ತಾಯಿಯ ಮಮತೆಯ ಮುಂದೆ ಸೋತು ಹೋದ ಯಮ | ಮಗ ಸತ್ತನೆಂದು ವೈದ್ಯರು ಘೋಷಿಸಿದ ಹಲವು ಗಂಟೆಗಳ ನಂತರ ಆತ ಎದ್ದು ಕೂತ !

ಈ ತಾಯಿಯ ಮಮತೆಯನ್ನು ಕಂಡು ಯಮರಾಜನೇ ಅಸಹಾಯಕನಾಗಿ, ಸತ್ತ ಆಕೆಯ ಮಗನನ್ನು ಬಿಟ್ಟು ಕಳಿಸಿದ ಕಥೆ ಇದು.

 

ಕಳೆದ 20 ದಿನಗಳ ಹಿಂದೆ ಆಕೆಯ ಆರು ವರ್ಷದ ಮಗನನ್ನು ವೈದ್ಯರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆಂದು ಘೋಷಿಸಿದ್ದರು. ಅತ್ತ ಕುಟುಂಬ ಸದಸ್ಯರು ಅಂತಿಮ ಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದರು. ಆದರೆ ಇತ್ತ ತಾಯಿ ಮಾತ್ರ ಮಗನ ಹಣೆಗೆ ಮುತ್ತಿಡುತ್ತಾ ಕಣ್ಣೀರು ಕೆಡವುತ್ತಿದ್ದಳು. ಪದೇ ಪದೇ ಮರಳಿ ಬಾ ಕಂದ, ನೀನಿಲ್ಲದೇ ನಾನು ಹೇಗೆ ಇರಲಿ ಎಂದಷ್ಟೇ ಹೇಳಿಕೊಂಡಿದ್ದಳು.

ಆದರೆ ಅಷ್ಟರಲ್ಲೇ ಚಮತ್ಕಾರವೋ ಪವಾಡವೇ ಗೊತ್ತಿಲ್ಲ. ಎರಡರಲ್ಲಿ ಒಂದು ನಡೆದಿದ್ದು, ಅತ್ತ ಬಾಲಕನ ದೇಹದಲ್ಲಿ ಸಣ್ಣಗೆ ಚಲನ ವಲನ ಸ್ಟಾರ್ಟ್ ಆಗಿದೆ. ಇದನ್ನು ಕಂಡು ಎಲ್ಲರೂ ಅಚ್ಚರಿಗೀಡಾಗಿದ್ದಾರೆ. ಕೂಡಲೇ ಆತನನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸದ್ಯ ಈ ಬಾಲಕ ಗುಣಮುಖನಾಗಿ ತನ್ನ ತಾಯಿ ಜೊತೆ ಮರಳಿ ಮನೆಗೆ ಬಂದಿದ್ದಾನೆ.

ಈ ಘಟನೆ ನಡೆದಿದ್ದು ಹರ್ಯಾಣದ ಬಹಾದ್ದೂರ್‌ಗಢದ ಕಿಲೆ ಮೊಹಲ್ಲಾದಲ್ಲಿ. ಇಲ್ಲಿನ ನಿವಾಸಿಗಳಾದ ಹಿತೇಶ್ ಹಾಗೂ ಜಾಹ್ನವಿ ದಂಪತಿಯ ಆರು ವರ್ಷದ ಮಗನಿಗೆ ಟೈಫಾಯ್ ಆಗಿತ್ತು. ಹೀಗಿರುವಾಗ ದಂಪತಿ ತಮ್ಮ ಮಗನನ್ನು ರೋಕ್‌ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಇಲ್ಲಿ ಬಾಲಕನ ಪರಿಶೀಲಿಸಿದ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಆತನನ್ನು ದೆಹಲಿಗೆ ಕರೆದೊಯ್ಯುವಂತೆ ಸೂಚಿಸಿದ್ದಾರೆ. ಕೂಡಲೇ ಬಾಲಕನ್ನು ದೆಹಲಿಗೊಯ್ಯಲಾಗಿದೆ. ಆದರೆ ಇಲ್ಲಿ ಮೇ 26ರಂದು ಚಿಕಿತ್ಸೆ ಮಧ್ಯೆ ಬಾಲಕ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ದಿಕ್ಕು ತೋಚದ ತಂದೆ ತಾಯಿ ಮಗನ ಶವದೊಂದಿಗೆ ಮನೆಗೆ ಬಂದಿದ್ದಾರೆ.

ರಾತ್ರಿಯಾಗಿದ್ದ ಕಾರಣ ಕುಟುಂಬ ಸದಸ್ಯರು ಉಪ್ಪುಹಾಗೂ ಐಸ್ ಸಂಗ್ರಹಿಸಿ ಶವವನ್ನು ಮನೆಯಲ್ಲೇ ಇಟ್ಟಿದ್ದಾರೆ. ಬೆಳಗ್ಗಾಗುತ್ತಿದ್ದಂತೆಯೇ ಬಾಲಕನ ಅಂತ್ಯಕ್ರಿಯೆ ನಡೆಸಲು ನಿರ್ಧರಿಸಿದ್ದಾರೆ. ಆಸುಪಾಸಿನ ಮನೆಯವರು ಹಾಗೂ ಕುಟುಂಬಸ್ಥರೂ ಆಗಮಿಸಿದ್ದರು. ಅನೇಕ ಮಂದಿ ಸ್ಮಶಾನಕ್ಕೂ ತಲುಪಿದ್ದರು. ಆದರೆ ಇಷ್ಟೆಲ್ಲಾ ನಡೆದರು, ಆ ಕಂದನ ಒಂಭತ್ತು ತಿಂಗಳು ಹೊತ್ತು, ಹೆತ್ತು ಆರು ವರ್ಷ ಆತನ ಜತೆ ತಾಯ್ತನ ಅನುಭವಿಸಿದ್ದ ತಾಯಿ ಮಾತ್ರ ಶವ ಕೊಡಲು ಸಿದ್ಧರವಿರಲಿಲ್ಲ. ಮಗನ ಶವ ಅಪ್ಪಿಕೊಂಡು ಮರಳಿ ಬಾ ಕಂದ ಎನ್ನುತ್ತಲೇ ಪಕ್ಕ ಕೂತಿದ್ದಳು ಆ ತಾಯಿ.

