ದೇಯಿ ಬೈದೆತಿ,ಕೋಟಿ ಚೆನ್ನಯ ಮೂಲ ಕ್ಷೇತ್ರೊಡು ಬ್ರಹ್ಮಕಲಸದ ಐಸಿರೋ
ಪುತ್ತೂರು: ಮಾತೆ ದೇಯಿ ಬೈದೇತಿ,ಕೋಟಿ ಚೆನ್ನಯರ ಮೂಲಕ್ಷೇತ್ರ ಶ್ರೀಕ್ಷೇತ್ರ ಗೆಜ್ಜೆಗಿರಿ ನಂದನ ಬಿತ್ತ್‌ಲ್‌ನಲ್ಲಿ ಫೆ.24 ರಿಂದ ನಡೆಯಲಿರುವ ಬ್ರಹ್ಮಕಲಶೋತ್ಸವಕ್ಕೆ ಸಂಬಂಧಿಸಿ ಈಗಾಗಲೇ ಭರದ ಸಿದ್ದತೆ ನಡೆಯುತ್ತಿದೆ. ಐತಿಹಾಸಿಕ ಕ್ಷಣಗಳಿಗೆ ನಾಡಿನ ಜನತೆ ಸಾಕ್ಷಿಯಾಗುವ ಕಾತರದಲ್ಲಿದ್ದಾರೆ.
ಶ್ರೀ ಕ್ಷೇತ್ರದಲ್ಲಿ ಈಗಾಗಲೇ ಹಲವು ಪವಾಡಗಳು ನಡೆದಿದ್ದು ದೇವಿಯ ಕಾರಣಿಕತೆಗೆ ಸಾಕ್ಷಿಯಾಗಿದೆ.
ಫೆ. 24 ರಿಂದ ದೇಯಿ ಬೈದ್ಯೆತಿ- ಕೋಟಿ ಚೆನ್ನಯ ಮೂಲಸ್ಥಾನ ಕ್ಷೇತ್ರದಲ್ಲಿ ಬ್ರಹ್ಮಕಲಶೋತ್ಸವ ಮತ್ತು ಮೂಲಸ್ಥಾನ ಗರಡಿಯಲ್ಲಿ ನೇಮೋತ್ಸವ ನಡೆಯಲಿದೆ ಎಂದು ಕ್ಷೇತ್ರದ ಯಜಮಾನರಾದ ಶ್ರೀಧರ ಪೂಜಾರಿ, ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷರಾದ ಜಯಂತ ನಡುಬೈಲು, ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಪೀತಾಂಬರ ಹೇರಾಜೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಿನ್ನೆಲೆ ಸುಮಾರು ಐನೂರು ವರ್ಷಗಳ ಹಿಂದೆ ತುಳುನಾಡಿನ ಇತಿಹಾಸದಲ್ಲಿ ಹೊಸ ಮೈಲುಗಲ್ಲು ಸ್ಥಾಪಿಸಿದ ಗೆಜ್ಜೆಗಿರಿ ನಂದನ ಬಿತ್ತಿಲ್ ಕ್ಷೇತ್ರ ಈಗ ಪುನರುತ್ಥಾನಗೊಂಡು ಬ್ರಹ್ಮಕಲಶೋತ್ಸವದ ಸಿದ್ಧತೆ ಭಾರೀ ಉತ್ಸಾಹದಿಂದ ನಡೆಯುತ್ತಿದೆ.
ದೇಯಿ ಬೈದ್ಯೆತಿ- ಕೋಟಿ ಚೆನ್ನಯರ ಮೂಲಸ್ಥಾನ ಕ್ಷೇತ್ರವಾದ ಗೆಜ್ಜೆಗಿರಿಯಲ್ಲಿ ಫೆಬ್ರವರಿ 24ರಿಂದ ಮಾರ್ಚ್ 2ವರೆಗೆ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯಲಿದೆ.
ಕೋಟಿ ಚೆನ್ನಯರ ಮೂಲ ಮನೆಯಾದ ಗೆಜ್ಜೆಗಿರಿಯು, ಅವಳಿ ವೀರರ ತಾಯಿ ದೇಯಿ ಬೈದ್ಯೆತಿಗೆ ಪುನರ್ಜನ್ಮ ನೀಡಿದ ಸ್ಥಳ ಹಾಗೂ ಕೋಟಿ-ಚೆನ್ನಯರ ಗುರುಗಳಾದ ಗುರು ಸಾಯನ ಬೈದ್ಯರ ಕರ್ಮಭೂಮಿಯೂ ಹೌದು.
ಈ ಮೂರು ತಲೆಮಾರುಗಳ ಕಾರಣಿಕ ಶಕ್ತಿಗಳ ಆರಾಧನೆ ಗೆಜ್ಜೆಗಿರಿಯಲ್ಲಿ ಐದು ಶತಮಾನಗಳ ಬಳಿಕ ಈಗ ಮೊದಲ ಬಾರಿ ನಡೆಯಲಿದೆ.
