ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಏರಿಕೆಯಾಗಿಲ್ಲ | ಪರೀಕ್ಷೆ ಹೆಚ್ಚಳಮಾಡಲಾಗಿದೆ-ಡಾ.ರಾಜೇಂದ್ರ ಕೆ.ವಿ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋವಿಡ್ ಪರೀಕ್ಷೆ ಹೆಚ್ಚಾಗಿದೆ. ಆದರೆ ಕೋವಿಡ್ ಪಾಸಿಟಿವಿಟಿ ದರದಲ್ಲಿ ಹೆಚ್ಚಳವಾಗಿಲ್ಲ ಎಂದು ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಹೇಳಿದರು.
ಮಂಗಳೂರಿನ ಯುನಿವರ್ಸಿಟಿ ಕಾಲೇಜಿನಲ್ಲಿ ಸಂಚಾರಿ ಲಸಿಕಾ ಕೇಂದ್ರಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ ಹೆಚ್ಚಾಗುತ್ತಿದೆ ಎಂಬ ಆತಂಕ ಜನರಿಗೆ ಬೇಡ. ಶುಕ್ರವಾರ ಸುಮಾರು 11 ಸಾವಿರ ಆರ್ ಟಿಪಿಸಿಆರ್ ಪರೀಕ್ಷೆ ಮಾಡಲಾಗಿದೆ. ಹೀಗಾಗಿ ಹೆಚ್ಚು ಪ್ರಕರಣಗಳು ಪತ್ತೆಯಾಗಿದೆ. ಆದರೆ ಪಾಸಿಟಿವಿಟಿ ದರದಲ್ಲಿ ಹೆಚ್ಚಳವಾಗಿಲ್ಲ. ಕಳೆದ ವಾರ ಶೇ.18ರಷ್ಟಿದ್ದ ಪಾಸಿಟಿವಿಟಿ ದರ ಈಗ ಶೇ.9ಕ್ಕೆ ಇಳಿಕೆಯಾಗಿದೆ ಎಂದು ಹೇಳಿದರು.
ಒಂದು ಪ್ರದೇಶದಲ್ಲಿ 10ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಅನಾರೋಗ್ಯದಿಂದ ಹಾಸಿಗೆ ಹಿಡಿದವರು, ಮನೆಯಿಂದ ಹೊರಬರಲಾಗದ ವೃದ್ಧರು ಮತ್ತು ಎಂಡೋ ಪೀಡಿತರಿಗೆ ಈ ಸಂಚಾರಿ ಲಸಿಕಾ ಕೇಂದ್ರದ ಮೂಲಕ ಹಂತ ಹಂತವಾಗಿ ಲಸಿಕೆ ನೀಡಲಾಗುತ್ತದೆ ಎಂದರು.
ಅನ್ ಲಾಕ್ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿಗಳು, ಅನ್ ಲಾಕ್ ಗೆ ಜನರ ಸಹಕಾರ ಮುಖ್ಯ. ಇಂದು ಜನಪ್ರತಿನಿಧಿಗಳು ಮತ್ತು ಸಿಎಂ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಲಾಗುತ್ತಿದೆ. ಅದರಲ್ಲಿ ಅನ್ ಲಾಕ್ ಬಗ್ಗೆ ನಿರ್ಧಾರ ಮಾಡಲಾಗುವುದು ಎಂದು ಹೇಳಿದರು.