ಖಾಲಿಯಾ ರಫೀಕ್ ಹಂತಕ ತಸ್ಲೀಂ ಖತಂ!

Share the Article

ಮಂಗಳೂರು: ಕಟ್ಟದ ಕೋರಿ ಕಟ್ಟೊಡೇ ಪೋಂಡು ಎಂಬಂತೆ ಖಾಲಿಯ ರಫೀಕ್ ಹಂತಕ ತಸ್ಲೀಂ ಹಂತಕರಿಗೆ ಬಲಿಯಾಗಿದ್ದಾನೆ.

ರೌಡಿ ಶೀಟರ್ ಖಾಲಿಯಾ ರಫೀಕ್ ಕೊಲೆ ಸಹಿತ ಹಲವು ಪ್ರಕರಣಗಳ ಆರೋಪಿ ಕೇರಳ ಮೂಲದ ತಸ್ಲೀಂ ಎಂಬಾತನ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಬಂಟ್ವಾಳ ತಾಲೂಕಿನ ಸಜೀಪ ಮುನ್ನೂರು ಗ್ರಾಮದ ನಗ್ರಿಯ ಶಾಂತಿ ನಗರ ಎಂಬಲ್ಲಿ ಫೆ.2 ರಸಂಜೆ ಕಾರಿನೊಳಗೆ ಪತ್ತೆಯಾಗಿದೆ.

ಶಾಂತಿ ನಗರ ರಸ್ತೆ ಬದಿಯಲ್ಲಿ ಸಮತಟ್ಟು ಮಾಡಲಾದ ಜಾಗದಲ್ಲಿ ನಿಲ್ಲಿಸಿದ್ದ ಇನ್ನೋವಾ ಕಾರಿನ ಹಿಂಬದಿ ಸೀಟಿನಲ್ಲಿ ಕುಳಿತುಕೊಂಡ ಸ್ಥಿತಿಯಲ್ಲಿ ಮೃತದೇಹ ಕಂಡು ಬಂದಿದೆ. ಕುತ್ತಿಗೆಗೆ ಹಗ್ಗದಿಂದ ಬಿಗಿದು ಹೊಟ್ಟೆಗೆ ಚೂರಿಯಿಂದ ಇರಿದು ಕೊಲೆ ಮಾಡಿರುವುದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ .

ಬೆಳಗ್ಗೆ 10 ಗಂಟೆಯಿಂದ ಸಂಜೆವರೆಗೆ ಕಾರು ಅದೇ ಸ್ಥಳದಲ್ಲಿ ನಿಂತಿರುವುದನ್ನು ಗಮನಿಸಿದ ಸ್ಥಳೀಯರು ಕಾರಿನ ಬಳಿ ತೆರಳಿ ನೋಡಿದಾಗ ಕಾರಿನಲ್ಲಿ ಶವ ಇರುವುದು ಗೊತ್ತಾಗಿದೆ.

ಕಾರಿನಲ್ಲಿ ಶವ ಇರುವ ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಬಂಟ್ವಾಳ ನಗರ ಠಾಣಾ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹದ ಗುರುತು ಪತ್ತೆ ಹಚ್ಚಿದ್ದಾರೆ. ಕೇರಳದ ಝಿಯಾ ಗ್ಯಾಂಗ್ ನಲ್ಲಿ ಗುರುತಿಸಿಕೊಂಡಿದ್ದ 45 ವರ್ಷದ ತಸ್ಲೀಂ 2017ರಲ್ಲಿ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕೇರಳ ಮೂಲದ ಖಾಲಿಯಾ ರಫೀಕ್ ಕೊಲೆ ಪ್ರಕರಣ ಆರೋಪಿಯಾಗಿದ್ದಾನೆ.

ತಸ್ಲೀಂ ವಿರುದ್ಧ ಕೇರಳ, ಕರ್ನಾಟಕದ ವಿವಿಧ ಪೊಲೀಸ್ ಠಾಣೆಗಳಲ್ಲಿ ದರೋಡೆ, ಕೊಲೆ ಸಹಿತ ಹಲವು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.2019ರಲ್ಲಿ ಬಂದರು ಠಾಣಾ ವ್ಯಾಪ್ತಿಯಲ್ಲಿ ಅರುಣ್ ಜುವೆಲ್ಲರಿ ದರೋಡೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಗುಲ್ಬರ್ಗ ಜೈಲು ಸೇರಿದ್ದ ತಸ್ಲೀಂ ಇತ್ತೀಚೆಗೆ ಜಾಮೀನು ಮೂಲಕ ಬಿಡುಗಡೆಗೊಂಡಿದ್ದ. ಜೈಲಿನಿಂದ ಹೊರ ಬಂದ ಕೂಡಲೇ ಆತನನ್ನು ತಂಡವೊಂದು ಕಾರಿನಲ್ಲಿ ಅಪಹರಿಸಿತ್ತು ಎನ್ನಲಾಗಿದ್ದು ಈ ಬಗ್ಗೆ ಗುಲ್ಬರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತಸ್ಲೀಂನನ್ನು ದುಷ್ಕರ್ಮಿಗಳು ಕಾರಿನೊಳಗೆಯೇ ಕೊಲೆ ಮಾಡಿ ಬಳಿಕ ಶಾಂತಿ ನಗರಕ್ಕೆ ತಂದು ಕಾರು ಸಹಿತ ಬಿಟ್ಟು ಬೇರೆ ವಾಹನದಲ್ಲಿ ಪರಾರಿಯಾಗಿದ್ದಾರೆ ಎಂಬ ಸಂಶಯ ಇದ್ದು,ಖಾಲಿಯಾ ರಫೀಕ್ ಕೊಲೆಗೆ ಪ್ರತಿಕಾರವಾಗಿ ತಸ್ಲೀಂನ ಕೊಲೆ ಮಾಡಿರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿದೆ.

ಸ್ಥಳಕ್ಕೆ ಉಡುಪಿ ಎಸ್ಪಿ ವಿಷ್ಟುವರ್ಧನ್, ಎಎಸ್ಪಿ ವಿಕ್ರಂ ಅಮ್ಟೆ, ಡಿಸಿಐಬಿ ಇನ್ಸ್ ಪೆಕ್ಟರ್ ಚೆಲುವರಾಜು, ಬಂಟ್ವಾಳ ವೃತ್ತ ನಿರೀಕ್ಷಕ ಟಿ.ಡಿ. ನಾಗರಾಜ್, ನಗರ ಠಾಣಾ ಎಸ್ಸೈ ಅವಿನಾಶ್, ಗ್ರಾಮಾಂತರ ಠಾಣಾ ಎಸ್ಸೈ ಪ್ರಸನ್ನ ಹಾಗೂ ಸಿಬಂದಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿದ್ದು , ಬೆರಳಚ್ಚು ತಜ್ಞರು ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ. ಮೃತದೇಹವನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ.

Leave A Reply

Your email address will not be published.