ಗೆಜ್ಜೆಗಿರಿ ಕ್ಷೇತ್ರ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಬಡಗನ್ನೂರು ಗ್ರಾಮದಲ್ಲಿದೆ. ಐದು ಶತಮಾನಗಳ ಹಿಂದೆ ಇದು ಪಡುಮಲೆ ಬಲ್ಲಾಳರ ಸಂಸ್ಥಾನವಾಗಿದ್ದು, ಅದರ ವ್ಯಾಪ್ತಿಯಲ್ಲಿ ಬರುವ ಏರಾಜೆ ಬರ್ಕೆ ಎಂಬ ಪ್ರತಿಷ್ಠಿತ ಮನೆತನ ಇದಾಗಿತ್ತು.
ಬಲ್ಲಾಳ ಅರಸರಿಗೆ ಸೈನ್ಯ ತಯಾರಿಸಿ ಕೊಡುತ್ತಿದ್ದ ಮನೆತನವೇ ನಂತರ ಮನೆ ಗೆಜ್ಜೆಗಿರಿ ನಂದನ ಬಿತ್ತಿಲ್ ಎಂದು ಹೆಸರಾಯಿತು. ಕಾಡಿನಲ್ಲಿ ಅಕಸ್ಮತ್ತಾಗಿ ಸಿಕ್ಕ ಹೆಣ್ಣು ಮಗಳನ್ನು ಸಾಯನ ಬೈದ್ಯರು ತಂಗಿಯಾಗಿ ಸ್ವೀಕರಿಸಿ ತನ್ನ ಗೆಜ್ಜೆಗಿರಿ ಮನೆಗೆ ಕರೆತಂದು ಸಾಕಿದ್ದಲ್ಲದೆ, ದೇಯಿ ಬೈದ್ಯೆತಿ ಎಂಬ ಹೆಸರು ನೀಡಿ, ಪ್ರಸಿದ್ಧ ನಾಟಿ ವೈದ್ಯೆಯಾಗಿ ರೂಪಿಸಿದರು. ಅದಕ್ಕೆ ಸಾಕ್ಷಿ ಎಂಬಂತೆ ಇಲ್ಲಿ ‘ದೇಯಿ ಬೈದೆತಿ ಔಷಧ ವನವು ಈಗ ನಿರ್ಮಾಣಗೊಂಡಿದೆ.
ಅವಳಿ ಮಕ್ಕಳಿಗೆ ಜನ್ಮ ನೀಡಿದ ದೇಯಿ ಬೈದೇತಿ ಅಕಾಲಿಕ ಮರಣಕ್ಕೆ ತುತ್ತಾದಾಗ ಸಹೋದರ ಸಾಯನ ಬೈದ್ಯರು ತಂಗಿಯ ಕಳೇಬರವನ್ನು ಗೆಜ್ಜೆಗಿರಿಗೆ ತಂದು ದಫನ ಮಾಡುತ್ತಾರೆ. ಆ ಸಮಾಧಿ ಇವತ್ತಿಗೂ ಗೆಜ್ಜೆಗಿರಿಯಲ್ಲಿದ್ದು, ದೇಯಿ ಬೈದ್ಯೆತಿ ಮಹಾಸಮಾಧಿ ಎಂಬ ಹೆಸರು ಪಡೆದುಕೊಂಡಿದೆ.
ತಾಯಿಯನ್ನು ಕಳೆದುಕೊಂಡ ಕೋಟಿ ಚೆನ್ನಯರು ಮಾವನ ನೆರಳಲ್ಲಿ ಗೆಜ್ಜೆಗಿರಿಯಲ್ಲೇ ಬೆಳೆದು ಸಕಲ ವಿದ್ಯಾ ಪಾರಂಗತರಾಗಿ, ಕಾರಣಿಕ ಪುರುಷರಾಗಿ ಹೊರಹೊಮ್ಮಿದರು ಎಂಬುದು ಪ್ರತೀತಿ.
ನಂತರ ಮಂತ್ರಿ ಬುದ್ಧಿವಂತನ ವಧೆ ಮಾಡಿದ ಬಳಿಕ ಪಂಜ, ಎಣ್ಮೂರಿಗೆ ತೆರಳುವ ಕೋಟಿ ಚೆನ್ನಯರು ಅಪಾರ ಕಾರಣಿಕ, ಶೌರ್ಯ, ಪರಾಕ್ರಮ ತೋರಿಸುತ್ತಾರೆ ಹಾಗೂ ಸತ್ಯ ಧರ್ಮಕ್ಕಾಗಿ ಪ್ರಾಣಾರ್ಪಣೆ ಮಾಡುತ್ತಾರೆ.
ಅಂದಿನಿಂದ ಅವರ ಗರಡಿ ಆರಾಧನೆ ಪ್ರಾರಂಭಗೊಂಡಿತು.
(ಮಾಹಿತಿ : ಅಂತರ್ಜಾಲ)
hi