ, ಇಂದು ತುಂಬ ವಿಚಿತ್ರವಾದದ್ದೊಂದು ಸಂಭವಿಸಿತು. ಟ್ವಿಟರ್ ಸಂಸ್ಥೆ ಇಂದು ನನ್ನ ಖಾತೆ ನಿರ್ವಹಿಸುವ ಅವಕಾಶವನ್ನು ಸುಮಾರು 1 ಗಂಟೆ ಕಾಲ ಹಿಡಿದಿದೆ. ಡಿಜಿಟಲ್ ಮಿಲೆನಿಯಂ ಕಾಪಿರೈಟ್ ಆ್ಯಕ್ಟ್ ನ ಯುಎಸ್ಎ ಅನ್ನು ಉಲ್ಲಂಘಿಸಿದ್ದಕ್ಕೆ ಹೀಗೆ ಮಾಡಲಾಗಿ ಎಂದು ಅದು ಸಮಜಾಯಿಷಿ ನೀಡಿದೆ ಎಂದು ಅವರು ಅನ್ಬ್ಲಾಕ್ ಆದ ಬಳಿಕ ಹೇಳಿಕೊಂಡಿದ್ದಾರೆ.
ಟ್ವಿಟರ್ನವರ ಈ ವರ್ತನೆ ನೋಡಿದರೆ ಅವರು ಹೇಳಿಕೊಂಡ ರೀತಿಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುತ್ತಿಲ್ಲ. ಅವರಿಗೆ ಅವರದೇ ಆದ ಒಂದು ಅಜೆಂಡಾ ಇದೆ. ಅದಕ್ಕೆ
ನಿಮ್ಮನ್ನು ಅವರ ವೇದಿಕೆಯಿಂದ ತೆಗೆದುಬಿಡುತ್ತಾರೆ ಎಂದು ಟ್ವಿಟರ್ ನಡೆ ಬಗ್ಗೆ ರವಿಶಂಕರ್ ಪ್ರಸಾದ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಐಟಿ ಕಾಯ್ದೆಯನ್ನು ಹೊಸದಾಗಿ ರೂಪಿಸಿರುವ ಕೇಂದ್ರ ಸರ್ಕಾರ ಎಲ್ಲ ಸೋಷಿಯಲ್ ಮೀಡಿಯಾ ಸಂಸ್ಥೆಯವರು ಭಾರತದ ಈ ಹೊಸ ಕಾಯ್ದೆಯನ್ನು ಪಾಲಿಸಬೇಕು ಎಂದ ಸೂಚಿಸಿದೆ. ಆದರೆ ಇದನ್ನು ಪಾಲಿಸಲು ಟ್ವಿಟರ್ ಹಿಂದೇಟು ಹಾಕುತ್ತಲೇ ಇದ್ದು ಸರ್ಕಾರ ಹಾಗೂ ಟ್ವಿಟರ್ ನಡುವೆ ಸಂಘರ್ಷ ನಡೆಯುತ್ತಲೇ ಇದೆ. ರವಿಶಂಕರ್ ಪ್ರಸಾದ್ ಅವರ ಖಾತೆ ಬ್ಲಾಕ್ ಮಾಡಿ ಕಾಲೆಳೆದಿದ್ದರೂ ಅಚ್ಚರಿ ಇಲ್ಲ ಎನ್ನಲಾಗಿದೆ. ಮತ್ತೊಂದೆಡೆ ಕಾನೂನುಪಾಲನೆ ಸಂಬಂಧ ಕೇಂದ್ರ ಸಚಿವರು ತಮ್ಮ ನಿಲುವನ್ನು ಖಚಿತಪಡಿಸಿದ್ದಾರೆ. ಯಾವುದೇ ವೇದಿಕೆ ಏನೆ ಮಾಡಲಿ, ಅವರು ಹೊಸ ಐಟಿ ನಿಯಮಗಳಿಗೆ ಬದ್ಧರಾಗಿಯೇ ಇರಬೇಕು, ಆ ವಿಷಯದಲ್ಲಿ ಯಾವುದೇ ರಾಜಿ ಇಲ್ಲ ಎಂಬುದಾಗಿ ಸಚಿವರು ಸ್ಪಷ್ಟಪಡಿಸಿದ್ದಾರೆ.