ಆದೇಶ ಉಲ್ಲಂಘಿಸಿ ಶ್ರೀಕ್ಷೇತ್ರ ಧರ್ಮಸ್ಥಳದ ಬಗ್ಗೆ ಅಪಪ್ರಚಾರ | ಸೋಮನಾಥ ನಾಯಕ್ ಗೆ ಮೂರು ತಿಂಗಳ ಸೆರೆವಾಸ

ಬೆಳ್ತಂಗಡಿ : ನ್ಯಾಯಾಲಯದ ಪ್ರತಿಬಂಧಕಾಜ್ಞೆ ಉಲ್ಲಂಘಿಸಿ ಶ್ರೀ ಕ್ಷೇತ್ರ ಧರ್ಮಸ್ಥಳದ ಕುರಿತು ಅಪಪ್ರಚಾರ ಮಾಡಿದ ಆರೋಪಕ್ಕೆ ಸಂಬಂಧಿಸಿ, ಗುರುವಾಯನಕೆರೆಯ ನಾಗರಿಕ ಸೇವಾ ಟ್ರಸ್ಟ್‌ನ ಅಧ್ಯಕ್ಷ ಕೆ. ಸೋಮನಾಥ ನಾಯಕ್‌ಗೆ ಮೂರು ತಿಂಗಳ ಸಜೆ, ಸ್ಥಿರಾಸ್ತಿ ಮುಟ್ಟುಗೋಲು ಹಾಗೂ ಕ್ಷೇತ್ರಕ್ಕೆ 4,50,000 ರೂ.ಗಳನ್ನು ಪರಿಹಾರ ರೂಪದಲ್ಲಿ ನೀಡುವಂತೆ ಬೆಳ್ತಂಗಡಿ ನ್ಯಾಯಾಲಯ ಆದೇಶಿಸಿದೆ.

ಬೆಳ್ತಂಗಡಿಯ ಹೆಚ್ಚುವರಿ ನ್ಯಾಯಾಲಯವು ಧರ್ಮಸ್ಥಳದಿಂದ ದಾಖಲಿಸಲ್ಪಟ್ಟಿದ್ದ ಮೂಲ ದಾವೆ ಸಂಖ್ಯೆ 226/2013 ರಲ್ಲಿ ಸೋಮನಾಥ ನಾಯಕ್ ಹಾಗೂ ಇತರರ ವಿರುದ್ಧ ಧರ್ಮಸ್ಥಳ ಕ್ಷೇತ್ರ, ಹೆಗ್ಗಡೆ ಕುಟುಂಬ ಹಾಗೂ ಸಂಸ್ಥೆಗಳ ಕುರಿತು ಹೇಳಿಕೆ, ಆರೋಪ ಮಾಡದಂತೆ ಪ್ರತಿಬಂಧಕಾಜ್ಞೆ ಜಾರಿಗೊಳಿಸಿತ್ತು.

ಸದ್ರಿ ಅರ್ಜಿಯ ಸುದೀರ್ಘ ವಿಚಾರಣೆ ಹಾಗೂ ವಾದವನ್ನು ಆಲಿಸಿ ಮಾನ್ಯ ನ್ಯಾಯಾಲಯವು ಈ ಹಿಂದೆ ಎರಡು ಬಾರಿ ಕೆ. ಸೋಮನಾಥ್ ನಾಯಕ್‌ರವರಿಗೆ ಜೈಲು ಶಿಕ್ಷೆ ವಿಧಿಸಿ ಆದೇಶಿಸಿತ್ತು. ನಾಯಕ್ ಮೇಲ್ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಹೆಚ್ಚುವರಿ ತನಿಖೆಗಾಗಿ ಮೂಲ ನ್ಯಾಯಾಲಯಕ್ಕೆ ಪ್ರಕರಣ ಮರು ರವಾನೆಯಾಗಿತ್ತು.

ಮೇಲ್ಮನವಿಯಲ್ಲಾದ ಆದೇಶದ ಪ್ರಕಾರ ನಾಯಕ್ ಕಡೆಯಿಂದ ಹೆಚ್ಚುವರಿ ಸಾಕ್ಷಿಯ ತನಿಖೆ ಹಾಗೂ ಎರಡೂ ಕಡೆಯ ವಾದವನ್ನು ಆಲಿಸಿದ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಸತೀಶ್ ಕೆ.ಜಿ. ಅವರು ಜೂ. 8ರಂದು ಅಂತಿಮ ಆದೇಶ ಹೊರಡಿಸಿ ಈ ಹಿಂದಿನ ತೀರ್ಪನ್ನೇ ಪುನರುಚ್ಚರಿಸಿದ್ದಾರೆ.

ಮೇಲಿನ ಆದೇಶದ ಜತೆಗೆ ನಾಯಕ್ ಅವರು ತನ್ನಲ್ಲಿ ಸೂಕ್ತ ಆಧಾರ ಇಲ್ಲವೆಂದು ಗೊತ್ತಿದ್ದರೂ ನ್ಯಾಯಾಲಯದ ಅವಧಿಯನ್ನು ದುರುಪಯೋಗಪಡಿಸಿದ್ದಕ್ಕೆ ಹೆಚ್ಚುವರಿಯಾಗಿ 2,000 ರೂ.ಗಳನ್ನು ನೀಡುವಂತೆಯೂ ನ್ಯಾಯಾಲಯ ಆದೇಶಿಸಿದೆ.

ಶ್ರೀ ಕ್ಷೇತ್ರದ ಪರವಾಗಿ ಬೆಳ್ತಂಗಡಿಯ ನ್ಯಾಯವಾದಿಗಳಾದ ರತ್ನವರ್ಮ ಬುಣ್ಣು ಹಾಗೂ ಎಂ. ಬದರಿನಾಥ ಸಂಪಿಗೆತ್ತಾಯ ವಾದಿಸಿದ್ದರು.

Leave A Reply

Your email address will not be published.