ತಾಯಿಯ ಮಮತೆ ನೋವು ಕಂಡು ಅಲ್ಲಿದ್ದವರೆಲ್ಲಾ ಭಾವುಕರಾಗಿದ್ದರು. ಆಕೆ ಪದೇ ಪದೇ ಕಂದಾ ಒಂದು ಬಾರಿ ಎದ್ದೇಳು, ಮರಳಿ ಬಾ ಎಂದಷ್ಟೇ ಹೇಳುತ್ತಿದ್ದಳು. ಪದೇ ಪದೇ ಮುಖದ ಮೇಲಿದ್ದ ಬಟ್ಟೆ ತೆಗೆದು ಮಗನ ಹಣೆಗೆ ಮುತ್ತಿಡುತ್ತಿದ್ದಳು. ಆದರೆ ಅಷ್ಟರಲ್ಲಿ ನೋಡ ನೋಡುತ್ತಿದ್ದಂತೆಯೇ ಮೃತ ದೇಹದಲ್ಲಿ ಸಂಚಲನ ಆರಂಭವಾಗಿದೆ. ಅಲ್ಲಿದ್ದವರೆಲ್ಲಾ ಈ ದೃಶ್ಯ ಕಂಡು ಬೆಚ್ಚಿ ಬಿದ್ದಿದ್ದರು. ಆದರೆ ತಡ ಮಾಡದ ತಂದೆ ಹಿತೇಶ್ ಹಾಗೂ ಕುಟುಂಬದ ಕೆಲ ಮಂದಿ ಕೂಡಲೇ ಬಾಲಕನಿಗೆ ಬಾಯಿಗೆ ಬಾಯಿ ಇಟ್ಟು ಉಸಿರಾಟ ನೀಡಲಾರಂಭಿಸಿದರು. ಇನ್ನು ಕೆಲವರು ಕೈ, ಕಾಲನ್ನು ಉಜ್ಜಲಾರಂಭಿಸಿದರು. ಈ ನಡುವೆ ಬಾಲಕ ತಂದೆಯ ತುಟಿಯನ್ನೂ ಒಂದು ಬಾರಿ ಕಚ್ಚಿದ್ದಾನೆನ್ನಲಾಗಿದೆ. ಇದರಿಂದ ಅಲ್ಲಿದ್ದವರೆಲ್ಲರ ಮುಖದಲ್ಲಿ ಸಂಭ್ರಮ ಮನೆ ಮಾಡಿದೆ. ಕೂಡಲೇ ಮಗುವನ್ನೆತ್ತಿ ಕುಟುಂಬಸ್ಥರು ಆಸ್ಪತ್ರೆಗೆ ದೌಡಾಯಿಸಿದ್ದಾರೆ.

ತಾಯಿಯ ಮಮತೆಯೇ ಬಾಲಕನ ಬದುಕಿಸಿದೆ: ಮೇ 26ರಂದು ಬಾಲಕನನ್ನು ಆಸ್ಪತ್ರೆಗೊಯ್ದ ಕುಟುಂಬಸ್ಥರು ಚಿಕಿತ್ಸೆ ನೀಡುವಂತೆ ಹೇಳಿದ್ದಾರೆ. ಬಾಲಕನ್ನು ಆಸ್ಪತ್ರೆಗೆ ದಾಖಲಿಸಿಕೊಳ್ಳುವ ಮೊದಲೇ ಆತ ಬದುಕುಳಿಯುವ ಸಾಧ್ಯತೆ ಬಹಳ ಕಡಿಮೆ ಎಂದು ವೈದ್ಯರು ಸ್ಪಷ್ಟಪಡಿಸಿದ್ದರು. ಆದರೆ ಬಾಲಕ ಚಿಕಿತ್ಸೆಗೆ ಬೇಗ ಸ್ಪಂದಿಸಿ,ಸಂಪೂರ್ಣವಾಗಿ ಗುಣಮುಖನಾಗಿದ್ದಾನೆ. ಮಂಗಳವಾರ ಆಸ್ಪತ್ರೆಯಿಂದ ಡಿಸ್ಟಾರ್ಜ್ ಆಗಿ ಮನೆಗೆ ಬಂದಾಗ ಬಾಲಕನ ನೋಡಲು ಮನೆ ಎದುರು ಇಡೀ ಊರು ಸಾಲುಗಟ್ಟಿ ನಿಂತಿತ್ತು. ಈ ಘಟನೆಗೆ ಸಾಕ್ಷಿಯಾದ ಪ್ರತಿಯೊಬ್ಬರೂ ತಾಯಿಯ ಮಮತೆಯೇ ಬಾಲಕನನ್ನು ಬದುಕಿಸಿದೆ ಎಂದಿದ್ದಾರೆ. ಶೋಕದ ಮನೆ ಇದೀಗ ಸಂಭ್ರಮದ ಊರಾಗಿದೆ.

Leave A Reply

Your email address will not be published.